ಮನೆ ಮುಂದೆ ನಿಂತಿದ್ದ ಮಗುವಿನ ಮೇಲೆ ನಾಯಿ ದಾಳಿ ಮಾಡಿದ ಘಟನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ಗುಟ್ಟೆಪಾಳ್ಯದಲ್ಲಿ ನಡೆದಿದೆ. ಮಂಜುನಾಥ್ ಹಾಗೂ ಭಾರತಿ ದಂಪತಿಯ 3 ವರ್ಷದ ಮಗು ಶ್ರೇಯಸ್ ಎಂಬವರಿಗೆ ಬೀದಿ ನಾಯಿ ಕಚ್ಚಿದೆ. ಬೀದಿ ನಾಯಿ ಹೆಚ್ಚಳದಿಂದಾಗಿ ಸ್ಥಳೀಯರಿಗೆ ತೀವ್ರ ಸಂಕಷ್ಟ ಉಂಟಾಗಿದ್ದು, ನೆಲಮಂಗಲ ನಗರ ಸಭೆ ವಿರುದ್ಧ ಸ್ಥಳೀಯರ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ನಿವಾಸದಿಂದ ಶಾಸಕ ಅರವಿಂದ್ ಬೆಲ್ಲದ್ ತೆರಳಿದ್ದಾರೆ. ನಾಳೆ ನಿಮಗೆ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿ ಅರವಿಂದ್ ಬೆಲ್ಲದ್ ತೆರಳಿದ್ದಾರೆ. ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ನಡೆಸಿ ಹಿಂತಿರುಗಿದ್ದಾರೆ.
ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ರೂಪಾಂತರಿ ಕೊರೊನಾ ದೃಢಪಟ್ಟಿದೆ. ಇಂಗ್ಲೆಂಡ್ನಿಂದ ಬಂದಿದ್ದ ಇಬ್ಬರಿಗೆ ರೂಪಾಂತರಿ ಸೋಂಕು ತಗುಲಿರುವ ಬಗ್ಗೆ ಖಚಿತವಾಗಿದೆ. ರೂಪಾಂತರಿ ಸೋಂಕಿತರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮೂಲಕ, ರಾಜ್ಯದಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಹೊಸ ಸಚಿವರ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಹೊಸ ಮಂತ್ರಿಗಳ ಪಟ್ಟಿಯ ಬಗ್ಗೆ ಯಡಿಯೂರಪ್ಪ ಸಮಾಲೋಚನೆಯಲ್ಲಿದ್ದಾರೆ. ಶಾಸಕ ಮುನಿರತ್ನ, ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಎಸ್.ಆರ್.ವಿಶ್ವನಾಥ್ ಹಾಜರಿದ್ದಾರೆ. ಸಂಜೆ 7 ಗಂಟೆಯಿಂದ ಸಂಪುಟದ ಬಗ್ಗೆ ಸಿಎಂ ಸಮಾಲೋಚನೆ ನಡೆಸುತ್ತಿದ್ದಾರೆ.
ನಕಲಿ ನೋಟ್ ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಸೂರ್ಯಸಿಟಿ ಪೊಲೀಸರಿಂದ, ತಮಿಳುನಾಡು ಮೂಲದ ಸುರೇಶ್ ಹಾಗೂ ನರೇಶ್ ಎಂಬವರ ಬಂಧನವಾಗಿದೆ. ಬಂಧಿತರಿಂದ ನೋಟ್ ಮುದ್ರಣ ಯಂತ್ರ, ರೂಪಾಯಿ 6 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. 100, 200, 500 ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ನಾಳೆ ಬೆಳಗ್ಗೆ 9.30ಕ್ಕೆ ಬೆಂಗಳೂರಿಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ, 3.45ಕ್ಕೆ ರಾಜಭವನದಲ್ಲಿ ನಡೆಯುವ, ಸಚಿವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 7 ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಲಿದ್ದಾರೆ.
