ತುಮಕೂರು ಮಹಿಳೆ ಕೊಲೆ: ಬಸ್​​ನಲ್ಲಿದ್ದ ಹಂತಕನನ್ನು ಪುಣೆ ಪೊಲೀಸ್ ಠಾಣೆಗೆ ಡ್ರಾಪ್​​ ಮಾಡಿದ ಚಾಲಕ

ತುಮಕೂರಿನ ಹಿಂಡೆಸೆಕೆರೆಯ ತೋಟದ ಮನೆಯಲ್ಲಿ ನಡೆದಿದ್ದ ಕೊಲೆ ಇಡೀ ಊರನ್ನೇ ಬೆಚ್ಚಿ ಬೀಳಿಸಿತ್ತು. ತೋಟದ ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಕೊಲೆ ಹತ್ತಾರು ಅನುಮಾನಕ್ಕೆ ಕಾರಣವಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಹಂತಕನನ್ನು ಪುಣೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ. ಇನ್ನು ಆರೋಪಿಯನ್ನ ಬಂಧಿಸಿದ್ದೇ ರೋಚಕವಾಗಿದೆ.

ತುಮಕೂರು ಮಹಿಳೆ ಕೊಲೆ: ಬಸ್​​ನಲ್ಲಿದ್ದ ಹಂತಕನನ್ನು ಪುಣೆ ಪೊಲೀಸ್ ಠಾಣೆಗೆ ಡ್ರಾಪ್​​ ಮಾಡಿದ ಚಾಲಕ
ಹಂತಕ ಮಧು
Updated By: ರಮೇಶ್ ಬಿ. ಜವಳಗೇರಾ

Updated on: Dec 04, 2025 | 7:22 PM

ತುಮಕೂರು, (ಡಿಸೆಂಬರ್ 04): ಜಿಲ್ಲೆಯ ಗುಬ್ಬಿ ತಾಲೂಕಿನ ಹಿಂಡೆಸೆಕೆರೆ ಗ್ರಾಮದ (Hindisgere village) ತೋಟದ ಮನೆಯಲ್ಲಿ ಮಂಜುಳಾ ಕೊಲೆ ಪ್ರಕರಣದ (Manjula Murder Case) ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಡಿಸೆಂಬರ್ 1ರಂದು ತೋಟದ ಮನೆಯಲ್ಲಿ ಮಂಜುಳಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ದಿನವೇ ಮಧು ಎಂಬಾತನ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ಪುಣೆಗೆ ಪರಾರಿಯಾಗುತ್ತಿರುವುದು ಮಾಹಿತಿ ಸಿಕ್ಕಿದೆ. ಕೂಡಲೇ ಅಲರ್ಟ್​ ಆದ ಪೊಲೀಸರು,  ಖಾಸಗಿ ಬಸ್​​ ಚಾಲಕನ ಕೈಯಿಂದಲೇ ಆರೋಪಿ ಮಧುನನ್ನು ಲಾಕ್ ಮಾಡಿಸಿದ್ದಾರೆ. ಹೌದು..  ಪೊಲೀಸರ ಹೇಳಿದಂತೆ ಚಾಲಕ ನೇರವಾಗಿ ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ಬಸ್ ಚಲಾಯಿಸಿಕೊಂಡು ಹೋಗಿ ಆರೋಪಿಯನ್ನು ಒಪ್ಪಿಸಿ ಅಲ್ಲಿಂದ ತೆರಳಿದ್ದಾನೆ.

