ಆನ್‌ಲೈನ್ ಗೇಮಿಂಗ್ ವಂಚನೆ; ಬೆಂಗಳೂರು, ಮುಂಬೈ ಸೇರಿ 7 ಕಡೆ ಇಡಿ ದಾಳಿ
ಬೆಂಗಳೂರು, ಮುಂಬೈ ಸೇರಿ 7 ಸ್ಥಳಗಳಲ್ಲಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ದಾಳಿ ನಡೆಸಿ ಇಡಿ ಪರಿಶೀಲನೆ ನಡೆಸಿದೆ. 39 ಲಕ್ಷ ನಗದು, 48 ಮ್ಯೂಲ್ ಖಾತೆಗಳಲ್ಲಿದ್ದ 1.5 ಕೋಟಿ ನಗದು , ಡಿಜಿಟಲ್ ಎವಿಡೆನ್ಸ್‌ಗಳು, ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ. 2002ರ PMLA ಕಾಯ್ದೆ ಅಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗಿದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಅಧಿಕಾರಿ ಬೇದಾಂಶು ಶೇಖರ್ ಮಿಶ್ರಾ ಮತ್ತು Goa247.live ಹೆಸರಿನ ಮಾಲೀಕರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು, ಮೇ 31: ಆನ್‌ಲೈನ್ ಗೇಮಿಂಗ್ (Online Gaming) ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಏಕಕಾಲಕ್ಕೆ ದೆಹಲಿ, ಮುಂಬೈ ಮತ್ತು ಬೆಂಗಳೂರಿನ 7 ಸ್ಥಳಗಳ ಮೇಲೆ ದಾಳಿ ನಡೆಸಿದೆ. 39 ಲಕ್ಷ ರೂಪಾಯಿ ನಗದು ಮತ್ತು ಹಲವಾರು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಮಯದಲ್ಲಿ ಇಡಿ ತಂಡವು ದೊಡ್ಡ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದೆ. ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ಕೋಟ್ಯಂತರ ರೂ.ಗಳ ಹಗರಣ ನಡೆಸುತ್ತಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ಸಿಕ್ಕಿತ್ತು. ಇದಾದ ನಂತರ ದಾಳಿ ನಡೆಸಲಾಯಿತು. ಇಡಿ ತಂಡವು ಏಕಕಾಲದಲ್ಲಿ ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಟ್ಟು 7 ಸ್ಥಳಗಳ ಮೇಲೆ ದಾಳಿ ನಡೆಸಿತು. PMLA ಕಾಯ್ದೆ, 2002ರ ಅಡಿಯಲ್ಲಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಇದು ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಆಗಿನ ಅಧಿಕಾರಿಯಾಗಿದ್ದ ಬೇದಾಂಶು ಶೇಖರ್ ಮಿಶ್ರಾ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್ Goa247.liveನ ಮಾಲೀಕರಿಗೆ ಸಂಬಂಧಿಸಿದೆ. ಈ ದಾಳಿಯಲ್ಲಿ ಜಾರಿ ನಿರ್ದೇಶನಾಲಯ ಒಟ್ಟು 39 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಹಲವಾರು ಆಕ್ಷೇಪಾರ್ಹ ಡಿಜಿಟಲ್ ಪುರಾವೆಗಳು, ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ‘ಸತ್ಯ ಹೊರ ಬರುತ್ತೆ, ನನ್ನ ಪತ್ನಿ ಹೆಸರು ತರಬೇಡಿ’; ಇಡಿ ದಾಳಿ ಬಳಿಕ ಧಿಮಾಕಿನಲ್ಲಿ ಮಾತನಾಡಿದ ರಾಜ್ ಕುಂದ್ರಾ
ಇದಲ್ಲದೆ, ಗೋವಾ247.ಲೈವ್‌ನಂತಹ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಬಳಸುತ್ತಿದ್ದ 48 ನಕಲಿ ಖಾತೆಗಳಲ್ಲಿ ಠೇವಣಿ ಮಾಡಲಾದ 1.5 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ಸ್ಥಗಿತಗೊಳಿಸಿದೆ. ಸಿಬಿಐ, ನವದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ ಎಫ್‌ಐಆರ್ ಆಧಾರದ ಮೇಲೆ ಈ ತನಿಖೆಯನ್ನು ಪ್ರಾರಂಭಿಸಲಾಯಿತು.