ಅಕ್ರಮವಾಗಿ ಸಾಗಿಸುತ್ತಿದ್ದ 250 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಪಟ್ಟಣ, ಮಹಾಲಿಂಗಪುರ ಬಳಿ ಆಹಾರ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ನರಗುಂದದಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಲಾರಿ ಹಾಗೂ ಲಾರಿ ಚಾಲಕ ಯಾಕೂಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಮಂತ್ರಿ ಅಧಿಕೃತ ನಿವಾಸ ‘ಕಾವೇರಿ’ಗೆ ಸಚಿವರು, ಸಂಸದರು ಭೇಟಿ ನೀಡಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಬೆಲ್ಲದ ಯಡಿಯೂರಪ್ಪ ಜೊತೆ ಮಾತುಕತೆಗೆ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಸಚಿವರು, ಸಂಸದರು, ಶಾಸಕರು ಚರ್ಚೆ ನಡೆಸಲಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ಸಮಾಜ ಕಲ್ಯಾಣ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿ ಬಲೆಗೆ ಬಿದ್ದಿದ್ದಾರೆ. ತಾಲೂಕಿನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ ಹಾಗೂ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಶ್ರೀನಿವಾಸ್ ಎಸಿಬಿ ಕೈಗೆ ಸಿಕ್ಕವರು. ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ನೀಡಲು, ಶಿವಪ್ಪ ಎಂಬವರಿಂದ 10,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ, ಎಸಿಬಿ ಡಿವೈಎಸ್ಪಿ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆಗ, ಸಮಾಜ ಕಲ್ಯಾಣ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ರೇಣುಕಾಚಾರ್ಯಗೆ ನಿರಾಸೆ ಉಂಟಾಗಿದೆ. ಸಿಟ್ಟಾದ ರೇಣುಕಾಚಾರ್ಯರನ್ನು ಸಮಾಧಾನ ಮಾಡಲು, ಯಡಿಯೂರಪ್ಪ ಪುತ್ರ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೊನ್ನಾಳಿಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆ ತೀವ್ರ ಬೇಸರದಲ್ಲಿದ್ದ ರೇಣುಕಾಚಾರ್ಯ ಜೊತೆ ಒಂದು ಗಂಟೆ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಅಧಿಕೃತ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಜೊತೆ ಸಿ.ಪಿ.ಯೋಗೇಶ್ವರ್ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಅಧಿಕೃತ ನಿವಾಸಕ್ಕೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಭೇಟಿ ನೀಡಿದ್ದಾರೆ. ಯಡಿಯೂರಪ್ಪ ಜೊತೆ ಶಾಸಕ ಮುನಿರತ್ನ ಮಾತುಕತೆ ನಡೆಸುತ್ತಿದ್ದಾರೆ.
ಸಂಪುಟಕ್ಕೆ ಹೊಸದಾಗಿ 7 ಶಾಸಕರ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಯಾರಿಗೆ ಸಚಿವಸ್ಥಾನ ನೀಡಬೇಕೆಂದು ಪಕ್ಷ ನಿರ್ಧಾರ ಮಾಡುತ್ತದೆ. ಯಾರಿಗೆ ಯಾವ ಖಾತೆ ಎಂದು ಮುಖ್ಯಮಂತ್ರಿ, ವರಿಷ್ಠರು ನಿರ್ಧರಿಸುತ್ತಾರೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದವರಿಗೆ ಅವಕಾಶ ನೀಡಬೇಕಾಗುತ್ತದೆ. ಪಕ್ಷವು ಹಿರಿಯ ನಾಯಕರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನಾಳೆ ಮಧ್ಯಾಹ್ನ 3.50ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ರಾಜಭವನದ ಗಾಜಿನಮನೆಯಲ್ಲಿ ಪ್ರತಿಜ್ಞಾವಿಧಿ ಸಮಾರಂಭ ನಡೆಯಲಿದೆ. ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.
