ಸನಾತನ ಧರ್ಮದ ಬಗ್ಗೆ ಮಾತಾಡಿದವರಿಗೆ ಕುಷ್ಠರೋಗ ಮತ್ತು ಏಡ್ಸ್ ಹತ್ತಿದೆ: ಬಸನಗೌಡ ಪಾಟೀಲ್ ಯತ್ನಾಳ್
ಧಮ್ಮು, ತಾಕತ್ತು ಇದ್ದರೇ ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಶ್ನಿಸಿ. ಈಗ ಮಾತಡುವವರೆಲ್ಲ ಸನಾತನ ಧರ್ಮದಲ್ಲಿ ಜನಿಸಿದ್ದಾರೆ. ಮೊಘಲರು, ಔರಂಗಜೇಬ್ ಸೇರಿ ಅನೇಕರು ದಾಳಿ ಮಾಡಿದ್ದಾರೆ. ಅವರಿಂದಲೇ ನಮ್ಮ ಭಾರತವನ್ನು ಇಸ್ಲಾಮೀಕರಣ ಮಾಡಲು ಆಗಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ರಾಯಚೂರು: ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udayanidhi Stalin) ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸನಾತನ ಧರ್ಮದ ಬಗ್ಗೆ ಮಾತಾಡಿದವರಿಗೆ ಕುಷ್ಠರೋಗ ಮತ್ತು ಏಡ್ಸ್ ಹತ್ತಿದೆ. ಯಾರೋ ಒಬ್ಬ ಸಚಿವ ಸನಾತನ ಧರ್ಮದ (Sanatana Dharma) ಹುಟ್ಟು ಎಲ್ಲಿ ಅಂತಾನೆ. ಆ ಮಂತ್ರಿ ಯಾರಿಗೆ ಹುಟ್ಟಿದ್ದಾರೆ ಅವರಿಗೆ ಗೊತ್ತಿಲ್ಲ. ಇಂಥವರೆಲ್ಲಾ ನಮ್ಮ ಸನಾತನ ಧರ್ಮದ ಬಗ್ಗೆ ಏನು ಪ್ರಶ್ನೆ ಮಾಡ್ತಾರೆ ಎಂದು ಪರೋಕ್ಷವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಟೀಲ್ ಯತ್ನಾಳ್ (Basangouda Patil Yatnal) ವಾಗ್ದಾಳಿ ಮಾಡಿದರು.
ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಧಮ್ಮು, ತಾಕತ್ತು ಇದ್ದರೇ ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಬಗ್ಗೆ ಪ್ರಶ್ನಿಸಿ. ಈಗ ಮಾತಡುವವರೆಲ್ಲ ಸನಾತನ ಧರ್ಮದಲ್ಲಿ ಜನಿಸಿದ್ದಾರೆ. ಮೊಘಲರು, ಔರಂಗಜೇಬ್ ಸೇರಿ ಅನೇಕರು ದಾಳಿ ಮಾಡಿದ್ದಾರೆ. ಅವರಿಂದಲೇ ನಮ್ಮ ಭಾರತವನ್ನು ಇಸ್ಲಾಮೀಕರಣ ಮಾಡಲು ಆಗಲಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ನಾಶದ ಸ್ಥಿತಿಯಲ್ಲಿದೆ, ಮೊದಲಿನ ರೀತಿ ಇಲ್ಲ. ಇವೆಲ್ಲಾ ಕೆಟ್ಟ ಹುಳುಗಳು ಹೊರಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸನಾತನ ಧರ್ಮಕ್ಕೆ ಯಾರೂ ಸ್ಥಾಪಕರಿಲ್ಲ. ಇದಕ್ಕೆ ಅಂತ್ಯ ಇಲ್ಲ. ಇದು ಶಾಶ್ವತ, ಇದು ಅನಂತ. ಇದು ನಮ ದೇಶದ ಸಂಸ್ಕೃತಿ. ಐದು ಸಾವಿರ ವರ್ಷಗಳ ಹಿಂದೆ ರಾಯಾಯಣ ಆಗಿದೆ. ಮೂರುವರೆ ಸಾವಿರ ವರ್ಷಗಳ ಹಿಂದೆ ಮಹಾಭಾರತ ಆಗಿದೆ. ಅದರ ಹಿಂದೆಯೂ ಸನಾತನ ಧರ್ಮ ಇದೆ. ಮೂಲ ಹುಡುಕಲು ಸಾಧ್ಯವಿಲ್ಲ. ಇದು ದೇವರ ಸೃಷ್ಟಿ ಎಂದು ತಿಳಿಸಿದರು.
ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಹೇಳಿಕೆ ವಿವಾದ: ತಕ್ಕ ಉತ್ತರ ನೀಡಬೇಕು ಎಂದ ನರೇಂದ್ರ ಮೋದಿ
ಸಮಾನತೆ ಇಲ್ಲ ಅಂತಾರೆ, ಹಾಗಾದರೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಿಸರ್ವೇಶನ್ ಮೇಲೆಯೇ ದೇಶದ ಕಾನೂನು ಮಂತ್ರಿಗಳಾದ್ರಾ? ಅರ್ಹತೆ ಯೋಗ್ಯತೆ ಮೇಲೆ ಆದರು. ವಾಲ್ಮೀಕಿ ಅವರು ರಾಮಾಯಣ ಬರೆದರು. ಅವಾಗ ಎಲ್ಲಿ ಜಾತಿ ಪದ್ದತಿ ಇತ್ತು. ವೇದವ್ಯಾಸರು ಮಹಾಭಾರತ ಬರೆದರು. ನಮ್ಮ ದೇಶದ ಸಂವಿಧಾನದ ಉಳಿಯಲು, ಸನಾತನ ಧರ್ಮ ಬೇಕೇ ಬೇಕು ಅದು ಉಳಿಯಬೇಕು. ಇಲ್ಲದಿದ್ದರೇ ಭಾರತ ಇಸ್ಲಾಮೀಕರಣ ಆದರೆ, ಜಿಹಾದಿ ಆಗತ್ತೆ ಎಂದು ಕಳವಳ ವ್ಯಕ್ತಪಡಿಸಿದರು.
