‘ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿಲ್ಲ’: ಎಸ್ಪಿ ಪವನ್ ನೆಜ್ಜೂರ್ ತಂದೆ ಸ್ಪಷ್ಟನೆ

ಬಳ್ಳಾರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತ್ತಾದ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ತಂದೆ ಉದಯ್ ಶಂಕರ್ ನೆಜ್ಜೂರ್ ಫೇಸ್‌ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನನ್ನ ಮಗ ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ, ಇದು ಕೇವಲ ವದಂತಿ ಎಂದು ಅವರು ಹೇಳಿದ್ದಾರೆ. ದಕ್ಷ ಅಧಿಕಾರಿಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.

‘ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿಲ್ಲ’: ಎಸ್ಪಿ ಪವನ್ ನೆಜ್ಜೂರ್ ತಂದೆ ಸ್ಪಷ್ಟನೆ
ವನ್ ನೆಜ್ಜೂರ್
Edited By:

Updated on: Jan 03, 2026 | 11:04 PM

ತುಮಕೂರು, ಜನವರಿ 03: ಬಳ್ಳಾರಿಯ ಬ್ಯಾನರ್ ಗಲಾಟೆಗೆ ಪ್ರಕರಣಕ್ಕೆ (Bellari violence case) ಸಂಬಂಧಿಸಿದಂತೆ ಗಲಾಟೆ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ ಅಂತಾ ಬಳ್ಳಾರಿಗೆ ನೇಮಕವಾಗಿದ್ದ ಎಸ್​ಪಿ ಪವನ್ ನೆಜ್ಜೂರ್ (SP Pavan Nejjuru) ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. ಆ ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತು. ಸದ್ಯ ಈ ಬಗ್ಗೆ ಖುದ್ಧು ಎಸ್​ಪಿ ಪವನ್ ನೆಜ್ಜೂರ್ ಅವರ ತಂದೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ.

ಪವನ್ ನೆಜ್ಜೂರ್ ತಂದೆಯಿಂದ ಫೇಸ್ ಬುಕ್​ ಪೋಸ್ಟ್​​

ಬಳ್ಳಾರಿ ಗಲಾಟೆ ಹಿನ್ನಲೆ ಎಸ್ಪಿ ಅಮಾನತ್ತು ಹಿನ್ನಲೆ ಪವನ್ ನೆಜ್ಜೂರ್ ಅವರ ತಂದೆ ಉದಯ್ ಶಂಕರ್ ನೆಜ್ಜೂರ್​​ ಈ ಬಗ್ಗೆ ಫೇಸ್ ಬುಕ್​ನಲ್ಲಿ ಸುದೀರ್ಘ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ಮಗ 2016ನೇ ಸಾಲಿನ ಕರ್ನಾಟಕ ಕೇಡರ್​​ ಐಪಿಎಸ್ ಅಧಿಕಾರಿ. ಅವರ ತಂದೆಯಾಗಿ ಕೆಲ ವಿಷಯಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಇದನ್ನೂ ಓದಿ: ಬಳ್ಳಾರಿ ಗಲಭೆಗೆ ಎಸ್ಪಿ ತಲೆದಂಡ: ಅಧಿಕಾರ ಸ್ವೀಕರಿಸಿದ ಒಂದೇ ದಿನಕ್ಕೆ ಪವನ್ ನೆಜ್ಜೂರು ಸಸ್ಪೆಂಡ್!

ಐಪಿಎಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ್​ ನೇಜ್ಜೂರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ ಹಾಗೂ ಕಾನೂನು ಪಾಲನೆಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಹೆಮ್ಮೆ ನಮಗಿದೆ. ಆದರೆ ಬಳ್ಳಾರಿಯಲ್ಲಿ ನಡೆದ ಗಲಭೆಯ ಘಟನೆ ನಂತರ ನನ್ನ ಪುತ್ರನ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುತ್ತಿರುವುದು ಬೇಸರ ಮೂಡಿಸಿದೆ.

