AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಎದುರಾಯ್ತು ಹೊಸ ಸಮಸ್ಯೆ! ಗಡುವಿನ ಒಳಗೆ ಗುಂಡಿ ಮುಚ್ಚಲ್ಲ ಕಾಂಟ್ರಾಕ್ಟರ್​ಗಳು

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಅಕ್ಟೋಬರ್ 31ರೊಳಗೆ ಮುಚ್ಚಲು ಸರ್ಕಾರ ಗಡುವು ನೀಡಿದೆಯಾದರೂ, ಗುಂಡಿ ಮುಚ್ಚುವ ಕಾಮಗಾರಿಗೆ ಹಣ ಪಾವತಿಸುವವರು ಯಾರು ಎಂಬ ಪ್ರಶ್ನೆ ಗುತ್ತಿಗೆದಾರರಿಗೆ ಎದುರಾಗಿದೆ. ಗುತ್ತಿಗೆದಾರರಿಗೆ 2013ರಿಂದ 2,400 ಕೋಟಿ ರೂ. ಬಿಲ್ ಬಾಕಿ ಇರುವುದರಿಂದ, ಹೊಸ ಕಾಮಗಾರಿಗೆ ಹಣ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲದೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಎದುರಾಯ್ತು ಹೊಸ ಸಮಸ್ಯೆ! ಗಡುವಿನ ಒಳಗೆ ಗುಂಡಿ ಮುಚ್ಚಲ್ಲ ಕಾಂಟ್ರಾಕ್ಟರ್​ಗಳು
ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಎದುರಾಯ್ತು ಹೊಸ ಸಮಸ್ಯೆ! (ಸಾಂದರ್ಭಿಕ ಚಿತ್ರ)
Ganapathi Sharma
|

Updated on:Oct 08, 2025 | 12:45 PM

Share

ಬೆಂಗಳೂರು, ಅಕ್ಟೋಬರ್ 8: ಬೆಂಗಳೂರಿನ (Bengaluru) ರಸ್ತೆ ಗುಂಡಿಗಳನ್ನು (Potholes) ಮುಚ್ಚಲು ಸರ್ಕಾರ ಅಕ್ಟೋಬರ್ 31 ರ ಗಡುವು ವಿಧಿಸಿದೆ. ಆದರೆ, ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆಗೆ ಈಗ ಹೊಸ ಸಮಸ್ಯೆ ಎದುರಾಗಿದೆ. ಅಂದರೆ, ಬೆಂಗಳೂರಿನ ಬಹುತೇಕ ರಸ್ತೆಗಳ ಡಿಫೆಕ್ಟಿವ್ ಲಯಬಿಲಿಟಿ ಪಿರಿಯಡ್ (DLP / ಒಂದು ರಸ್ತೆ ನಿರ್ಮಾಣ ಮಾಡಿಕೊಟ್ಟ ನಂತರ ನಿರ್ದಿಷ್ಟ ಅವಧಿಯೊಳಗೆ ಅದು ಹದಗೆಟ್ಟರೆ ಅದನ್ನು ಸರಿಪಡಿಸುವ ಹೊಣೆಗಾರಿಕೆ ಕಾಂಟ್ರಾಕ್ಟರ್​​ನದ್ದಾಗಿರುತ್ತದೆ. ಆ ಅವಧಿ ಮುಗಿದ ನಂತರ ದುರಸ್ತಿಗೆ ಹಣ ಪಾವತಿ ಮಾಡಬೇಕಾಗುತ್ತದೆ) ಮುಗಿದು ಹೋಗಿದ್ದು, ಇದೀಗ ಆ ಕಾಂಟ್ರಾಕ್ಟರ್​ಗೆ ಗುಂಡಿ ಮುಚ್ಚಿದ್ದಕ್ಕೆ ಹಣ ನೀಡುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಸರ್ಕಾರ ಗುತ್ತಿಗೆದಾರರಿಗೆ ನೀಡಬೇಕಿರುವ ಕೋಟ್ಯಂತರ ರೂ. ಹಣ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಈಗ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಮಾಡಿದರೆ ಹಣ ನೀಡುತ್ತಾರೆಯೇ? ಯಾರು ನೀಡುತ್ತಾರೆ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟತೆ ನೀಡಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.

