ಬೆಂಗಳೂರು: ಧ್ವಜಸ್ತಂಭ ನೆಡುವಾಗ ವಿದ್ಯುತ್ ಅವಘಡದಿಂದ ಮೃತಪಟ್ಟ ವಿದ್ಯಾರ್ಥಿ ಪಾಲಕರಿಗೆ ಪರಿಹಾರ ನೀಡಲು ಹೈಕೋರ್ಟ್ ಆದೇಶ ನೀಡಿದೆ. ಹಾಗೂ ಘಟನೆ ವೇಳೆ ಗಾಯಗೊಂಡ ವಿದ್ಯಾರ್ಥಿಗಳಿಗೂ ಚಿಕಿತ್ಸೆ ಒದಗಿಸಲು ಆದೇಶ ನೀಡಿದ್ದು ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಸೂಚಿಸಿದೆ. ಕ್ರಮಕೈಗೊಂಡು 2 ವಾರದಲ್ಲಿ ಅನುಪಾಲನಾ ವರದಿ ಸಲ್ಲಿಸಲು ತಿಳಿಸಿದೆ.
ಘಟನೆ ವಿವರ
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ತಂತಿ ತಗುಲಿ 16 ವರ್ಷದ ಬಾಲಕ ಚಂದನ್ ಸಾವನ್ನಪ್ಪಿರುವ ಘಟನೆ ತುಮಕೂರು ತಾಲೂಕಿನ ಕರೀಕೆರೆ ಗ್ರಾಮದಲ್ಲಿ ಸಂಭವಿಸಿತ್ತು. ಸರ್ಕಾರಿ ಶಾಲೆಯಲ್ಲಿ ಮೂವರು ಧ್ವಜಸ್ತಂಭ ನಿಲ್ಲಿಸಲು ಹೋದಾಗ ಮೂವರಿಗೂ ವಿದ್ಯುತ್ ತಂತಿ ತಗುಲಿತ್ತು. ಈ ವೇಳೆ ಚಂದನ್ (16) ಸಾವನ್ನಪ್ಪಿದ್ದು, ಶಶಂಕ್ (16), ಪವನ್ (22) ಗೆ ಗಾಯವಾಗಿದೆ. ಇವರು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂವರು ಕರಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು. ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಶಾಲೆಗೆ ಧ್ವಜಸ್ತಂಭ ನಿಲ್ಲಿಸಲು ತೆರಳಿದ್ದರು. ಶಿಕ್ಷಕರ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಅಂತ ಪೋಷಕರ ಆರೋಪಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಮೃತ ವಿದ್ಯಾರ್ಥಿ ಚಂದನ್ ಮನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಂಗಳವಾರ (ಆಗಸ್ಟ್ 17) ಭೇಟಿ ನೀಡಿದ್ದರು. ಹಾಗೂ ಮೃತನ ಕುಟುಂಬಸ್ಥರಿಗೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಿದ್ದರು. ಶಿಕ್ಷಣ ಇಲಾಖೆಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಬಿ.ಸಿ.ನಾಗೇಶ್ ಸಂತಾಪ
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ನೋಡಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು. ಧ್ವಜಸ್ತಂಭ ನಿಲ್ಲಿಸುವ ವೇಳೆ ವಿದ್ಯುತ್ ಅವಘಡ ಘಟನೆಯಿಂದ ಆಘಾತವಾಗಿದೆ. ಇದು ದುರದೃಷ್ಟಕರ ಘಟನೆ. ಮೃತರ ಕುಟುಂಬಕ್ಕೆ ಸಂತಾಪ ತಿಳಿಸಲು ಬಯಸುತ್ತೇನೆ. ಶಬ್ಧಗಳಿಂದ ದುಃಖ ಶಮನ ಮಾಡಲು ಸಾಧ್ಯವಿಲ್ಲ. ಗಾಯಾಳುಗಳ ಚಿಕಿತ್ಸೆಗೆ ಅವಶ್ಯಕ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಸಚಿವರು ತಿಳಿಸಿದ್ದರು.
ಹದಿನಾರು ವರ್ಷದ ಬಾಲಕ ಮೃತ ಪಟ್ಟಿದ್ದು ನನ್ನ ಮನಸಿಗೆ ನೋವು ತಂದಿದೆ. ಅವರ ಕುಟುಂಬದ ಜೊತೆ ನಾನು ಇರುತ್ತೇನೆ. ವರದಿ ತರೆಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಲೆಯಲ್ಲಿ ವಿದ್ಯುತ್ ಲೈನ್ ಹಾದು ಹೋಗದಂತೆ ನಿಗಾ ವಹಿಸಲಾಗುತ್ತದೆ ಎಂದು ಸಚಿವ ನಾಗೇಶ್ ಹೇಳಿದ್ದರು.
ಇದನ್ನೂ ಓದಿ: ಧ್ವಜಸ್ತಂಭ ನೆಡುವ ವೇಳೆ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದ ಬಿ ಸಿ ನಾಗೇಶ್