AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚ ಗ್ಯಾರಂಟಿಗಳ ಬಗ್ಗೆ ಅಚ್ಚರಿಯ, ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟ ಲೋಕನೀತಿ, ಸಿಎಸ್​ಡಿಎಸ್ ಸಮೀಕ್ಷೆ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳ ಕುರಿತು ಲೋಕನೀತಿ-ಸಿಎಸ್‌ಡಿಎಸ್ ಸಮೀಕ್ಷೆ ಆಶ್ಚರ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ. ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ ಯೋಜನೆಗಳು ಅತ್ಯಂತ ಜನಪ್ರಿಯವಾಗಿದ್ದು, ಯುವನಿಧಿ ಯೋಜನೆ ಅತ್ಯಂತ ಕಡಿಮೆ ಜನರನ್ನು ತಲುಪಿದೆ. ಮಹಿಳೆಯರು ಪ್ರಮುಖ ಫಲಾನುಭವಿಗಳಾಗಿದ್ದಾರೆ ಎಂಬುದೂ ಸೇರಿದಂತೆ ಇನ್ನೂ ಅನೇಕ ಅಚ್ಚರಿಯ ವಿಚಾರಗಳು ಈಗ ತಿಳಿದುಬಂದಿದೆ. ಆ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಪಂಚ ಗ್ಯಾರಂಟಿಗಳ ಬಗ್ಗೆ ಅಚ್ಚರಿಯ, ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟ ಲೋಕನೀತಿ, ಸಿಎಸ್​ಡಿಎಸ್ ಸಮೀಕ್ಷೆ
ಪಂಚ ಗ್ಯಾರಂಟಿಗಳ ಬಗ್ಗೆ ಅಚ್ಚರಿಯ, ಸ್ವಾರಸ್ಯಕರ ಮಾಹಿತಿ ಬಿಚ್ಚಿಟ್ಟ ಲೋಕನೀತಿ, ಸಿಎಸ್​ಡಿಎಸ್ ಸಮೀಕ್ಷೆ
Ganapathi Sharma
|

Updated on: Oct 08, 2025 | 1:42 PM

Share

ಬೆಂಗಳೂರು, ಅಕ್ಟೋಬರ್ 8: ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ದೇಶದ ಅತ್ಯಂತ ವಿಶ್ವಾಸಾರ್ಹ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಗಳೆಂದೇ ಪರಿಗಣಿಸಲ್ಪಟ್ಟಿರುವ ಲೋಕನೀತಿ, ಸಿಎಸ್​ಡಿಎಸ್ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿವೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಲ್ಲಿಕೆ ಮಾಡಲಾಗಿದೆ. ಸಮೀಕ್ಷಾ ವರದಿಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತ ಅನೇಕ ಅಚ್ಚರಿಯ ಅಂಶಗಳು ಬಯಲಾಗಿವೆ. ಉಚಿತ ಗ್ಯಾರಂಟಿಗಳ ಬಗ್ಗೆ ಜನಕ್ಕೆ ಮಾಹಿತಿ ದೊರೆತಿದ್ದು ಹೇಗೆ? ಅತಿಹೆಚ್ಚು ಫಲಾನುಭವಿಗಳಿರುವ ಜಿಲ್ಲೆ ಯಾವುದು? ಶಕ್ತಿ ಯೋಜನೆಯಿಂದ ಉದ್ಯೋಗಾವಕಾಶ ಹೆಚ್ಚಳವಾಗಿದೆಯೇ? ಬಿಜೆಪಿ ಶಾಸಕರೇ ಹೆಚ್ಚಿರುವ ಜಿಲ್ಲೆಗಳಲ್ಲೂ ‘ಗ್ಯಾರಂಟಿ’ ಫಲಾನುಭವಿಗಳು ಹೆಚ್ಚಿದ್ದಾರಾ? ಇತ್ಯಾದಿ ಅನೇಕ ಅಂಶಗಳು ಸಮೀಕ್ಷಾ ವರದಿಯಲ್ಲಿವೆ.