ಕೊವಿಡ್-19 ವ್ಯಾಕ್ಸಿನ್ ಕೊವಿಶೀಲ್ಡ್ನ ಮೊದಲ ಲಸಿಕೆ ಪಂಜಾಬ್ನ ಮೊಹಲಿಗೆ ತಲುಪಿದೆ.
ಚಿಲ್ಲರೆ ಹಣದುಬ್ಬರವು 2020ರ ನವೆಂಬರ್ನಲ್ಲಿ ಶೇಕಡಾ 6.93ರಷ್ಟಿದ್ದರೆ, ಇದು ಡಿಸೆಂಬರ್ನಲ್ಲಿ ಶೇಕಡಾ 4.59ರಷ್ಟಿತ್ತು ಆ ಮೂಲಕ ಚಿಲ್ಲರೆ ಹಣದುಬ್ಬರವು ಒಂದು ತಿಂಗಳೊಳಗೆ ಸಾಕಷ್ಟು ಇಳಿಕೆ ಕಂಡಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ತಜ್ಞರ ಸಮಿತಿ ರಚನೆಯಾದ ನಂತರ ನಡೆಯುವ ಮೊದಲ ವಿಚಾರಣೆಯ ಎರಡು ತಿಂಗಳುಗಳೊಳಗೆ ಶಿಫಾರಸನ್ನು ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ತಜ್ಞರ ಸಮಿತಿಗೆ ಹೇಳಿದೆ.
ಈಗಾಗಲೇ ಸಚಿವ ಸ್ಥಾನ ಖಚಿತ ಆಗಿರುವವರಿಗೆ ತಿಳಿಸಿದ್ದೇನೆ. ಸಣ್ಣಪುಟ್ಟ ವ್ಯತ್ಯಾಸ ಇರುವುದನ್ನು ಅವರಿಗೆ ತಿಳಿಸಿದ್ದೇನೆ. ಜೊತೆಗೆ, ಒಬ್ಬರನ್ನು ಕೈಬಿಡಬೇಕಾಗಬಹುದು, ಅದು ಚರ್ಚೆ ಆಗುತ್ತಿದೆ. ಇಂದು ರಾತ್ರಿ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇನೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಯಾವುದೇ ರೀತಿ ಗೊಂದಲ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಾಳೆ 7ರಿಂದ 8 ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ನಾಳೆ 3.30ಕ್ಕೆ ರಾಜಭವನಕ್ಕೆ ಸಚಿವರಿಗೆ ಬರುವಂತೆ ಸೂಚನೆ ನೀಡಲಾಗಿದ್ದು, ನಾಳೆ ಮಧ್ಯಾಹ್ನ 3.50ಕ್ಕೆ ನೂತನ ಸಚಿವರ ಪ್ರತಿಜ್ಞಾವಿಧಿ ನಡೆಯಲಿದೆ. ಸಂಜೆ ಅಥವಾ ನಾಳೆ ಬೆಳಗ್ಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
5 ದಿನದ ಹಿಂದೆ ಜೋಧಪುರದಲ್ಲಿ ನಡೆದ ತರಬೇತಿ ಕಾರ್ಯಾಚರಣೆಯ ಭಾಗವಾಗಿ ಸರೋವರಕ್ಕೆ ಹಾರಿದ್ದ 10 ಪಾರಾ ವಿಶೇಷ ಪಡೆಯ ಕ್ಯಾಪ್ಟನ್ ಅಂಕಿತ್ ಗುಪ್ತಾ ಪ್ರಾಣ ಕಳೆದುಕೊಂಡಿದ್ದರು. ಸದ್ಯ ಇಂದು ಅಂಕಿತ್ ಗುಪ್ತಾ ಅವರ ಶವ ಪತ್ತೆಯಾಗಿದೆ.
