ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 06-01-2021
LIVE NEWS & UPDATES
-
ಮಂಗಳೂರು ಏರ್‌ಪೋರ್ಟ್‌ನಲ್ಲಿ 1.2 ಕೆಜಿ ಚಿನ್ನ ಜಪ್ತಿ
ಮಂಗಳೂರು ಏರ್‌ಪೋರ್ಟ್‌ನಲ್ಲಿ 1.2 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಚಿನ್ನವನ್ನು ಪೇಸ್ಟ್‌ನಂತೆ ಮಾಡಿ ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. 67 ಲಕ್ಷ ರೂಪಾಯಿ ಮೌಲ್ಯದ 1.2 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.
-
ಭೀಕರ ರಸ್ತೆ ಅಪಘಾತಕ್ಕೆ ಮೂವರು ಬಲಿ
ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನ ಕೆಂಗೇರಿಯ ರೇಣುಕಮ್ಮ(55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವು(43), ಶಂಕರ್(42) ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
-
ಪಿಯುಸಿ- ಎಸ್ಎಸ್ಎಲ್ಸಿ ತಾತ್ಕಾಲಿಕ ಪರೀಕ್ಷಾ ದಿನಾಂಕ ಪ್ರಕಟ
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮೇ2 ನೇ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ. SSLC ಜೂನ್ ಮೊದಲ ವಾರದಲ್ಲಿ ಪರೀಕ್ಷಾ ದಿನಾಂಕ ನಿಗದಿ ಆಗಿದೆ. ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ದಿನಾಂಕ ನಾಳೆ ಪ್ರಕಟಗೊಳ್ಳಲಿದೆ. ಪರೀಕ್ಷೆ ಸಂಬಂಧಿಸಿದ ಸಿಲಬಸ್ ಕೂಡ ಬಿಡುಗಡೆಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿ ಎಸಿಬಿ ತೆಕ್ಕೆಗೆ
ಜಮೀನು ವಿಚಾರವಾಗಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪಿಡಿಒ ಭ್ರಷ್ಟಾಚಾರ ವಿರೋಧಿ ಬ್ಯೂರೋ (ಎಸಿಬಿ) ಬಲೆಗೆ ಬಿದ್ದಿದ್ದಾರೆ. ಶಿವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಪುಷ್ಪಾ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದವರು. ಜಮೀನು ವಿಚಾರಕ್ಕೆ ಸಂಬಂಧಿಸಿ ಸಾಗರ ಹೂಗಾರ ಎಂಬುವವರ ಬಳಿ ಪುಷ್ಪಾ ತನ್ನ ಗಂಡ ಮಹಾಂತೇಶ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಥಿಯೇಟರ್ಗಳಲ್ಲಿ 100 ಸೀಟು ತುಂಬಿಸುವ ನಿರ್ಧಾರ ಕೈಬಿಡುವಂತೆ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದ ಅಜಯ್ ಭಲ್ಲಾ
6:39 pm ಸಿನಿಮಾ ಹಾಲ್ಗಳಲ್ಲಿ ಶೇ.100ರಷ್ಟು ಆಸನ ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರಕ್ಕೆ ಅಜಯ್ ಭಲ್ಲಾ ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿ ಉಲ್ಲಂಘನೆಯಾಗಲಿದೆ. ಕೇಂದ್ರ ಸರಕಾರ ಶೇ 50% ಪೇಕ್ಷಕರಿಗೆ ಮಾತ್ರ ಅವಕಾಶ ನೀಡಿದೆ. ಹೀಗಾಗಿ ಯಾವುದೇ ಕಾರಣಕ್ಕೂ ನಿಯಮ ಮುರಿಯದಂತೆ ತಮಿಳುನಾಡು ಮುಖ್ಯ ಕಾರ್ಯದರ್ಶಿಗೆ ಅಜಯ್ ಭಲ್ಲಾ ಸೂಚನೆ ನೀಡಿದ್ದಾರೆ.
ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ದುರ್ಮರಣ
6:22 pm ಚಿತ್ರದುರ್ಗ ತಾಲೂಕಿನ ಕ್ಯಾದಿಗ್ಗೆರೆ ಬಳಿ ನಿಂತಿದ್ದ ಟ್ಯಾಂಕರ್ ಲಾರಿಗೆ ಓಮಿನಿ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಓಮಿನಿ ವ್ಯಾನ್ನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ರಾ.ಹೆ 4ರಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಿಮಪಾತಕ್ಕೆ ಸಿಲುಕಿದ್ದ 20 ಕುಟುಂಬಗಳನ್ನು ರಕ್ಷಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು
6:17 pm ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕುಲ್ಗಾಂನಲ್ಲಿ ಹಿಮಪಾತ ಪೀಡಿತ ಪ್ರದೇಶದಿಂದ 20 ಕುಟುಂಬಗಳನ್ನು ರಕ್ಷಿಸಿ, ಸರ್ಕಾರದ ಪುನರ್ವಸತಿ ಕೇಂದ್ರಗಳಿಗೆ ರವಾನೆ ಮಾಡಿದ್ದಾರೆ. ಜೊತೆಗೆ ಸೊಪೋರ್ನಲ್ಲಿ ಮೃತ ದೇಹವನ್ನು ಸಾಗಿಸುತ್ತಿದ್ದ ವಾಹನ ಹಿಮಪಾತಕ್ಕೆ ಸಿಲುಕಿ ಮುಂದೆ ಹೋಗಲಾಗದೆ ಅಲ್ಲಿಯೇ ನಿಂತಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು, ವಾಹನ ಅಲ್ಲಿಂದ ತೆರಳಲು ಸಹಕರಿಸಿದರು.