ಉದಯ್ ಶಂಕರ್ ನೆಜ್ಜೂರ್ ಫೇಸ್ ಬುಕ್​ ಪೋಸ್ಟ್


ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದ ಸಂದರ್ಭದಲ್ಲಿ ನನ್ನ ಪುತ್ರ ಪವನ್​ ನೆಜ್ಜೂರು ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ ಎಂಬುವುದನ್ನು ಸ್ಪಷ್ಪಡಿಸುತ್ತದೆ. ಜನವರಿ 1ರಂದು ಅಧಿಕಾರ ಸ್ವೀಕರಿಸಿ, ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಪೋಲೀಸರಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸ್ವೀಕರಿಸಿ, ನಂತರ ನಡೆದ ಈ ಅಹಿತಕರ ಘಟನೆಯ ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದು, ಅಲ್ಲಿರುವ ಎಲ್ಲರಿಗೂ ಗೊತ್ತು. ಶಿಸ್ತಿನ ಸಿಪಾಯಿ, ದಕ್ಷ ಅಧಿಕಾರಿ ಆಗಿರುವ ನನ್ನ ಮಗ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆಯ ಘಟನೆ ಅನಿರೀಕ್ಷಿತ. ಆದಾಗ್ಯೂ ಕಾನೂನು ಸುವ್ಯವಸ್ಥೆಯ ಪಾಲನೆಗೆ ಸಂಪೂರ್ಣವಾಗಿ ಶ್ರಮಿಸಿ ಬೆಳಗಿನ ಜಾವವೂ ಮೃತರ ಅಂತ್ಯಕ್ರಿಯೆ ಸಂದರ್ಭ ಬಂದೋಬಸ್ತ್ ವ್ಯವಸ್ಥೆ ಮಾಡಿಯೂ ಅಮಾನತಿಗೆ ಒಳಪಟ್ಟಿದ್ದು, ಆತನಿಗೆ ಸಹಜವಾಗಿ ಬೇಸರ ಮೂಡಿಸಿ ಆಘಾತಕ್ಕೆ ಒಳಗಾಗಿದ್ದು ಹೌದೇ ಹೊರತು, ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಗಲಭೆ: ಶಾಸಕ ಭರತ್ ರೆಡ್ಡಿ ಸೇರಿ ಹಲವರ ವಿರುದ್ಧ ಎಫ್​​​ಐಆರ್

ಈ ವಿಷಯವಾಗಿ ಕಪೋಲಕಲ್ಪಿತ ವಿಷಯಗಳು ಚರ್ಚೆ ಆಗುತ್ತಿರುವುದು ನಮಗೆ ಬೇಸರ ಹಾಗೂ ಮಗನ ಮರ್ಯಾದೆ, ಭವಿಷ್ಯದ ಬಗ್ಗೆ ಅತ್ಯಂತ ಆತಂಕ ಮೂಡಿಸಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಪುತ್ರ ಪವನ್ ನೆಜ್ಜೂರ್ ಆಘಾತಕ್ಕೆ ಒಳಗಾಗಿದ್ದಾನೆ. ಅಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಅದೂ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ, ಅಲ್ಲದೆ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಾಗಲೂ ಅನುಭವಿಸಬೇಕಾದ ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿದ್ದಾರೆ.

ಅದೇನಿದ್ದರೂ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ್ ನೆಜ್ಜೂರ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸಿದ್ದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನನ್ನ ಪುತ್ರನ ಬಗ್ಗೆ ಅನಗತ್ಯ ಹಾಗೂ ಸುಳ್ಳು ವದಂತಿಗಳನ್ನು ಹರಡಿಸದಂತೆ ಮತ್ತು ಆಘಾತಕ್ಕೆ ಒಳಗಾಗಿರುವ ಪವನ್ ನೆಜ್ಜೂರು ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯ ಇದೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತಾ, ಓರ್ವ ದಕ್ಷ ಅಧಿಕಾರಿಯ ತಂದೆಯಾಗಿ ನಿಮ್ಮೆಲ್ಲರಲ್ಲಿ ಮನವಿಸುವುದರ ಜೊತೆಗೆ ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರುಪರಿಶೀಲನೆ ನಡೆಸುವಂತೆ ವಿನಮ್ರವಾಗಿ ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.