ಕೊಲೆ ಮಾಡಿ ದೇವರಿಗೆ ಮುಡಿ ಕೊಟ್ಟಿದ್ದ ಹಂತಕ

ನವೆಂಬರ್ 30ರ ಸಂಜೆ 6.30ಕ್ಕೆ ಮಧು ಮಂಜುಳ ಮನೆ ಬಳಿ ಬಂದಿದ್ದ. ಈ ವೇಳೆ ಮಂಜುಳಾ ಹಾಗೂ ಮಧು ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮದು ಮಂಜುಳಾನನ್ನು ಹತ್ಯೆ ಮಾಡಿದ್ದ. ಬಳಿಕ ಆ ದಿನ ರಾತ್ರಿ ತನ್ನ ಮನೆಯಲ್ಲಿ ಕಾಲ ಕಳೆದಿದ್ದು,  ಮರು ದಿನ ಬೆಳಿಗ್ಗೆಯೇ ಪೊಷಕರ ಜೊತೆ ಕುಣಿಗಲ್ ನ ಆಲಪ್ಪ ಗುಡ್ಡಕ್ಕೆ ತೆರಳಿ ಮನೆ ದೇವರಿಗೆ ಮುಡಿ ಕೊಟ್ಟಿದ್ದಾನೆ. ನಂತರ ಪೊಷಕರನ್ನು ಮನೆಗೆ ಬಿಟ್ಟು ನೇರವಾಗಿ ಬೆಂಗಳೂರಿಗೆ ಬಂದು ಕಾರು ಮಾರಿ ಕಲಾಸಿಪಾಳ್ಯದಲ್ಲಿ ಪುಣೆಗೆಂದು ಖಾಸಗಿ ಬಸ್ ಹತ್ತಿದ್ದಾನೆ.

ಇದನ್ನೂ ಓದಿ: ತೋಟದ ಮನೆಯಲ್ಲಿ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ:ಸ್ಥಳೀಯ ವ್ಯಕ್ತಿ ಹೇಳಿದ್ದೇನು ಗೊತ್ತಾ?

ಕೊಲೆಗಾರನನ್ನು ಪೊಲೀಸ್ರು ಖೆಡ್ಡಕ್ಕೆ ಕೆಡವಿದ್ಹೇಗೆ?

ಮತ್ತೊಂದೆಡೆ ಆತನಿಗಾಗಿ ಬಲೆ ಬೀಸಿದ್ದ ಶಿರಾ ಡಿವೈಎಸ್ಪಿ ತಂಡಕ್ಕೆ ಆರೋಪಿ ಮಧು ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ಮಾಹಿತಿ ದೊರೆತಿದೆ. ಕೂಡಲೇ ಪೊಲೀಸರು, ಖಾಸಗಿ ಟ್ರಾವೆಲ್ಸ್​​​ ನಿಂದ ಬಸ್ ಚಾಲಕನ ಮಾಹಿತಿ ಪಡೆದುಕೊಂಡಿದ್ದು, ಬಸ್​​ನಲ್ಲಿ ಆರೋಪಿ ಮಧು ಇರುವ ಬಗ್ಗೆ ತಿಳಿಸಿದ್ದಾರೆ. ಬಳಿಕ ಡ್ರೈವರ್ ಪೊಲೀಸರ ಸಲಹೆಯಂತೆ ಪಯಾಣಿಕರಿದ್ದ ಬಸ್​ ಅನ್ನು ನೇರವಾಗಿ ಪುಣೆಯ ವಿದ್ಯಾಪೀಠ ಪೊಲೀಸ್ ಠಾಣೆಗೆ ಚಾಲಾಯಿಸಿಕೊಂಡು ಹೋಗಿ ಆರೋಪಿ ಮಧುನನ್ನು ಪೊಲೀಸರ ವಶಕ್ಕೆ ನೀಡಿ ತೆರಳಿದ್ದಾನೆ.

ಸದ್ಯ ಆರೋಪಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದ ತುಮಕೂರಿನ ಶಿರಾ ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ, ಕೋರ್ಟ್ ಪ್ರಕ್ರಿಯೆ ಮುಗಿಸಿ ತುಮಕೂರಿನತ್ತ ಕರೆತರುತ್ತಿದೆ.. ತನಿಖೆ ವೇಳೆ ಆರೋಪಿಗೆ ಮಹಿಳೆ ಜೊತೆ ಅನೈತಿಕ ಸಂಬಂಧ ಇದ್ದು, ಈ ಸಲುಗಿಯಿಂದಲೇ ಕೊಟ್ಟ ಹಣವನ್ನು ಆರೋಪಿ ವಾಪಾಸ್ ನೀಡಲು ಕಿರಿಕ್ ಮಾಡಿದ್ದ ಎನ್ನಲಾಗಿದೆ. ಆದ್ರೆ ನಿಜಕ್ಕೂ ಕೊಲೆಗೆ ಕೇವಲ ಹಣಕಾಸಿನ ವಿಚಾರವೇ ಕಾರಣವೇ ಹೊರತಾಗಿ ಬೇರೆನಾದರೂ ಇತ್ತಾ ಅನ್ನೊದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 4 December 25