ಉತ್ತರ ಕರ್ನಾಟಕ ಪ್ರವಾಹ: ತಕ್ಷಣವೇ ಕೇಂದ್ರ ನೆರವಿಗೆ ಧಾವಿಸಬೇಕು, ಪ್ರಧಾನಿ ಮೋದಿಗೆ ಯತ್ನಾಳ್ ಮನವಿ
ಉತ್ತರ ಕರ್ನಾಟಕದಲ್ಲಿ ಭೀಮಾನದಿ ಪ್ರವಾಹದಿಂದ ಉಂಟಾದ ಭೀಕರ ಪರಿಸ್ಥಿತಿ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. 117 ಗ್ರಾಮಗಳು ಜಲಾವೃತಗೊಂಡು, 10 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ, ಸಾವಿರಾರು ಕುಟುಂಬಗಳು ಸಂಕಷ್ಟದಲ್ಲಿವೆ. ಕೇಂದ್ರ ಸರ್ಕಾರ ತಕ್ಷಣದ ಪರಿಹಾರ ಮತ್ತುಆರ್ಥಿಕ ನೆರವು ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ವಿಜಯಪುರ, ಅಕ್ಟೋಬರ್ 8: ಉತ್ತರ ಕರ್ನಾಟಕದಲ್ಲಿ ಭೀಮಾನದಿ ಉಕ್ಕಿಹರಿದ ಪರಿಣಾಮ ಉಂಟಾದ ಭೀಕರ ಪ್ರವಾಹ (North Karnataka Flood) ಪರಿಸ್ಥಿತಿ ಕುರಿತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Bsanagouda Patil Yatnal) ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆದಿದ್ದಾರೆ. ಪ್ರವಾಹ ಪರಿಹಾರದ ವಿಚಾರದಲ್ಲಿ ಮಧ್ಯಪ್ರವೇಶಿಸಿ ಉತ್ತರ ಕರ್ನಾಟಕ ಜನತೆಗೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಭೀಮಾನದಿಯ ಉಕ್ಕಿ ಹರಿದ ಪರಿಣಾಮ 117 ಗ್ರಾಮಗಳು ಜಲಾವೃತಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಮಂದಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. 547 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಸಾವಿರಾರು ಜನರು ಆಶ್ರಯ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭೀಮಾ ನದಿ ತೀರ ಪ್ರದೇಶಗಳಲ್ಲಿ ಉಂಟಾದ ಭಾರಿ ಪ್ರವಾಹವು 10 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಕಾರಣವಾಗಿದೆ. ರೈತರು ತಮ್ಮ ಬೆಳೆಗಳು ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಮೇಲ್ಭಾಗದ ಜಲಾಶಯಗಳು ಮತ್ತು ಬ್ಯಾರೇಜ್‌ಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುವುದರಿಂದ ಕಲಬುರಗಿ, ಯಾದಗಿರಿ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಲ್ಲಿ ವಿಶಾಲವಾದ ಭೂಮಿ ಮುಳುಗಿದೆ, ಆದರೆ ಭೀಮಾ ಮತ್ತು ಮಾಂಜ್ರಾ ನದಿಗಳ ಉಬ್ಬರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ.

ಯತ್ನಾಳ್ ಪತ್ರದ ಪ್ರತಿ
ಸಾವಿರಾರು ಕುಟುಂಬಗಳು ಆಶ್ರಯ, ಆಹಾರ ಅಥವಾ ಮೂಲ ಸೌಕರ್ಯಗಳಿಲ್ಲದೆ ಕಷ್ಟಪಡುತ್ತಿವೆ. ಕಟ್ಟಿಸಂಗಾವಿ ಬಳಿ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಸಂಪರ್ಕ ಕಡಿತಗೊಂಡಿದೆ ಮತ್ತು ಪರಿಹಾರ ಕಾರ್ಯಾಚರಣೆಗಳು ವಿಳಂಬವಾಗಿವೆ. ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಮತ್ತು ತಕ್ಷಣದ ಸಹಾಯವನ್ನು ಒದಗಿಸಲು NDRF ಮತ್ತು SDRF ತಂಡಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ. ಆದರೂ ಹಾನಿಯ ಪ್ರಮಾಣ ಗಂಭೀರವಾಗಿರುವುದರಿಂದ ಕೇಂದ್ರ ಸರ್ಕಾರದಿಂದ ತುರ್ತು ನೆರವಿನ ಅಗತ್ಯ ಇದೆ ಎಂದು ಯತ್ನಾಳ್ ಮನವಿ ಮಾಡಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ಷೇಪ
ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಪರಿಹಾರ ಕ್ರಮ ಕೈಗೊಳ್ಳುವುದಕ್ಕಿಂತಲೂ ಹೆಚ್ಚು ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಪತ್ರದಲ್ಲಿ ಯತ್ನಾಳ್ ಆರೋಪಿಸಿದ್ದಾರೆ. ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಮತ್ತು ಕೇಂದ್ರದ ವಿಶೇಷ ತಂಡವನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಲು ಯತ್ನಾಳ ಪ್ರಧಾನಿಗೆ ಯತ್ನಾಳ್ ಮನವಿ ಮಾಡಿದ್ದಾರೆ.
ಅಲ್ಲದೆ, ಪ್ರವಾಹ ಪೀಡಿತ ಕುಟುಂಬಗಳು, ರೈತರು ಮತ್ತು ಗ್ರಾಮಗಳ ಪುನರ್‌ನಿರ್ಮಾಣಕ್ಕಾಗಿ ತಕ್ಷಣದ ಹಣಕಾಸು ನೆರವನ್ನು ಎನ್ಡಿಆರ್ಎಫ್ನಿಂದ ಬಿಡುಗಡೆ ಮಾಡಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 am, Wed, 8 October 25



