TV9 Digital Live: ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಹೇಳಿಕೆಯ ವಿಡಿಯೋ ಬಿಡುಗಡೆ; ಹೊಸ ತಿರುವು ಪಡೆದ ಕೇಸ್

| Updated By: guruganesh bhat

Updated on: Mar 18, 2021 | 5:36 PM

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಅವರ ಹೇಳಿಕೆ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಕೇಸ್ ಹೊಸ ತಿರುವು ಪಡೆಯುತ್ತಿದೆ ಈ ಕುರಿತಂತೆ ಟಿವಿ9 ಕನ್ನಡ ಡಿಜಿಟಲ್​ ಚರ್ಚೆ ನಡೆಸಿದೆ.

TV9 Digital Live: ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಹೇಳಿಕೆಯ ವಿಡಿಯೋ ಬಿಡುಗಡೆ; ಹೊಸ ತಿರುವು ಪಡೆದ ಕೇಸ್
ಹಿರಿಯ ವಕೀಲರು ಪಿ.ಪಿ ಹೆಗ್ಗಡೆ, ಆ್ಯಂಕರ್​ ಹರಿಪ್ರಸಾದ್ ಮತ್ತು ಟಿವಿ9 ಕನ್ನಡ ವರದಿಗಾರ ರಮೇಶ್
Follow us on

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ರೂವಾರಿ ಎಂದು ಶಂಕಿಸಲಾದ ನರೇಶ್​ ಗೌಡ ಅವರ ಹೇಳಿಕೆ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಈ ಕೇಸ್ ಹೊಸ ತಿರುವು ಪಡೆಯುತ್ತಿದೆ. ಈಗ ಎಲ್ಲರೂ ಕಾಯುತ್ತಿರುವುದು ಆ ಸಂತ್ರಸ್ತೆಯ ಹೇಳಿಕೆಗಾಗಿ. ಅವಳು ಏನು ಹೇಳುತ್ತಾಳೆ ಎಂಬುದು ಇದೀಗ ಎಲ್ಲರಲ್ಲೂ ಮನೆ ಮಾಡಿದೆ. ಈ ವಿಷಯದ ಕುರಿತಾಗಿ ಇಂದು ಗುರುವಾರ (ಮಾರ್ಚ್  18)  ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸಲಾಗಿದೆ. ಟಿವಿ9 ವರದಿಗಾರ ರಮೇಶ್, ಹಿರಿಯ ವಕೀಲರು ಪಿ.ಪಿ ಹೆಗ್ಗಡೆ ಹಾಗೂ ನಿವೃತ್ತ ಪೊಲೀಸ್​ ವರಿಷ್ಠಾಧಿಕಾರಿ ಬಸವರಾಜ್​ ಮಾಲಗತ್ತಿಯವರು ಭಾಗಿಯಾದರು. ಆ್ಯಂಕರ್​ ಹರಿಪ್ರಸಾದ್ ಈ​ ಚರ್ಚೆಯನ್ನು ನಡೆಸಿಕೊಟ್ಟರು.

ವಿಡಿಯೋ ಬಿಡುಗಡೆ ಮಾಡಿದ ತಕ್ಷಣ ನರೇಶ್​ ಆರೋಪದಿಂದ ಮುಕ್ತರಾಗಿಬಿಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟಿವಿ9 ಕನ್ನಡದ ವರದಿಗಾರ ರಮೇಶ್, ವಿಡಿಯೋ ಬಿಡುಗಡೆ ಸಾಕಷ್ಟು ಗೊಂದಲ ಸೃಷ್ಟಿಸುತ್ತದೆ. ಇದೀಗ ನರೇಶ್ ಎಂಬುವವರು ಹರಿಬಿಟ್ಟ ವಿಡಿಯೋ ಗೊಂದಲ ಸೃಷ್ಟಿಸುತ್ತಿದೆ. ಒಟ್ಟಾರೆಯಾಗಿ ಈ ಸಂಗತಿಯನ್ನು ಗಮನಿಸಿದಾಗ, ಯುವತಿಯ ಮುಖ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಆಗಿದ್ದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಬೇಕಿದೆ. ನಿಜಕ್ಕೂ ಲೈಂಗಿಕ ದೌರ್ಜನ್ಯ ಆಗಿದೆಯೋ ಅಥವಾ ರಾಜಕೀಯ ಷಡ್ಯಂತ್ರವೋ ಎಂಬುದು ತಿಳಿಯಬೇಕಿದೆ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ಹೊರಬಂದು ಸ್ಟೇಟ್​ಮೆಂಟ್​ ಕೊಟ್ಟು ಈ ಕುರಿತಂತೆ ನಿಜವಾದ ಸತ್ಯ ಹೇಳಿದರೆ ಮಾತ್ರ ಪ್ರಕರಣ ಒಂದು ಹಂತ ತಲುಪಲು ಸಾಧ್ಯ. ಸಿಡಿಯನ್ನು ಯಾರು ಹರಿಬಿಟ್ಟರು ಎನ್ನುವುದೂ ತಿಳಿಯಬೇಕಿದೆ. ಇದರಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯವಾದದ್ದು. ನಿಜವಾಗಿಯೂ ಸತ್ಯದ ಸಂಗತಿ ಏನು ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕಿದೆ ಎಂದರು. ನರೇಶ್​ ಹೇಳಿದಂತೆ ಮಹಿಳೆ ನನಗೆ ಗೊತ್ತು, ಅವಳ ಪರಿಚಯ ಇದೆ ಮಾತು ಕುತೂಹಲ ಸೃಷ್ಟಿಸುತ್ತಿದೆ. ಇಷ್ಟೆಲ್ಲಾ ಘಟನೆ ನಡೆದರೂ ಕೂಡಾ ಮಹಿಳೆಯನ್ನು ಕರೆತಂದು ಏಕೆ ದೂರುಕೊಟ್ಟಿಲ್ಲ ಎಂಬ ಪ್ರಶ್ನೆ ಎದುರಾಗಿದೆ. ಕೊನೆಯದಾಗಿ ಮಹಿಳೆ ಏನು ಹೇಳುತ್ತಾಳೆ, ಆಕೆ ದೂರು ಕೊಟ್ಟ ನಂತರದಲ್ಲಿ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗಬೇಕಿದೆ ಎಂದರು.

