ಹಣದ ವಿಚಾರಕ್ಕೆ ಗಲಾಟೆ; ಮಹಿಳೆ ಕೊಲೆ ಮಾಡಿ ನಾಲೆಗೆ ಎಸೆದಿದ್ದ ಆರೋಪಿ ವಶಕ್ಕೆ, ಮಹಿಳೆ ಶವ ಹುಡುಕುವಾಗ ಸಿಕ್ತು ವೃದ್ಧನ ಶವ

| Updated By: ಆಯೇಷಾ ಬಾನು

Updated on: Dec 28, 2021 | 9:32 AM

ಮೃತ ಕಲಾವತಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ವದಲೂರಿನ ನಿವಾಸಿ. ಕೊಲೆ ಸಂಬಂಧ ಹೆಗ್ಗೆರೆ ಗ್ರಾಮದ ಗಜೇಂದ್ರ ವಿರುದ್ಧ ಕಲಾವತಿ ಕೊಲೆ ಆರೋಪ ಕೇಳಿ ಬಂದಿದೆ.

ಹಣದ ವಿಚಾರಕ್ಕೆ ಗಲಾಟೆ; ಮಹಿಳೆ ಕೊಲೆ ಮಾಡಿ ನಾಲೆಗೆ ಎಸೆದಿದ್ದ ಆರೋಪಿ ವಶಕ್ಕೆ, ಮಹಿಳೆ ಶವ ಹುಡುಕುವಾಗ ಸಿಕ್ತು ವೃದ್ಧನ ಶವ
ಸಾಂದರ್ಭಿಕ ಚಿತ್ರ
Follow us on

ತುಮಕೂರು: ಹಣದ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದು, ಮಹಿಳೆ ಕೊಲೆಯಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಕಲಾವತಿ(40) ಕೊಲೆಯಾದ ಮಹಿಳೆ. ಕಲಾವತಿಯನ್ನು ಕೊಲೆ ಮಾಡಿ ನಂತರ ಶವವನ್ನು ಹೇಮಾವತಿ ನಾಲೆಗೆಸೆದಿದ್ದಾರೆ. ಸದ್ಯ ತುಮಕೂರು ಜಿಲ್ಲೆ ದೊಡ್ಡಸಾರಂಗಿ ಬಳಿ ನಾಲೆಯಲ್ಲಿ ಶವ ಪತ್ತೆಯಾಗಿದೆ.