Jammu and Kashmir Police rescued 20 families from an avalanche-prone area in Kulgam and also facilitated a vehicle carrying a dead body in Sopore. All the families have been rehabilitated in Govt. Middle School Merasi Nallah: J&K Police pic.twitter.com/K7chkJc3pr
— ANI (@ANI) January 6, 2021
ಜಮೀನು ವಿಚಾರವಾಗಿ ಲಂಚ ಪಡೆಯುತ್ತಿದ್ದ PDO ಎಸಿಬಿ ಬಲೆಗೆ ಬಿದಿದ್ದಾರೆ
6:08 pm ಶಿವಳ್ಳಿ ಗ್ರಾ.ಪಂ. ಪಿಡಿಒ ಪುಷ್ಪಾ, ಎಸಿಬಿ ಅಧಿಕಾರಿಗಳ ಬಲೆಗೆ ಬಿದಿದ್ದು, ತನ್ನ ಗಂಡ ಮಹಾಂತೇಶ್ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜಮೀನು ಎನ್.ಎ. ಸಲುವಾಗಿ ಲಂಚ ಕೇಳಿದ್ದ ಪುಷ್ಪಾ, ಸಾಗರ ಹೂಗಾರ ಬಳಿ ₹20 ಸಾವಿರ ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದಿದ್ದಾರೆ.
ದೇಶದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ
5:57 pm ದೇಶದಲ್ಲಿ ಇಂದು ಇಬ್ಬರಿಗೆ ರೂಪಾಂತರಿ ಕೊರೊನಾ ತಗುಲಿದ್ದು, ದೇಶದಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಎನ್‌ಸಿಡಿಸಿ ದೆಹಲಿ 8, ಐಜಿಐಬಿ ದೆಹಲಿ 20 ,ಎನ್‌ಸಿಬಿಜಿ ಕಲ್ಯಾಣಿ ಕೋಲ್ಕತ್ತಾ 1 ಪ್ರಕರಣ, ಎನ್‌ಐವಿ ಪುಣೆ 30, ಸಿಸಿಎಂಬಿ ಹೈದರಾಬಾದ್ 3, ಹಾಗೂ ನಿಮ್ಹಾನ್ಸ್ ಬೆಂಗಳೂರಿನಲ್ಲಿ 11 ರೂಪಾಂತರಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಎಲ್ಲಾ ರಾಜ್ಯಗಳು ಹಕ್ಕಿ ಜ್ವರದ ಬಗ್ಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ ಕೇಂದ್ರ ಸರ್ಕಾರ
5:53 pm ದೇಶದಲ್ಲಿ ಪಕ್ಷಿ ಜ್ವರ ವ್ಯಾಪಿಸುತ್ತಿರುವ ಹಿನ್ನೆಲೆಯಿಂದಾಗಿ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಹಕ್ಕಿ ಜ್ವರ ಮನುಷ್ಯರಿಗೂ, ಇತರ ಪ್ರಾಣಿಗಳಿಗೂ ಹರಡುವ ಸಾಧ್ಯತೆ ಇದೆ ಹೀಗಾಗಿ ಎಲ್ಲಾ ರಾಜ್ಯಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. H5N1 ವೈರಸ್ ಹರಡದಂತೆ ತಡೆಗಟ್ಟುವ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ
ರಾಜ್ಯದ 18 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಆರೋಗ್ಯ ಸಚಿವ ಸುಧಾಕರ್ ಹೇಳಿಕೆ
5:46 pm ಈ ವರ್ಷ ನಾಲ್ಕು ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಲಾಗುತ್ತದೆ. ಉಳಿದಿರುವ ಈ 2 ವರ್ಷದಲ್ಲಿ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜು ಆರಂಭಿಸುತ್ತೇವೆ. ಜೊತೆಗೆ 2,500 ಸಾವಿರ ವೈದ್ಯರ ನೇರ ನೇಮಕಕ್ಕೆ ಮುಂದಾಗಿದ್ದೇವೆ. ಅಲ್ಲದೆ ಕೊರೊನಾ ಲಸಿಕೆ ನೀಡುವಲ್ಲೂ ಸರ್ಕಾರ ತಯಾರಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ನಟ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿದರು
5:37 pm ಆಪ್ತರ ಮದುವೆ ನಿಮಿತ್ತ ಗೋಕರ್ಣಗೆ ಹೊಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಇದೇ ವೇಳೆ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಹಕ್ಕಿ ಜ್ವರದಿಂದ ನಷ್ಟಕ್ಕೆ ಸಿಲುಕಿರುವ ಕೋಳಿ ಸಾಕಾಣೆದಾರರಿಗೆ ಕೇರಳ ಸರ್ಕಾರ ಪರಿಹಾರ ಘೋಷಿಸಿದೆ
5:30 pm ಹಕ್ಷಿ ಜ್ವರದಿಂದ ನಷ್ಟಕ್ಕೆ ಸಿಲುಕಿರುವ ಕೋಳಿ ಸಾಕಾಣೆದಾರರಿಗೆ ಪರಿಹಾರ ನೀಡಲು ಕೇರಳ ಸರ್ಕಾರ ನಿರ್ಧರಿಸಿದ್ದು, 2 ತಿಂಗಳು ಮೇಲ್ಪಟ್ಟ ಕೋಳಿಗಳಿಗೆ ಸರ್ಕಾರ ತಲಾ 200 ರೂ. ಮತ್ತು 1 ತಿಂಗಳಿಗಿಂತ ಕಡಿಮೆ ವಯಸ್ಸಿನ ಕೋಳಿಗಳಿಗೆ ತಲಾ 100 ರೂ ಪರಿಹಾರ ಘೋಷಿಸಿದೆ.
