ತುಮಕೂರಲ್ಲಿ ನಿರಂತರ ಮಳೆ; 80 ಲಕ್ಷ ಮೌಲ್ಯದ ಕೋಳಿಗಳು ಸಾವು

ತುಮಕೂರಲ್ಲಿ ನಿರಂತರ ಮಳೆ ಬಿದ್ದ ಹಿನ್ನೆಲೆ ಒಂದೇ ರಾತ್ರಿ  45 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ, ಹೆಬ್ಬೂರು ಹೋಬಳಿಯ ಯಾಲದಹಳ್ಳಿಯಲ್ಲಿ  ನಡೆದಿದೆ.

ತುಮಕೂರಲ್ಲಿ ನಿರಂತರ ಮಳೆ; 80 ಲಕ್ಷ ಮೌಲ್ಯದ ಕೋಳಿಗಳು ಸಾವು
ಸಾವನ್ನಪ್ಪಿರುವ ಕೋಳಿಗಳು
Edited By:

Updated on: Aug 08, 2022 | 4:59 PM

ತುಮಕೂರು: ತುಮಕೂರಲ್ಲಿ ನಿರಂತರ ಮಳೆ ಬಿದ್ದ ಹಿನ್ನೆಲೆ ಒಂದೇ ರಾತ್ರಿ  45 ಸಾವಿರ ಮೌಲ್ಯದ ಕೋಳಿ  ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ, ಹೆಬ್ಬೂರು ಹೋಬಳಿಯ ಯಾಲದಹಳ್ಳಿಯಲ್ಲಿ  ನಡೆದಿದೆ. ಅತಿಯಾದ ಮಳೆಯಾಗಿದ್ರಿಂದ ನಾರಾಯಣಪ್ಪ ಎಂಬುವರಿಗೆ ಸೇರಿದ ಎಂಟು ಕೋಳಿ ಶೆಡ್​ಗಳಿಗೆ ನೀರು ನುಗ್ಗಿದ್ದು, ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತಿದೆ. ಪರಿಣಾಮ ಸುಮಾರು ಸುಮಾರು 80 ಲಕ್ಷ ಮೌಲ್ಯದ ಕೋಳಿಗಳು ಸಾವನ್ನಪ್ಪಿವೆ. ನಾರಾಯಣಪ್ಪ ಸಾಲ ಮಾಡಿ ಕೋಳಿ ಶೆಡ್ ನಿರ್ಮಾಣ ಮಾಡಿದ್ದನು.

ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಟೆನಾಡಿನಲ್ಲಿ ನಿರಂತರ ಮಳೆ ನೂರಾರು ಎಕರೆ ಜಲಾವೃತ

ಚಿತ್ರದುರ್ಗ:  ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಜಿಟಿಜಿಟಿ ಮಳೆಯಾಗುತ್ತಿದ್ದು, ಹೊಳಲ್ಕೆರೆ ತಾಲೂಕಿನ ಅರೇಹಳ್ಳಿ ಗ್ರಾಮದ ಬಳಿ ನೂರಾರು ಎಕರೆ ಜಲಾವೃತಗೊಂಡಿದೆ. ಅರೇಹಳ್ಳಿ ಗ್ರಾಮದ ಕೆರೆ ನೀರು ಹರಿದು ಜಮೀನುಗಳು ಜಲಾವೃತಗೊಂಡಿವೆ. ಇದರಿಂದ ಮೆಕ್ಕೆಜೋಳ, ರಾಗಿ, ಹತ್ತಿ ಸೇರಿ ವಿವಿಧ ಬೆಳೆಗಳು ಹಾನಿಯಾಗಿವೆ.  ಸುಮಾರು ಐನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಶೀಘ್ರ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.

