ತುಮಕೂರು: ಕಾರ್ ಖರೀದಿಗೆ ಬಂದ ರೈತನಿಗೆ ಅವಮಾನ; 10 ಲಕ್ಷ ರೂ. ತಂದು ಕಾರ್ ನೀಡುವಂತೆ ಪಟ್ಟು ಹಿಡಿದ ರೈತ
ಅವಮಾನಿಸಿದ್ದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದಾರೆ.
ತುಮಕೂರು: ಕಾರು ಖರೀದಿಗೆ ಬಂದ ಯುವ ರೈತರಿಗೆ ಅವಮಾನ ಮಾಡಿದ ಘಟನೆ ತುಮಕೂರಿನ ರಾಮನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಕೆಂಪೇಗೌಡ ಎನ್ನುವ ಯುವ ರೈತರಿಗೆ ಅವಮಾನ ಮಾಡಲಾಗಿದೆ. ಬೋಲೆರೋ ಗೂಡ್ಸ್ ವಾಹನ ಖರೀದಿಸಲು ಶೋರೂಂಗೆ ಬಂದಿದ್ದ ತಾಲೂಕಿನ ಹೆಬ್ಬೂರು ಹೋಬಳಿಯ ರಾಮನಪಾಳ್ಯ ನಿವಾಸಿ ಯುವರೈತ ಕೆಂಪೇಗೌಡಗೆ ಅವಮಾನ ಮಾಡಲಾಗಿದೆ. ಯುವಕನ ವೇಷಭೂಷಣ ನೋಡಿ ಶೋರೂಂನಲ್ಲಿ ಅವಮಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ‘ದಿಗ್ಗಜರು’ ಸಿನಿಮಾವನ್ನು ನೀವು ನೋಡಿರುತ್ತೀರಿ. ಆ ಸಿನಿಮಾದಲ್ಲಿನ ದೃಶ್ಯದಂಥ ಘಟನೆಯೊಂದು ಇದೀಗ ನಿಜಜೀವನದಲ್ಲಿ ಸಂಭವಿಸಿದೆ. ತುಮಕೂರಿನ ರೈತರೊಬ್ಬರಿಗೆ ಅಂಥ ಅನುಭವವಾಗಿದೆ.
ಹತ್ತು ರೂಪಾಯಿ ದುಡ್ಡು ಕೊಡುವ ಯೋಗ್ಯತೆ ಇಲ್ಲ ಎಂದು ಸೇಲ್ಸ್ ಏಜೆಂಟ್ರಿಂದ ಕೆಂಪೇಗೌಡಗೆ ಅವಮಾನ ಆಗಿದೆ. ಅವಮಾನಿಸಿದ್ದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಕೆಂಪೇಗೌಡ ಒಂದು ಗಂಟೆಯಲ್ಲಿ ಹತ್ತು ಲಕ್ಷ ರೂಪಾಯಿ ದುಡ್ಡು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಶೋರೂಂ ಸೇಲ್ಸ್ ಏಜೆಂಟ್ ಮಾತ್ರ ವಾಹನ ನೀಡದೇ, ಎರಡು ಮೂರು ದಿನದಲ್ಲಿ ವಾಹನ ನೀಡುತ್ತೇವೆ ಎಂದು ಹೇಳಿದ್ದಾರೆ ಎಂದು ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ.
ಕಾರ್ ಶೋರೂಮ್ನಲ್ಲಿ ಘಟನೆ ನಡೆದಿದ್ದೇನು?
ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದರು. 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದರು. ಆಗ ನಾವು ಅರ್ಧಗಂಟೆಯಲ್ಲಿ 10 ಲಕ್ಷ ಹೊಂದಿಸಿ ತಂದು ಕೊಟ್ಟಿದ್ದೀವಿ. ಕಳೆದ ಜನವರಿ 4 ರಂದು ಶೋರೂಮ್ಗೆ ಹೋಗಿ ಗೂಡ್ಸ್ ವಾಹನ ತರಲು ಹೇಳಿಬರಲಾಗಿತ್ತು. ಅದರಂತೆ ಮೊನ್ನೆ ಎರಡು ಲಕ್ಷ ಹಣ ಕಟ್ಟಿ ವಾಹನ ತರಲು ಶೋರೂಮ್ಗೆ ಹೋಗಿದ್ವಿ. ಎರಡು ಲಕ್ಷ ಹಣ ಕಟ್ತೀವಿ. ವಾಹನ ಕೊಡಿ ಎಂದು ಕೇಳಿದ್ದೀವಿ. ಆಗ ಶೋರೂಮ್ ಸಿಬ್ಬಂದಿ ಏಳು ಜನರು ಕೂಡ ‘ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ’ ಎಂದು ಅವಮಾನ ಮಾಡಿದ್ದರು ಎಂಬ ಬಗ್ಗೆ ಹೇಳಲಾಗಿದೆ.
ನಾವು 25 ನಿಮಿಷ ಸಮಯ ಕೇಳಿದ್ದೀವಿ. ಆಗಲೂ ಅವರು ಕಿಚಾಯಿಸಿದ್ದಾರೆ. ನಾವು ಹೇಳಿದ ಸಮಯಕ್ಕೆ ಹಣ ತಂದು ಕೊಟ್ಟಿದ್ದೀವಿ. ಆದರೆ ಅವರು ವಾಹನ ನೀಡಲಿಲ್ಲ. ನಾವು ರೈತರು ಅಂತಾ ಅವಮಾನ ಮಾಡಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಬೊಲೆರೋ ವಾಹನ ತರಲು ಹೋಗಿದ್ದ ಕೆಂಪೇಗೌಡ ಹಾಗೂ ಮಾವ ರಾಮಾಂಜನೇಯ ಈ ಬಗ್ಗೆ ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಕ್ಯಾಂಟರ್ ಚಾಲಕರಾಗಿ ಕೆಲಸ ಮಾಡುತ್ತಿರುವ ಕೆಂಪೇಗೌಡ ಸದ್ಯ ಸ್ವಂತ ವಾಹನ ಖರೀದಿಸಲು ನಿರ್ಧರಿಸಿದ್ದರು. ಹೀಗಾಗಿ ಸ್ವಂತ ವಾಹನ ತರಲು ಮಾವ ಹಾಗೂ ಸ್ನೇಹಿತರೊಂದಿಗೆ ಹೋಗಿದ್ದರು. ಈ ವೇಳೆ ಬಟ್ಟೆ ವೇಷಭೂಷಣ ಕಂಡು ಸಿಬ್ಬಂದಿ ಅವಮಾನಿಸಿದ್ದರು ಎಂದು ತಿಳಿದುಬಂದಿದೆ. ಸಿಬ್ಬಂದಿ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಇದನ್ನೂ ಓದಿ: ತುಮಕೂರು: ಅಪಘಾತದಲ್ಲಿ ಮೂವರ ಸಾವಿಗೆ ಕಾರಣನಾಗಿದ್ದ ಲಾರಿ ಚಾಲಕ 16 ವರ್ಷಗಳ ಬಳಿಕ ಪೊಲೀಸರ ವಶಕ್ಕೆ!
ಇದನ್ನೂ ಓದಿ: ಹೈ ಟೆನ್ಸನ್ ! ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಪಿಡಿಒ ತಡೆ: ವಿದ್ಯುತ್ ಕಂಬ ಏರಿ ಪ್ರತಿಭಟನೆಗೆ ಇಳಿದ ರೈತ
Published On - 9:02 am, Sun, 23 January 22