ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ತಿಪ್ಪೂರು ಗೇಟ್ ಬಳಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಗಾವಲು ವಾಹನಕ್ಕೆ ಅಪಘಾತವಾಗಿದೆ. ವಾಹನದಲ್ಲಿದ್ದ ಐವರ ಪೈಕಿ ಮೂವರು ತೀವ್ರವಾಗಿ ಗಾಯಗೊಂಡಿದ್ದರೆ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಹಾಗೂ ಬೆಳ್ಳಾರೆ ಗ್ರಾಮಗಳಿಗೆ ಭೇಟಿ ನೀಡಿ ಫಾಜಿಲ್ ಮಂಗಳಪೇಟೆ ಮತ್ತು ಪ್ರವೀಣ್ ನೆಟ್ಟಾರ್ ಕುಟುಂಬ ಸದಸ್ಯರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಂತ್ವನ ಹೇಳಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.
ಬೆಂಗಾವಲು ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹೇಶ್, ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದಾರೆ. ಜಗದೀಶ್, ಆನಂದ್ ಮತ್ತು ಹರೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮತ್ತು ಸುರತ್ಕಲ್ನ ಪಾಝಿಲ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಕುಮಾರಸ್ವಾಮಿ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದರು. ಮಾಜಿ ಮುಖ್ಯಮಂತ್ರಿಯ ಬೆಂಗಾವಲು ಕರ್ತವ್ಯಕ್ಕೆ ತೆರಳಿದ್ದ ಪೊಲೀಸ್ ಸಿಬ್ಬಂದಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಮೃತೂರು ಸರ್ಕಲ್ ಇನ್ಸ್ಪೆಕ್ಟರ್ ಅರುಣ್ ಸಾಲಂಕೆ ಮತ್ತು ಪಿಎಸ್ಐ ಮಂಗಳಗೌರಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Published On - 11:32 am, Tue, 2 August 22