144 ಸೆಕ್ಷನ್ ಮಧ್ಯೆಯೂ ರೈತರ ಕಿಚ್ಚು.. ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಗೆ ವಿರೋಧ ಏಕೆ?
ರಸ್ತೆಗೆ ಮಣ್ಣು ಸುರಿದ್ರು. ಟೈಯರ್ ಗೆ ಬೆಂಕಿ ಹಚ್ಚಿದ್ರು.. ರಸ್ತೆಯಲ್ಲಿ ಮಲಗಿ ಆಕ್ರೋಶ ಹೊರಹಾಕಿದ್ರು. ಬಸ್ ಟೈರ್ ಗಾಳಿ ತೆಗೆದು ಭಾರೀ ಹೈಡ್ರಾಮಾ.. ಆಕ್ರೋಶದಿಂದಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸುಂಕಾಪುರ ಧಗಧಗನೇ ಹೊತ್ತಿ ಉರಿದಿದೆ. ಇದಕ್ಕೆ ಕಾರಣವಾಗಿದ್ದೇ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ. ಹಾಗಾದ್ರೆ, ಈ ಕಾಮಗಾರಿಗೆ ವಿರೋಧ ಏಕೆ? ಅಸಲಿ ಕಾರಣವೇನು?

ತುಮಕೂರು, (ಮೇ 31): ತುಮಕೂರಿನಲ್ಲಿ (Tumakuru) ಮತ್ತೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (hemavathi express link canal) ಹೋರಾಟ ಭುಗಿಲೆದ್ದಿದೆ. ವಿರೋಧದ ನಡುವೆಯೂ ಸರ್ಕಾರ ಕಾಮಗಾರಿ ನಡೆಸಲು ಮುಂದಾಗಿದೆ. ಹೀಗಾಗಿ ಸರ್ಕಾರದ ನಡೆಗೆ ಹೋರಾಟಗಾರರು, ಸ್ವಾಮೀಜಿಗಳು, ರೈತರು ರೊಚ್ಚಿಗೆದ್ದಿದ್ದು, ಗುಬ್ಬಿ ತಾಲೂಕಿನ ಸುಂಕಾಪುರ ಮತ್ತು ಡಿ ರಾಮ್ ಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ತುಮಕೂರಿನ ಮಲ್ಲಸಂದ್ರದ ಕಳ್ಳಿಪಾಳ್ಯದ ರಸ್ತೆ ತಡೆದು ಬಿಜೆಪಿ ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ ಪ್ರತಿಭಟನೆ ಮಾಡಿದ್ದು, ಇದಕ್ಕೆ ಮಠಾಧೀಶರು ಕೂಡ ಸಾಥ್ ಕೊಟ್ಟರು.ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸುಂಕಾಪುರ ನಾಲೆ ಬಳಿಯ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.ಆದರೂ ಲೆಕ್ಕಿಸದೇ ರೈತರು ಹಾಗೂ ಬಿಜೆಪಿ ನಾಯಕರು, ಕಾರ್ಯಕರ್ತರು 144 ಸೆಕ್ಷನ್ ವ್ಯಾಪ್ತಿಯ ಒಳಗೆ ಹಾಗೂ ಹೊರಗೆ ಸರ್ಕಾರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪ್ರತಿಭಟನೆ ತೀವ್ರ ಸ್ವರೂಪವೇ ಪಡೆದಿತ್ತು. ಅದ್ಯಾವ ಮಟ್ಟಿಗೆ ಅಂದ್ರೆ. ತುಮಕೂರು ಮುಖ್ಯ ರಸ್ತೆಯೇ ಮಧ್ಯೆಯೇ ಟ್ರ್ಯಾಕ್ಟರ್ ನಲ್ಲಿ ಮಣ್ಣು ತಂದು ಹಾಕಿ ಸರ್ಕಾರದ ವಿರುದ್ಧ ನೂರಾರು ರೈತರು ಆಕ್ರೋಶ ಹೊರಹಾಕಿದ್ರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಕಾಮಗಾರಿಯನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಬಳಿಕ ರೈತರು, ಬಿಜೆಪಿ ನಾಯಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ. ಅಲ್ಲದೇ ತಾತ್ಕಾಲಿಕ ಮಾತ್ರವಲ್ಲ ಸಂಪೂರ್ಣವಾಗಿ ಇದು ನಿಲ್ಲಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಉಸ್ತುವಾರಿ ಸಚಿವರು ಹೇಳುವುದೇನು?
ಹೇಮಾವತಿ ಲಿಂಕ್ ಕೆನಾಲ್ ಫೀಡರ್ ಯೋಜನೆ ಕಾಮಗಾರಿ ವಿಚಾರವಾಗಿ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಒಂದೂವರೆ ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕೆಲಸ ಶುರುವಾಗುತ್ತಿದ್ದಂತೆ ಬಿಜೆಪಿಯವರು ವಿರೋಧ ಮಾಡಿದರು. ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ಮಾಡಿದ್ದಾರೆ. ಕಾಮಗಾರಿ ವಿಚಾರವಾಗಿ ಟೆಕ್ನಿಕಲ್ ಕಮಿಟಿ ಆಗಬೇಕು ಎಂದಿದ್ದರು. ವರದಿಯಲ್ಲಿ ಕಾಮಗಾರಿ ಮಾಡಬಹುದು ಎಂದು ಇದೆ. ವರದಿ ಆಧರಿಸಿ ಕೆಲಸ ಶುರು ಮಾಡಿದ್ರು, ಈಗ ವಿರೋಧಿಸುತ್ತಿದ್ದಾರೆ. ಅಷ್ಟಾದರೂ ಈ ರೀತಿ ಮಾಡುತ್ತಿದ್ದಾರೆ. ಅದರ ಉದ್ದೇಶ ಏನು? ರಾಜಕೀಯ ದುರುದ್ದೇಶದಿಂದ ಕಾಮಗಾರಿಗೆ ವಿರೋಧ ಮಾಡ್ತಿದ್ದಾರೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಕಂಪ್ಲೀಟ್ ಆಗುತ್ತೆ. ನಮ್ಮದು ಒಣ ಪ್ರದೇಶ, ನೀರು ಬಂದರೆ ಅನುಕೂಲ ಆಗುತ್ತದೆ ಎಂದು ಹೇಳಿದರು.
