ಬೆಂಗಳೂರಿನ ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
ಬೆಂಗಳೂರಿನ ಮಲ್ಲಸಂದ್ರದಲ್ಲಿ ಚಿರತೆ ಆತಂಕ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸ್ಥಳೀಯರು ಚಿರತೆಯನ್ನು ನೋಡಿ ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಚಿರತೆ ಪತ್ತೆ ಹಚ್ಚಲು ಕ್ಯಾಮೆರಾಗಳನ್ನು ಅಳವಡಿಸಿದೆ. ಇದುವರೆಗೆ ಚಿರತೆ ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು, ಜೂನ್ 01: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಚಿರತೆ (Leopard) ಕಾಟ ಶುರುವಾಗಿದೆ. ಮೇ 31 ರಂದು ಬೆಳಗ್ಗೆ 9:15ಕ್ಕೆ ನಗರದ ತಲಘಟ್ಟಪುರ ಮತ್ತು ಮಲ್ಲಸಂದ್ರ (Mallasandra) ಸುತ್ತಾ ಮುತ್ತಾ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಸದ್ಯ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಚಿರತೆ ಓಡಾಡಿದ್ದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಚಿರತೆ ಪತ್ತೆ ಹಚ್ಚಲು ನಾಲ್ಕೈದು ಕಡೆ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
ಚಿರತೆ ಪತ್ತೆಗೆ ಕ್ಯಾಮರಾ ಅಳವಡಿಕೆ
ಸ್ಥಳೀಯರ ಮಾಹಿತಿ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಚಿರತೆ ಓಡಾಡಿದ್ದರ ಬಗ್ಗೆ ಸ್ಥಳೀಯರು ನಮಗೆ ತಿಳಿಸಿದ್ದಾರೆ. ಹೀಗಾಗಿ ಬೆಳಗ್ಗೆಯಿಂದ ರಾತ್ರಿವರೆಗೆ ಕಾರ್ಯಾಚರಣೆ ಮಾಡಿದ್ದೇವೆ. ಇಲ್ಲಿಯವರೆಗೂ ನಮಗೂ ಸಹ ಚಿರತೆ ಕಾಣಿಸಿಕೊಂಡಿಲ್ಲ. ಚಿರತೆ ಪತ್ತೆ ಹಚ್ಚಲು ನಾಲ್ಕೈದು ಕಡೆ ಕ್ಯಾಮರಾ ಹಾಕಿದ್ದೇವೆ ಎಂದು ಹೇಳಿದ್ದಾರೆ.
ಚಿರತೆ ಇದೆ ಅಂತಾ ಓಡಾಡೋಕು ಭಯವಾಗುತ್ತಿದೆ: ಮಾರ್ಟಿನ್
ಇನ್ನೂ ಸ್ಥಳೀಯರಾದ ಮಾರ್ಟಿನ್ ಎಂಬುವವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ಬೆಳಗ್ಗೆ ಚಿರತೆ ಕಾಣಿಸಿಕೊಂಡಿರೊ ಬಗ್ಗೆ ಕೇಳಿಸಿಕೊಂಡ್ವಿ. ಅರಣ್ಯ ಇಲಾಖೆ ಸಿಬ್ಬಂದಿಗಳು ಬಂದು ಹುಡುಕಾಟ ನಡೆಸಿದರು. ಆದರೆ ನಮ್ಮ ಯಾರ ಕಣ್ಣಿಗೂ ಚಿರತೆ ಕಾಣಿಸಿಲ್ಲ. ಚಿರತೆ ಇದೆ ಅಂತಾ ಓಡಾಡೋಕು ಭಯವಾಗುತ್ತಿದೆ. ಫುಡ್ ಡಿಲವರಿ ಬಾಯ್ಸ್ ಜಾಸ್ತಿ ಓಡಾಡುತ್ತಾರೆ. ಈ ವಿಚಾರ ಕೇಳಿ ಜಾಸ್ತಿ ಜನ ಓಡಾಡುತ್ತಿಲ್ಲ ಎಂದಿದ್ದಾರೆ.
ಚಿಕ್ಕತಿರುಪತಿ ಸುತ್ತಮುತ್ತ ಚಿರತೆ ಓಡಾಟ
ಇತ್ತೀಚೆಗೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಚಿಕ್ಕ ತಿರುಪತಿ ಗ್ರಾಮ ಪಂಚಾಯತ್ನ ಚಿಕ್ಕತಿರುಪತಿ, ಆಲಂಬಾಡಿ ಸುತ್ತಮುತ್ತ ಚಿರತೆ ಪದೆ ಪದೆ ಕಾಣಿಸಿಕೊಳ್ಳುತ್ತಿತ್ತು. ಚಿರತೆ ಓಡಾಟದಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿತ್ತು, ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಆಗಾಗ ಚಿರತೆ ಪ್ರತ್ಯಕ್ಷವಾಗುತ್ತಿತ್ತು. ನಾಯಿ, ಹಸುಗಳ ಮೇಲೆ ದಾಳಿ ಮಾಡುತ್ತಿತ್ತು.
ಇದನ್ನೂ ಓದಿ: ಬೆಂಗಳೂರಿನ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಹೊರ ರಾಜ್ಯದ ಯುವತಿ
ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಭಾರಿ ಒತ್ತಾಯ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದು, ಚಿರತೆ ಓಡಾಟದ ದೃಶ್ಯಗಳು ಸಿಸಿ ಟಿವಿ ಹಾಗೂ ಮೊಬೈಲ್ ಫೋನ್ಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 am, Sun, 1 June 25