ಶಿಕ್ಷಣ ಸಚಿವರ ಜೊತೆ ನಡೆಸಿದ ಸಭೆ ಸಫಲವಾಗಿದ್ದು ಪ್ರತಿಭಟನೆಯನ್ನು ರೂಪ್ಸಾ ಕೈಬಿಟ್ಟದೆ
5:21 pm ಸಭೆಯಲ್ಲಿ 14 ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, 14 ಬೇಡಿಕೆಗಳಲ್ಲಿ ಬಹುತೇಕ ಬೇಡಿಕೆಗಳ ಈಡೇರಿಕೆಗೆ ಶಿಕ್ಷಣ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕೆಲ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಹಾಗೂ ಹಣಕಾಸು ಇಲಾಖೆ ಒಪ್ಪಿಗೆ ಅನಿವಾರ್ಯವಾಗಿದ್ದು, ಕೆಲ ಬೇಡಿಕೆಗಳ ಈಡೇರಿಕೆ ಕಷ್ಟವಾಗಿದೆ. ಆದರೆ ರೂಪ್ಸಾ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಮಸ್ಯೆ ಬಗೆಹರಿಸುವ ಭರವಸೆವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದಾರೆ.
ಹಕ್ಕಿ ಜ್ವರ ಭೀತಿ ಹಿನ್ನೆಲೆಯಿಂದಾಗಿ ಎಲ್ಲಾ ಜಿಲ್ಲೆಗಳಲ್ಲಿಯೂ ಹೈ ಅಲರ್ಟ್ ಘೋಷಿಸಿದ ಸಚಿವ ಚೌಹಾಣ್
5:51 pm ರಾಜ್ಯದಲ್ಲೂ ಹಕ್ಕಿ ಜ್ವರ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ರೋಗದ ನಿರ್ವಹಣೆಗೆ ಎಲ್ಲಾ ಜಿಲ್ಲೆಗಳಲ್ಲೂ ತೀವ್ರ ಕಟ್ಟೆಚ್ಚರವಹಿಸುವಂತೆ ಆದೇಶ ಹೊರಡಿಸಲಾಗಿದೆ. ಕೋಳಿಶೀತ ಜ್ವರದ ಸರ್ವೇಕ್ಷಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಇಲಾಖೆ ಅಧಿಕಾರಿಗಳು, ಪಶುವೈದ್ಯರಿಗೆ ಸೂಚಿಸಲಾಗಿದೆ. ಸದ್ಯ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ರೋಗ ಲಕ್ಷಣ ಕಂಡು ಬಂದ್ರೆ ಕ್ರಮಕೈಗೊಳ್ಳಲು ಪ್ರಭು ಚೌಹಾಣ್ ಸೋಚನೆ ನೀಡಿದ್ದಾರೆ.
ಜೆಡಿಎಸ್ ಕಾರ್ಯಕರ್ತನ ಟೀ ಅಂಗಡಿಯಲ್ಲಿ ಮಡಿಕೆ ಟೀ ಕುಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
4:47 pm ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಜೆಡಿಎಸ್ ಕಾರ್ಯಕರ್ತ ಪ್ರತಾಪ್ ಅವರ ಟೀ ಅಂಗಡಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಡಿಕೆ ಟೀ ಕುಡಿದಿದ್ದಾರೆ. ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಹೋಗುವ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಮಡಿಕೆ ಟೀ ಕುಡಿದಿದ್ದಾರೆ. ಇವರ ಜೊತೆ ಶಾಸಕ ಎ.ಮಂಜುನಾಥ್ ಸಾಥ್ ನೀಡಿದ್ದಾರೆ.
ಯುವರಾಜ್ ಜೊತೆ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ
4:30 pm ಯುವರಾಜ್ ಜತೆ ಹಣಕಾಸು ವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಯುವರಾಜ್ ನಮಗೆ 17 ವರ್ಷದಿಂದ ಪರಿಚಯ. ನಮ್ಮ ತಂದೆ ಕಾಲದಿಂದಲೂ ಅವರು ನಮಗೆ ಪರಿಚಯ. ನಮ್ಮ ತಂದೆ ಸಾವಿನ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ದರು. ಆದರೆ ಇವರಿಂದ ಹೀಗೆ ಆಗುತ್ತೆಂದು ಅಂದು ಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ರಿಂದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆ
4:27 pm ತ್ರಿಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ, ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಇಂದು(ಜ.06) ಭೇಟಿ ಮಾಡಿದ್ದಾರೆ.
ಕನಕಪುರ ತಹಶೀಲ್ದಾರರ ವಿರುದ್ಧ ವಕೀಲರ ಸಂಘದಿಂದ ಧರಣಿ
4:16 pm ರಾಮನಗರ ಜಿಲ್ಲೆ ಕನಕಪುರ ತಹಶೀಲ್ದಾರ್ ಕಚೇರಿ ಬಳಿ ವಕೀಲರ ಸಂಘ ಧರಣಿ ಕೈಗೊಂಡಿದ್ದಾರೆ. ತಹಶೀಲ್ದಾರ್ ವರ್ಷಾ ಒಡೆಯರ್ ವಿರುದ್ಧ ಧರಣಿ ನಡೆಯುತ್ತಿದ್ದು, ಕೋರ್ಟ್ ಹಾಲ್ನಿಂದ ವಕೀಲರನ್ನು ಹೊರ ಕಳುಹಿಸಿದ ಹಿನ್ನೆಲೆಯಲ್ಲಿ ವಕೀಲರು ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳಿಂದ ದಾಳಿ
4:08 pm ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ, ಮೆಲ್ಲಹಳ್ಳಿ ಕೆಲ್ಲೂಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ದಾಳಿ ನಡೆಸಿವೆ. ಕಾಡಾನೆಗಳ ದಾಳಿ ಹಿನ್ನೆಲೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಆನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪಂಜಾಬ್ನಲ್ಲಿ ನಾಳೆಯಿಂದ ಶಾಲೆ ಪುನಾರಂಭ
4:04 pm ಪಂಜಾಬ್ನಲ್ಲಿ ನಾಳೆಯಿಂದ(ಜ.07) 5 ರಿಂದ 12ನೇ ತರಗತಿಯವರಿಗೆ ಶಾಲೆಗಳು ಪ್ರಾರಂಭವಾಗಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 3 ರವರೆಗೆ ತರಗತಿಗಳು ನಡೆಯಲಿದೆ.
