
ತುಮಕೂರು, ನವೆಂಬರ್ 16: ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕಪಾಳ್ಯದಲ್ಲಿ ತಂದೆಯೇ ಹಾರೆಯಿಂದ ಮಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಂಗತಿಗಳು ಬಯಲಾಗುತ್ತಿವೆ. ಹೆಂಡತಿ ಜೊತೆಗಿನ ಗಲಾಟೆಯಲ್ಲಿ ನಂಜಪ್ಪ ಮಗ ಸುನೀಲ್ನನ್ನು ಭಾನುವಾರ ಕೊಲೆಗೈದಿದ್ದ. ಕೊಲೆ ಬಳಿಕ ಮಗನ ಶವದೊಂದಿಗೆ ಮನೆಯೊಳಗೆ ಕುಳಿತು ಹೈಡ್ರಾಮಾ ಸೃಷ್ಟಿಸಿದ್ದಾನೆ. ಕೊನೆಗೆ ಪೊಲೀಸರು ಹರಸಾಹಸದ ಬಳಿಕ ಮನೆಯಿಂದ ಹೊರಬಂದ ಆರೋಪಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತಂದೆಯಿಂದಲೇ ಮಗನ ಕೊಲೆ ಪ್ರಕರಣ ಸದ್ಯ ಭಾರಿ ಹೈಡ್ರಾಮಾಗೆ ಕಾರಣವಾಗಿದೆ. ನಂಜಪ್ಪ ಮತ್ತು ಆತನ ಪತ್ನಿ ರಂಜಿತಾ ನಡುವೆ ಜಗಳವಾಗಿದೆ. ಈ ವೇಳೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ ನಂಜಪ್ಪ ಮನೆಯ ಬಾಗಿಲಿಗೆ ಚಿಲಕ ಹಾಕಿಕೊಂಡಿದ್ದ. ಬೆಳಿಗ್ಗೆ ಬಾಗಿಲು ತೆರೆಯುವಂತೆ ಮಗ ಹೇಳಿದ್ದೆ ತಪ್ಪಾಗಿದೆ. ಹೆಂಡತಿ ಮೇಲಿದ್ದ ಕೋಪವನ್ನು ತಾನೂ ಜನ್ಮ ನೀಡಿದ ಮಗನ ಮೇಲೆ ತೀರಿಸಿಕೊಂಡಿದ್ದಾನೆ. ಮುಗ್ದ ಬಾಲಕನ ಬಲಿ ಪಡೆದಿದ್ದಾನೆ.
ಆದರೆ ಇದಾದ ನಂತರವೂ ತನ್ನ ಹುಚ್ಚಾಟ ನಿಲ್ಲಿಸದ ತಂದೆ, ಮಗನ ಶವದೊಂದಿಗೆ ಮನೆಯೊಳಗೆ ಅಡಗಿಕೊಂಡು ಅವಾಂತರ ಸೃಷ್ಟಿಸಿದ್ದ. ಹೆಗಲ ಮೇಲೆ ಹಾರೆ ಹಿಡಿದು ಯಾರು ಬರ್ತಿರಾ ನೋಡ್ತಿನಿ ಎಂದು ಅವಾಜ್ ಕೂಡ ಹಾಕಿದ್ದ. ಇನ್ನು ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಮನೆಯ ಲಾಕ್ ತೆರೆಯಲು ಒಪ್ಪದ ನಂಜಪ್ಪ, ಈ ರೀತಿ ಹೈಡ್ರಾಮಾ ಸೃಷ್ಟಿಸಿದ್ದಾನೆ.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!