ಅತಿ ಹೆಚ್ಚು ಜನರ ತಲುಪಿರುವ ಅನ್ನಭಾಗ್ಯ

ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ 5 ಕೆಜಿ ಉಚಿತ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆ ಅತಿ ಹೆಚ್ಚು ಜನರನ್ನು ತಲುಪಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಶೇ 94 ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದು, ಕಲಬುರಗಿ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಉತ್ತಮ ರೀತಿಯಲ್ಲಿ ಅನುಷ್ಠಾನವಾಗಿದೆ. ಯೋಜನೆಯಿಂದ ಶೇ 64 ಜನರು ತಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರ ಸುಧಾರಣೆ ಕಂಡಿದೆ ಎಂದು ಹೇಳಿದ್ದರೆ, ಶೇ 93 ರಷ್ಟು ಮಹಿಳೆಯರು ಕುಟುಂಬದ ಒಳಗಿನ ಸಂಬಂಧಗಳು ಸುಧಾರಿಸಿವೆ ಎಂದು ಹೇಳಿದ್ದಾರೆ.

ಯುವಕರ ಕೈಹಿಡಿಯದ ಯುವ ನಿಧಿ!

ಯುವನಿಧಿ ಯೋಜನೆಯ ವ್ಯಾಪ್ತಿ ಅತ್ಯಲ್ಪ ಎಂಬುದು ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ. ಕೇವಲ ಶೇ 7 ರಷ್ಟು ಜನರಿಗೆ ಮಾತ್ರ ಇದರ ಪ್ರಯೋಜನವಾಗಿದೆ. ಆದರೆ, ಪ್ರಯೋಜನ ಪಡೆದವರಲ್ಲಿ ಶೇ 51 ರಷ್ಟು ಮಂದಿ ತಮ್ಮ ಕೌಶಲ್ಯ ಅಭಿವೃದ್ಧಿಗಾಗಿ ಖಾಸಗಿ ಅಥವಾ ಸರ್ಕಾರಿ ತರಬೇತಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಸ್ಥಿತಿ ಏನು?

ಗೃಹಲಕ್ಷ್ಮಿ ಯೋಜನೆ ಯಿಂದ ಶೇ 78 ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಅವರಲ್ಲಿ ಶೇ 94 ರಷ್ಟು ಮಂದಿ ಹಣವನ್ನು ಆಹಾರ ವಸ್ತು ಖರೀದಿಗೆ, ಶೇ 89 ರಷ್ಟು ಮಂದಿ ವೈದ್ಯಕೀಯ ವೆಚ್ಚಗಳಿಗೆ ಮತ್ತು ಶೇ 52 ರಷ್ಟು ಮಂದಿ ಮಕ್ಕಳ ಶಿಕ್ಷಣಕ್ಕಾಗಿ ಹಣ ಬಳಕೆ ಮಾಡಿದ್ದಾರೆ. ಶೇ 88 ರಷ್ಟು ಮಹಿಳೆಯರು ಕುಟುಂಬದಲ್ಲಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಗೃಹಜ್ಯೋತಿಯಿಂದ ಮಾಸಿಕ 500 ರೂ.ವರೆಗೆ ಉಳಿತಾಯ!

ಗೃಹಜ್ಯೋತಿ ಯೋಜನೆ ಶೇ 82 ರಷ್ಟು ಮನೆಗಳಿಗೆ ತಲುಪಿದೆ. ಇದರ ಫಲವಾಗಿ ಶೇ 74 ರಷ್ಟು ಜನರು ತಿಂಗಳಿಗೆ 500 ರೂ. ವರೆಗೆ ಉಳಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ವಿದ್ಯುತ್ ಉಪಕರಣಗಳ ಬಳಕೆ ಶೇ 43 ರಷ್ಟು ಮನೆಗಳಲ್ಲಿ ಹೆಚ್ಚಾಗಿದೆ. ಮಹಿಳೆಯರಲ್ಲಿ ಶೇ 89 ಮಂದಿ ಯೋಜನೆಯಿಂದ ಕುಟುಂಬ ಸಂಬಂಧಗಳು ಸುಧಾರಿಸಿವೆ ಎಂದು ಹೇಳಿದ್ದಾರೆ.