ತನಿಖೆಯ ವಿಚಾರಕ್ಕೆ ನರೇಶ್ ಮಾತು ಯಾವ ರೀತಿಯಲ್ಲಿ ಸಹಾಯವಾಗಬಹುದು ಎಂಬ ಪ್ರಶ್ನೆಗೆ ಹಿರಿಯ ವಕೀಲರಾದ ಪಿ.ಪಿ ಹೆಗ್ಡೆ ಮಾತನಾಡಿ, ಸಾರ್ವನಿಕರಿಗೆ ಕುತೂಹಲ ಏನು ಅಂದರೆ ಸತ್ಯ. ನಿಜವಾದ ಸಂಗತಿ ಏನಿರಬಹುದು ಎಂಬ ಕುತೂಹಲ. ಮೇಲ್ನೋಟಕ್ಕೆ ಇದನ್ನು ಅಂದಾಜಿಸಲು ಸಾಧ್ಯವಿಲ್ಲ.  ವಿಧಿವಿಜ್ಞಾನ ಪ್ರಯೋಗಕ್ಕೆ ಕಳುಹಿಸಿ ಇದು ಸತ್ಯವೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ನಿಜವಾದ ಸಂಗತಿ ಅರಿಯಬೇಕಾದರೆ ಮೂಲ ಸಿಡಿ ಸಿಗಬೇಕು. ಸತ್ಯ ತಿಳಿಯಬೇಕು. ಹಾಗಿದ್ದಾಗ ಮೂಲ ಸಿಡಿ ಎಲ್ಲಿದೆ ಎಂಬುದರ ಪ್ರಶ್ನೆ ಎದುರಾಗುತ್ತದೆ ಎಂದರು.

ಮಹಿಳೆಯ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಹೇಳಿದರೆ, ಆ ಹೇಳಿಕೆಯ ಮೇಲೆ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಎಫ್​ಐಆರ್ ದಾಖಲಿಸಬೇಕಾಗುತ್ತದೆ. ತನಿಖಾಧಿಕಾರಿಗಳ ಪಾತ್ರ ದೊಡ್ಡದು. ಬಂಧನ ಎಂಬುದು ಪೊಲೀಸರ ಅಧಿಕಾರ. ಬಂಧಿಸುವ ಮೊದಲು ತೀರ್ಮಾನಿಸಬೇಕು. ಸತ್ಯವೋ ಸುಳ್ಳೋ ಎಂಬುದು ಸರಿಯಾಗಿ ತಿಳಿಯಬೇಕು. ಆರೋಪಿ ಯಾವ ಪಕ್ಷ, ಇದರಲ್ಲಿ ಯಾರ್ಯಾರು ಇದ್ದಾರೆ ಎಂಬುದರ ಕುರಿತು ಪೊಲೀಸರು ಸರಿಯಾದ ತೀರ್ಮಾನ ಕೈಗೊಳ್ಳಬೇಕಿದೆ. ಮಹಿಳೆಯ ಹಿಂದೆ ಯಾರಾದರೂ ಷಡ್ಯಂತರ ನಡೆಸಿದ್ದಾರೆಯೇ? ಹಣದ ಮೋಹ ತೋರಿಸಿದ್ದಾರೆಯೇ ಎಂಬುದನ್ನು ತಿಳಿಯಬೇಕಿದೆ. ಸಿಡಿ ನಕಲಿ ಎಂಬುದರ ಪ್ರಶ್ನೆ ಬರುವುದಿಲ್ಲ. ಯಾರೋ ಹೇಳಿದರು ಅನ್ನುವ ಕಾರಣಕ್ಕೆ ನಕಲಿ ಎನ್ನಲೂ ಸಾಧ್ಯವಿಲ್ಲ. ಜೊತೆಗೆ ಬೆದರಿಕೆಯೂ ಇರಬಹುದು ಈ ಕುರಿತಂತೆ ಸರಿಯಾಗಿ ತನಿಖೆ ನಡೆಯಬೇಕಿದೆ ಎಂದರು. ಒಬ್ಬರ ಮೇಲೆ ಆರೋಪ ಬಂದಾಗ ಆರೋಪ ಸುಳ್ಳೂ ಆಗಿರಬಹುದು, ಸತ್ಯವೂ ಆಗಿರಬಹುದು. ಆರೋಪ ಅಂದಾಕ್ಷಣ ಯಾರಿಗಾದರೂ ಭಯ ಆಗುತ್ತದೆ. ಮಾನಹಾನಿ ಆಗಬಹುದು ಎಂಬ ಆತಂಕವಿರುತ್ತದೆ. ಹಾಗಂದ ಮಾತ್ರಕ್ಕೆ ಆತ ಆರೋಪಿಯೇ ಎಂಬುದಲ್ಲ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಳ್ಳಲು ಆತ ಅಡಗುತ್ತಿದ್ದಾನೆ ಅಂದಾದರೆ ಆತನಿಗೆ ಭಯವೇ ಹೊರತು ಆತನೇ ಆರೋಪ ಎಂಬುದಲ್ಲ.

