ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಬಂದ ಎಲ್ಲಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಮೂರೂ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದೆ. ಇದರೊಂದಿಗೆ ತುಮಕೂರು ಜಿಲ್ಲೆಯಲ್ಲಿ ಒಟ್ಟು 23 ಕೇರಳ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇದೆ. ಅರುಣ ನರ್ಸಿಂಗ್ ಕಾಲೇಜಿನಲ್ಲಿ 3 ಮಂದಿಗೆ, ಸಿದ್ದಗಂಗಾ ನರ್ಸಿಂಗ್ ಕಾಲೇಜಿನಲ್ಲಿ 8 ಮಂದಿಗೆ ಮತ್ತು ವರದರಾಜ ಕಾಲೇಜಿನಲ್ಲಿ 12 ಸೇರಿದಂತೆ ಒಟ್ಟು 23 ಕೇಸ್ಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ ಕಳೆದ 10 ದಿನಗಳಲ್ಲಿ 109 ಕೇಸ್ ಗಳು ಬಂದಿವೆ.
ಸಿದ್ದಗಂಗಾ ನರ್ಸಿಂಗ್ ಕಾಲೇಜಿನಲ್ಲಿ 214 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಿಸಲಾಗಿತ್ತು, ಇದರಲ್ಲಿ 8 ಜನರಿಗೆ ಸೋಂಕು ತಗುಲಿದೆ. ವರದರಾಜ ಕಾಲೇಜಿನಲ್ಲಿ 138 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ 12 ವಿದ್ಯಾರ್ಥಿಗಳಿಗೆ ಪಾಸಿಟೀವ್ ಬಂದಿದೆ. ಅರುಣ ನರ್ಸಿಂಗ್ ಕಾಲೇಜಿನಲ್ಲಿ 161 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಿಸಲಾಯಿತು, ಅಲ್ಲಿಯೂ ಮೂವರಿಗೆ ಸೋಂಕು ತಗುಲಿದೆ. ಪೆರುಮನಹಳ್ಳಿ ಗ್ರಾಮದಲ್ಲಿ 11 ಜನರಿಗೆ ಪಾಸಿಟಿವ್ ಬಂದಿತ್ತು. ಅವರೆಲ್ಲರೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದವರು. ಬಳಿಕ ಅವರಿಗೆಲ್ಲಾ ಸೋಂಕು ಬಂದಿದೆ.
ಈ ಬಗ್ಗೆ ಚಿತ್ರದುರ್ಗ ಡಿಹೆಚ್ ಓ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಲ್ಲಿ ನಾಲ್ಕು ಜಾಗಗಳನ್ನ ಹಾಟ್ ಸ್ಪಾಟ್, ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಎಲ್ಲರ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರಿಗೆ 35 ಸ್ಯಾಂಪಲ್ ಗಳನ್ನು ಜೀನೋಮ್ ಸ್ವಿಕ್ವೇನ್ಸ್ ಗೆ ಕಳಿಸಲಾಗಿದೆ. ಎರಡನೇ ಡೋಸ್ 67 % ಮುಗಿದಿದೆ. 80 ಸಾವಿರ ಜನರಿಗೆ ಎರಡನೇ ಡೋಸ್ ನೀಡಬೇಕಿದೆ. ಕಳೆದ 10 ದಿನಗಳಲ್ಲಿ ಐದು ವರ್ಷ ಮೇಲ್ಪಟ್ಟ ಮಕ್ಕಳ ಪೈಕಿ, ಒಟ್ಟು 42 ಪ್ರಕರಣ ಪತ್ತೆಯಾಗಿದೆ. ಗಂಡು ಮಕ್ಕಳು 18 ಹಾಗೂ 24 ಹೆಣ್ಣು ಮಕ್ಕಳಿಗೆ ಪಾಸಿಟಿವ್ ಬಂದಿದೆ. ಜಿಲ್ಲಾದ್ಯಂತ ತೀವ್ರ ನಿಗಾ ಇರಿಸಲಾಗಿದೆ ಎಂದು ತುಮಕೂರು ಡಿಹೆಚ್ಓ ಡಾ ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.
ಮಂಗಳೂರಿನಲ್ಲಿ ಒಂದೇ ಕಾಲೇಜಿನ 15 ವಿದ್ಯಾರ್ಥಿಗಳಿಗೆ ಕೊರೊನಾ ದೃಢ
ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಮತ್ತೊಮ್ಮೆ ಕೊರನಾ ಅಲೆ ಆತಂಕ ತಂದಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಹಾಗಾಗಿ ಕಾಲೇಜನ್ನು ಆರೋಗ್ಯ ಇಲಾಖೆ ಕಂಟೇನ್ಮೆಂಟ್ ಮಾಡಿದೆ. 10 ದಿನದಲ್ಲಿ 21 ಜನ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಆಗಿದೆ.
Published On - 12:33 pm, Mon, 6 December 21