ಮಹಿಳೆಯರಿಗೆ ಹಣಕಾಸಿನ ಶಕ್ತಿ ತುಂಬಿದ ಶಕ್ತಿ ಯೋಜನೆ

ಮಹಿಳೆಯರಿಗೆ ಸಾರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಯಿಂದ ಶೇ 96 ರಷ್ಟು ಮಹಿಳೆಯರು ಪ್ರಯೋಜನ ಪಡೆದಿದ್​ದಾರೆ. ಶೇ 46 ರಷ್ಟು ಮಂದಿ ವಾರಕ್ಕೆ 250 ರೂ.ವರೆಗೆ ಉಳಿಸುತ್ತಿದ್ದಾರೆ. ಶೇ 72 ರಷ್ಟು ಮಹಿಳೆಯರು ಹೆಚ್ಚು ಆತ್ಮವಿಶ್ವಾಸ ಹೊಂದುವಂತಾಗಿದ್ದು, ಶೇ 61 ಮಂದಿ ಈಗ ಮನೆಯಿಂದ ಹೊರ ಹೋಗಿ ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಯೋಜನೆ ಬಗ್ಗೆ ಜನರಿಗೆ ತಿಳಿದಿದ್ದು ಹೇಗಂತೆ ಗೊತ್ತಾ!?

ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಪತ್ರಿಕೆ, ಟಿವಿ ಜಾಹೀರಾತುಗಳಿಂದಲೂ ಜನರಿಂದ ಜನರಿಗೆ ಮಾಹಿತಿ ದೊರೆತಿದ್ದೇ ಹೆಚ್ಚು ಎಂಬ ಅಚ್ಚರಿಯ ಮಾಹಿತಿ ಕೂಡ ಸಮೀಕ್ಷೆಯಿಂದ ಗೊತ್ತಾಗಿದೆ. ಗ್ರಾಮೀಣ ಭಾಗಗಳಲ್ಲಿ ನೆರೆಯವರು, ಸ್ನೇಹಿತರಿಂದ ಮಾಹಿತಿ ತಿಳಿದರೆ ನಗರ ಪ್ರದೇಶಗಳಲ್ಲಿ ಸಾಮಾಜಿಕ ಮಾಧ್ಯಮ, ಪತ್ರಿಕಾ ಮಾಧ್ಯಮಗಳು, ಡಿಜಿಟಲ್​ ಮಾಧ್ಯಮಗಳಿಂದ ಫಲಾನುಭವಿಗಳಿಗೆ ಮಾಹಿತಿ ದೊರೆತಿದೆ. ರಾಜಕೀಯ ಮುಖಂಡರ ನೆರವಿನಿಂದ ಹಮ್ಮಿಕೊಳ್ಳಲಾದ ಪ್ರಚಾರ ಕಾರ್ಯಕ್ರಮಗಳು ಅತ್ಯಲ್ಪ ಯಶಸ್ವಿಯಾಗಿರುವುದೂ ತಿಳಿದುಬಂದಿದೆ.

ಗ್ಯಾರಂಟಿಗಳಿಗೆ ಯಾವ ಜಿಲ್ಲೆಗಳಲ್ಲಿ ಫಲಾನುಭವಿಗಳು ಹೆಚ್ಚು?

ಎಸ್​ಎಸ್​​​ಎಲ್​ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಬಂದಾಗ, ಶೈಕ್ಷಣಿಕ ಕ್ಷೇತ್ರದ ಸಾಧನೆಯಲ್ಲಿ ದಕ್ಷಿಣದ ಜಿಲ್ಲೆಗಳಿಗಿಂತ ಹಿಂದಿದ್ದರೂ ಜೀವನದ ವಿಚಾರಕ್ಕೆ ಬಂದಾಗ ಉತ್ತರ ಕರ್ನಾಟಕದ ಜಿಲ್ಲೆಗಳು ಮುಂಚೂಣಿಯಲ್ಲಿ ಇರುವುದನ್ನು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪ್ರಮಾಣದಿಂದ ತಿಳಿಯಬಹುದು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳ ಜನ ಮುಂದಿರುವುದು ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ. ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳ ಪೈಕಿ ಹೆಚ್ಚಿನವುಗಳಿಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೇ ಫಲಾನುಭವಿಗಳು ಅಧಿಕ ಇರುವುದು ಸಹ ಸಮೀಕ್ಷೆಯಿಂದ ಗೊತ್ತಾಗಿದೆ.

