ನೆಲಮಂಗಲ, ಸೆ.8: ಕಿರುತೆರೆ ನಟ ಸಂಪತ್ ಜಯರಾಮ್ (Sampath Jayaram) ಆತ್ಮಹತ್ಯೆ ಮಾಡಿಕೊಂಡ ನಾಲ್ಕು ತಿಂಗಳ ಬಳಿಕ ತಂದೆ ಜಯರಾಮ್ ಅವರು ಸಾವಿನ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಂಪತ್ ಪತ್ನಿ ಚೈತನ್ಯ ಭಾರದ್ವಜ್ ಮತ್ತು ಚೈತನ್ಯ ತಂಗಿ ತೇಜಸ್ವಿನಿ, ಅಮರೇಶ್, ಜಯಲಕ್ಷ್ಮಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಕೋರಿದ್ದಾರೆ.
ಕಿರುತೆರೆ ನಟ ಸಂಪತ್ ಜಯರಾಮ್ ಅವರು ಅರಿಶಿನಕುಂಟೆಯಲ್ಲಿರುವ ತಮ್ಮ ಮನೆಯಲ್ಲಿ ಏಪ್ರಿಲ್ 23 ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ನೆಲಮಂಗಲ ಟೌನ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಲಾಗಿತ್ತು.
ಆತ್ಮಹತ್ಯೆ ನಡೆದು ನಾಲ್ಕು ತಿಂಗಳ ಬಳಿಕ ಠಾಣೆ ಮೆಟ್ಟಿಲೇರಿದ ಸಂಪತ್ ತಂದೆ ಜಯರಾಮ್, ತನ್ನ ಮಗನನ್ನು ಉದ್ದೇಶಪೂರ್ವಕವಾಗಿ ಚಿತ್ರಹಿಂಸೆ, ಮಾನಸಿಕ ಒತ್ತಡ, ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಾರೆ. ಸಾವಿನ ನಂತರ ಸಂಪತ್ ಪತ್ನಿ ಚೈತನ್ಯ ಭಾರಧ್ವಾಜ್ ಅವರ ಸಂಶಯಾಸ್ಪದ ವರ್ತನೆ ಮತ್ತು ನಡತೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಜಯರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಗಳಮುಖಿಯರ ವಿರುದ್ಧ ಹೆಚ್ಚಾದ ಸಾರ್ವಜನಿಕರ ದೂರು: ಠಾಣೆಗೆ ಕರೆಸಿ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ನೆಲಮಂಗಲ ಇನ್ಸ್‌ಪೆಕ್ಟರ್
ಆತ್ಮಹತ್ಯೆ ಹಿಂದೆ ಸಂಪತ್ ಪತ್ನಿ ಚೈತನ್ಯ ಭಾರದ್ವಜ್ ಮತ್ತು ಚೈತನ್ಯ ತಂಗಿ ತೇಜಸ್ವಿನಿ, ಅಮರೇಶ್, ಜಯಲಕ್ಷ್ಮಿ ಅವರ ಮೇಲೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಕೂಲಂಕುಷವಾಗಿ ಮಗನ ಸಾವಿನ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಜಯರಾಮ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಂಪತ್ ಪತ್ನಿ ಚೈತನ್ಯ ಭಾರದ್ವಜ್ ಮತ್ತು ಚೈತನ್ಯ ತಂಗಿ ತೇಜಸ್ವಿನಿ, ಅಮರೇಶ್, ಜಯಲಕ್ಷ್ಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸಂಪತ್ ಜಯರಾಮ್ ಅವರಿಗೆ ಸೂಕ್ತ ಅವಕಾಶ ಇಲ್ಲದೇ ಕಂಗಾಲಾಗಿದ್ದರು ಎನ್ನಲಾಗುತ್ತಿತ್ತು. ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಅವರು ಏಪ್ರಿಲ್ 22 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಸಾವಿಗೆ ನಟರೂ ಆಗಿರುವ ಸ್ನೇಹಿತ ರಾಜೇಶ್ ಧ್ರುವ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದರು.
ಸಂಸಾರದಲ್ಲಿ ಸಣ್ಣ ಪುಟ್ಟ ಜಗಳ ಇದ್ದಿದ್ದೆ. ಆದರೆ ಹುಡುಗಾಟಿಕೆಯಲ್ಲಿ ಈ ಘಟನೆ ಆಗಿದೆ ಅಷ್ಟೇ. ಯಾರು ಕೂಡ ಇಲ್ಲಸಲ್ಲದ ಊಹಾಪೋಹ ಹರಡಬೇಡಿ. ಗಂಡ-ಹೆಂಡತಿ ನಡುವೆ ಚಿಕ್ಕ ಜಗಳ ಆಗಿದೆ. ನಾನು ಸಾಯುತ್ತೇನೆ ಎಂದು ಹೆದರಿಸಲು ಹೋಗಿ ಅದು ಲಾಕ್ ಆಗಿದೆ” ಎಂದು ಸಂಪತ್ ಆಪ್ತ ನಟ ರಾಜೇಶ್ ಧ್ರುವ ಅವರು ಇತ್ತೀಚೆಗೆ ವಿಡಿಯೋದಲ್ಲಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