ಬೆಂಗಳೂರು, ಬೆಳಗಾವಿಗೆ ಮಾತ್ರ ಮಂತ್ರಿ ಸ್ಥಾನ ಮೀಸಲಾತಿಯೇ? ದಾವಣಗೆರೆ ಜಿಲ್ಲೆಯಿಂದ 4 ಶಾಸಕರನ್ನ ಕೊಟ್ಟಿದ್ದೇವೆ, ನಮ್ಮ ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ಹೇಳಿದ್ದೆ, ನನಗೆ ಬೇಡ ಆದರೆ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಎಂದು ಕೇಳಿದ್ದೆ, ಆದರೆ ನೀಡಿಲ್ಲ. ದಾವಣಗೆರೆಗೆ ಅನ್ಯಾಯವಾಗಿದೆ. ಈ ಬಗ್ಗೆ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹರ್ಷಗುಪ್ತ ಪತ್ರ ಬರೆದು, ಜಪ್ತಿ ಮಾಡಬೇಕಾದ ಆಸ್ತಿಗಳ ಮಾಹಿತಿ ಕೋರಿದ್ದಾರೆ. ಕೆಪಿಐಡಿ ಆಕ್ಟ್ ಅಡಿ 1 ರಿಂದ 23 ಆರೋಪಿಗಳ ಆಸ್ತಿ ಮಧ್ಯಂತರ ಜಪ್ತಿ ನಡೆಸಲಾಗಿದೆ. ಆದರೆ ಆರೋಪಿ ನಂ.24 ರಿಂದ 28 ರ ಆಸ್ತಿ ಜಪ್ತಿಗೆ ಈವರೆಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರ ಸಿಬಿಐನಿಂದ ಅಗತ್ಯ ವರದಿ ಪಡೆಯಬೇಕು. ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಬೇಕಾದ ಆಸ್ತಿಗಳ ಬಗ್ಗೆ ವರದಿ ಪಡೆದುಕೊಳ್ಳಬೇಕು ಎಂದು ಆರೋಪಿತ ಪೊಲೀಸ್ ಅಧಿಕಾರಿಗಳಾದ ಇ.ಬಿ. ಶ್ರೀಧರ್, ಐಪಿಎಸ್ ಅಧಿಕಾರಿ ಹೇಮಂತ್ ಎಂ.ನಿಂಬಾಳ್ಕರ್, ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ, ಇನ್ಸ್‌ಪೆಕ್ಟರ್ ರಮೇಶ್, ಸಬ್ ಇನ್ಸ್‌ಪೆಕ್ಟರ್ ಗೌರಿಶಂಕರ್ನ ವಿರುದ್ಧ ಹರ್ಷಗುಪ್ತ ಪತ್ರ ಬರೆದಿದ್ದಾರೆ.
ಫಿಟ್ನೆಸ್ಗಾಗಿ ಬ್ಯಾಡ್ಮಿಂಟನ್ ಆಟದಲ್ಲಿ ಕಿಚ್ಚ ಸುದೀಪ್ ನಿರತರಾಗಿದ್ದು, ಸುದೀಪ್ ಜೆಪಿ ನಗರದ ಕ್ಲಬ್ನಲ್ಲಿ ಸ್ಟೈಲಿಶ್ ಸ್ಲೀವ್ಲೆಸ್ ಟೀ ಶರ್ಟ್ ಧರಿಸಿ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ. ಇವರ ಜೊತೆಗೆ ಫ್ಯಾಂಟಮ್ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಕೂಡ ಭಾಗಿಯಾಗಿದ್ದಾರೆ.
ಅಬಕಾರಿ ಇಲಾಖೆ ಸಚಿವರಾಗಿರುವ ಹೆಚ್.ನಾಗೇಶ್ ಇಂದು ರಾಜೀನಾಮೆ ನೀಡುವ ನಿರೀಕ್ಷೆ ಇದ್ದು, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಹೆಚ್.ನಾಗೇಶ್ ಸಂಜೆ ರಾಜೀನಾಮೆ ನೀಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಜನಾರ್ದನ ಹೋಟೆಲ್ಗೆ ದೋಸೆ ತಿನ್ನಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೆರಳಿದ್ದು, ಬಿಎಸ್ವೈಗೆ ಸಚಿವ ಅಶೋಕ್, ಬಿಡಿಎ ಅಧ್ಯಕ್ಷ ವಿಶ್ವನಾಥ್ ಸಾಥ್ ನೀಡಿದ್ದಾರೆ.
