ತುಮಕೂರು: ಸೊಗಸಾಗಿ ಬೆಳೆದು ನಿಂತಿದ್ದ 170 ಅಡಿಕೆ ಸಸಿಗಳು, 15 ತೆಂಗು ಸಸಿಗಳು ಹಾಗೂ 20 ಕ್ಕೂ ಅಧಿಕ ಪರಂಗಿ ಸಸಿಗಳನ್ನು ವೈಯಕ್ತಿಕ ದ್ವೇಷಕ್ಕೆ ಕಿತ್ತುಹಾಕಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ನಡೆದಿದೆ. ಇಡಗೂರು ಗ್ರಾಮದ ರೈತ ಎಂ.ಯು. ಆದಿಲ್ ಪಾಷಾ ಅವರಿಗೆ ಸಂಬಂಧಿಸಿದ ಸ.ನಂ. 97/2 ರಲ್ಲಿನ 3 ಎಕರೆ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಪೋಷಿಸುತ್ತಾ ಅಡಿಕೆ, ತೆಂಗು ಮತ್ತು ಪರಂಗಿ ಸಸಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು. ಮುಂಜಾನೆ ವೇಳೆ 170 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ಬೇರು ಸಹಿತ ಕಿತ್ತು ದುಷ್ಕರ್ಮಿಗಳು ಬಿಸಾಡಿದ್ದು, ಬೋರ್ ವೆಲ್ ಪೈಪ್ ಲೈನ್ ಸಹ ಒಡೆದು ಹಾಕಿದ್ದಾರೆ.
ನಾಲ್ಕು ಪೈಪ್ ಲೈನ್ ಧ್ವಂಸ ಮಾಡಿದ್ದಾರೆ. ಈ ದುಷ್ಕೃತ್ಯ ಮಾಡಿರುವುದು ಜಮೀನು ಮಾರಾಟದ ವಿಚಾರದಲ್ಲಿನ ತಕರಾರು ದ್ವೇಷದಿಂದ ಎಂದು ಆದಿಲ್ ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಸಿ.ಎಸ್.ಪುರ ಠಾಣೆಯಲ್ಲಿ ದೂರು ನೀಡಿರುವುದಾಗಿ ಸಂತ್ರಸ್ತ ರೈತ ಆದಿಲ್ ಪಾಷಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಮೀನು ಮಾರಾಟ ವಿಚಾರದಲ್ಲಿ ಬೆಂಗಳೂರು ವಾಸಿ ಗಂಗಾರಾಮಯ್ಯ ಎನ್ನುವವರ ಜೊತೆ ಕರಾರು ಪತ್ರ ಮಾಡಿಸಲಾಗಿ ನಂತರ ಹಣದ ವ್ಯವಹಾರ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ನನ್ನ ಜಮೀನಿನಲ್ಲಿ ರಸ್ತೆ ಮಾಡಲು ಮುಂದಾಗಿದ್ದರು. ಈ ವಿಚಾರ ಜಗಳಕ್ಕೆ ತಿರುಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಜಮೀನು ಅವರಿಗೆ ನೀಡಲು ಹಿಂದೇಟು ಹಾಕಿದ ನನ್ನ ಕುಟುಂಬದ ಸದಸ್ಯರು ಹಣ ವಾಪಸ್ ನೀಡಿ ಅಗ್ರಿಮೆಂಟ್ ರದ್ದು ಮಾಡಲು ನಿರ್ಧಿರಿಸಿ ಅವರಿಗೆ ತಿಳಿಸಿದ ನಂತರದಲ್ಲಿ ವೈಷಮ್ಯದಿಂದಲೇ ನ್ಯಾಯಾಲಯದ ಮೆಟ್ಟಿಲು ಹತ್ತಲಾಗಿದೆ.
ನಂತರದಲ್ಲೂ ನನ್ನ ಜಮೀನಿಗೆ ಕಲ್ಲು ಕಂಬ ನೆಡಲು ಮುಂದಾದರು. ನಾವು ತಡೆದ ನಂತರದಲ್ಲಿ ನನ್ನ ಮೇಲಿನ ದ್ವೇಷಕ್ಕೆ ಕೆಲವರು ಸಮೃದ್ಧವಾಗಿ ಬೆಳೆದ ಅಡಿಕೆ, ತೆಂಗು ಸಸಿಗಳನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿ.ಎಸ್. ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಮಹೇಶ್, ಟಿವಿ9, ತುಮಕೂರು
ಇದನ್ನೂ ಓದಿ:
3ನೇ ದಿನ ಮೌನ ಮುರಿದು ಯುವ ನಾಯಕಿ ಸೌಮ್ಯಾ ರೆಡ್ಡಿ ಜತೆ ಡಿಕೆ ಶಿವಕುಮಾರ್ ಮುಕ್ತ ಮಾತು!
Published On - 9:58 am, Wed, 12 January 22