
ತುಮಕೂರು, ಡಿಸೆಂಬರ್ 07: ರಾಜ್ಯದಲ್ಲಿ ಡ್ರಗ್ಸ್ (Drugs) ಜಾಲಗಳನ್ನು ಪೊಲೀಸರು (police) ಭೇದಿಸಿದರು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿವೆ. ಶಾಲಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮಾದಕಲೋಕ ಬಿಡಿಸಲಾಗದ ಚಟವಾಗಿ ಪರಿಣಮಿಸುತ್ತಿದೆ. ರಾಜ್ಯದಲ್ಲಿ ಡ್ರಗ್ಸ್ ವಾಸಿಯಾಗದ ಅಂಟು ರೋಗವಾಗಿ ಬದಲಾಗುತಿದ್ದು, ಇದರ ತಡೆಗೆ ರಾಜ್ಯ ಪೊಲೀಸ್ ನೂತನ ಪ್ರಯತ್ನಕ್ಕೆ ಮುಂದಾಗಿದೆ. ‘ಸನ್ಮಿತ್ರ’ ಜಾರಿ ಮಾಡುವ ಮೂಲಕ ಮಾದಕ ವ್ಯಸನಿಗೊಬ್ಬ ಒಳ್ಳೆಯ ಗೆಳೆಯನ ಪರಿಚಯಿಸಿದೆ.
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಾಲಾ ಮಕ್ಕಳಲ್ಲೂ ಡ್ರಗ್ಸ್ ದುಶ್ಚಟ ಹಬ್ಬುವ ಆತಂಕ ಮೂಡಿದೆ. ಅದೆಷ್ಟೇ ಜಾಗೃತಿ ಮೂಡಿಸಿದರೂ, ಕಾರ್ಯಚರಣೆ ನಡೆಸಿದರೂ ಕಾಳಸಂತೆಯಲ್ಲಿ ಮಾತ್ರ ಮಾದಕ ಮಾರುಕಟ್ಟೆ ಜೋರಾಗಿದೆ. ಹೀಗಾಗಿ ಸವಾಲಾಗಿರುವ ಈ ಮಾದಕ ವಸ್ತುವಿಗೆ ಕಡಿವಾಣ ಹಾಕಲು ನೂತನ ಪ್ರಯತ್ನಕ್ಕೆ ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದ್ದು, ಡ್ರಗ್ಸ್ ವ್ಯಸನಿಗಳ ದುಶ್ಚಟ ನಿವಾರಣೆ ಮೂಲಕ ಮನಃಪರಿವರ್ತನೆಗೆ ಒಳ್ಳೆಯ ಮಿತ್ರನಾಗಿ ಸನ್ಮಿತ್ರ ಕಾರ್ಯಯೋಜನೆ ಜಾರಿಗೆ ತಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು: ನೂರಾರು ಪೆಡ್ಲರ್ಗಳ ಬಂಧನ
ಹೊಸ ವರ್ಷ ಸನಿಹದಲ್ಲಿದೆ. ವರ್ಷ ಬರಮಾಡಿಕೊಳ್ಳೊವ ಬರದಲ್ಲಿ ಮೋಜು-ಮಸ್ತಿ ಸಹ ಜೋರಾಗಿರಲಿದೆ. ಇನ್ನು ಮನರಂಜನೆ ನಡುವೆ ಕೆಲವರು ಮಾದಕ ಲೋಕವನ್ನೇ ಅನಾವರಣ ಮಾಡುವ ತಯಾರಿ ನಡೆಸಿದ್ದಾರೆ. ಇಂತಹವರ ಮೇಲೆ ನಿಗಾವಹಿಸಲು ಹಾಗೂ ಮಾದಕ ವ್ಯಸನಿಗಳ ಮನಃಪರಿವರ್ತನೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಸನ್ಮಿತ್ರ ಯೋಜನೆ ಜಾರಿಗೊಳಿಸಿದೆ.
