ವೀರಣ್ಣ ಮಡಿವಾಳ ಅಮಾನತು: ಸರ್ಕಾರದ ವಿರುದ್ಧ ನೆಟ್ಟಿಗರ ಆಕ್ರೋಶ, ಶಿಕ್ಷಣ ಸಚಿವ ಹೇಳಿದ್ದಿಷ್ಟು
ಶಾಲಾ ಕೊಠಡಿಗಳ ಕೊರತೆಗಾಗಿ ಪ್ರತಿಭಟನೆ ನಡೆಸಿದ್ದ ಬೆಳಗಾವಿ ಜಿಲ್ಲೆಯ ನಿಡಗುಂದಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕ್ರಮಕ್ಕೆ ಬಿಜೆಪಿ ಸೇರಿದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ಅವರ ಅಮಾನತು ಹಿಂಪಡೆಯಬೇಕೆಂದು ಆಗ್ರಹಿಸಲಾಗುತ್ತಿದೆ.

ಬೆಂಗಳೂರು, ಮೇ 31: ಮೂಲಭೂತ ಸೌಕರ್ಯ ಆಗ್ರಹಿಸಿ ಹೋರಾಟ ಮಾಡಿದ್ದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ (Veeranna Madivalar) ಅವರನ್ನು ಅಮಾನತು ಮಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸರ್ಕಾರದ (Karnataka Government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಮಾನತನ್ನು ಖಂಡಿಸಿ ರಾಜ್ಯ ಬಿಜೆಪಿ (BJP) ನಾಯಕರು ಸಹಿತ ಸರ್ಕಾರದ ವಿರುದ್ಧ ಗುಡುಗಿದ್ದು, “ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತ್ತು ಮಾಡಿ ಸರ್ಕಾರ ತನ್ನ ಕ್ರೌರ್ಯತನ ಮೆರದಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ” ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಅಮಾನತು ಹಿಂಪಡೆಯುವಂತೆ ನೆಟ್ಟಿಗರ ಆಗ್ರಹ
ನೆಟ್ಟಿಗ ವಿನಯ್ ಡಿ ಅದಲಾಪುರ ಎಂಬುವರು ಫೇಸ್ಬುಕ್ನಲ್ಲಿ, “ವೀರಣ್ಣ ಮಡಿವಾಳ ಮಾಸ್ತರು ವರ್ಷಗಳಿಂದ ಕೇಳುತ್ತಿರುವ ಕೊಠಡಿ ಮಂಜೂರು ಮಾಡಲು ನಿಯಮಾವಳಿಗಳ ಪ್ರಕಾರ ಅವಕಾಶವಿಲ್ಲದಿದ್ದರೆ ಅದನ್ನಾದರೂ ತಿಳಿಸಿ, ಇಲ್ಲವೇ ಕೂಡಲೇ ಅಮಾನತು ಹಿಂತೆಗೆದುಕೊಂಡು ಶಾಲೆಯ ಜಾಣಮಕ್ಕಳ ಅವಶ್ಯಕತೆಗೆ ತಕ್ಕಷ್ಟು ಬೇಕಾದ ಕೊಠಡಿ ಮಂಜೂರು ಮಾಡಿಕೊಡಿ. ಹಸಿದವರಿಗೆ ಗುಟುಕು ನೀರು ,ಹೊಟ್ಟೆ ತುಂಬಿದವರಿಗೆ ಮೃಷ್ಟಾನ್ನ ಬಡಿಸುವ ನ್ಯಾಯ ನಮಗೆ ಬೇಡ” ಎಂದು ಪೋಸ್ಟ್ ಹಾಕಿದ್ದಾರೆ.
“ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರ ಪ್ರಾಥಮಿಕ ಶಾಲೆಗೆ ಕೊಠಡಿಗಳ ಮಂಜೂರಾತಿಗಾಗಿ ಆಗ್ರಹಿಸಿ ಮೌನ ಕಾಲ್ನಡಿಗೆ ಹಾಗೂ ಉಪವಾಸ ಪ್ರತಿಭಟನೆ ನಡೆಸಿದ್ದ ಮುಖ್ಯ ಶಿಕ್ಷಕರಾದ ವೀರಣ್ಣ ಮಡಿವಾಳ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದು ಖಂಡನೀಯ. ಈ ವ್ಯವಸ್ಥೆಗೆ ಇದಕ್ಕಿಂತ ಕನ್ನಡಿ ಬೇಕಾ? ವೀರಣ್ಣ ಮಡಿವಾಳ ಅವರ ಕಾಳಜಿ ಗುರುತಿಸದಿರುವ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಧೋರಣೆಗೆ ಧಿಕ್ಕಾರ” ಎಂದು ಬಿ ಹರ್ಷವರ್ಧನ್ ಎಂಬುವರು ಪೋಸ್ಟ್ ಹಾಕಿದ್ದಾರೆ.
ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಚಕ್ರ ತುಕ್ಕು ಹಿಡಿದು ನಿಂತಿದೆ. ಕನಿಷ್ಠ ಶಿಕ್ಷಣ ಕ್ಷೇತ್ರಕ್ಕಾದರೂ ಅಲ್ಪವಾದರೂ ಕಾಯಕಲ್ಪ ನೀಡದ ನಿಷ್ಕ್ರೀಯತೆ ಪ್ರದರ್ಶಿಸಲಾಗುತ್ತಿದೆ ಎಂಬುದಕ್ಕೆ ಶಾಲಾ ಕೊಠಡಿಗಳಿಗಾಗಿ ಮಕ್ಕಳ ಶಿಕ್ಷಣದ ಪರ ಕಾಳಜಿಪೂರ್ವಕ ಪ್ರತಿಭಟನೆ ನಡೆಸಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತ್ತು ಮಾಡಿ ಸರ್ಕಾರ ತನ್ನ ಕ್ರೌರ್ಯತನ ಮೆರದಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಅವರು “ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಕೊರತೆಯ ಕುರಿತು ನಿರಂತರ ನಿವೇದನೆ ಸಲ್ಲಿಸಿ ಇದು ನಿರರ್ಥಕವಾದಾಗ ಗತ್ಯಂತರವಿಲ್ಲದೇ ವೀರಣ್ಣ ಮಡಿವಾಳರ ಅವರು ಸರ್ಕಾರದ ಕಣ್ಣು ತೆರೆಸಲು ಶಿಕ್ಷಣ ಕಳಕಳಿಯ ಪ್ರತೀಕವಾಗಿ ಸಾತ್ವಿಕ ಪ್ರತಿಭಟನೆ ತೋರಿಸಿದ್ದಾರೆ, ಇದನ್ನು ಅಶಿಸ್ತು ಎಂದು ಪರಿಗಣಿಸಿ ಅವರನ್ನು ಸೇವೆಯಿಂದ ಅಮಾನತ್ತು ಪಡಿಸುವ ಕಠಿಣ ನಿರ್ಧಾರದ ಮೂಲಕ ಶಿಕ್ಷಣದಲ್ಲಿ ಸುಧಾರಣೆ ತರುವ ಸಮರ್ಪಣಾ ಮನೋಭಾವದ ಬದ್ಧತೆಯ ಶಿಕ್ಷಕರನ್ನು ಕಾಂಗ್ರೆಸ್ ಸರ್ಕಾರ ಶಿಕ್ಷಿಸಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ, ಇದು ಕಾಂಗ್ರೆಸ್ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಇರುವ ಉಪೇಕ್ಷೆ ಹಾಗೂ ತಾತ್ಸಾರವನ್ನು ತೋರಿಸಿದೆ” ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಚಕ್ರ ತುಕ್ಕು ಹಿಡಿದು ನಿಂತಿದೆ. ಕನಿಷ್ಠ ಶಿಕ್ಷಣ ಕ್ಷೇತ್ರಕ್ಕಾದರೂ ಅಲ್ಪವಾದರೂ ಕಾಯಕಲ್ಪ ನೀಡದ ನಿಷ್ಕ್ರೀಯತೆ ಪ್ರದರ್ಶಿಸಲಾಗುತ್ತಿದೆ ಎಂಬುದಕ್ಕೆ ಶಾಲಾ ಕೊಠಡಿಗಳಿಗಾಗಿ ಮಕ್ಕಳ ಶಿಕ್ಷಣದ ಪರ ಕಾಳಜಿಪೂರ್ವಕ ಪ್ರತಿಭಟನೆ ನಡೆಸಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತ್ತು… pic.twitter.com/E2P8NdjRA6
— Vijayendra Yediyurappa (@BYVijayendra) May 30, 2025
“ವೀರಣ್ಣ ಮಡಿವಾಳ ಅವರ ಅಮಾನತ್ತು ಕೂಡಲೇ ಹಿಂಪಡೆದು ಸದರಿ ಶಾಲೆಗೆ ಅಗತ್ಯ ಕೊಠಡಿಗಳ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂದು ಸಂಕಲ್ಪ ತೊಟ್ಟು ಈಗಾಗಲೇ ಸದರಿ ಶಾಲೆಯ ಘನತೆಯನ್ನು ರಾಷ್ಟ್ರ ಮಟ್ಟದಲ್ಲಿ ಗಮನಸೆಳೆಯುವ ಮಟ್ಟದಲ್ಲಿ ಚಟುವಟಿಕೆಯಿಂದಿರಿಸಿರುವ ವೀರಣ್ಣ ಮಡಿವಾಳರ ಅವರನ್ನು ಸರ್ಕಾರ ಗೌರವಿಸಲಿ” ಎಂದು ಒತ್ತಾಯಿಸಿದ್ದಾರೆ.
ಸಮರ್ಥಿಸಿಕೊಂಡ ಮಧು ಬಂಗಾರಪ್ಪ
“ಯಾರೇ ಸರ್ಕಾರಿ ನೌಕರರಿದ್ದರೂ ನಮ್ಮ ಗಮನಕ್ಕೆ ತರಬೇಕಿತ್ತು. ಈ ರೀತಿ ಏಕಾಏಕಿ ಪ್ರತಿಭಟನೆ ಮಾಡುವುದು ಸರಿ ಅಲ್ಲ. ಅವರು ತಮ್ಮ ಹಿರಿಯ ಅಧಿಕಾರಿಗಳ ಬಳಿ ಹೋಗಿ ಕೇಳಬೇಕು. ರಾಜ್ಯ ಸರ್ಕಾರದ ನೀತಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಅದಕ್ಕಾಗಿಯೇ ರೂಲ್ಸ್ ಇದೆ, ಗೊತ್ತಿದ್ದರೂ ಧರಣಿ ಮಾಡಿದ್ದಾರೆ. ಸರ್ಕಾರಿ ನೌಕರರು ಇತಿಮಿತಿಗಳಲ್ಲಿ ಇರಬೇಕು. ವೈಯಕ್ತಿಕವಾಗಿ ತೊಂದರೆ ಆಗಿದ್ದರೇ ಹೋರಾಟ ಮಾಡಬಹುದು. ಇದರಿಂದ ತಪ್ಪು ಸಂದೇಶ ಹೋಗುತ್ತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಮಾನತನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತರಗತಿ ಕೊಠಡಿಗಳ ಮಂಜೂರಾತಿಗಾಗಿ ಅಗ್ರಹಿಸಿ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅವರು ಮೌನ ಕಾಲ್ನಡಿಗೆ ಹಾಗೂ ಉಪವಾಸ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅವರನ್ನು ಸೇವೆಯಿಂದ ಅಮಾನತು ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Sat, 31 May 25