ಆರೋಪಿ ಬೇದಾಂಶು ಶೇಖರ್ ಮಿಶ್ರಾ ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಖಲ್ಸಾ ಕಾಲೇಜು ಶಾಖೆಯಲ್ಲಿ ಅಧಿಕಾರಿಯಾಗಿದ್ದರು. ಅವರ ಮೇಲೆ ಅನುಮತಿಯಿಲ್ಲದೆ ಬ್ಯಾಂಕಿನಲ್ಲಿ 46 ಸ್ಥಿರ ಠೇವಣಿ ಖಾತೆಗಳನ್ನು ಮುರಿದ ಆರೋಪವಿದೆ. ಅವುಗಳಲ್ಲಿ ಹೆಚ್ಚಿನವು ಎಸ್‌ಜಿಟಿಬಿ ಖಾಲ್ಸಾ ಕಾಲೇಜಿನ ಹೆಸರಿನಲ್ಲಿದ್ದವು. ಈ ವಂಚನೆಯ ಮೂಲಕ ಅವರು ಬ್ಯಾಂಕ್ ಮತ್ತು ಗ್ರಾಹಕರಿಗೆ ಸುಮಾರು 52.99 ಕೋಟಿ ರೂ. ವಂಚಿಸಿದ್ದಾರೆ.
ಇದನ್ನೂ ಓದಿ: ಟಿಡಿಆರ್ ಹಗರಣ: ಬೆಂಗಳೂರಿನ 9 ಸ್ಥಳಗಳಲ್ಲಿ ಇಡಿ ದಾಳಿ, ಶೋಧ
ತನಿಖೆಯ ಪ್ರಕಾರ, ಅವರು ಈ ಹಣದಲ್ಲಿ ಸುಮಾರು 24 ಕೋಟಿ ರೂ. ಹಣವನ್ನು ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಗೋವಾ247.ಲೈವ್‌ಗೆ ವರ್ಗಾಯಿಸಿದ್ದಾರೆ. ಅದು ಕೂಡ ನಕಲಿ ಖಾತೆಗಳ ಮೂಲಕ ಆಗಿತ್ತು. ಈ ನಕಲಿ ಬ್ಯಾಂಕ್ ಖಾತೆಗಳನ್ನು (ಮ್ಯೂಲ್ ಅಕೌಂಟ್ಸ್) ಆ ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಮಾಲೀಕರು ಒದಗಿಸಿದ್ದಾರೆ. ಪಿಎಂಎಲ್‌ಎ ಸೆಕ್ಷನ್ 5ರ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಬೇದಾಂಶು ಮತ್ತು ಅವರ ಸಹಚರರಿಗೆ ಸೇರಿದ ₹2.56 ಕೋಟಿ ಮೌಲ್ಯದ ಆಸ್ತಿಗಳನ್ನು ಈಗಾಗಲೇ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಇಡಿಯ ಈ ಕ್ರಮವು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಕುಳಿತುಕೊಂಡು ಕೆಲವರು ಸಾಮಾನ್ಯ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಗೇಮಿಂಗ್ ಮತ್ತು ಬೆಟ್ಟಿಂಗ್‌ನಂತಹ ವೇದಿಕೆಗಳಲ್ಲಿ ಹೇಗೆ ಪೋಲು ಮಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ಪ್ರಸ್ತುತ, ಹೆಚ್ಚಿನ ತನಿಖೆ ನಡೆಯುತ್ತಿದ್ದು, ಅನೇಕ ಹೊಸ ಸಂಗತಿಗಳು ಬಹಿರಂಗಗೊಳ್ಳುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