ಆರೋಪಿಯನ್ನು ಮನವೊಲಿಸಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದರೂ ಆತ ಬಾಗಿಲು ತೆರೆಯಲಿಲ್ಲ. ಕೊನೆಗೆ ತಾವೇ ಹಾರೆ ಬಳಸಿ ಹೊರಗಡೆಯಿಂದ ಬಾಗಿಲು ತೆರೆದಿದ್ದಾರೆ. ಇನ್ನು ಇದೆಲ್ಲವನ್ನೂ ಹೊರಗಡೆಯಿಂದ ಜನರು ನೋಡುತಿದ್ದರು. ಇನ್ನು ಹೀಗೆ ಬಾಗಿಲು ತೆರೆದು ಒಳಗೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಹೊರ ಕರೆತಂದಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ ಜನ ಆತನ ಮೇಲೆ ದಾಳಿ ಮಾಡಿದ್ದಾರೆ. ಪೊಲೀಸರು ಕೂಡಲೇ ಆತನನ್ನು ಹೊಯ್ಸಳದೊಳಗೆ ಕೂರಿಸಿದ್ದಾರೆ. ಆದರೂ ಬಿಡದ ಜನ ವಾಹನದೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ ನೆಲಕ್ಕೆ ತಳ್ಳಿ, ತುಳಿದಾಡಿದ್ದಾರೆ.
ಇತ್ತ ತನ್ನ ಮೇಲಿದ್ದ ಕೋಪಕ್ಕೆ ಪತಿ, ಮಗನ ಕೊಂದನಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾಳೆ. ಈ ಹಿಂದೆ ಗಂಡ ಹಲ್ಲೆ ಮಾಡಿದ್ದಾಗ ಪೊಲೀಸ್ ಠಾಣೆಯಲ್ಲಿ ಪತ್ನಿ ಕೇಸ್ ಮಾಡಿದ್ದು, ಆತ ಬಂಧನವಾಗಿ ಬಿಡುಗಡೆಯಾಗಿದ್ದ. ಆದರೆ ಕೇಸ್ ಕೋರ್ಟ್ನಲ್ಲಿ ನಡೆಯುತಿತ್ತು. ಬಳಿಕ ರಾಜಿಯೂ ಆಗಿತ್ತು. ಒಟ್ಟಿಗೆ ಸಂಸಾರವೂ ಸಾಗಿತ್ತು. ಹೀಗಾಗಿ ಮರು ದಿನ ಅಂದರೆ ಸೋಮವಾರ ಕೋರ್ಟ್ನಲ್ಲಿ ರಾಜಿ ಮಾಡಿಕೊಳ್ಳುವುದಕ್ಕೆ ಚಿಂತನೆ ಮಾಡಲಾಗಿತ್ತು. ಆದರೆ ಅದಕ್ಕೂ ಮುಂಚೆ ಶುರುವಾದ ಜಗಳದಲ್ಲಿ ಮಗ ಬಲಿಯಾಗಿದ್ದಾನೆ. ಜಗಳದಲ್ಲಿ ತಾನು ಜನ್ಮ ನೀಡಿದ ಮಗನ ಸಾವು ನಿರೀಕ್ಷಿಸದ ತಾಯಿ ಆತನನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದಾಳೆ.
ಇದನ್ನೂ ಓದಿ: ಪಾರ್ಟನರ್ನಿಂದಲೇ ₹30 ಲಕ್ಷದ ಸುಪಾರಿ: ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ರಹಸ್ಯ ಕೊನೆಗೂ ಬಯಲು, ಐವರ ಬಂಧನ
ಸದ್ಯ ಘಟನೆ ಸಂಬಂಧ ಕುಣಿಗಲ್ ಪೊಲೀಸರು ನಂಜಪ್ಪನ ಬಂಧಿಸಿದ್ದಾರೆ. ಇನ್ನು ಆತನಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಷ್ಟೇ ಅಲ್ಲದೇ, ಮಗುವನ್ನು ಕಳೆದುಕೊಂಡ ತಾಯಿಯ ಒತ್ತಾಯವೂ ಆಗಿದೆ. ಒಟ್ಟಾರೆ, ತಾನು ಜನ್ಮ ನೀಡಿ, ಆಡಿಸಿ ಬೆಳೆಸಿದ ಮಗುವಿನ ಮೇಲೆ ತಂದೆಯ ಈ ಹುಚ್ಚಾಟದ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 pm, Mon, 16 November 26