ಮಗನಿಗೆ ಬೈಕ್ ಕೊಟ್ಟ ತಂದೆಗೆ ಜೈಲು ಶಿಕ್ಷೆ: ಅಪ್ರಾಪ್ತರಿಗೆ ವಾಹನ ​ಕೊಡುವ ಮುನ್ನ ಹುಷಾರ್

ಅಪ್ರಾಪ್ತರಿಗೆ ಓಡಿಸಲು ವಾಹನಗಳನ್ನು ಕೊಡಬೇಡಿ ಎಂದು ಟ್ರಾಫಿಕ್ ರೂಲ್ಸ್ ಇದೆ. ಆದರೂ ತಂದೆ ತಾಯಿ ತಮ್ಮ ಅಪ್ರಾಪ್ತ ಮಕ್ಕಳಿಗೆ ಓಡಿಸಲು ಬೈಕ್​​, ಕಾರುಗಳನ್ನು ಕೊಡುತ್ತಿದ್ದು, ಇದರಿಂದ ಅನಾಹುತಗಳು ಸಂಭವಿಸುತ್ತಿವೆ. ಇದೇ ರೀತಿ ಇಲ್ಲೋರ್ವ ಅಪ್ರಾಪ್ತ ಯುವಕ ಬೈಕ್ ತೆಗೆದುಕೊಂಡು ಹೋಗಿ ಅಪಘಾತ ಮಾಡಿಕೊಂಡಿದ್ದಾನೆ. ಇದರಿಂದ ಕೋರ್ಟ್​ ತಂದೆಗೆ ಜೈಲು ಹಾಗೂ ದಂಡ ಶಿಕ್ಷೆ ವಿಧಿಸಿದೆ. ಮಕ್ಕಳಿಗೆ ಚಲಾಯಿಸಲು ವಾಹನ ಕೊಡುವ ಪೋಷಕರು ಈ ಸುದ್ದಿಯನ್ನು ಓದಲೇಬೇಕು.

ಮಗನಿಗೆ ಬೈಕ್ ಕೊಟ್ಟ ತಂದೆಗೆ ಜೈಲು ಶಿಕ್ಷೆ: ಅಪ್ರಾಪ್ತರಿಗೆ ವಾಹನ ​ಕೊಡುವ ಮುನ್ನ ಹುಷಾರ್
Bike Case
Edited By:

Updated on: Jul 01, 2025 | 4:50 PM

ತುಮಕೂರು, (ಜುಲೈ 01): ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಲ್ಲಿ ಪೋಷಕರು ದಂಡ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೊಲೀಸರು ಅಥವಾ ಸಾರಿಗೆ ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೂ ಸಹ ಕೆಲ ಪೋಷಕರು, ಅಪ್ರಾಪ್ತ ಮಕ್ಕಳಿಗೆ ಓಡಿಸಲು ಬೈಕ್, ಕಾರು ನೀಡುತ್ತಲೇ ಇದ್ದಾರೆ. ಅದರಂತೆ ತುಮಕೂರಿನಲ್ಲಿ (Tumakuru) ವ್ಯಕ್ತಿಯೋರ್ವ ಮಗನಿಗೆ ಚಲಾಯಿಸಲು ಬೈಕ್ ಕೊಟ್ಟು ಒಂದು ದಿನ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೇ ಬರೋಬ್ಬರಿ 30 ಸಾವಿರ ರೂಪಾಯಿ ದಂಡ ಸಹ ತೆತ್ತೆದ್ದಾರೆ.