ಗಿರಿನಾಡು ಯಾದಗಿರಿ ಜಿಲ್ಲೆಗೆ ಆಗಮಿಸಿದ ನಾಡ ದೊರೆ ಬಿ.ಎಸ್ ಯಡಿಯೂರಪ್ಪ
4:00 pm ಯಾದಗಿರಿಯ ನೂತನ ಜಿಲ್ಲಾಸ್ಪತ್ರೆ ಉದ್ಘಾಟಿಸಲಿರುವ ಸಿಎಂ ಯಡಿಯೂರಪ್ಪ, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಹೆಲಿಕಾಪ್ಟರ್ನಿಂದ ಇಳಿದಿದ್ದಾರೆ. ಪೊಲೀಸ್ ಸಿಬ್ಬಂದಿಗಳಿಂದ ಸಿಎಂ ಬಿಎಸ್ವೈಗೆ ಗೌರವ ಸಮರ್ಪಣೆ ನೆರವೇರಿದೆ. ಜಿಲ್ಲಾಸ್ಪತ್ರೆ ಉದ್ಘಾಟನೆ ಬಳಿಕ, ಮೆಡಿಕಲ್ ಕಾಲೇಜು ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಿದ್ದಾರೆ.
ಈಶ್ವರಪ್ಪ ಸಿಎಂ ಆಗಲೇ ಬೇಕು ಎಂದು ಜೈಕಾರ ಹಾಕಿದ ಕಾಂಗ್ರೆಸ್ ಶಾಸಕ ಎಸ್. ರಾಮಪ್ಪ
3:54 pm ದಾವಣಗೆರೆಯ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಎಸ್ಟಿ ಮೀಸಲಾತಿ ಜಾಗೃತಿ ಸಮವೇಶದಲ್ಲಿ ಹರಿಹರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಪಾಲ್ಗೊಂಡಿದ್ದರು. ಈ ವೇಳೆ, ಈಶ್ವರಪ್ಪ ಸಿಎಂ ಆಗಲೇ ಬೇಕು ಎಂದು ಜೈಕಾರ ಹಾಕಿದ್ದಾರೆ. ಐದು ಜನ ಕುರುಬ ಶಾಸಕರು ಸರ್ಕಾರ ರಚನೆಗೆ ಶ್ರಮ ವಹಿಸಿದ್ದಾರೆ. ಅದ್ದರಿಂದ ನಮ್ಮ ಈಶ್ವರಪ್ಪರನ್ನು ಸಿಎಂ ಮಾಡುವಂತೆ ವೇದಿಕೆಯಲ್ಲಿ ಶಾಸಕ ಎಸ್. ರಾಮಪ್ಪ ಒತ್ತಾಯಿಸಿದ್ದಾರೆ.
ಕೇಂದ್ರದ ನೂತನ ಕೃಷಿ ಕಾನೂನು ವಿರುದ್ಧ ಅರ್ಜಿ ಜ.11 ಕ್ಕೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ
3:48 pm ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜನವರಿ 11ರಂದು ಕೈಗೆತ್ತಿಕೊಳ್ಳಲಿದೆ.
ಲವ್ ಜಿಹಾದ್ ಕಾನೂನು ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
3:31 pm ಲವ್ ಜಿಹಾದ್ ಕಾನೂನು ವಿರುದ್ಧದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ, ಕಾನೂನು ಬಗ್ಗೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಇಂದು(ಜ.06) ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಕ್ಕೆ ನೊಟೀಸು ನೀಡಿದೆ.
ವಿದ್ಯಾಗಮ ಯೋಜನೆ ಅಡಿ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್
3:13 pm ರಾಮನಗರ ತಾಲೂಕಿನ ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ವಿದ್ಯಾಗಮ ಯೋಜನೆ ಅಡಿ ವಿದ್ಯಾರ್ಥಿನಿ ಶಾಲೆಗೆ ತೆರಳಿದ್ದಳು. ಜ.1ರಂದು ಕೊವಿಡ್ ಟೆಸ್ಟ್ ಮಾಡಿಸಿದ್ದಳು. ಜ.4ಕ್ಕೆ ಶಾಲೆಗೆ ತೆರಳಿ 18 ವಿದ್ಯಾರ್ಥಿಗಳೊಡನೆ ತರಗತಿಯಲ್ಲಿ ಕುಳಿತಿದ್ದಾಳೆ. ಈ ನಿಟ್ಟಿನಲ್ಲಿ, ಶಾಲೆಯ ಎಲ್ಲಾ ಶಿಕ್ಷಕರಿಗೆ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ: ಸಚಿವ ಸುರೇಶ್ ಕುಮಾರ್ ಮಾತುಕತೆಗೆ ಕರೆ
3:07 pm ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ, ಬೆಳಿಗ್ಗೆಯಿಂದ ಪ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಕುರಿತಂತೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತುಕತೆಗೆ ಕರೆ ನೀಡಿದ್ದಾರೆ. ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸಭೆ ನಡೆಯಲಿದ್ದು, ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸೇರಿದಂತೆ 15 ಜನ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಐದು ದಿನದಿಂದ ಮೂರು ದಿನಕ್ಕಿಳಿದ 2021ರ ಏರೋಶೋ
2:58 pm ಫೆಬ್ರುವರಿ 3 ರಿಂದ 5 ವರೆಗೆ ಏರ್ ಶೋ ನಡೆಯಲಿದೆ. ಪ್ರತಿ ವರ್ಷ 5 ದಿನಗಳ ಕಾಲ ಏರ್ ಶೋ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಕೇವಲ ಬ್ಯಸಿನೆಸ್ ವಿಸಿಟರ್ಸ್ಗೆ ಮಾತ್ರ ಏರ್ ಶೋದಲ್ಲಿ ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2021 ವರ್ಚುವಲ್ ಆಗಿ ನಡೆಯಲಿದೆ: ಮಮತಾ ಬ್ಯಾನರ್ಜಿ
2:50 pm ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2021, ವರ್ಚುವಲ್ ಆಗಿ ನಡೆಯಲಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೆರೆಯೊಂದರಲ್ಲಿ ಸಾಕಿದ್ದ ಲಕ್ಷಾಂತರ ಮೀನುಗಳ ಮಾರಣ ಹೋಮ
2:34 pm ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ವೈ ಮಲ್ಲಾಪುರ ಗ್ರಾಮದ ನಿವಾಸಿ ತಮ್ಮಯ್ಯ ಎಂಬುವವರು ಕೆರೆಯಲ್ಲಿ ಸಾಕಿದ್ದ ಮೀನುಗಳು ಸಾವನ್ನಪ್ಪಿವೆ. ಕೆರೆಗೆ ವಿಷ ಹಾಕಿ ಕಿಡಿಗೇಡಿಗಳು ಇಂತಹ ಕ್ರೌರ್ಯ ಎಸಗಿದ್ದರ ಪರಿಣಾಮ, ಲಕ್ಷಾಂತರ ಮೀನುಗಳು ನಾಶವಾಗಿದೆ.