ಸುಭಾಷ್ ಚಂದ್ರ ಬೋಸ್ ಹಂತಕರು ಕಾಂಗ್ರೆಸ್ನವರು; ಯತ್ನಾಳ್
ಬಿಜೆಪಿ ಗಾಂಧಿಜಿ ಅವರನ್ನು ಕೊಂದ ಗೋಡ್ಸೆ ಕಡೆಯವರು ಅಂತ ಕೆಲ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಂತಕರು ಕಾಂಗ್ರೆಸ್ನವರು. ದೇಶಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದಿದ್ದೇ ಕಾಂಗ್ರೆಸ್. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವು ಈವರೆಗೂ ಪ್ರಶ್ನಾರ್ಥಕವಾಗಿದೆ. ಅವರದ್ದು ಕೊಲೆಯೋ, ವಿಮಾನದಲ್ಲಿ ಸಾವಾಯ್ತಾ ಅಂತ ಕಾಂಗ್ರೆಸ್ನವರು ಇನ್ನೂ ಮುಚ್ಚಿಟ್ಟಿದ್ದಾರೆ. ನೆಹರುನೇ ಸುಭಾಷ್ ಚಂದ್ರ ಬೋಸ್ ಅವರನ್ನ ಹತ್ಯೆ ಮಾಡಿಸಿದ್ದಾನೆ ಅಂತ ಬಹಳಷ್ಟು ಜನ ಮಾತನಾಡ್ತಾರೆ ಎಂದು ಹೇಳಿದ್ದಾರೆ.
ರೈತರ ಆತ್ಮಹತ್ಯೆ ವಿಚಾರದಲ್ಲಿ ಕೆಲ ಕಾಂಗ್ರೆಸ್ ನಾಯಕರಿಂದ ಬೇಜವಾಬ್ದಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಐದು ಲಕ್ಷ ರೂ. ಸಿಗುತ್ತವೆ ಅಂತ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ನಮ್ಮ ವಿಜಯಪುರ ಜಿಲ್ಲೆಯ ಮಂತ್ರಿ ಹೇಳಿದ್ದಾರೆ. ಹೀಗೆ ಎಷ್ಟು ಬೇಜವಾಬ್ದಾರಿಯಿಂದ ಮಾತನಾಡ್ತಾರೆ. ಐದು ಲಕ್ಷಕ್ಕೆ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ನಾನು ಚಾಲೆಂಜ್ ಮಾಡುತ್ತೇನೆ, ನಾನು ಆ ಮಂತ್ರಿಗೆ ಕೇಳುತ್ತೇನೆ ನಿನಗೆ ಐದು ಕೋಟಿ ಕೊಡುತ್ತೇನೆ ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ ಎಂದು ಸವಾಲು ಹಾಕಿದರು.
ನೀನು ಬಹಳ ಶ್ರೀಮಂತ ಇದ್ದಿಯಾ. ನಿನಗೆ 25 ಕೋಟಿ ರೂ. ಕೊಡುತ್ತೇನೆ ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ ? ಆತ್ಮಹತ್ಯೆ ಮಾಡಿಕೊ ನೋಡೊಣ. ಜೀವನದಲ್ಲಿ ಸುಧಾರಣೆ ಸಾಧ್ಯವಿಲ್ಲ ಅಂದಾಗ, ಕೊನೆಗೆ ದಾರಿ ಇಲ್ಲದೇ ರೈತ ಮತ್ತು ಆತನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತೆ. ಹೀಗೆ ಕಾಂಗ್ರೆಸ್ನವರು ಹಗುರವಾಗಿ ಮಾತನಾಡುತ್ತಿದ್ದಾರೆ. 135 ಸೀಟು ಬಂದ ಮೇಲೆ ಅಹಂಕಾರ ಬಂದಿದೆ. ಆಕಾಶದಲ್ಲಿದ್ದಾರೆ. ಇಂದಿರಾಗಾಂಧಿ ಅನ್ನುವ ಸರ್ವಾಧಿಕಾರಿ, ದೇಶದ ಪ್ರಜಾತಂತ್ರದಲ್ಲಿ ಆಗಿ ಹೋಗಿದ್ದಾರೆ. ಇನ್ನು ಇವರು ಯಾವ ಲೆಕ್ಕ ಎಂದು ಕಿಡಿ ಕಾರಿದರು.
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅವರು ನಮಗೆ ಅಧಿಕೃತ ಮಾಹಿತಿಯಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಏನಾಗಿದೆಯೋ ಗೊತ್ತಿಲ್ಲ. ದೇವೆಗೌಡರು ಭೇಟಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿದೆ. ದೇವೆಗೌಡರು ಕೂಡ ದೇಶದ ಮಾಜಿ ಪ್ರಧಾನಿಗಳು. ಹೀಗಾಗಿ ಅವರ ಹಂತದಲ್ಲಿ ನಡೆದಿರುತ್ತೆ. ಅದರ ನಮಗೆ ಗೊತ್ತಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