
ತುಮಕೂರು, ಡಿಸೆಂಬರ್ 10: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ (pollution) ವಿಪರೀತವಾಗುತ್ತಿದೆ. ಗಾಳಿಯ ಗುಣಮಟ್ಟದಲ್ಲೂ ದಿನೇದಿನೇ ಕುಸಿತ ಉಂಟಾಗುತ್ತಿದೆ. ಇದೆಲ್ಲರದ ಜೊತೆಗೆ ನಗರದಲ್ಲೀಗ ಕಲುಷಿತ ಗಾಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಐದು ವರ್ಷದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾದ 11 ಕೈಗಾರಿಕೆಗಳಿಗೆ (industries) ಅಧಿಕಾರಿಗಳು ಬೀಗ ಹಾಕಿದ್ದು, ನೂರಾರು ಕಾರ್ಖಾನೆಗಳಿಗೆ ನೋಟಿಸ್ ನೀಡಿದ್ದಾರೆ.
ಕೈಗಾರಿಕಾ ಹಬ್ ಆಗಿ ಬೆಳೆಯುತ್ತಿರುವ ತುಮಕೂರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಶಾಕ್ ಉಂಟುಮಾಡಿದೆ. ಜಿಲ್ಲೆಯ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಆತಂಕಕಾರಿ ಅಂಶ ಹೊರಬಿದ್ದಿದೆ. ಅನಿಯಂತ್ರಿತವಾಗಿ ಹೊರ ಸೂಸುವ ಕೆಟ್ಟ ಹೊಗೆ ಹಾಗೂ ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆ ಆಧಾರದ ಮೇರೆಗೆ ಸುಮಾರು 11 ಕೈಗಾರಿಕೆಗಳಿಗೆ ಬೀಗ ಹಾಕಲಾಗಿದೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 2020-21ನೇ ಸಾಲಿನಿಂದ 2024-25ರವರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಇದರ ಹೊರತಾಗಿ ಸುಮಾರು 640 ಕೈಗಾರಿಕೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಜೊತೆಗೆ ಕೆಲ ನಿಯಮ ಉಲ್ಲಂಘನೆ ಬಗ್ಗೆ ಆರೋಪ ಕೇಳಿ ಬಂದ ಬೆನ್ನಲ್ಲೇ ಸುಮಾರು 56 ಕೈಗಾರಿಕೆಗಳನ್ನು ಯಾಕೆ ಮುಚ್ಚುಬಾರದೆಂದು ಅಂತಿಮ ನೋಟಿಸ್ ಕೊಡಲಾಗಿದ್ದು, ಕೈಗಾರಿಕೆಗಳ ಉತ್ತರಕ್ಕಾಗಿ ಅಧಿಕಾರಿಗಳು ಕಾಯುತಿದ್ದಾರೆ.
ತುಮಕೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಶಿಕ್ಷಣ, ಕೃಷಿ ಜೊತೆಗೆ ಕೈಗಾರಿಕಾ ವಲಯವೂ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಕೈ ಬೀಸಿ ಕರೆಯುತ್ತಿದೆ. ಅದರಂತೆ ತುಮಕೂರು ನಗರದ ಹೊರವಲಯದ ಕೈಗಾರಿಕಾ ಪ್ರದೇಶಗಳತ್ತ ನೂರಾರು ಉದ್ದಿಮೆಗಳು, ಕಾರ್ಖಾನೆಗಳು ತಲೆ ಎತ್ತುತ್ತಿವೆ. ಈ ಕಾರ್ಖಾನೆಗಳು ಹೊರ ಸೂಸುವ ಹೊಗೆ, ತ್ಯಾಜ್ಯದಿಂದ ಗಾಳಿ ಕಲುಷಿತವಾಗುತ್ತಿದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ಕಾರ್ಯ ನಡೆಯುತ್ತಿಲ್ಲ. ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗುತ್ತಿದೆ ಹೊರತು ಕೈಗಾರಿಕೆ ಮಾಲೀಕರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ.
ಜಿಲ್ಲೆಯಲ್ಲಿ ಪ್ರಮುಖವಾಗಿ ವಸಂತನರಸಾಪುರ, ಅಂತರಸನಹಳ್ಳಿ, ಹಿರೇಹಳ್ಳಿ ಸೇರಿ ಸುತ್ತಮುತ್ತಲಿನ ಭಾಗದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಸಾವಿರಾರು ಎಕರೆ ಜಾಗ ಕಾಯ್ದಿರಿಸಲಾಗಿದೆ. ಇಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆಗಳು ಶುರುವಾಗಿಲ್ಲ. ಆದರೆ ಈಗಾಗಲೇ ಕಾರ್ಯಾರಂಭ ಮಾಡಿದ ಕೆಲ ಕೈಗಾರಿಕೆ, ಉದ್ದಿಮೆಗಳು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿಲ್ಲ ಎಂಬುದು ಮಾಲಿನ್ಯ ನಿಯಂತ್ರಣ ಇಲಾಖೆಯ ಅಂಕಿ ಅಂಶಗಳೇ ಹೇಳುತ್ತಿವೆ. ಇನ್ನು ಈ ರೀತಿಯ ಕಾರ್ಖಾನೆಗಳ ನಡೆಯಿಂದ ಕೈಗಾರಿಕಾ ಪ್ರದೇಶಗಳ ಸುತ್ತಮುತ್ತಲಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುವ ಆತಂಕ ಶುರುವಾಗಿದೆ.
ಇದನ್ನೂ ಓದಿ: ವಾರದಲ್ಲಿ 6 ದಿನ ಮೌನ ವ್ರತ: ಭಕ್ತರ ಅಚ್ಚರಿಗೆ ಕಾರಣವಾಯ್ತು ಗವಿಸಿದ್ದೇಶ್ವರ ಸ್ವಾಮೀಜಿ ನಡೆ
ನಗರದ ಹೊರ ಭಾಗದಲ್ಲಿನ ಕೈಗಾರಿಕೆಗಳಿಂದ ವಾಯು ಮಾಲಿನ್ಯ ಹೆಚ್ಚಾದರೆ, ನಗರದ ಒಳಗಡೆ ವಾಹನಗಳ ಅತಿಯಾದ ಓಡಾಟ ಜನರಿಗೆ ಕಿರಿಕಿರಿ ಎನಿಸುತ್ತಿದೆ. ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿಯೇ 5,55,531 ಬೈಕ್‌ಗಳು, 67 ಸಾವಿರ ಕಾರುಗಳು ನೋಂದಣಿಯಾಗಿವೆ. ಗೂಡ್ಸ್ ಲಾರಿ, ಕೆಎಸ್‌ಆರ್‌ಟಿಸಿ, ಖಾಸಗಿ ಮತ್ತು ಶಾಲಾ-ಕಾಲೇಜು ಬಸ್‌ಗಳು ಸೇರಿದಂತೆ ಒಟ್ಟು 1887 ಬಸ್‌ಗಳು ಪ್ರತಿನಿತ್ಯ ಓಡಾಡುತ್ತಿವೆ. ಇವುಗಳಿಂದ ಬರುವ ಅಪಾಯಕಾರಿ ಹೊಗೆ ಜಿಲ್ಲೆಯ ಜನತೆಯನ್ನು ಹೈರಾಣಾಗಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:01 pm, Wed, 10 December 25