Kunigal News: ಜೆಡಿಎಸ್ಗೆ ಕೊನೆಯ ಚುನಾವಣೆ; ನಿಖಿಲ್ ಕುಮಾರಸ್ವಾಮಿ ಭಾಷಣಕ್ಕೆ ಕಾರ್ಯಕರ್ತರು ತಬ್ಬಿಬ್ಬು
ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ಇರುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕುಣಿಗಲ್: ಮುಂದಿನ ವಿಧಾನಸಭೆ ಚುನಾವಣೆಯು ಜೆಡಿಎಸ್ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (JDS Leader Nikhil Kumaraswamy) ಹೇಳಿದರು. ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್ನಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ನಿಖಿಲ್ ಆಡಿದ ಮಾತಿನಿಂದ ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾದರು. ನಂತರ ನಿಖಿಲ್ ಮಾತಿನ ಬಗ್ಗೆ ವಿವರಣೆ ನೀಡಿದ ಪಕ್ಷದ ನಾಯಕರೊಬ್ಬರು, ‘ಇದು ಕಷ್ಟಕಾರ್ಪಣ್ಯಗಳ ಕೊನೆ ಚುನಾವಣೆ ಆಗಬೇಕು ಎನ್ನುವುದರ ಬದಲು ನಿಖಿಲ್ ಅವರು ನಮ್ಮ ಪಾಲಿನ ಕೊನೆ ಚುನಾವಣೆ ಎಂದಿದ್ದಾರೆ’ ಎಂದು ಹೇಳಿದರು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ‘ಇಲ್ಲಿಂದ ಹೊಸ ಅಧ್ಯಾಯ ಆರಂಭವಾಗಬೇಕಿದೆ. ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ಇರುತ್ತದೆ. ದೇವೇಗೌಡರ ಆರೋಗ್ಯದಲ್ಲಿ ವ್ಯತ್ಯಾಸವಾಗಿರುವ ಕಾರಣ ಕಳೆದ 2-3 ತಿಂಗಳಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈಗ ದೇವೇಗೌಡರ ಆರೋಗ್ಯ ಸ್ಥಿರವಾಗಿದೆ. ಅವರು ಇನ್ನೂ ನೂರಾರು ವರ್ಷಗಳ ಕಾಲ ನಮ್ಮ ಜೊತೆ ಇರುತ್ತಾರೆ’ ಎಂದು ತಿಳಿಸಿದರು.
ಪಂಚರತ್ನ ಪ್ರವಾಸದ ಮೂಲಕ ಪಕ್ಷವನ್ನು ಸದೃಢಗೊಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಯತ್ನಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ ದೇವೇಗೌಡರನ್ನು ಈ ಕ್ಷೇತ್ರದಲ್ಲಿ ರಾಜಕೀಯ ಷಡ್ಯಂತ್ರದಿಂದ ಸೋಲಿಸಲಾಗಿದೆ. ಈ ಬಾರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲುವಂತೆ ಶ್ರಮಿಸುವ ಮೂಲಕ ಕಾರ್ಯಕರ್ತರು ದೇವೇಗೌಡರ ಸೋಲಿಗೆ ಕಾರಣರಾದವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ರವಿ ನಾಗರಾಜಯ್ಯ ಇತರರು ಮಾತನಾಡಿದರು. ಕುಣಿಗಲ್ ಪಟ್ಟಣ, ಸಂತೆ ಮಾವುತ್ತೂರು, ಹುಲಿಯೂರುದುರ್ಗ, ಯಡಿಯೂರು ಸೇರಿದಂತೆ ವಿವಿಧೆಡೆ ಬೈಕ್ ಜಾಥಾ, ಸಾರ್ವಜನಿಕ ಭಾಷಣ ಕಾರ್ಯದಕ್ರಮ ನಡೆಯಿತು.
Published On - 1:18 pm, Sun, 11 September 22