ನೀರಾವರಿ ಹೋರಾಟಕ್ಕೆ ಕಾರಣವೇನು?
ಈ ಯೋಜನೆಗೆ ತುಮಕೂರು ಜಿಲ್ಲೆಯ ರಾಜಕಾರಣಿಗಳು, ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಏನಂದ್ರೆ ಗೊರೂರು ಡ್ಯಾಂನಿಂದ ವರ್ಷಕ್ಕೆ 24 TMC ನೀರನ್ನು ತುಮಕೂರು ಜಿಲ್ಲೆಗೆ ಹರಿಸಬೇಕೆಂದು ರಾಜ್ಯ ಸರ್ಕಾರ ನೀರು ಹಂಚಿಕೆ ಮಾಡಿದೆ. ಈಗ ಮಾಗಡಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಹೊಸದಾಗಿ ನೀರು ಹಂಚಿಕೆ ಮಾಡಿಸಿಕೊಳ್ಳದೇ 0.75 ಟಿಎಂಸಿ ನೀರನ್ನು ಹರಿಸಲು ಪೈಪ್‌ಲೇನ್ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವುದು ತುಮಕೂರು ಜಿಲ್ಲೆಯ ರಾಜಕಾರಣಿ ಹಾಗೂ ರೈತರ ಆಕ್ಷೇಪ.
ಇದರ ಜೊತೆಗೆ ನೈಸರ್ಗಿಕವಾಗಿ ನಾಲೆಯ ಮೂಲಕವೇ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದಿತ್ತು. ಇದರ ಬದಲು ಸ್ಟೀಲ್ ಪೈಪ್‌ಗಳನ್ನು ಹಾಕಿ ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಕುಣಿಗಲ್ ತಾಲ್ಲೂಕಿಗೆ ನೀರು ಸಿಗದಂತಾಗುತ್ತೆ. ತುಮಕೂರು ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ನೀರು ಕಡಿಮೆಯಾಗುತ್ತೆ ಎಂಬ ಆತಂಕ ತುಮಕೂರು ಜಿಲ್ಲೆಯ ರಾಜಕಾರಣಿಗಳದ್ದು. ತುಮಕೂರು ಜಿಲ್ಲೆಗೆ ವರ್ಷಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದರೂ, ಇದುವರೆಗೂ ಯಾವ ವರ್ಷವೂ ಕೂಡ 24 ಟಿಎಂಸಿ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ಹರಿದೇ ಇಲ್ಲ. ತುಮಕೂರು ಜಿಲ್ಲೆಯ ಕೆರೆಕಟ್ಟೆಗಳಿಗೆ, ಕುಡಿಯುವ ಉದ್ದೇಶಕ್ಕೆ ಕೃಷಿ ಉದ್ದೇಶಕ್ಕೆ ಹೇಮಾವತಿ ನೀರನ್ನು ಬಳಕೆ ಮಾಡಲಾಗುತ್ತೆ.
ತುಮಕೂರು ನಗರ, ಪಟ್ಟಣಗಳಿಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರುನ್ನು ಬಳಕೆ ಮಾಡಲಾಗುತ್ತೆ. ಗೊರೂರು ಡ್ಯಾಂ ನೀರನ್ನು ತುಮಕೂರು ನಗರದ ಬಳಿಯ ಬುಗುಡನಹಳ್ಳಿ ಕೆರೆಗೆ ಹರಿಸಿ, ಅಲ್ಲಿಂದ ಪೈಪ್ ಮೂಲಕ ತುಮಕೂರು ನಗರಕ್ಕೆ ಪೂರೈಸಲಾಗುತ್ತಿದೆ. ಇದೇ ರೀತಿ ಮಧುಗಿರಿ, ಶಿರಾ ಪಟ್ಟಣಗಳಿಗೂ ಕೆರೆಗಳಿಗೆ ನೀರು ತುಂಬಿಸಿ ಹೇಮಾವತಿ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್ ತಾಲ್ಲೂಕುಗಳು ಕೂಡ ಹೇಮಾವತಿ ನೀರನ್ನು ಕುಡಿಯುವ ನೀರು, ಕೃಷಿ ಉದ್ದೇಶಕ್ಕೆ ಅವಲಂಬಿಸಿವೆ. ತುಮಕೂರು ಜಿಲ್ಲೆಗೆ ಹೇಮಾವತಿ ನದಿ ನೀರಿನ ಮೂಲ ಬಿಟ್ಟರೇ, ಬೇರೆ ನದಿ ನೀರಿನ ಮೂಲಗಳಿಲ್ಲ. ತುಮಕೂರು ಜಿಲ್ಲೆಗೆ ಹೇಮಾವತಿಯ ಜೀವ ನದಿ. ಹೀಗಾಗಿ ತುಮಕೂರು ಜಿಲ್ಲೆಯ ಜನರು, ರಾಜಕಾರಣಿಗಳು ಪ್ರಾಣ ಬಿಟ್ಟೆವು ಹೇಮಾವತಿ ನೀರು ಕೊಡಲ್ಲ ಎಂದು ಧರಣಿ, ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.