Bangalore Anti Plastic Drive: ಬೆಂಗಳೂರಿನಲ್ಲಿ ಕೇವಲ 18 ದಿನಗಳಲ್ಲಿ 52 ಟನ್ಗಳಷ್ಟು ನಿಷೇಧಿತ ಪ್ಲಾಸ್ಟಿಕ್ ವಶ
ಬೆಂಗಳೂರಿನಲ್ಲಿ ಸಪ್ಟೆಂಬರ್ 8 ರಿಂದ ಸೆಪ್ಟೆಂಬರ್ 26ರ ವರೆಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿತ್ತು. ಇದೀಗ ಈ ಅಭಿಯಾನ ಒಳ್ಳೆಯ ಫಲಿತಾಂಶ ನೀಡಿದೆ. ನಗರದೆಲ್ಲೆಡೆಯಿಂದ 9500ಕ್ಕೂ ಹೆಚ್ಚು ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ಅಪಾರ ಪ್ರಮಾಣದಲ್ಲಿ ದಂಡ ವಸೂಲಿಯೂ ಆಗಿದೆ. ಇದೀಗ ದಂಡದ ಪ್ರಮಾಣವನ್ನು ಹೆಚ್ಚಿಸಲು BSWML ಚಿಂತನೆ ಮಾಡಿದೆ.

ಬೆಂಗಳೂರು, ಅಕ್ಟೊಬರ್ 8: ಕಳೆದ ತಿಂಗಳಿನಿಂದ ಬೆಂಗಳೂರಿನಲ್ಲಿ (Bengaluru) ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಕೇವಲ 18 ದಿನಗಳಲ್ಲಿ ಬರೋಬ್ಬರಿ 52 ಟನ್ಗಳಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಸಿಕ್ಕಿದ್ದು, ಒಟ್ಟೂ 1.3 ಕೋಟಿ ರೂ.ಮೊತ್ತದ ದಂಡವೂ ಸಹ ಸಂಗ್ರಹಣೆಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮಾಡುವಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (BSWML) ಯಶಸ್ವಿಯಾಗಿದೆ.
ನಗರದ ಎಲ್ಲೆಡೆ ಸಾವಿರಾರು ಟನ್ಗಳ ಪ್ಲಾಸ್ಟಿಕ್ ವಶ
ಸಪ್ಟೆಂಬರ್ 8 ರಿಂದ ಸೆಪ್ಟೆಂಬರ್ 26ರ ವರೆಗೆ BSWML ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿತ್ತು. ನಗರದ ಪಶ್ಚಿಮ ವಲಯದಲ್ಲಿಯೇ 2,876 ಪ್ರಕರಣಗಳು ಕಂಡುಬಂದಿದ್ದು, ಒಟ್ಟು 12 ಟನ್ಗಳಷ್ಟು ಪ್ಲಾಸ್ಟಿಕ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ರೂ.38.6 ಲಕ್ಷ ದಂಡ ಸಂಗ್ರಹವಾಗಿದೆ.
ನಗರದ ಉತ್ತರವಲಯದಲ್ಲಿ ಹೆಚ್ಚು ಪ್ರಕರಣಗಳು ಕಂಡುಬರದೇ ಇದ್ದರೂ ಪರಿಮಾಣದಲ್ಲಿ ಪಶ್ಚಿಮ ವಲಯವನ್ನೂ ಮೀರಿಸಿದೆ. ಇಲ್ಲಿ 1,406 ಪ್ರಕರಣಗಳು ಕಂಡುಬಂದಿದ್ದು, ಬರೊಬ್ಬರಿ 20 ಟನ್ಗಳಷ್ಟು ಪ್ಲಾಸ್ಟಿಕ್ ಸೀಜ್ ಆಗಿದೆ. ಈ ವಲಯದಲ್ಲಿ ಹೆಚ್ಚಿನದಾಗಿ ಬೃಹತ್ ಮಟ್ಟದಲ್ಲಿ ಪ್ಲಾಸ್ಟಿಕ್ ಪೂರೈಕೆದಾರರು ಕಂಡುಬಂದಿದ್ದು, ದೊಡ್ಡ ಮಟ್ಟದಲ್ಲಿ ಪ್ಲಾಸ್ಟಿಕ್ ಪೂರೈಸುತ್ತಿದ್ದವರ ಮೇಲೆ ದಂಡ ವಿಧಿಸಲಾಗಿದೆ.
ಉಳಿದ ಸ್ಥಳಗಳಿಗೆ ಹೋಲಿಸಿದರೆ ನಗರದ ಪೂರ್ವ ವಲಯದಲ್ಲಿ ಕಡಿಮೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸ್ಥಳಗಳಲ್ಲಿ ಹೆಚ್ಚಿನದಾಗಿ ಪ್ರತಿನಿತ್ಯ ಪ್ಲಾಸ್ಟಿಕ ಬಳಕೆ ಮಾಡುವವು ಕಂಡುಬಂದಿದ್ದು, ತ್ಯಾಜ್ಯದ ಪರಿಮಾನವನ್ನು ಬಿಟ್ಟು ಇವರನ್ನು ಕೇಂದ್ರವಾಗಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಕೇವಲ 1.2 ಟನ್ ಪ್ಲಾಸ್ಟಿಕ್ ಸೀಜ್ ಆಗಿದ್ದು,ಒಂದು ಕೆ.ಜಿಗೆ 946 ರೂ.ಗಳಂತೆ ದಂಡ ವಿಧಿಸಲಾಗಿತ್ತು. ಒಟ್ಟಾರೆ 959 ಕೇಸ್ ಪತ್ತೆಯಾಗಿದೆ.
ದಂಡದ ಪ್ರಮಾಣವನ್ನು ಹೆಚ್ಚಿಸಲು BSWML ಚಿಂತನೆ
ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಅನ್ನು ಬೃಹತ್ ಪ್ರಮಾಣದಲ್ಲಿ ಬಳಕೆ ಮತ್ತು ಮಾರಾಟ ಮಾಡಿದಲ್ಲಿ 50 ಸಾವಿರದಿಂದ 1 ಲಕ್ಷದ ವರೆಗೂ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ಸಣ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಸಿದವರಿಗೂ 1000 ರೂ.ಗಳವರೆಗೂ ದಂಡ ವಿಧಿಸಲಾಗುತ್ತಿತ್ತು. ದಂಡದ ಪ್ರಮಾಣವನ್ನು ಹೆಚ್ಚಿಸಲು ಯೋಚಿಸಿರುವ BSWML, ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ ಪ್ಲಾಸ್ಟಿಕ್ ಎಸೆಯುವವರಿಗೆ 2000 ರೂ.ಗಳವರೆಗೂ ದಂಡ ವಿಧಿಸಲು ಮುಂದಾಗಿದೆ.
ನಗರದಾದ್ಯಂತ 9500ಕ್ಕೂ ಹೆಚ್ಚು ಕೇಸ್ಗಳು ಕಂಡುಬಂದಿದೆ. ಈ ಅಭಿಯಾನವು ಬೃಹತ್ ಮಟ್ಟದ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವುದಷ್ಟೇ ಅಲ್ಲದೇ ದೀರ್ಘಕಾಲದವರೆಗೂ ಈ ಅಭೀಯಾನದಿಂದಾಗುವ ಪರಿಣಾಮವನ್ನು ಎತ್ತಿಹಿಡಿದಿದೆ.