ಮೃತ ಕಲಾವತಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ವದಲೂರಿನ ನಿವಾಸಿ. ಕೊಲೆ ಸಂಬಂಧ ಹೆಗ್ಗೆರೆ ಗ್ರಾಮದ ಗಜೇಂದ್ರ ವಿರುದ್ಧ ಕಲಾವತಿ ಕೊಲೆ ಆರೋಪ ಕೇಳಿ ಬಂದಿದೆ. ಗಜೇಂದ್ರ, ತುಮಕೂರಿನ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಕಲಾವತಿ ಹಾಗೂ ಗಜೇಂದ್ರನಿಗೆ ಪರಿಚಯವಾಗಿತ್ತು. ಈ ಹಿಂದೆ ಕಲಾವತಿ ಗಜೇಂದ್ರನಿಗೆ ಹಣ ನೀಡಿದ್ದರು. ಹಣ ವಾಪಸ್ ಕೇಳಿದಾಗ ಕಲಾವತಿಯನ್ನು ಕೊಲೆ ಮಾಡಿ ನಾಲೆಗೆ ಎಸೆದು ಗಜೇಂದ್ರ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ. ಸದ್ಯ ಆರೋಪಿ ಗಜೇಂದ್ರನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಹಿಳೆ ಶವ ಪತ್ತೆ ಮಾಡಲು ಹೋದ ಪೊಲೀಸರಿಗೆ ಶಾಕ್
ಮೃತ ಕಲಾವತಿ ಸಂಬಂಧಿಕರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಗಜೇಂದ್ರನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಂತರ ಮೃತ ಕಲಾವತಿ ಶವ ಪತ್ತೆ ಮಾಡಲು ಹೋದ ಪೊಲೀಸರಿಗೆ ಶಾಕ್ ಆಗಿದೆ. ಮಹಿಳೆ ಶವ ಬದಲಿಗೆ ವೃದ್ದನ ಶವ ಪತ್ತೆಯಾಗಿದೆ. ಸುಮಾರು 70 ವರ್ಷದ ವೃದ್ದನ ಶವ ಸಿಕ್ಕಿದೆ. ವೃದ್ದನ ಶವ ಕಂಡು ಪೊಲೀಸರು, ‌ಮಹಿಳೆಯ ಕಡೆಯವರು ಶಾಕ್ ಆಗಿದ್ದಾರೆ. ಗಜೇಂದ್ರ ಕೊಲೆ ಮಾಡಿದ್ದ ಎನ್ನಲಾದ ಮಹಿಳೆ ಕಲಾವತಿ ಮೃತದೇಹ ಇನ್ನೂ ಸಿಕ್ಕಿಲ್ಲ. ಒಂದು ಬಾರಿ ಕಲಾವತಿಯೇ ನಾಲೆಗೆ ಹಾರಿದ್ದಾಳೆ, ಮತ್ತೊಂದು ಕೊಲೆಯಾಗಿದೆ ಎಂದು ಆರೋಪಿ ಗಜೇಂದ್ರ ವಿಭಿನ್ನ ಹೇಳಿಕೆಗಳನ್ನ ನೀಡುತ್ತಿದ್ದಾನೆ. ಹಾಗೂ ಕಲಾವತಿ ಪೋಷಕರಿಂದ ಗಜೇಂದ್ರನೇ ಕೊಲೆ‌ ಮಾಡಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದ್ದು ಸಿಕ್ಕ ಶವ ಯಾರದು? ಕಲಾವತಿ ಶವ ಎಲ್ಲಿ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಆಟೋ ಪಲ್ಟಿ, ಚಾಲಕ ಸಾವು
ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದ್ದು ಓರ್ವ ಮೃತಪಟ್ಟ ಘಟನೆ ನಡೆದಿದೆ. ಆಟೋದಲ್ಲಿದ್ದ ಅಶ್ವತ್ಥಪ್ಪ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಹಾಗೂ ಆಟೋದಲ್ಲಿದ್ದ ಮೂವರಿಗೆ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವು
ಎಂಗೇಜ್ಮೆಂಟ್ ಹೋಗಿ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ‌ ನಗರದಲ್ಲಿ ನಡೆದಿದೆ. ಮುಧೋಳ-ವಿಜಯಪುರ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿತ್ತು.

ಈ ವೇಳೆ ಕೆಳಕ್ಕೆ ಬಿದ್ದು 33 ವರ್ಷದ ಮುತ್ತು ವಡ್ಡರ್ ಹಾಗೂ 22 ವರ್ಷದ ಗ್ಯಾನೇಶ್ ಬಂಡಿವಡ್ಡರ್ ಎಂಬುವರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಂಭೀರ ಗಾಯವಾಗಿದ್ದು, 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದವರೆಂದು ತಿಳಿದು ಬಂದಿದೆ. ರಬಕವಿಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣಕ್ಕೆ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಹೋಗಿದ್ದರು .ವಾಪಸ್ ಬರುವ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Anju Bobby George: ವಿಶ್ವ ಅಥ್ಲೆಟಿಕ್ಸ್‌ನಿಂದ ವರ್ಷದ ಮಹಿಳೆ ಪ್ರಶಸ್ತಿ ಪಡೆಯುವುದು ಗೌರವವಾಗಿದೆ: ಅಂಜು ಬಾಬಿ ಜಾರ್ಜ್

Published On - 7:15 am, Tue, 28 December 21