ಈ ಯೋಜನೆ ಮೂಲಕ ಡ್ರಗ್ಸ್ ವ್ಯಸನಿಯನ್ನ ಪತ್ತೆ ಮಾಡಿ ಆತನಿಗೊಬ್ಬ ಒಳ್ಳೆಯ ಗೆಳೆಯನಾಗಿ ಪೊಲೀಸ್ ಸಿಬ್ಬಂದಿಗೆ ಕರ್ತವ್ಯ ನೀಡಲಾಗುತ್ತದೆ. ಆ ಸಿಬ್ಬಂದಿ ವ್ಯಸನಿಯ ಮನಃಪರಿವರ್ತನೆಗೆ ಬೇಕಾದ ಚಟುವಟಿಕೆ, ಆ ವ್ಯಕ್ತಿಯ ದಿನಚರಿ, ವೈದ್ಯಕೀಯ ಪರಿಕ್ಷೆ ಸೇರಿದಂತೆ ಆ ವ್ಯಕ್ತಿಯ ಮೇಲೆ ನಿಗಾವಹಿಸಲಿದ್ದಾನೆ. ಅಷ್ಟೇ ಅಲ್ಲದೆ ಆತನಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಮೂಲಕ ಕೈಗೊಳ್ಳಬೇಕಾದ ಪ್ರಯತ್ನಗಳಿಗೆ ಈ ಸಿಬ್ಬಂದಿ ನೆರವಾಗಲಿದ್ದಾನೆ. ಇನ್ನು ಈ ಪ್ರಕ್ರಿಯೆ ವೇಳೆ ಮಾದಕ ವ್ಯಸನಿಯ ಗುರುತು ಎಲ್ಲೂ ಹೊರ ಬರದಂತೆ, ಆತನ ಖಾಸಗಿತನವನ್ನು ಗೌಪ್ಯವಾಗಿಡಲಾಗುತ್ತದೆ.
ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಸನ್ಮಿತ್ರ ಯೋಜನೆ ಆರಂಭಗೊಂಡಿದ್ದು, ಮನೆ ಮನೆ ಪೊಲೀಸ್, ಬೀಟ್ ಪೊಲೀಸರು ಹಾಗೂ ಕಳೆದ ಎರಡು ವರ್ಷಗಳಲ್ಲಿ ದಾಖಲಾದ ಡ್ರಗ್ಸ್ ಬಳಕೆ ಪ್ರಕರಣಗಳ ಆಧಾರದ ಮೇಲೆ ವ್ಯಸನಿಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ. ಪತ್ತೆಯಾದವರ ವೈದ್ಯಕೀಯ ಪರಿಕ್ಷೆ ಮೂಲಕ ಸದ್ಯದ ಸ್ಥಿತಿ ಗಮನದಲ್ಲಿಟ್ಟುಕೊಂಡು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಹಾಗೂ ಮನಃಪರಿವರ್ತನಾ ಕೇಂದ್ರದ ಮುಖಾಂತರ ಕೈಗೊಳ್ಳಬೇಕಾದ ಪ್ರಯತ್ನಕ್ಕೆ ವೈದ್ಯರು ಸಹ ಸಿದ್ಧಗೊಂಡಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಅಂದಾಜು 700 ಜನ ಮಾದಕ ವ್ಯಸನಿಗಳಿರುವ ಸಾಧ್ಯತೆಯಿದ್ದು, ಪ್ರತಿ ಠಾಣೆಯ ಪ್ರತಿ ಸಿಬ್ಬಂದಿಯೂ ಸನ್ಮಿತ್ರನಾಗಿ ಡ್ರಗ್ಸ್ ಚಟಕ್ಕೆ ಒಳಗಾದವನ ಜೊತೆಗಿರಲಿದ್ದಾರೆ. ಆದರೆ ಠಾಣಾ ಸಿಬ್ಬಂದಿಯಿಂದ ಹೆಚ್ಚು ಮಾದಕ ವ್ಯಸನಿಗಳಿದ್ದಲ್ಲಿ, ಮೂರರಿಂದ ಐದು ಮಾದಕ ವ್ಯಸನಿಗಳಿಗೊಬ್ಬ ಸನ್ಮಿತ್ರನನ್ನು ನಿಯೋಜನೆ ಮಾಡಲಾಗುತ್ತಿದೆ. ತನ್ನ ವ್ಯಾಪ್ತಿಯ ಮಾದಕ ವ್ಯಸನಿಯ ಸಂಪೂರ್ಣ ನಿಗಾ ವಹಿಸುವುದು ಆತನ ಕರ್ತವ್ಯವಾಗಲಿದೆ.
ಇದನ್ನೂ ಓದಿ: ಮೈಸೂರಿನಲ್ಲೇ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಹೊಸ ವರ್ಷದ ಹೊಸ್ತಿಲಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಚಿಂತನೆಯಲ್ಲಿ ಸನ್ಮಿತ್ರ ಜಾರಿಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಸನ್ಮಿತ್ರಗೆ ಡಿಜಿ ಸೂಚನೆ ಕೊಟ್ಟಿದ್ದು, ಸದ್ಯ ತುಮಕೂರಿನಲ್ಲಿ ಈ ಯೋಜನೆ ಕಾರ್ಯರಂಭವಾಗಿದೆ. ಈ ಯೋಜನೆ ಮಾದಕ ವಸ್ತುಗಳ ಬಳಕೆಯಲ್ಲಿ ಯುವಕರ ಪಾತ್ರ ನಿಯಂತ್ರಿಸುವಲ್ಲಿ ಎಷ್ಟರ ಮಟ್ಟಿಗೆ ಪಾತ್ರ ವಹಿಸಲಿದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.