ಕೆಲವು ಯೋಜನೆಗಳಿಗೆ ಹಾಸನ, ಮಂಡ್ಯ, ಚಿಕ್ಕಮಗಳೂರು ಭಾಗದಲ್ಲಿಯೂ ಹೆಚ್ಚಿನ ಫಲಾನುಭವಿಗಳಿದ್ದಾರೆ. ಅನ್ನಭಾಗ್ಯಕ್ಕೆ ಹೆಚ್ಚು ಫಲಾನುಭವಿಗಳು ಕಲಬುರಗಿ, ಹಾಸನ, ತುಮಕೂರು, ರಾಯಚೂರು ಜಿಲ್ಲೆಗಳಲ್ಲಿದ್ದಾರೆ. ಗೃಹ ಲಕ್ಷ್ಮಿಗೆ ಹಾಸನ, ಮಂಡ್ಯ, ಚಿಕ್ಕಮಗಳೂರು, ಬೆಳಗಾವಿಯಲ್ಲಿ ಹೆಚ್ಚಿನ ಫಲಾನುಭವಿಗಳಿದ್ದಾರೆ.

ಗೃಹ ಜ್ಯೋತಿಯ ಅತಿಹೆಚ್ಚು ಫಲಾನುಭವಿಗಳಿರುವ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ, ತುಮಕೂರು, ವಿಜಯಪುರ ಮುಂಚೂಣಿಯಲ್ಲಿವೆ. ಬೆಂಗಳೂರು, ಧಾರವಾಡ, ಮೈಸೂರಿನಲ್ಲಿ ಯುವ ನಿಧಿ ಯೋಜನೆಯ ಹೆಚ್ಚಿನ ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆಯು ಬೆಳಗಾವಿ, ದಾವಣಗೆರೆ, ಮೈಸೂರು, ಕಲಬುರಗಿ ಜಿಲ್ಲೆಗಳ ಮಹಿಳೆಯರಿಗೆ ಹೆಚ್ಚಿನ ಶಕ್ತಿ ತುಂಬಿರುವುದು ಕಂಡುಬಂದಿದೆ.

ವಿದ್ಯಾವಂತರ ಜಿಲ್ಲೆಯಲ್ಲಿ ಯುವನಿಧಿ ಪ್ರಯೋಜನ ಪಡೆದವರು ಭಾರಿ ಕಡಿಮೆ

ವಿದ್ಯಾವಂತರ ಜಿಲ್ಲೆ ಎಂದೇ ಪರಿಗಣಿಸಲ್ಪಟ್ಟಿರುವ ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲಿ ಯುವನಿಧಿ ಪ್ರಯೋಜನ ಪಡೆದವರ ಪ್ರಮಾಣ ಶೇ 5ಕ್ಕಿಂತಲೂ ಕಡಿಮೆ ಇದೆ. ಆದರೆ, ಪರವೀಧರರಲ್ಲಿ ಹೆಚ್ಚಿನವರಲ್ಲಿ ಈ ಯೋಜನೆ ಬಗ್ಗೆ ಅರಿವು ಇತ್ತು.

ಹೆಣ್ಮಕ್ಳೇ ಸ್ಟ್ರಾಂಗ್ ಗುರೂ!

ಒಟ್ಟಾರೆಯಾಗಿ ಉಚಿತ ಯೋಜನೆಗಳಲ್ಲಿ ಮುಖ್ಯವಾದ ಮೂರು ಯೋಜನೆಗಳ (ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆಗಳ) ಪ್ರಯೋಜನ ಪಡೆದವರಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಮಹಿಳಾ ಫಲಾನುಭವಿಗಳು ಶೇ 70 – 75 ಇದ್ದರೆ, ಪುರುಷ ಫಲಾನುಭವಿಗಳು ಶೇ 25 – 30 ಇದ್ದಾರೆ.

ಬಿಜೆಪಿ ಶಾಸಕರೇ ಹೆಚ್ಚಿರುವ ಕರಾವಳಿ ಕರ್ನಾಟಕದಲ್ಲಿ ಹೇಗಿದೆ ‘ಗ್ಯಾರಂಟಿ’ ಹವಾ?