ಅರಬ್ಬೀ ಸಮುದ್ರ ತೀರದಲ್ಲಿ ಭಾರೀ ಪ್ರಮಾಣದ ಕಡಲ ಕೊರೆತ

ಉತ್ತರ ಕನ್ನಡ: ಅರಬ್ಬೀ ಸಮುದ್ರ ತೀರ ಪ್ರದೇಶಗಳಾದ ಕಾರವಾರ, ಹೊನ್ನಾವರ, ಭಟ್ಕಳ, ಕುಮಟಾ ಕಡಲತೀರದಲ್ಲಿ ಭಾರೀ ಕಡಲ ಕೊರೆತ ಸಂಭವಿಸಿದೆ. ಸಮುದ್ರ ಅಲೆಗಳ ಹೊಡೆತಕ್ಕೆ ಕಲ್ಲು, ಸಿಮೆಂಟ್ ಕಂಬ್, ಮರಗಳು ಕೊಚ್ಚಿ ಹೋಗಿವೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೂ ಕೂಡ ಅಲೆಗಳ ಹೊಡೆತಕ್ಕೆ ಕಡಲ ತಡೆಗೋಡೆ ಕೊಚ್ಚಿ ಹೋಗಿದೆ. ಸಮುದ್ರದಲ್ಲಿ ಪ್ರಕ್ಷುಬ್ಧತೆ ಉಂಟಾದ ಹಿನ್ನೆಲೆ ಯಾಂತ್ರಿಕ ಮೀನುಗಾರಿಕೆಯನ್ನು ಬಂದ್ ಮಾಡಲಾಗಿದೆ. ಮಳೆ ಪ್ರಮಾಣ ಕಡಿಮೆಯಾದರು ಅಲೆಗಳ ಅಬ್ಬರ ಕಡಿಮೆಯಾಗಿಲ್ಲ.

ಜಲಾವೃತವಾಗಿದ್ದ ಸೇತುವೆಗಳ ಮೇಲೆ ಕಡಿಮೆಯಾದ ಪ್ರವಾಹದ ನೀರು

ವಿಜಯಪುರ: ಡೋಣಿ ನದಿಯಲ್ಲಿ ಪ್ರವಾಹ ತಗ್ಗಿದ ಪರಿಣಾಮ  ಜಲಾವೃತವಾಗಿದ್ದ ಸೇತುವೆಗಳ ಮೇಲೆ  ಪ್ರವಾಹದ ನೀರು ಕಡಿಮೆಯಾಗಿದೆ. ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿ ಡೋಣಿ ನದಿಗೆ ಕಟ್ಟಿದ ಸೇತುವೆ ಮತ್ತು ತಾಳಿಕೋಟೆ ಪಟ್ಟಣದ ಹೊರ ಭಾಗದ ಡೋಣಿ ನದಿಯ ಹಳೆಯ ಸೇತುವೆ ಪ್ರವಾಹದಿಂದ ಮುಳುಗಡೆಯಾಗಿದ್ದವು.

ಈಗ ನದಿಯಲ್ಲಿ ಪ್ರವಾಹ ತಗ್ಗಿದ್ದರಿಂದ ಎರಡೂ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ ತಾಳಿಕೋಟೆ ಪಟ್ಟಣದ ಹೊರ ಭಾಗದಲ್ಲಿನ ಡೋಣಿ ನದಿಯ ಹೊಸ ಸೇತುವೆ ಬಿರುಕು ಬಿಟ್ಟು ವಾಲಿದೆ. ಈ ಕಾರಣ ಹೊಸ ಸೇತುವೆ ಮೇಲೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಹಳೆಯ ಸೇತುವೆ ಮೇಲೆ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಹಳೆಯ ಸೇತುವೆ ಜಲಾವೃತವಾಗಿದ್ದ ಕಾರಣ ರಾಜ್ಯ ಹೆದ್ದಾರಿ 61 ಬಂದ್ ಆಗಿತ್ತು. ಇದೀಗಾ ಹಳೆಯ ಸೇತುವೆ ಮೇಲೆ ಪ್ರವಾಹ ನೀರು ಇಳಿದು ಹೋಗಿದ್ದು ಸಂಚಾರಕ್ಕೆ ಮುಕ್ತವಾಗಿದೆ.

ಇತ್ತ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮದ ಸೇತುವೆಯೂ ಸಂಚಾರಕ್ಕೆ ಮುಕ್ತವಾಗಿದೆ. ಸೇತುವೆ ಮೇಲೆ ಪ್ರವಾಹದ ನೀರು ಬಂದಿದ್ದರಿಂದ ರಾಜ್ಯ ಹೆದ್ದಾರಿ 41 ರ ಮೇಲೆ ಸಂಚಾರ ಬಂದಾಗಿತ್ತು. ಇದೀಗಾ ಎಸ್ಎಚ್ 41 ರಲ್ಲಿ ಎಂದಿನಂತೆ ಸಂಚಾರ ಆರಂಭವಾಗಿದೆ.

ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಸಾಕಷ್ಟು ಅನಾಹುತಗಳಾಗಿವೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಸಕಲೇಶಪುರ ತಾಲ್ಲೂಕಿನ ಜಾನೆಕೆರೆ, ಸುಳ್ಳಕ್ಕಿ, ಮೇಲಕೆರೆ ಭಾಗದಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ನಾಟಿ ಮಾಡಿದ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ಬೆಳೆ ನಾಶವಾಗಿದೆ. ನಾಟಿಗೆ ಸಿದ್ದಗೊಂಡಿದ್ದ ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಆವರಿಸಿಕೊಂಡಿದೆ. ಒಂದು ವಾರದ ನಿರಂತರ ಮಳೆಗೆ ಎಲ್ಲೆಲ್ಲೂ ಜಲ ಪ್ರಳಯದ ವಾತಾವರಣ ನಿರ್ಮಾಣವಾಗಿದೆ. ಗದ್ದೆಗಳಲ್ಲಿ ಐದಾರು ಅಡಿ ಎತ್ತರಕ್ಕೆ ನೀರು ನಿಂತಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೂಡ ಧಾರಾಕಾರ ಮಳೆಯಾಗಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ 5 ಅಡಿಯಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ. ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಸೇತುವೆ ಸಂಚಾರ ಬಂದ್ ಆಗಿದ್ದರಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡುತ್ತಿದ್ದಾರೆ.

ಬೆಳಗಾವಿಯ ಶಹಾಪುರದ ಭಾರತನಗರದಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಮನೆ ಗೋಡೆ ಕುಸಿದಿದೆ. ಆನಂದ ಬಿರ್ಜೆ ಎಂಬುವರಿಗೆ ಸೇರಿದ ಮನೆ ಕುಸಿತಗೊಂಡಿದ್ದು,  ಕುಟುಂಬದ ಮೂವರು ಸದಸ್ಯರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪಕ್ಕದ ಮನೆಯ ಮಹಿಳೆ ಶಾಂತಾ ವಾಯಿಂಗಡೆಗೆ ಎಂಬುವರಿಗೆ ಗಾಯವಾಗಿದೆ. ಗಾಯಾಳು ಶಾಂತಾಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸಂಪೂರ್ಣವಾಗಿ ಹಾನಿಯಾಗಿವೆ. ಕುಸಿದ ಮನೆ ಗೋಡೆ ಅಡಿ ಸಿಲುಕಿ ಆಟೋ, ಓಮ್ನಿ ವ್ಯಾನ್​ ಜಖಂಗೊಂಡಿವೆ.

ವಿಶ್ವವಿಖ್ಯಾತ ಹಂಪಿಯ ಧಾರ್ಮಿಕ ವಿಧಿ ವಿಧಾನ ಮಂಟಪ, ಸ್ನಾನ ಘಟ್ಟ ಮುಳುಗಡೆ 

ವಿಜಯನಗರ: ವಿಜಯನಗರ ಜಿಲ್ಲೆಯ ಹಂಪಿಯಲ್ಲಿರೋ ಧಾರ್ಮಿಕ ಮಂಟಪ, ಸ್ನಾನ ಘಟ್ಟ ಮತ್ತು ಧಾರ್ಮಿಕ ಮಂಟಪದ ಅರ್ದದಷ್ಟು ಕಂಬಗಳು ನೀರಿನಲ್ಲಿ ಮುಳುಗಡೆಯಾಗಿವೆ. ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ  ಮುಳುಗಡೆಯಾಗಿವೆ.

ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷಕ್ಕೂಅಧಿಕ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಹೀಗಾಗಿ ನಾಲ್ಕು ಧಾರ್ಮಿಕ ಮಂಟಪಗಳಲ್ಲಿ ಎರಡು ಮಂಟಪಗಳು ಸಂಪೂರ್ಣ ಮುಳುಗಡೆಯಾಗಿವೆ. ಎರಡು ಮಂಟಪಗಳು ಅರ್ದದಷ್ಟು ಮುಳುಗಡೆಯಾಗಿವೆ.

Published On - 2:08 pm, Mon, 8 August 22