PM ನರೇಂದ್ರ ಮೋದಿ ಅವರನ್ನು ಕರೆಯಿಸಿ ನೂತನ ಅನುಭವ ಮಂಟಪ ಉದ್ಘಾಟನೆ: ಸಿಎಂ ಯಡಿಯೂರಪ್ಪ
2:28 pm ಪೂರ್ವಜನ್ಮದ ಪುಣ್ಯಫಲದಿಂದ ನೂತನ ಅನುಭವ ಮಂಟಪಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಎರಡು ವರ್ಷದೊಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು.ಇನ್ನೇನು ಟೆಂಡರ್ ಪಕ್ರಿಯೆ ಪ್ರಾರಂಭವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ನೂತನ ಅನುಭವ ಮಂಟಪ ಉದ್ಘಾಟನೆ ಮಾಡಲಾಗುವದು ಎಂದು ಬಸವ ಕಲ್ಯಾಣದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಕುಮಟಾ ಮದುವೆಯೊಂದರಲ್ಲಿ ಪಾಲ್ಗೊಂಡ ಪುನೀತ್ರನ್ನು ನೋಡಿ ಮುಗಿ ಬಿದ್ದ ಜನ
2:23 pm ಉತ್ತರಕನ್ನಡ ಜಿಲ್ಲೆ ಕುಮಟಾ ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿ ಗುರುರಾಜ್ ವಿವಾಹ ಸಂಭ್ರಮದಲ್ಲಿ ನಟ ಪುನೀತ್ ರಾಜ್‍ಕುಮಾರ್ ದಂಪತಿ ಆಗಮಿಸಿದ್ದಾರೆ. ಗುರುರಾಜ್, ಪುನೀತ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು.ಮದುವೆಯಲ್ಲಿ ಪುನೀತ್ರನ್ನು ನೋಡಿದ ಜನ ಮುಗಿಬಿದ್ದಿದ್ದಾರೆ.
ಒಡಿಶಾದ ರೂರ್ಕೆಲಾ ಸ್ಟೀಲ್ ಪ್ಲಾಂಟ್ ಘಟಕದಿಂದ ವಿಷಕಾರಿ ಅನಿಲ ಸೋರಿಕೆ: ನಾಲ್ವರ ಮೃತದೇಹ ಪತ್ತೆ
2:13 pm ಒಡಿಶಾದ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ನ ಕಲ್ಲಿದ್ದಲು ರಾಸಾಯನಿಕ ಘಟಕದಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಾಗೂ 6 ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಜ.8ರಂದು ಆರ್ಥಿಕ ತಜ್ಞರ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ
2:01 pm ಜನವರಿ 8 ಶುಕ್ರವಾರ ಆರ್ಥಿಕ ತಜ್ಞರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಮುಂದಿನ ಬಜೆಟ್ ಕುರಿತಂತೆ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ. ಜೊತೆಗೆ, ದೇಶದ ಆರ್ಥಿಕ ಚೇತರಿಕೆಯ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯಾಗಮ ಪ್ರಾರಂಭದಲ್ಲೇ ವಿಘ್ನ!
1:53 pm ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಈ ವರೆಗೆ 5,229 ಜನ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ 9 ಜನ ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಮತ್ತೆ ಇಂದು(ಜ.06) ನಾಲ್ಕು ಜನರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದನ್ನು ಡಿಡಿಪಿಐ ಹರೀಶ್ ಗಾವಕರ್ ದೃಢಪಡಿಸಿದ್ದಾರೆ.
ಕೊರೊನಾ ಲಸಿಕೆ ನೀಡಿಕೆಗೆ ಕಾನೂನಿನ ರಕ್ಷಣೆ ನೀಡಿ: ಕೇಂದ್ರಕ್ಕೆ ಲಸಿಕೆ ತಯಾರಿಕಾ ಕಂಪನಿಗಳಿಂದ ಮನವಿ
1:47 pm ಸಾಮಾನ್ಯ ಸಂದರ್ಭದಲ್ಲಿ ಲಸಿಕೆಯಿಂದ ತೊಂದರೆಯಾದರೆ ಲಸಿಕೆ ತಯಾರಿಕಾ ಕಂಪನಿಗಳೇ ಪರಿಹಾರ ನೀಡಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾದರೆ ಕೋರ್ಟ್ ಮೆಟ್ಟಿಲೇರಿ ಪರಿಹಾರ ಕೋರದಂತೆ ರಕ್ಷಣೆ ನೀಡಬೇಕು ಎಂದು ಕೇಂದ್ರಕ್ಕೆ ಲಸಿಕೆ ತಯಾರಿಕಾ ಕಂಪನಿಗಳು ಮನವಿ ಮಾಡಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 3 ದಿನ ಮಳೆ ಸಾಧ್ಯತೆ
1:33 pm ದಕ್ಷಿಣ ಒಳನಾಡಿನಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಜ.06 ರಿಂದ ಜ.8 ರವರೆಗೂ ಮೋಡಕವಿದ ವಾತಾವರಣದ ಜೊತೆ, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ C.S ಪಾಟೀಲ್ ಮಾಹಿತಿ ನೀಡಿದ್ದಾರೆ.
