
ಬೆಂಗಳೂರು, ಅಕ್ಟೋಬರ್ 08: ವೈದ್ಯಕೀಯ, ರಸಾಯನ ಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿಶ್ವದ ಅತ್ಯಂತ ವಿಶಿಷ್ಟ ವ್ಯಕ್ತಿಗಳಿಗೆ ನೊಬೆಲ್ ಪುರಸ್ಕಾರ(Nobel Prize) ನೀಡಲಾಗುತ್ತದೆ. ಭಾರತ-ಪಾಕಿಸ್ತಾನ, ರಷ್ಯಾ-ಉಕ್ರೇನ್ ಇದೀಗ ಇಸ್ರೇಲ್-ಹಮಾಸ್ ನಡುವೆ ಶಾಂತಿ ನೆಲೆಸಲು ತಾನೇ ಕಾರಣ ತಾನೇ ಶಾಂತಿಸ್ಥಾಪಕ ಎಂದು ಬೀಗುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕೆ ಎಂದು ಟಿವಿ9 ಕನ್ನಡ ಡಿಜಿಟಲ್ ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದ ಪ್ರಶ್ನೆಗೆ ಕನ್ನಡಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಆದರೆ ಅದರಲ್ಲಿ ಬಹುತೇಕರು ಟ್ರಂಪ್ಗ್ಯಾಕೆ ಶಾಂತಿ ಪುರಸ್ಕಾರ, ಅವರಿಗೆ ಏನಿದ್ದರೂ ನೀಡಬೇಕಾಗಿರುವುದು ಅಶಾಂತಿ ಪುರಸ್ಕಾರ ಎಂದಿದ್ದಾರೆ. ಕರ್ನಾಟಕದ ಜನರು ಮಾಡಿರುವ ಕೆಲವು ಇಂಟರೆಸ್ಟಿಂಗ್ ಕಮೆಂಟ್ಗಳು ಇಲ್ಲಿವೆ. ಕಿತಾಪತಿಗೆ ಯಾವುದಾದರೂ ಪ್ರಶಸ್ತಿ ಕೊಡುವುದಾದರೆ ಇವರಿಗೆ ಕೊಡಿ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಪ್ರಪಂಚದ ಶಾಂತಿ ಹಾಳು ಮಾಡಿರುವ ಇಂಥವನಿಗೆ ನೊಬೆಲ್ ಪ್ರಶಸ್ತಿ ಬೇರೆ ಬೇಕೇ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹುಚ್ಚರಿಗೆಲ್ಲಾ ನೊಬೆಲ್ ಪ್ರಶಸ್ತಿ ಕೊಟ್ಟರೆ ನೊಬೆಲ್ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ಆ ಪ್ರಶಸ್ತಿಯನ್ನೂ ಟ್ರಂಪ್ ಬೆದರಿಸಿ ಪಡೆದುಕೊಳ್ಳಬಹುದು ಎಂದಿದ್ದಾರೆ.
ಒಂದು ದೇಶದ ಅಧ್ಯಕ್ಷರಾಗಿ ತನ್ನ ಸ್ವಾರ್ಥಕ್ಕಾಗಿ ಬೇರೆ ಬೇರೆ ದೇಶಗಳ ಹೆಸರನ್ನು ಉಪಯೋಗಿಸಿಕೊಂಡು ಅತಿ ಹೆಚ್ಚು ಸುಳ್ಳು ಹೇಳಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಕೊಡಲೇ ಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ಓದಿ: Nobel Prize 2025: ನೊಬೆಲ್ ಪ್ರಶಸ್ತಿ ಎಂದರೇನು? ಯಾವ್ಯಾವ ವರ್ಗಗಳಲ್ಲಿ ನೀಡಲಾಗುತ್ತೆ, ವಿಜೇತರ ಪಟ್ಟಿ ಇಲ್ಲಿದೆ
ಮತ್ತೊಬ್ಬರು ಮಂಗನ ಕೈಯಲ್ಲಿ ಮಾಣಿಕ್ಯ ಕೊಡುವುದು ಟ್ರಂಪ್ ಕೈಯಲ್ಲಿ ನೊಬೆಲ್ ಪ್ರಶಸ್ತಿ ಕೊಡುವುದು ಎರಡೂ ಒಂದೆ ಎಂದಿದ್ದಾರೆ. ಮತ್ತೊಬ್ಬರು ಮಾನಸಿಕ ಸ್ಥಿಮಿತ ಕಳೆದುಕೊಂಡರೆ ನೊಬೆಲ್ ಪ್ರಶಸ್ತಿ ಕೊಡಬೇಕು ಅಂತಾನಾ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಇನ್ನೊಬ್ಬರು ನೊಬೆಲ್ ಕುತಂತ್ರಿ ಪ್ರಶಸ್ತಿ ಇದ್ದರೆ ಕೊಡಬಹುದು ಎಂದಿದ್ದಾರೆ. ಅಕ್ಟೋಬರ್ 10ರಂದು ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಲಿದೆ.
ನೊಬೆಲ್ ಪ್ರಶಸ್ತಿ ಎಂದರೇನು?
ನೊಬೆಲ್ ಪ್ರಶಸ್ತಿ ಎಂಬುದು ಸ್ವೀಡಿಶ್ ವಿಜ್ಞಾನಿ , ಸಂಶೋಧಕ ಮತ್ತು ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರಿಂದ ಪ್ರಾರಂಭವಾಯಿತು. ಅವರು ಜಗತ್ತಿಗೆ ಡೈನಮೈಟ್ ನೀಡಿದರು. ಆದರೆ ಅವರ ಈ ಆವಿಷ್ಕಾರವು ಅವರಿಗೆ ಟೀಕೆಯಷ್ಟೇ ಖ್ಯಾತಿಯನ್ನೂ ತಂದುಕೊಟ್ಟಿತು. ನಂತರ ನೊಬೆಲ್ ತನ್ನ ಸಂಪತ್ತನ್ನು ಮಾನವೀಯತೆಯನ್ನು ಮುನ್ನಡೆಸುವ ಉದ್ದೇಶಗಳಿಗಾಗಿ ಬಳಸಬೇಕೆಂದು ನಿರ್ಧರಿಸಿದರು.
ಈ ಕಲ್ಪನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ವಿಜ್ಞಾನ, ಸಾಹಿತ್ಯ ಅಥವಾ ಶಾಂತಿ ಕ್ಷೇತ್ರದಲ್ಲಿ ಮಾನವೀಯತೆಗೆ ಶ್ರೇಷ್ಠ ಕೊಡುಗೆ ನೀಡಿದವರಿಗೆ ವಾರ್ಷಿಕವಾಗಿ ಪ್ರಶಸ್ತಿಗಳನ್ನು ನೀಡಬೇಕೆಂದು ಅವರು ತಮ್ಮ ಉಯಿಲಿನಲ್ಲಿ ಬರೆದಿದ್ದರು. ನೊಬೆಲ್ ಪ್ರಶಸ್ತಿಯನ್ನು ಮೊದಲು 1901 ರಲ್ಲಿ ನೀಡಲಾಯಿತು. ಅಂದಿನಿಂದ ಈ ಸಂಪ್ರದಾಯ ಮುಂದುವರೆದಿದೆ.
ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:47 am, Wed, 8 October 25