ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದ ಪಿಎಸ್​ಐ ಪರಾರಿ: ಪೊಲೀಸರನ್ನು ಬೆನ್ನಟ್ಟಿದ ಸಾರ್ವಜನಿಕರು

ಠಾಣೆಯಿಂದ ಓಡಿ ಹೋಗುತ್ತಿದ್ದ ಅವರನ್ನು ಹಿಡಿಯಲು ಸಾರ್ವಜನಿಕರು ಬೆನ್ನಟ್ಟಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದ ಪಿಎಸ್​ಐ ಪರಾರಿ: ಪೊಲೀಸರನ್ನು ಬೆನ್ನಟ್ಟಿದ ಸಾರ್ವಜನಿಕರು
ಸಿ.ಎಸ್.ಪುರ ಪೊಲೀಸ್ ಠಾಣೆ ಮತ್ತು ಆರೋಪಿ ಸೋಮಶೇಖರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 03, 2021 | 4:54 PM

ತುಮಕೂರು: ಲಂಚ ಪಡೆಯುವಾಗಲೇ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB) ಬಲೆಗೆ ಬಿದ್ದಿದ್ದ ಗುಬ್ಬಿ ತಾಲ್ಲೂಕು ಚಂದ್ರಶೇಖರಪುರ (ಸಿ.ಎಸ್.ಪುರ) ಪೊಲೀಸ್ ಸಬ್​ ಇನ್​ಸ್ಪೆಕ್ಟರ್ ಸೋಮಶೇಖರ್ ಠಾಣೆಯಿಂದ ಓಡಿ ಹೋಗಿದ್ದಾರೆ. ಠಾಣೆಯಿಂದ ಓಡಿ ಹೋಗುತ್ತಿದ್ದ ಅವರನ್ನು ಹಿಡಿಯಲು ಸಾರ್ವಜನಿಕರು ಬೆನ್ನಟ್ಟಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಪಿಎಸ್​ಐ ಸೋಮಶೇಖರ್ ಮತ್ತು ಕಾನ್​ಸ್ಟೆಬಲ್ ನಯಾಜ್ ಎಸಿಬಿ ಬಲೆಗೆ ಬಿದ್ದಿದ್ದರು. ಎಸಿಬಿ ಅಧಿಕಾರಿಗಳು ಊಟ ಮಾಡುತ್ತಿದ್ದ ವೇಳೆ ಪಿಎಸ್​ಐ ಪೊಲೀಸ್ ಬೈಕ್ ಹತ್ತಿ ಮೊಬೈಲ್ ಫೋನ್​​ನೊಂದಿಗೆ ಪರಾರಿಯಾದರು. ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಎಸಿಬಿ‌ ಬಲೆಗೆ ಪಿಎಸ್ಐ ಸೋಮಶೇಖರ್ ಮತ್ತು ಹೆಡ್​ಕಾನ್​ಸ್ಟೆಬಲ್ ನಯಾಜ್ ಅಹಮ್ಮದ್ ಅವರ ಬಲೆಗೆ ಬಿದ್ದಿದ್ದರು.

ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್ ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವರ ವಿರುದ್ಧ ಕಳೆದ ಅಕ್ಟೋಬರ್ 22ರಂದು ದೂರು ದಾಖಲಾಗಿತ್ತು. ಇದನ್ನೇ ದಾಳವಾಗಿಸಿಕೊಂಡು ಪೊಲೀಸರು ಚಂದ್ರಣ್ಣನ ಕಾರು ಮುಟ್ಟುಗೋಲು ಹಾಕಿಕೊಂಡಿದ್ದರು. ಕೋರ್ಟ್​ನಲ್ಲಿ ಜಾಮೀನು ಪಡೆದು ಕಾರು ಬಿಡಿಸಿಕೊಳ್ಳಲು ಬಂದಿದ್ದ ಚಂದ್ರಣ್ಣ ಅವರ ಬಳಿ ಕಾರು ಬಿಡಲು ಪಿಎಸ್​ಐ ₹ 28 ಸಾವಿರಕ್ಕೆ ಹೆಡ್​ ಕಾನ್​ಸ್ಟೆಬಲ್ ನಯಾಜ್ ಅಹಮದ್ ಮೂಲಕ ಹಣಕ್ಕೆ ಬೇಡಿಕೆಯಿಟ್ಟಿದ್ದರು.

ಈ ಪೈಕಿ ಮೊದಲ ಕಂತಿನಲ್ಲಿ ₹ 12 ಸಾವಿರ ಲಂಚವನ್ನು ಪಿಎಸ್​ಐ ಪಡೆದುಕೊಂಡಿದ್ದರು. ಉಳಿದ ₹ 16 ಸಾವಿರ ಪಡೆಯುವ ವೇಳೆ ಪಿಎಸ್ಐ ಎಸಿಬಿ ಬಲೆಗೆ ಬಿದ್ದಿದ್ದರು. ಪಿಎಸ್ಐ ಲಂಚ ಕೇಳುತ್ತಿರುವ ಬಗ್ಗೆ ಚಂದ್ರಣ್ಣ ಎಸಿಬಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಎಸಿಬಿ ಇನ್​ಸ್ಪೆಕ್ಟರ್ ವಿಜಯಲಕ್ಷ್ಮಿ ನೇತೃತ್ವದಲ್ಲಿ ದಾಳಿ ನಡೆದಿತ್ತು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತ ಯುಬಿ ಶೆಟ್ಟಿ ಮನೆ ಮೇಲೆ ಐಟಿ ದಾಳಿ; ದಾಖಲೆ ಇಲ್ಲದ 70 ಕೋಟಿ ಮೌಲ್ಯದ ಆದಾಯ ಪತ್ತೆ ಇದನ್ನೂ ಓದಿ: ಇಂಧನ ಬೆಲೆ ಏರಿಕೆ ವಿರೋಧಿಸಿ ಕೊಚ್ಚಿಯಲ್ಲಿ ರಸ್ತೆ ತಡೆದ ಕಾಂಗ್ರೆಸ್; ಪ್ರಶ್ನಿಸಿದ ನಟ ಜೋಜು ಜಾರ್ಜ್ ಕಾರಿನ ಮೇಲೆ ದಾಳಿ

Published On - 4:51 pm, Wed, 3 November 21