ಪಕ್ಷಿ ಜ್ವರ ಹಿನ್ನೆಲೆ: ರಂಗನತಿಟ್ಟು ಪಕ್ಷಿಧಾಮದಲ್ಲಿ ಕಟ್ಟೆಚ್ಚರ
1:28 pm ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ಜ್ವರದ ಕುರಿತಂತೆ ಎಚ್ಚರವಹಿಸಲಾಗಿದೆ. ಪಕ್ಷಿಧಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಡಿಯಂ ಹೈಪರ್ ಕ್ಲೋರೈಡ್ ಸಿಂಪಡಣೆ ಮಾಡಲಾಗಿದೆ. ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್‌ಕುಮಾರ್ ಪಕ್ಷಿಧಾಮಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಪ್ರತಿಭಟನೆ
12:34 pm ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಬಿಜೆಪಿ ರಾಜ್ಯ ಕಾರ್ಯದರ್ಶಿ ಸತೀಶ್ ರೆಡ್ಡಿ ಪ್ರತಿಭಟನೆ ಕೈಗೊಂಡಿದ್ದಾರೆ. ಆಂಧ್ರದಲ್ಲಿ ಮತಾಂತರ ಮತ್ತು ದೇವಾಲಯಗಳನ್ನು ನಾಶಪಡಿಸಲು ಜಗನ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆಯೆಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಕಾರ್ಯಕ್ರಮ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ
12:15 pm ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲಾಗಿದೆ. ಜೊತೆಗೆ, ಬ್ರಾಹ್ಮಣ ಮಂಡಳಿಯ ವಿವಿಧ ಯೋಜನೆಯ ಲೋಕಾರ್ಪಣೆಯನ್ನು ಹಮ್ಮಿಕೊಂಡಿದೆ. ಸಚಿವ ಆರ್ ಅಶೋಕ್, ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಅಶ್ವತ್ಥ ನಾರಾಯಣ, ಸುರೇಶ್ ಕುಮಾರ್ ಸೇರಿದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಟೀಮ್ ಇಂಡಿಯಾದಲ್ಲಿ ನವದೀಪ್ ಸೈನಿಗೆ ಸ್ಥಾನ
12:50 pm ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 3 ನೇ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸದಸ್ಯರ ಪಟ್ಟಿ ಪ್ರಕಟ. ರಹಾನೆ(ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಸಿ. ಪೂಜಾರ, ಎಚ್ ವಿಹಾರಿ, ಆರ್.ಪಂತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಜೆ ಬುಮ್ರಾ, ಎಂ ಸಿರಾಜ್, ನವದೀಪ್ ಸೈನಿ.
ಶ್ರೀನಗರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಪ್ರಮಾಣದ ಹಿಮಪಾತದ ಮಧ್ಯೆ ಜನರ ಜೀವನ ಸಾಗುತ್ತಿದೆ
11:59 am ದಟ್ಟವಾದ ಹಿಮಪಾತದಿಂದ ಶ್ರೀನಗರ, ಜಮ್ಮು ಮತ್ತು ಕಾಶ್ಮೀರ ರಸ್ತೆಗಳು ಮುಚ್ಚಿ ಹೋಗಿದ್ದವು. ಭಾರೀ ಪ್ರಮಾಣದ ಹಿಮಪಾತದ ಮಧ್ಯೆಯೂ ಅಲ್ಲಿನ ಜನರ ದಿನನಿತ್ಯದ ಜೀವನ ಸಾಗುತ್ತಿದೆ.
#WATCH | Residents go about their daily lives, as a thick blanket of snow covers Srinagar, in Jammu and Kashmir, after a heavy spell of snowfall pic.twitter.com/FJzMKeX3T2
— ANI (@ANI) January 6, 2021
PM ನರೇಂದ್ರ ಮೋದಿ ಕೋವಿಡ್ ಲಸಿಕೆ ಮೊದಲು ತೆಗೆದುಕೊಳ್ಳಲಿ: ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹ
11:49 am ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಲಸಿಕೆ ಮೊದಲು ತೆಗೆದುಕೊಳ್ಳಲಿ. ಲಸಿಕೆ ತೆಗೆದುಕೊಂಡು ದೇಶದಲ್ಲಿ ಇರುವ ಗೊಂದಲ ನಿವಾರಣೆ ಮಾಡಲಿ. ಜನರಿಗೆ ಆತ್ಮಸ್ಥೈರ್ಯ ತುಂಬಲಿ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದ್ದಾರೆ.
ನಾನು ಜೆಡಿಎಸ್ಗೆ ಸೇರ್ಪಡೆಯಾಗುತ್ತಿದ್ದೇನೆ: ಕಾಂಗ್ರೆಸ್ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿಕೆ
11:40 am ಕಾಂಗ್ರೆಸ್ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಜೆಡಿಎಸ್ಗೆ ಹೋಗುತ್ತಿದ್ದೇನೆ ಎಂದು ಶಾಸಕರ ಭವನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡುತ್ತಿದ್ದ ಅವರು, ಏನೋ ಆಗಬೇಕು ಎಂದು ಜೆಡಿಎಸ್ಗೆ ಸೇರುತ್ತಿಲ್ಲ. ಜನತಾ ಪರಿವಾರ ಒಗ್ಗೂಡಿಸುವ ಉದ್ದೇಶದಿಂದ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್
11:27 am ಅನಾರೋಗ್ಯದ ಕಾರಣದಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ಆರೋಗ್ಯ ಸುಧಾರಿಸಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ಕೊಲ್ಕತ್ತಾ ವುಡ್ಲ್ಯಾಂಡ್ ಆಸ್ಪತ್ರೆ ಮಾಹಿತಿ ನೀಡಿದೆ.
