Tumkur Mayor Election: ತುಮಕೂರು ಮೇಯರ್ ಸ್ಥಾನ ಕಾಂಗ್ರೆಸ್ಗೆ ಒಲಿಯುವ ಸಾಧ್ಯತೆ, ಮೀಸಲಾತಿ ನಿಯಮವೂ ಪೂರಕ
Tumkur Politics: ಕಾಂಗ್ರೆಸ್ಗೆ ತನ್ನದೇ ಪಕ್ಷದ 10 ಮತಗಳ ಜೊತೆಗೆ ಇಬ್ಬರು ಪಕ್ಷೇತರರು ಮತ್ತು ಒಬ್ಬ ಎಂಎಲ್ಸಿಯ ಮತ ಸಿಗುವ ನಿರೀಕ್ಷೆಯಿದೆ.
ತುಮಕೂರು: ಮಹಾನಗರ ಪಾಲಿಕೆ ಮೇಯರ್ (Tumkur Mahanagara Palike) ಸ್ಥಾನದ ಚುನಾವಣೆಯು ಶುಕ್ರವಾರ (ಸೆಪ್ಟೆಂಬರ್ 9) ನಡೆಯಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮೇಯರ್ ಸ್ಥಾನವು (Mayor) ಒಲಿಯುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಜೆಡಿಎಸ್ನಲ್ಲಿ ಎಸ್ಸಿ ಅಭ್ಯರ್ಥಿ ಇಲ್ಲದ ಕಾರಣ ಪಾಲಿಕೆಯ ಮೇಯರ್ ಸ್ಥಾನವು ಕಾಂಗ್ರೆಸ್ ತೆಕ್ಕೆಗೆ ಸಿಗುವ ಸಾಧ್ಯತೆ ನಿಚ್ಚಳವಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 12, ಜೆಡಿಎಸ್ನ 10, ಕಾಂಗ್ರೆಸ್ನ 10 ಮತ್ತು ಮೂವರು ಪಕ್ಷೇತರ ಸದಸ್ಯರಿದ್ದರು. ಕಾಂಗ್ರೆಸ್ಗೆ ತನ್ನದೇ ಪಕ್ಷದ 10 ಮತಗಳ ಜೊತೆಗೆ ಇಬ್ಬರು ಪಕ್ಷೇತರರು ಮತ್ತು ಒಬ್ಬ ಎಂಎಲ್ಸಿಯ ಮತ ಸಿಗುವ ನಿರೀಕ್ಷೆಯಿದೆ.
ಕಾಂಗ್ರೆಸ್ನಲ್ಲಿ ಮೇಯರ್ ಸ್ಥಾನಕ್ಕೆ ಅರ್ಹತೆ ಪಡೆದಿರುವ ಎಸ್ಸಿ ಮಹಿಳೆ ವಿಭಾಗಕ್ಕೆ ಸೇರಿದ ಇಬ್ಬರು ಸದಸ್ಯರಿದ್ದಾರೆ. ಪ್ರಭಾವತಿ ಸುಧೀಶ್ವರ್ ಮತ್ತು ರೂಪಶ್ರೀ ನಡುವೆ ತೀವ್ರ ಪೈಪೋಟಿಯಿದೆ. ಪಭಾವತಿ ಪತಿ ಸುಧೀಶ್ವರ್ ಈ ಹಿಂದೆ ಮೇಯರ್ ಆಗಿದ್ದರು. ರೂಪಶ್ರೀಗೆ ಉಪಮೇಯರ್ ಆಗಿದ್ದ ಅನುಭವ ಇದೆ. ಒಂದು ವರ್ಷದ ಮೇಯರ್ ಅಧಿಕಾರ ಅವಧಿಯನ್ನು ಇಬ್ಬರ ನಡುವೆ ತಲಾ ಆರು ತಿಂಗಳು ಅಧಿಕಾರ ಹಂಚಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ ಪಕ್ಷದ ವಿರೋಧವೂ ಇಲ್ಲ ಎಂದು ಹೇಳಲಾಗಿದೆ.
ಪ್ರಭಾವತಿ ಸುಧೀಶ್ವರ ಅವರೇ ಮೊದಲ ಹಂತದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಉಪಮೇಯರ್ ಹುದ್ದೆಗೆ ಬಿಸಿಎಂ-ಎ ವರ್ಗಕ್ಕೆ ಮೀಸಲಾತಿ ಘೋಷಿಸಲಾಗಿದೆ. 23ನೇ ವಾರ್ಡ್ನ ಜೆಡಿಎಸ್ ಸದಸ್ಯ ತಿಗಳ ಸಮುದಾಯದ ಟಿ.ಕೆ.ನರಸಿಂಹ ಮೂರ್ತಿ ಉಪ-ಮೇಯರ್ ಆಗುವ ಸಾಧ್ಯತೆಯಿದೆ. 20ನೇ ವಾರ್ಡ್ನ ಎ.ಶ್ರೀನಿವಾಸ್, 3ನೇ ವಾರ್ಡ್ನ ಲಕ್ಷ್ಮೀನರಸಿಂಹರಾಜು ಆಕಾಂಕ್ಷಿಗಳಾಗಿದ್ದರು.
12 ಗಂಟೆಗೆ ನಾಮಪತ್ರ ಸಲ್ಲಿಕೆ
ತುಮಕೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಇಂದು (ಸೆಪ್ಟೆಂಬರ್ 9) ಮಧ್ಯಾಹ್ನ 12ರಿಂದ 1 ಗಂಟೆಯೊಳಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮೇಯರ್-ಉಪಮೇಯರ್ ಆಯ್ಕೆಗಾಗಿ ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. ನಿಯಮಗಳಂತೆ ನಾಮಪತ್ರ ಪರಿಶೀಲನೆ, ಉಮೇದುದಾರಿಕೆ ಹಿಂಪಡೆಯುವ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕೈ ಎತ್ತುವ ಮೂಲಕ ಮತದಾನ ನಡೆಸಲಾಗುತ್ತದೆ ಎಂದು ಮಹಾನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
Published On - 9:13 am, Fri, 9 September 22