ಒಂದು ವರ್ಷ ಮುಗಿದೋಯ್ತು.. ಮುಂದಿನ ಶೈಕ್ಷಣಿಕ ವರ್ಷ ಜುಲೈ 15ರಿಂದ ಆರಂಭ – ಶಿಕ್ಷಣ ಸಚಿವ ಸುರೇಶ್ ಕುಮಾರ್
ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ತುಮಕೂರು: ಮಹಾಮಾರಿ ಕೊರೊನಾದಿಂದಾಗಿ ಒಂದು ವರ್ಷದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಪ್ರೌಢ ಶಿಕ್ಷಣ ತಕ್ಕಮಟ್ಟಿಗೆ ಶುರುವಾಗಿದ್ರೂ ಪ್ರಾಥಮಿಕ ಶಿಕ್ಷಣ ಆರಂಭವಾಗಿಲ್ಲ. ಇನ್ನು ಜುಲೈ 15ರಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೊರೊನಾ ಎರಡನೇ ಅಲೆ ಶುರುವಾಗಿದೆ. ಅದನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ರಾಜ್ಯದಲ್ಲಿ ಸದ್ಯ 1ರಿಂದ 5ನೇ ತರಗತಿಗಳನ್ನು ನಡೆಸಬಾರದು. ಖಾಸಗಿ ಶಾಲೆಗಳು ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ತೇವೆ. ಮಾರ್ಚ್ 1ರಿಂದ 1-5ನೇ ತರಗತಿ ಆರಂಭಿಸುವ ಇಚ್ಛೆ ಇತ್ತು. ಆದರೆ ಚರ್ಚೆ ಮಾಡಿ, ಬೇಡ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ. ಅಜೀಂ ಪ್ರೇಮ್‌ಜಿ ವಿವಿ ಆಘಾತಕಾರಿ ವರದಿಯನ್ನು ನೀಡಿದೆ. ಶಾಲೆ ಆರಂಭವಾಗದ ಹಿನ್ನೆಲೆಯಲ್ಲಿ ಮಕ್ಕಳು ಗಣಿತ ಮರೆತಿದ್ದಾರೆ. ಭಾಷೆ ಮರೆತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮಕ್ಕಳ ಶಿಕ್ಷಣ, ಆರೋಗ್ಯದ ಬಗ್ಗೆ ಗಮನ ನೀಡಬೇಕು ಎಂದು ಹೇಳಿದ್ರು.
ಅಜೀಂ ಪ್ರೇಂಜಿ ವಿವಿ ಮಾಡಿದ ಒಂದು ಸಮೀಕ್ಷೆಯಲ್ಲಿ ಶೇ 90 ರಷ್ಟು ಮಕ್ಕಳು ಗಣಿತ ಪಾಠ ಮರೆತಿದ್ದಾರೆ. ಶೇ 80 ರಷ್ಟು ಮಕ್ಕಳು ಅಕ್ಷರವನ್ನೇ ಮರೆತಿದ್ದಾರೆ ಎಂಬುದು ತಿಳಿದುಬಂದಿದೆ. ಹೀಗಾಗಿ ಜುಲೈ 15 ರಿಂದ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: School Reopen: ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