2013 ರಿಂದ ಗುತ್ತಿಗೆದಾರರಿಗೆ 2,400 ಕೋಟಿ ರೂ. ಬಾಕಿ ಇರಿಸಿಕೊಳ್ಳಲಾಗಿತ್ತು. ಅನೇಕ ಪ್ರತಿಭಟನೆಗಳು ಮತ್ತು ಎಚ್ಚರಿಕೆಗಳ ನಂತರ ಸರ್ಕಾರ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಮಂಜುನಾಥ್ ತಿಳಿಸಿದ್ದಾರೆ. ಗುತ್ತಿಗೆದಾರರಿಗೆ ಈಗಾಗಲೇ ಮಾಡಿರುವ ಕಾಮಗಾರಿಗಳಿಗೆ ಹಣವನ್ನು ಪಾವತಿ ಮಾಡಿಲ್ಲ. ಈಗ, ಸರ್ಕಾರವು ಗುಂಡಿಗಳನ್ನು ಮುಚ್ಚಲು ಹೇಳುತ್ತಿದೆ. ಸದ್ಯ ಗುಂಡಿ ಮುಚ್ಚು ಹೊಣೆಗಾರಿಕೆ ಗುತ್ತಿಗೆದಾರರ ಡಿಎಲ್‌ಪಿ ಅಡಿಯಲ್ಲಿ ಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಆಡಳಿತವು ದಾಖಲೆಗಳನ್ನು ತೋರಿಸಲಿ ಮತ್ತು ಗುಂಡಿಗಳನ್ನು ಮುಚ್ಚಲು ಹೊಸ ಬಿಲ್ ಸೇರಿಸಲು ಅವಕಾಶ ನೀಡಲಿ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿರುವ ನಿಗಮಗಳು ಕೆಲಸ ಮುಗಿದ ನಂತರ ನಮ್ಮನ್ನು ಕೈ ಬಿಡುತ್ತವೆ. ಇದೇ ಕಾರಣಕ್ಕೆ ಗುತ್ತಿಗೆದಾರರು ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಾರೆ. ಹಣ ಪಾವತಿಸದೇ ಇರುವುದಕ್ಕೆ ಹೆದರಿ ಗುಂಡಿಗಳನ್ನು ಮುಚ್ಚುವ ಕೆಲಸ ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಹೆದರುತ್ತಾರೆ. ಆದರೆ ಅಧಿಕಾರಿಗಳು, ಪಾವತಿ ಬಗ್ಗೆ ಸ್ಪಷ್ಟನೆ ನೀಡದೆ ಗುಂಡಿಗಳನ್ನು ಸರಿಪಡಿಸಲು ಗುತ್ತಿಗೆದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಂಜುನಾಥ್ ಹೇಳಿದ್ದಾರೆ.

ರಸ್ತೆ ಗುಂಡಿಗಳಿಗೆ ಭ್ರಷ್ಟಾಚಾರವೇ ಕಾರಣ: ಮಂಜುನಾಥ್ ಆರೋಪ

ಬಿಲ್‌ಗಳನ್ನು ಪಾವತಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹಿಂದೆ ಮಾಡಿದ ಕೆಲಸಕ್ಕೆ ಅವರು ಪ್ರಾಮಾಣಿಕವಾಗಿ ಹಣ ಪಾವತಿಸಿದ್ದರೆ, ಗುತ್ತಿಗೆದಾರರು ಸ್ವಯಂಪ್ರೇರಣೆಯಿಂದ ಗುಂಡಿಗಳನ್ನು ಮುಚ್ಚಲು ಮುಂದೆ ಬರುತ್ತಿದ್ದರು ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಭ್ರಷ್ಟಾಚಾರವೇ ಪ್ರಮುಖ ಕಾರಣ. ಐದು ಹೊಸ ಕಾರ್ಪೊರೇಷನ್​ಗಳನ್ನು ರಚಿಸುವ ಮೂಲಕ ಸರ್ಕಾರವು ಹೆಚ್ಚು ಕೋಷ್ಟಕಗಳನ್ನಷ್ಟೇ ರಚಿಸಿದೆ. ಪಾರದರ್ಶಕ ವ್ಯವಸ್ಥೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

ಐದು ನಿಗಮಗಳಿಗೆ ತಲಾ 100 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಆ ಹಣವನ್ನು ಗುತ್ತಿಗೆದಾರರಿಗೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಗುತ್ತಿಗೆದಾರರು ಮತ್ತು ಪೌರ ಕಾರ್ಮಿಕರಿಗೆ ಯಾವುದೇ ಪಾವತಿ ಮಾಡದಿರುವುದು ಇದೇ ಮೊದಲುಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಏನ್ ರೋಡ್ ಗುರು ಅಭಿಯಾನದ ಇಂಪ್ಯಾಕ್ಟ್​: ಬೆಂಗಳೂರಿನ ಕೆಲವು ರಸ್ತೆ ಗುಂಡಿಗಳಿಗೆ ಮುಕ್ತಿ

ಏತನ್ಮಧ್ಯೆ, ದಸರಾ ರಜೆ ಮತ್ತು ಇತರ ಕೆಲವು ಕಾರಣಗಳಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಹೇಳಿದ್ದಾರೆ. ಎಲ್ಲಾ ನಿಗಮಗಳು ತಮ್ಮ ವ್ಯಾಪ್ತಿಯಲ್ಲಿ ನಿರ್ವಹಿಸಿದ ಕಾಮಗಾರಿಯ ಪ್ರಕಾರ ಬಿಲ್ ಬಿಡುಗಡೆ ಮಾಡಲು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:19 am, Wed, 8 October 25