
ತುಮಕೂರು, ಡಿಸೆಂಬರ್ 11: ಚಳಿಗಾಲವಿದ್ದರೂ ಮಕ್ಕಳು ಐಸ್ಕ್ರೀಮ್ (Ice cream) ಅನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಶಾಲೆ ಸುತ್ತಮುತ್ತವಾಗಿರಲಿ, ಯಾವುದೇ ಕಾರ್ಯಕ್ರಮ ಇರಲಿ, ಜನ ಇದ್ದಲ್ಲಿ ಐಸ್ಕ್ರೀಮ್ ಮಾರಾಟ ಮಾತ್ರ ಜೋರಾಗಿರುತ್ತದೆ. ದಣಿದವರು ತಂಪಾಗಿಸುವ ಈ ಐಸ್ಕ್ರೀಮ್ ಇದೀಗ ಎಷ್ಟು ಸೇಫ್ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ತುಮಕೂರಿನ ಫ್ಯಾಕ್ಟರಿಯೊಂದರ ಮೇಲೆ ಅಧಿಕಾರಿಗಳ ದಾಳಿ ಬೆನ್ನಲ್ಲೇ ಆತಂಕ ಶುರುವಾಗಿದೆ.
ಮಕ್ಕಳನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋದರೆ ಸಾಕು, ಮಕ್ಕಗಳಿಗೆ ಒಂದೇ ಹಠ, ಐಸ್ಕ್ರೀಮ್ ಬೇಕು ಅಂತ. ಮಕ್ಕಳ ಮೇಲಿನ ಪ್ರೀತಿಗೆ ಕಂಡಕಂಡಲ್ಲಿ ಐಸ್ಕ್ರೀಮ್ ಕೊಡಿಸುವ ಮುನ್ನ ಪೋಷಕರು ಎಚ್ಚರ ವಹಿಸುವುದ ಅಗತ್ಯವಾಗಿದೆ. ಇತ್ತ ತುಮಕೂರಿನಲ್ಲಿ ಅನುಮತಿ ಇಲ್ಲದ ಐಸ್ಕ್ರೀಮ್ ಫ್ಯಾಕ್ಟರಿಗಳು ತಲೆ ಎತ್ತುತ್ತಿವೆ. ಪಾಲಿಕೆಯ ನಿಯಮವಿರಲಿ, ಅನುಮತಿಯೂ ಇಲ್ಲದೇ, ಇತ್ತ ಶುಚಿತ್ವ ಇಲ್ಲದೇ, ಮಕ್ಕಳ ಆರೋಗ್ಯಕ್ಕೆ ಕುತ್ತು ತರುವ ಆತಂಕ ಮೂಡಿಸಿದೆ.
ಇದನ್ನೂ ಓದಿ: ತುಮಕೂರು ಜನರಲ್ಲಿ ಆರೋಗ್ಯ ಸಮಸ್ಯೆ ಆತಂಕ: 11 ಕಾರ್ಖಾನೆಗಳಿಗೆ ಬಿತ್ತು ಬೀಗ
ಖಚಿತ ಮಾಹಿತಿ ಆಧರಿಸಿ ತುಮಕೂರು ತಹಶೀಲ್ದಾರ್ ರಾಜೇಶ್ವರಿ ನೇತೃತ್ವದಲ್ಲಿ ಗುಬ್ಬಿಗೇಟ್ ಬಳಿಯ ದಿಲ್ ಕುಶ್ ಎಂಬ ಐಸ್ಕ್ರೀಮ್ ಫ್ಯಾಕ್ಟರಿ ಮೇಲೆ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಯೋಗೀಶ್, ಜಿಲ್ಲಾ ಆಹಾರ ಅಧಿಕಾರಿ ಹರೀಶ್ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಂದ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸ್ಪೋಟಕ ಅಂಶಗಳು ಬಯಲಾಗಿವೆ. ಫ್ಯಾಕ್ಟರಿಯಲ್ಲಿ ಯಾವುದೇ ಶುಚಿತ್ವ ಇಲ್ಲದೇ ಇರುವುದು, ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ಈ ಮೂಲಕ ಆಹಾರ ಇಲಾಖೆ ಫ್ಯಾಕ್ಟರಿಗೆ ದಂಡ ಹಾಕಿದರೇ, ಪಾಲಿಕೆ ಆರೋಗ್ಯಾಧಿಕಾರಿ ಬೀಗ ಜಡಿದಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ಆರು ತಿಂಗಳಿಂದ ಐಸ್ಕ್ರೀಮ್ ಫ್ಯಾಕ್ಟರಿ ನಡೆಸಲಾಗುತ್ತಿದ್ದು, ಬಿಹಾರ್ ಮೂಲದ ಸಿಬ್ಬಂದಿ ಕಾರ್ಯ ನಿರ್ವಹಿಸುತಿದ್ದಾರೆ. ಜನವಾಸಿ ಸ್ಥಳದಲ್ಲಿ ಅನುಮತಿ ಇಲ್ಲದೇ ಫ್ಯಾಕ್ಟರಿ ನಡೆಸಲಾಗುತಿದ್ದು, ಇದರ ಮಾಲೀಕರು ಯಾರೆಂಬುವುದು ಇನ್ನು ತಿಳಿದುಬಂದಿಲ್ಲ. ಹೀಗಾಗಿ ಮಾಲೀಕರ ಪತ್ತೆಗೆ ಮುಂದಾದ ಪಾಲಿಕೆ ಸದ್ಯ ಫ್ಯಾಕ್ಟರಿಗೆ ಬೀಗಹಾಕಿದ್ದು, ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ದುಶ್ಚಟಕ್ಕೆ ಒಳಗಾದವರ ಮನಃಪರಿವರ್ತನೆಗೆ ಬರುತ್ತಿದ್ದಾನೆ ಗೆಳೆಯ: ಏನಿದು ಸನ್ಮಿತ್ರ ಯೋಜನೆ?
ಸದ್ಯ ಒಂದು ಐಸ್ಕ್ರೀಮ್ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಇಷ್ಟೆಲ್ಲಾ ಅವಾಂತರ ಕಣ್ಣಿಗೆ ಕಂಡಿದ್ದು, ಜಿಲ್ಲೆಯಲ್ಲಿರುವ ಇತರೆ ಐಸ್ಕ್ರೀಮ್ ಫ್ಯಾಕ್ಟರಿಗಳ ತಯಾರಿಕಾ ಪ್ರಕ್ರಿಯೆ ಮೇಲೆ ಈಗ ಅನುಮಾನ ಮೂಡಿದೆ. ಹೀಗಾಗಿ ಒಟ್ಟಾರೆ ಐಸ್ಕ್ರೀಮ್ ಫ್ಯಾಕ್ಟರಿಗಳ ಅಂಕಿಅಂಶಗಳ ಜೊತೆಗೆ ಪಾಲಿಕೆ ನಿಯಮ, ಅನುಮತಿಗಳ ಪರಿಶೀಲನೆಗೆ ಮುಂದಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 pm, Thu, 11 December 25