
ತುಮಕೂರು, ಜೂನ್ 1: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavati Link Canal Project) ವಿರೋಧಿಸಿ ಬೆಂಗಳೂರು ಶಿವಮೊಗ್ಗ ಹೆದ್ದಾರಿ (bengaluru Shivamogga Highway) ತಡೆದು ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆ ಮೂಲಕ ಪ್ರತಿಭಟನಾಕಾರರ ಮೇಲೆ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ 11 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕರಿಗೆ ತೊಂದರೆ, ಸರ್ಕಾರಿ ವಾಹನಗಳಿಗೆ ಹಾನಿ, ರಾಷ್ಟ್ರೀಯ ಹೆದ್ದಾರಿ ಬ್ಲಾಕ್ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಗೌಡ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ವಿರುದ್ಧ ಕೇಸ್ ದಾಖಲಿಸಲಾಗಿದೆ. ಹಾಗೆಯೇ, ಬಿಜೆಪಿ ಮುಖಂಡರಾದ ದಿಲೀಪ್ ಕುಮಾರ್, ಹೆಬ್ಬಾಕ ರವಿ ಹಾಗೂ ಇಬ್ಬರು ಸ್ವಾಮೀಜಿಗಳ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಸ್ವಾಮೀಜಿಗಳ ಹೆಸರು ಉಲ್ಲೇಖಿಸಿಲ್ಲ. ನೂರಾರು ಜನರ ವಿರುದ್ಧ ಒಟ್ಟು 11 ಎಫ್ಐಆರ್ ದಾಖಲಿಸಿದ್ದು, ಇದರಲ್ಲಿ 10 ಸ್ವಯಂಪ್ರೇರಿತ ಪ್ರಕರಣಗಳಾಗಿವೆ. ಒಂದು ಕೇಸ್ ಮಾತ್ರ ಕಂಟ್ರ್ಯಾಕ್ಟರ್ ನೀಡಿದ ದೂರಿನ ಮೇಲೆ ದಾಖಲಾಗಿದ್ದು, ಇನ್ನೂ ಮೂರರಿಂದ ನಾಲ್ಕು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಏನೇ ಎಫ್ಐಆರ್ ದಾಖಲಿಸಿದರೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಗುಬ್ಬಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್, ಈ ಯೋಜನೆಗೆ ನನ್ನ ವಿರೋಧವೂ ಇದೆ. ಜನರ ಅಭಿಪ್ರಾಯ ಏನಿದೆಯೋ ಅದೇ ನನ್ನ ಅಭಿಪ್ರಾಯ ಎಂದಿದ್ದಾರೆ. ಕುಣಿಗಲ್ ಕಾಂಗ್ರೆಸ್ ಶಾಸಕ ಕೂಡಾ ಮಾಗಡಿಗೆ ನೀರು ಹೋಗಲ್ಲ. ಕುಣಿಗಲ್‌ಗೆ ಮಾತ್ರ ಸೀಮಿತ ಎಂದಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಕೋಟಿ ನಮಸ್ಕಾರ. ಯಾಕ್ ಗಂಟು ಬಿದ್ದಿದ್ದಾರೋ ಗೊತ್ತಿಲ್ಲ. ತುಮಕೂರು ಜನರಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡುತ್ತಲೇ ವಿ. ಸೋಮಣ್ಣ ಕುಟುಕಿದ್ದಾರೆ. ತಿಪ್ಪಗೊಂಡನಹಳ್ಳಿ, ಮಂಚನ ಬೆಲೆಯಿಂದ ಹೊಸ ಲೈನ್ ಹಾಕುವ. ಕನಕಪುರಕ್ಕೂ ನೀರು ಬಿಟ್ಟುಕೊಳ್ಳಲಿ. ದೊಡ್ಡ ಬೋರ್ಡ್ ಹಾಕಿಸಿಕೊಳ್ಳಲಿ ಎಂದಿರುವ ಸೋಮಣ್ಣ, ‘‘ನೀನೇ ಮಹಾರಾಜ, ನೀನೇ ಉಪಮುಖ್ಯಮಂತ್ರಿ’’ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ಕನಸಿನ ಯೋಜನೆಗೆ ವಿರೋಧ ಏಕೆ? ಏನಿದು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್?
ಸದ್ಯ ಹೇಮಾವತಿ ಜಲ ಹೋರಾಟ ಬೂದಿ ಮುಚ್ಚಿದ ಕೆಂಡದಂತಿದೆ. ರಾಜಕೀಯ ಜಟಾಪಟಿ ಜೋರಾಗಿದೆ. ದೂರು ದಾಖಲಾಗಿರೋದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ಯುದ್ಧಕ್ಕೆ ನಾಂದಿ ಹಾಡಿದೆ.