ಪೊಲ್ಲಾಚಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್ಗೆ ಸಂಬಂಧಿಸಿ ಮೂವರ ಬಂಧನ
11:15 am 2019ರಲ್ಲಿ ಪೊಲ್ಲಾಚಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಕೇಸ್ಗೆ ಸಂಬಂಧಿಸಿದಂತೆ ಎಐಎಡಿಎಂಕೆ ಮುಖಂಡ ಸೇರಿ ಮೂವರು ಆರೋಪಿಗಳ ಬಂಧಿಸಲಾಗಿದೆ. ಮೂವರಿಗೂ ಜನವರಿ 20ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿಂದು ನೂತನ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ
10:16 am ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಇಂದು(ಜ.06) ಬೃಹತ್ ಕಾರ್ಯಕ್ರಮ ನಡೆಯಲಿದೆ. 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಶಂಕುಸ್ಥಾಪನೆ ಮಾಡಲಿದ್ದಾರೆ.
ದೋಸೆ, ಚಟ್ನಿಗೆ ವಿಷ ಬೆರೆಸಿ ನನ್ನನ್ನು ಹತ್ಯೆಗೈಯ್ಯಲು ಸಂಚು: ಇಸ್ರೋದ ಹಿರಿಯ ವಿಜ್ಞಾನಿ ತಪನ್ ಮಿಶ್ರಾ ಆರೋಪ
11:01 am ದೋಸೆ, ಚಟ್ನಿಯಲ್ಲಿ ಆರ್ಸೆನಿಕ್ ಟ್ರಯಾಕ್ಸೈಡ್ ವಿಷ ಬೆರೆಸಿ ನನ್ನನ್ನು ಹತ್ಯೆ ಮಾಡುವ ಯತ್ನ ನಡೆದಿತ್ತು ಎಂದು ಇಸ್ರೋದ ಹಿರಿಯ ವಿಜ್ಞಾನಿ ತಪನ್ ಮಿಶ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಂತೆ ಕೇಂದ್ರ ಸರ್ಕಾರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಇಂದು ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ
10:24 am ರಾಧಿಕಾ ಕುಮಾರಸ್ವಾಮಿ ಖಾತೆಗೆ ಯುವರಾಜ್ ಹಣ ವರ್ಗಾವಣೆ ಕೇಸ್ಗೆ ಸಂಬಂಧಿಸಿದಂತೆ ಇಂದು(ಜ.06) ಮಧ್ಯಾಹ್ನ 2.30ಕ್ಕೆ ರಾಧಿಕಾ ಕುಮಾರಸ್ವಾಮಿ ಹಾಗೂ ಯುವರಾಜ್ ಡಾಲರ್ಸ್ ಕಾಲನಿ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಪಕ್ಷಿ ಜ್ವರ ರಾಜ್ಯ ವಿಪತ್ತು: ಕೇರಳ ಸರ್ಕಾರದಿಂದ ಘೋಷಣೆ
09:55 am ಕೇರಳದಲ್ಲಿ ಪಕ್ಷಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಪಕ್ಷಿ ಜ್ವರ ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದೆ. ರೋಗ ಹರಡುವಿಕೆಯನ್ನು ತಡೆಗಟ್ಟಲು 12,000ಕ್ಕೂ ಹೆಚ್ಚು ಪಕ್ಷಿಗಳನ್ನು ನಾಶಪಡಿಸಲಾಗಿದೆ. ಅಂತೆಯೇ, ಮೈಸೂರಿನಲ್ಲಿ ಪಕ್ಷಿ ಜ್ವರ ಭೀತಿ ಆತಂಕ ಮನೆ ಮಾಡಿದೆ. ಕಳೆದ ಮಾರ್ಚ್‌ನಲ್ಲಿ ಪಕ್ಷಿ ಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ಬಂದ್ ಮಾಡಲಾಗಿತ್ತು. ಇದೀಗ, ಮತ್ತೆ ಪಕ್ಷಿ ಜ್ವರದಿಂದ ಮೃಗಾಲಯದ ಕಡೆ ಹೆಚ್ಚು ಎಚ್ಚರಿಕೆ ವಹಿಸಲಾಗುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 18,088 ಹೊಸ ಕೋವಿಡ್ ಕೇಸ್ ಪತ್ತೆ
09:40 am ಕೇಂದ್ರ ಆರೋಗ್ಯ ಸಚೀವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ, 18,088 ಹೊಸ ಕೋವಿಡ್ ಕೇಸ್ ಪತ್ತೆಯಾಗಿದೆ. ಅವರಲ್ಲಿ 21,314 ಗುಣಮುಖರಾಗಿದ್ದಾರೆ ಹಾಗೂ 264 ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತ ವರದಿ ಮಾಡಿದೆ.
ಇಂದೋರ್‌ನಲ್ಲಿ 155 ಹಸುಗಳು ಸಾವು
09:23 am ಮಧ್ಯಪ್ರದೇಶದ ಇಂದೋರ್‌ನಲ್ಲಿ ಹಸುಗಳಿಗೆ ‘H5N8’ ವೈರಸ್ ತಗುಲಿದೆ. ಈ ವೈರಸ್ನಿಂದಾಗಿ ಸರಿಸುಮಾರು 155 ಹಸುಗಳು ಮೃತಪಟ್ಟಿವೆ.