ಅಪ್ರಾಪ್ತನಿಗೆ ಬೈಕ್​ ಕೊಟ್ಟ ತಂದೆ ಬೈಕ್ ಮಾಲೀಕ ರವಿಕುಮಾರ್ ಅವರಿಗೆ ತುಮಕೂರು ಜಿಲ್ಲೆಯ‌ ಗುಬ್ಬಿ ಜೆಎಂಎಫ್ ಸಿ ನ್ಯಾಯಾಲಯವು 1 ದಿನ ಜೈಲು ಹಾಗೂ 30 ಸಾವಿ ರೂಪಾಯಿ ದಂಡ ವಿಧಿಸಿದೆ. ತನ್ನ ಪುತ್ರನಿಗೆ ಬೈಕ್ ಕೊಟ್ಟು ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಮಾಲೀಕ ರವಿಕುಮಾರ್ ಅವರನ್ನ ಆರು ತಿಂಗಳುಗಳ ಕಾಲ ವಿಚಾರಣೆ ನಡೆಸಿ ಅಂತಿಮವಾಗಿ ನ್ಯಾಯಾಧೀಶೆ ಡಿ.ಅನುಪಮ ಈ ತೀರ್ಪು ನೀಡಿದ್ದಾರೆ. ಅದರಂತೆ ಬೈಕ್ ಮಾಲೀಕ ರವಿಕುಮಾರ್ ಕೋರ್ಟ್ ನ ಹಾಲ್ ನಲ್ಲಿರುವ ಸೆಲ್ ನಲ್ಲೇ ಒಂದು ದಿನದ ಜೈಲು ವಾಸ ಅನುಭವಿಸಿದ್ದಾರೆ. ನಿನ್ನೆ ಜೂನ್ 30) ಬೆಳಗ್ಗೆ ಜೈಲು ಪಾಲಾಗಿದ್ದ ರವಿಕುಮಾರ್, ಸಂಜೆ 6 ಗಂಟೆ ಬಳಿಕ ಜೈಲಿನಿಂದ ರಿಲೀಸ್ ಆಗಿದ್ದಾರೆ.

ಇದನ್ನೂ ಓದಿ: ತುಮಕೂರು: ಕುಣಿಗಲ್ ಬೈಪಾಸ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರ ಸಾವು

ಪ್ರಕರಣದ ಹಿನ್ನೆಲೆ

ಅಪ್ರಾಪ್ತ ಬಾಲಕನೊಬ್ಬನಿಗೆ ಆತನ ತಂದೆ ಬೈಕ್ ಚಲಾಯಿಸಲು ಅವಕಾಶ ನೀಡಿದ್ದರು. ಆದರೆ, ಈ ಬಾಲಕ ಲೈಸೆನ್ಸ್ ಇಲ್ಲದೆ ಬೈಕ್ ಚಾಲನೆ ಮಾಡುವಾಗ ಅಪಘಾತ ಸಂಭವಿಸಿತ್ತು. ಈ ಘಟನೆಯಿಂದ ಸಂಚಾರ ನಿಯಮಗಳ ಉಲ್ಲಂಘನೆಯ ಜೊತೆಗೆ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟಾಗಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಬಾಲಕನ ತಂದೆಯ ವಿರುದ್ಧ 8-11-24 ರಂದು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಈ ಪ್ರಕರಣ ಸಂಬಂಧ ಗುಬ್ಬಿ ಪೊಲೀಸರ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗುಬ್ಬಿ ಜೆಎಂಎಫ್ ಸಿ ನ್ಯಾಯಾಲಯ, ತಂದೆ ರವಿಕುಮಾರ್ ಹೆಸರಿನಲ್ಲಿದ್ದ ಬೈಕ್ ಅಪ್ರಾಪ್ತನಿಗೆ ಬೈಕ್ ಚಾಲನೆ ಮಾಡಲು ಕೊಟ್ಟಿರುವುದುಸಾಬೀತಾಗಿರುವ ಹಿನ್ನೆಲೆಯಲ್ಲಿ ಒಂದು ದಿನ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿತ್ತು.

ತಮ್ಮ ಅಪ್ರಾಪ್ತ ಮಕ್ಕಳಿಗೆ ಚಲಾಯಿಸಲು ವಾಹನ ಕೊಡುವ ಪೋಷಕರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