ನಾಳೆ ಡಾ.ಶಿವಕುಮಾರ ಶ್ರೀಗಳ (Dr Shivakumara Swamiji) 115ನೇ ಜಯಂತಿ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ 4 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿ 8 ಕಡೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಿದ್ದಗಂಗಾ ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಕೆಂಪಹೊನ್ನಯ್ಯ ಅತಿಥಿ ಗೃಹ, ಪ್ರಾರ್ಥನಾ ಮಂದಿರ, ಸಿದ್ದಾರ್ಥ ಅತಿಥಿ ಗೃಹ, ಸೌದೆ ಕೊಪ್ಪಲು, ಉದ್ದಾನೇಶ್ವರ ಊಟದ ಮನೆ, ವಸ್ತು ಪ್ರದರ್ಶನದ ಊಟದ ಮನೆಗಳಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟದ ವ್ಯವಸ್ಥೆಯನ್ನು ಭಕ್ತರಿಗೆ ಮಾಡಲಾಗಿದೆ.
20 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ:
ಡಾ.ಶಿವಕುಮಾರ ಶ್ರೀಗಳ 115ನೇ ಜಯಂತಿ ಹಿನ್ನೆಲೆಯಲ್ಲಿ ನಡೆಯುವ ಗುರುವಂದನಾ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ದೊಡ್ಡ ಮಟ್ಟದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಮಠದಲ್ಲಿ ಶುಕ್ರವಾರ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, 20 ಎಕರೆ ಪ್ರದೇಶದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಮಠದ ಬಂಡೆಪಾಳ್ಯ ಬಳಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬಸ್, ಕಾರು, ಬೈಕ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳು ನಿಲ್ಲಲು ಅವಕಾಶ ಮಾಡಿಕೊಡಲಾಗಿದೆ. ಸರಿ ಸುಮಾರು 4 ಲಕ್ಷ ಜನರು ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದ್ದು, ಯಾವುದೇ ಅವ್ಯವಸ್ಥೆ ಆಗದಂತೆ ಪಾರ್ಕಿಂಗ್ ಮಾಡಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.
ಇಂದು ರಾಹುಲ್ ಗಾಂಧಿ ಭೇಟಿ, ನಾಳೆ ಅಮಿತ್ ಷಾ ಭೇಟಿ; ರಾರಾಜಿಸುತ್ತಿವೆ ಫ್ಲೆಕ್ಸ್‌ಗಳು:
ತುಮಕೂರಿನಲ್ಲಿ ರಾರಾಜಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿಯ ಹಿನ್ನೆಲೆಯಲ್ಲಿ ಇಂದು (ಗುರುವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ನಾಯಕರಿಗೆ ಸ್ವಾಗತ ಕೋರಲು ಹಾಕಿರುವ ಕಾರ್ಯಕರ್ತರು ಭರ್ಜರಿ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ. ತುಮಕೂರಿನ ಬಿ.ಹೆಚ್.ರಸ್ತೆ ಫ್ಲೆಕ್ಸ್‌ಗಳಿಂದ ಆವೃತವಾಗಿದೆ. ತುಮಕೂರಿನ ಬಟವಾಡಿ ಎಪಿಎಂಸಿಯಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಎರಡು ಪಕ್ಷಗಳ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದ್ದು, ಬಲಭಾಗದಲ್ಲಿ ಬಿಜೆಪಿ ಧ್ವಜ, ಎಡಭಾಗದಲ್ಲಿ ಕಾಂಗ್ರೆಸ್ ಬಿಜೆಪಿ ಫ್ಲೆಕ್ಸ್ ಅಳವಡಿಸಲಾಗಿದೆ.
ಬಿಗಿ ಪೊಲೀಸ್ ಭದ್ರತೆ:
ನಾಳೆ ಸಿದ್ದಗಂಗಾ ಮಠಕ್ಕೆ ಅಮಿತ್ ಷಾ ಭೇಟಿ ಹಿನ್ನೆಲೆಯಲ್ಲಿ ತುಮಕೂರು ನಗರ ಹಾಗೂ ಸಿದ್ದಗಂಗಾ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ನಗರ ಹಾಗೂ ಮಠದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ತುಮಕೂರು ವಿವಿ ಹೆಲಿಪ್ಯಾಡ್ನಿಂದ ಹಿಡಿದು ಸಿದ್ದಗಂಗಾ ಮಠದವರೆಗೂ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ದಿನಗಳಿಂದ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮೊಕ್ಕಾಂ ಹೂಡಿದ್ದಾರೆ. ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಸೇರಿದಂತೆ ಎಎಸ್ಪಿ, ಡಿಎಸ್ಪಿಗಳು ಭಾಗಿಯಾಗಿದ್ದಾರೆ. ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ನಲ್ಲಿ ಕೆಲವು ಬದಲಾವಣೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ತುಮಕೂರಿಗೆ ಅಮಿತ್ ಷಾ ಭೇಟಿ ಹಿನ್ನೆಲೆ; ನಗರದಲ್ಲಿ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆಯ ಮಾಹಿತಿ ಇಲ್ಲಿದೆ
ಶಿವಕುಮಾರ ಶ್ರೀಗಳ 115ನೇ ಜಯಂತಿ ಹಿನ್ನೆಲೆ; ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್, ನಾಳೆ ಅಮಿತ್ ಷಾ ಭೇಟಿ