ಪ್ರತಿಪಕ್ಷ ಬಿಜೆಪಿ ಶಾಸಕರೇ ಹೆಚ್ಚಿರುವ ಕರಾವಳಿ ಕರ್ನಾಟಕದಲ್ಲಿ ಹೇಗಿದೆ ‘ಗ್ಯಾರಂಟಿ’ ಹವಾ ಎಂದು ನೋಡುವುದಾದರೆ; ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜಾಗೃತಿ ತುಂಬಾ ಮೇಲ್ಮಟ್ಟದಲ್ಲಿರುವುದು ಸಮೀಕ್ಷಾ ವರದಿಯಿಂದ ಗೊತ್ತಾಗಿದೆ. ಆದರೆ, ಯೋಜನೆಗಳ ಮೇಲಿನ ಅವಲಂಬನೆ ತುಂಬಾ ಕಡಿಮೆ. ದಕ್ಷಿಣ ಕನ್ನಡದಲ್ಲಿ ಸುಮಾರು ಶೇ 85–88 ಮತ್ತು ಉಡುಪಿಯಲ್ಲಿ ಶೇ 81–83 ಕುಟುಂಬಗಳು ಐದು ಗ್ಯಾರಂಟಿಗಳಲ್ಲಿ ಕನಿಷ್ಠ ಮೂರರ ಬಗ್ಗೆ ಮಾಹಿತಿ ತಿಳಿದುಕೊಂಡಿವೆ. ಆದಾಗ್ಯೂ, ಕೇವಲ ಶೇ 55–60 ಜನರು ಮಾತ್ರ ನಿಯಮಿತವಾಗಿ ಪ್ರಯೋಜನ ಪಡೆಯುತ್ತಿದ್ದಾರೆ.

ಆದರೆ, ಶಕ್ತಿ ಯೋಜನೆಯ ಪ್ರಯೋಜನ ಪಡೆಯುವ ಮಹಿಳೆಯರ ಸಂಖ್ಯೆ ಉಭಯ ಜಿಲ್ಲೆಗಳಲ್ಲಿ ಹೆಚ್ಚಿದೆ. ಶೇ 95 ರಷ್ಟು ಮಹಿಳೆಯರು, ವಿಶೇಷವಾಗಿ ವಿದ್ಯಾರ್ಥಿನಿಯರು, ಕೆಲಸ ಮಾಡುವ ಮಹಿಳೆಯರು ಮತ್ತು ವ್ಯಾಪಾರಿಗಳು ದೈನಂದಿನ ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿ ಅಥವಾ ನಗರ ಬಸ್‌ಗಳನ್ನು ಬಳಸುತ್ತಾರೆ.

ಇದನ್ನೂ ಓದಿ: ಕೊಪ್ಪಳ: ತಬ್ಬಲಿ ಮಗುವಿನ ವಿದ್ಯಾಭ್ಯಾಸಕ್ಕೆ ಗೃಹಲಕ್ಷ್ಮಿ ಹಣ ಕೂಡಿಟ್ಟ ಅಜ್ಜಿ!

ಸುಮಾರು ಶೇ 78–80 ಕುಟುಂಬಗಳು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ಮಾಸಿಕ 300–500 ರೂ. ಉಳಿತಾಯವಾಗುತ್ತಿದೆ. ಮಂಗಳೂರು ನಗರ ಮತ್ತು ಉಡುಪಿ ಪಟ್ಟಣದಂತಹ ನಗರ ಪ್ರದೇಶಗಳ ಜನರು ಈ ಯೋಜನೆ ಅಡಿಯಲ್ಲಿ ಅತ್ಯಧಿಕ ಪ್ರಯೋಜನ ಪಡೆದಿದ್ದಾರೆ. ಕೇವಲ ದಕ್ಷಿಣ ಕನ್ನಡ ಜಿಲ್ಲೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದಾದರೆ, ಶೇ 95 ರಷ್ಟು ಮಂದಿ ಗೃಹಜ್ಯೋತಿಯ ಪ್ರಯೋಜನ ಪಡೆಯುತ್ತಿದ್ದಾರೆ. ಮಧ್ಯಮವರ್ಗದ ಬಹುತೇಕ ಜನ ಈ ಯೋಜನೆ ಪ್ರಯೋಜನ ಪಡೆಯುತ್ತಿರುವುದು ಗೊತ್ತಾಗಿದೆ. ಇನ್ನು ಗೃಹಲಕ್ಷ್ಮಿ ಪ್ರಯೋಜನ ಶೇ 62 – 25 ಮಹಿಳೆಯರಿಗೆ ಮಾತ್ರ ದೊರೆಯುತ್ತಿದೆ. ಕರಾವಳಿ ಪಟ್ಟಣಗಳಲ್ಲಿರುವ ಅನೇಕ ದುಡಿಯುವ ವರ್ಗದ ಮಹಿಳೆಯರು ಮನೆಯ ಆದಾಯ ಮಿತಿಯನ್ನು ಮೀರಿರುವುದರಿಂದ ಅರ್ಜಿ ಸಲ್ಲಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