ತುಮಕೂರು, ಡಿ.26: ಸ್ಮಶಾನಕ್ಕೆ (Cemetery) ಜಾಗವಿಲ್ಲದ ಹಿನ್ನೆಲೆ ರಸ್ತೆ ಬದಿಯೇ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲಾಗಿದೆ. ತುಮಕೂರು (Tumkur) ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿಲ್ಲದ ಕಾರಣ ಮೃತ ವ್ಯಕ್ತಿಯ ಕುಟುಂಬಸ್ಥರು ರಸ್ತೆ ಬದಿಯೇ ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ.
ವಯೋಸಹಜ ಕಾಯಿಲೆಯಿಂದ ದುರ್ಗದಹಳ್ಳಿ ಗ್ರಾಮದ ತಿಮ್ಮರಾಜುರವರ ತಂದೆ ಪೆದ್ದಯ್ಯ ಎಂಬುವರು ಮೃತಪಟ್ಟಿದ್ದರು. ಪೆದ್ದಯ್ಯ ಅವರ ಅಂತ್ಯಸಂಸ್ಕಾರ ಮಾಡಲು ಸ್ಮಶಾನವಿಲ್ಲದ ಕಾರಣ ರಸ್ತೆ ಬದಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. ತಿಮ್ಮನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯೇ ಮಗ ತನ್ನ ತಂದೆಯ ಅಂತ್ಯ ಸಂಸ್ಕಾರ ಮಾಡಿದ್ದಾನೆ.
ದುರ್ಗದಹಳ್ಳಿ ಗ್ರಾಮಕ್ಕೆ ಸ್ಮಶಾನ ಮಂಜೂರು ಮಾಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಸ್ಮಶಾನಕ್ಕೆ ಜಾಗ ಮಂಜೂರು ಮಾಡದ ಹಿನ್ನೆಲೆ ರಸ್ತೆ ಬದಿಯೇ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ನೂರಾರು ವರ್ಷಗಳ ಸ್ಮಶಾನ ಜಾಗವನ್ನು ತನ್ನದೆಂದು ಗ್ರಾಮಸ್ಥರೊಬ್ಬರು ವಶಪಡಿಸಿಕೊಂಡಿದ್ದಾರೆ, ಮುಂದೇನು?
ಈ ಹಿಂದೆ ಅರಕಲಗೂಡು ಸಮೀಪದ ಶಂಭುನಾಥಪುರ ಗ್ರಾಮದಲ್ಲಿ ಮೃತಪಟ್ಟ ದಲಿತ ವ್ಯಕ್ತಿ ಶವ ಸಂಸ್ಕಾರ ಮಾಡಲು ಸ್ಮಶಾನ ಜಾಗವಿಲ್ಲದೆ ಮನೆ ಮುಂದೆಯೇ ಹೂಳಲು ಯತ್ನಿಸಿದ್ದ ಘಟನೆ ನಡೆದಿತ್ತು. ಗ್ರಾಮದ ದಲಿತ ವ್ಯಕ್ತಿ ಗಿಡ್ಡಯ್ಯ ಎಂಬುವವರು ಅನಾರೋಗ್ಯದಿಂದ ನಿಧನರಾಗಿದ್ದರು. ಗ್ರಾಮದಲ್ಲಿ ದಲಿತರು ಮೃತಪಟ್ಟರೆ ಶವ ಸಂಸ್ಕಾರ ನಡೆಸಲು ಸ್ಮಶಾನವಿಲ್ಲ. ಹೀಗಾಗಿ ನೊಂದ ದಲಿತ ಕುಟುಂಬದ ಸಂಬಂಧಿಕರು ಮನೆಯ ಮುಂದೆಯೇ ಗುಂಡಿ ತೋಡಿ ಶವ ಹೂಳಲು ಮುಂದಾಗಿದ್ದರು. ಆಗ ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರವಿಕುಮಾರ್, ರಾಜಸ್ವ ನಿರೀಕ್ಷಕ ಭಾನು ಪ್ರಕಾಶ್ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