ಬಸವರಾಜ ಮಾಲಗತ್ತಿ ಮಾತನಾಡಿ, ನೇರವಾಗಿ ಬಂದು ಪೊಲೀಸರ ಮುಂದೆ ಬಂದು ದೂರುಕೊಡಬೇಕು. ಅದರ ಬದಲು ವಿಡಿಯೋ ಮಾಡಿಕೊಂಡು ಹೇಳುತ್ತಿರುವ ವಿಚಾರಗಳು ಗೊಂದಲ ಸೃಷ್ಟಿಸುತ್ತಿದೆ. ಭಯವಿದೆ ಎಂದಾದರೆ ವಕೀಲರೊಂದಿಗೆ ಬಂದು ಹಾಜರಾಗಲಿ. ಸಾಕ್ಷಿ ಇರುವುದನ್ನು ಹಾಜರು ಮಾಡಿ ಸತ್ಯಾಂಶವನ್ನು ಹೇಳಲಿ. ಅಲ್ಲಿಗೆ ನಿಜಾಂಶ ಹೊರಬೀಳುತ್ತದೆ. ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. ಅದು ಬಿಟ್ಟು ಪ್ರಕರಣಕ್ಕೆ ಇನ್ನೂ, ಹೆಚ್ಚಿನ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಲ್ಲೆಲ್ಲೋ ಕೂತು ವಿಡಿಯೋ ಮಾಡಿ ಹರಿಬಿಡುತ್ತ ಅಡಗಿ ಕೂತವರು ಪೊಲೀಸರ ಕೈಗೆ ಸಿಕ್ಕೇ ಸಿಗುತ್ತಾರೆ ಎಂದರು.

ಮಹಿಳೆಯ ಹೇಳಿಕೆಯ ಮೇಲೆ ಎಲ್ಲವೂ ನಿಂತಿದೆ. ಅವಳ ಹೇಳಿಕೆಯ ನಂತರ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯ. ತನಿಖೆ ನಡೆಯುತ್ತಿದೆ. ಎಲ್ಲಾ ಸತ್ಯಾಂಶ ತಿಳಿಯುತ್ತದೆ. ಎಲ್ಲಾ ವಿಷಯದ ಕುರಿತಾಗಿ ಮಹಿಳೆ ದೂರು ಕೊಡಬೇಕಿದೆ. ಎದುರು ಬಂದು ಮಾತನಾಡಬೇಕಿದೆ. ಎಲ್ಲಾ ನಡೆಯುತ್ತಿರುವ ಸಂಗತಿಯನ್ನು ನೋಡುತ್ತಿದ್ದರೆ ಗೊಂದಲ ಸೃಷ್ಟಿಯಾಗುತ್ತಿದೆ. ಎಲ್ಲೋ ಕುಳಿತು ವಿಡಿಯೋ ಮಾಡಿ ಹರಿಬಿಡುವುದರ ಮೂಲಕ ನೇರವಾಗಿ ಬಂದು ದೂರು ಕೊಡಲಿ ಎಂದುವಿವರಿಸಿದರು.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ‘ಸಿಡಿ’ ಮಾಸ್ಟರ್​ ಮೈಂಡ್​ ಮನೆ ಮೇಲೆ ಎಸ್​ಐಟಿ ಅಧಿಕಾರಿಗಳ ದಾಳಿ

ಇದನ್ನೂ ಓದಿ: ಮಾಡಬಾರದ ಕೆಲಸ ಮಾಡಿದ್ದು ರಮೇಶ್ ಜಾರಕಿಹೊಳಿ, ನನ್ನದು ಎಳ್ಳಷ್ಟೂ ಪಾತ್ರವಿಲ್ಲ; ತನಿಖಾಧಿಕಾರಿಗಳ ಮುಂದೆಯೂ ಇದನ್ನೇ ಹೇಳುವೆ- ವಿಡಿಯೋದಲ್ಲಿ ನರೇಶ್