ಸೋನಿಯಾ ಗಾಂಧಿ ಮತ್ತು ಮಾಯಾವತಿಗೆ ಭಾರತರತ್ನ ನೀಡುವಂತೆ ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮನವಿ
09:09 am ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿಗೆ ಭಾರತ್ ರತ್ನ ನೀಡಲು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಭಾರತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಚೆನ್ನೈನಲ್ಲಿ ಮತ್ತೆ ಮೂವರಿಗೆ ರೂಪಾಂತರಿ ಕೊರೊನಾ ಪತ್ತೆ
08.52 am ಚೆನ್ನೈನಲ್ಲಿ ಮತ್ತೆ ಮೂವರಿಗೆ ರೂಪಾಂತರಿ ಕೊರೊನಾ ಪತ್ತೆಯಾಗಿದೆ. ಇದುವರೆಗೆ ಒಟ್ಟು 4 ಜನರಿಗೆ ರೂಪಾಂತರಿ ಸೋಂಕು ತಗುಲಿದೆ ಎಂದು ತಮಿಳುನಾಡು ಆರೋಗ್ಯ ಕಾರ್ಯದರ್ಶಿ ಡಾ. ರಾಧಾಕೃಷ್ಣನ್ ಅವರು ಹೇಳಿದ್ದಾರೆ.
3 more people have tested positive for UK variant of Covid-19 in Chennai. So far, 4 people have tested positive for the new variant of the virus: Tamil Nadu Health Secretary Dr Radhakrishnan in Chennai yesterday pic.twitter.com/rEbhtJNVO7
— ANI (@ANI) January 6, 2021
ಫ್ರೀಡಂಪಾರ್ಕ್‌ನಲ್ಲಿಂದು ರುಪ್ಸಾ ಪ್ರೊಟೆಸ್ಟ್, 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆ
08:17 am ರಾಜ್ಯದಲ್ಲಿ 12,800 ಖಾಸಗಿ ಶಾಲೆಗಳನ್ನು ಹೊಂದಿರುವ ರುಪ್ಸಾ ಒಕ್ಕೂಟ ಸರ್ಕಾರದ ವಿರುದ್ಧ ಇಂದು ಮತ್ತೊಮ್ಮೆ ಹೋರಾಟಕ್ಕಿಳಿಯಲು ಸಜ್ಜಾಗುತ್ತಿದೆ. ಈ ಹಿಂದೆ ಖಾಸಗಿ ಶಾಲೆಗಳು ಆನ್ಲೈನ್ ಕ್ಲಾಸ್ ಬಂದ್ ಮಾಡಿದ್ರು. ಆದರೆ ಪ್ರತಿಭಟನೆಗಿಳಿಯುವ ಮುನ್ನ ಶಿಕ್ಷಣ ಸಚಿವರು ರುಪ್ಸಾ ಪದಾಧಿಕಾರಿಗಳನ್ನು ಕರೆದು ಬೇಡಿಕೆಗಳು ಈಡೇರಿಸಲಾಗವುದು ಎಂದು ಭರವಸೆ ನೀಡಿದ್ದರು. ಆದರೆ ಇದರಲ್ಲಿ ಕೆಲ ಬೇಡಿಕೆ ಈಡೇರಿಸುವುದಾಗಿ ಸುಮ್ಮನಾಗಿಬಿಟ್ಟರು. ಇದರಿಂದಾಗಿ ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಇಂದು 10 ಗಂಟೆಗೆ ಮೌರ್ಯ ಸರ್ಕಲ್ ನಿಂದ ಪ್ರೀಡಂಪಾರ್ಕ್ ವರೆಗೆ ಬೃಹತ್ ಱಲಿ ಮಾಡಿ, ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದಾರೆ. ಈ ಹೋರಾಟದಲ್ಲಿ ರಾಜ್ಯದ 30 ಜಿಲ್ಲೆಗಳಿಂದ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರು, 10 ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರಂತೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಾಯಿ ವರಲಕ್ಷ್ಮೀ ಗುಂಡೂರಾವ್ ವಿಧಿವಶ
08:15 am ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಆರ್.ಗುಂಡೂರಾವ್ ಪತ್ನಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ತಾಯಿ ವರಲಕ್ಷ್ಮೀ ಗುಂಡೂರಾವ್ (72) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ವರಲಕ್ಷ್ಮೀ ನಿನ್ನೆ ರಾತ್ರಿ(ಜ.05) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಬುಧವಾರ(ಜ.06) ದೇವನಹಳ್ಳಿ ತೋಟದಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ.
ನಮ್ಮ ಓದುಗರಿಗೆ ಹೊಸ ವರ್ಷದ ಶುಭ ಹಾರೈಕೆಗಳು. ನಿಮ್ಮ ಓದು ನಮ್ಮ ಹುಮ್ಮಸ್ಸು. ಹೊಸ ಯೋಚನೆಗೆ ತಿದಿಯೊತ್ತುವ ಈ ಸಮಯದಲ್ಲಿ ನಾವು ಟಿವಿ9 ಕನ್ನಡ ಡಿಜಿಟಲ್ Live Blog ಪ್ರಾರಂಭಿಸಿದ್ದೇವೆ. ಸುತ್ತಲಿನ ಗದ್ದಲದಿಂದ ದೂರ ಕುಳಿತು ಕ್ಷಣ ಕ್ಷಣದ ಸುದ್ದಿ ಓದುವ, ನೋಡುವ ಅವಕಾಶ ನಿಮಗೆ. ಹಳ್ಳಿಯಿಂದ ದಿಲ್ಲಿಯೇನು ಇಡೀ ಪ್ರಪಂಚದ ಸುದ್ದಿ ಟಿವಿ9 ಕನ್ನಡ ಡಿಜಿಟಲ್ Live Blog ನಲ್ಲಿ ಪ್ರತಿ ದಿನ ಹರಿದು ಬರಲಿದೆ. ಬನ್ನಿ ಇಂದಿನ ಸುದ್ದಿಯ ಹರಿವನ್ನು ಆನಂದಿಸೋಣ.
Published On - Jan 07,2021 9:35 AM