ರಾಜಕೀಯ ಪಕ್ಷದ ಮುಖಂಡರು, ಮಂತ್ರಿಗಳು ಮತ್ತು ಶಾಸಕರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಲು ಅವಕಾಶ ನೀಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೇನೆ. ಆ ಮೂಲಕ ಜನರಿಗೆ ಲಸಿಕೆ ಕುರಿತು ವಿಶ್ವಾಸ ಹುಟ್ಟಿಸುವ ಕಾರ್ಯವನ್ನು ಮಾಡಿದಂತಾಗುತ್ತದೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಕೆಡಿಪಿ ಸಭೆ ನಡೆದಿದ್ದು, ಈ ಸಭೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಬಹಳಷ್ಟು ಅಧಿಕಾರಿಗಳು ಗೈರಾಗಿದ್ದರಿಂದ ಅಧಿಕಾರಿಗಳ ಅಮಾನತಿಗೆ ಬಿಎಸ್ವೈ ಸೂಚನೆ ನೀಡಿದ್ದಾರೆ. ಇಂದೇ ನೋಟಿಸ್ ನೀಡುವಂತೆ ಸಿಎಂ ಬಿಎಸ್ವೈ ಸೂಚನೆ ನೀಡಿದ್ದು,
ಸ್ಲಂ ಬೋರ್ಡ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲು ಜಿಲ್ಲಾ ಪಂಚಾಯತಿ ಸಿಇಒಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿ ಲಭ್ಯವಾಗಿದ್ದು, ಎಂ.ಟಿ. ಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ನಾಯ್ಡು, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್. ಅಂಗಾರ, ಸಿ.ಪಿ.ಯೋಗೇಶ್ವರ್ ಹೆಸರು ಬಹುತೇಕ ಅಂತಿಮ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ
ಟಿಆರ್ಪಿ ರೇಟಿಂಗ್ ಕುರಿತು ಸಚಿವಾಲಯವು ನವೆಂಬರ್ 4, 2020 ರಂದು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಇಂದು ವರದಿಯನ್ನು ಸಲ್ಲಿಸಿದೆ. ಈ ಕುರಿತು ಸಚಿವಾಲಯ ಪರಿಶೀಲಿಸುತ್ತದೆ ಮತ್ತು ಮುಂದಿನ ಕ್ರಮ ಕೈಗೊಳ್ಳುತ್ತದೆ. ವರದಿಯನ್ನು ಚರ್ಚಿಸಿ ಬಾರ್ಕ್ (ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ) ಗೆ ನೀಡಲಾಗುವುದು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಟಿಆರ್‌ಪಿಯಲ್ಲಿ ಹೆಚ್ಚು ಪಾರದರ್ಶಕತೆ ಇರಬೇಕು ಮತ್ತು ಇದು ಅವಕಾಶವನ್ನು ವಿಸ್ತರಿಸಬೇಕು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ವಿಶೇಷ ಸೂಚಕವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಬಿಬಿಐಎಲ್) ಕೇಂದ್ರ ಸರ್ಕಾರಕ್ಕೆ 16.50 ಲಕ್ಷ ಡೋಸ್ ಕೊವ್ಯಾಕ್ಸಿನ್ ಅನ್ನು ಉಚಿತವಾಗಿ ನೀಡಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ನಿನ್ನೆ ಅಪಘಾತಕ್ಕೀಡಾದ ಕೇಂದ್ರ ಸಚಿವ ಶ್ರೀಪಾದ ನಾಯಕ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗೋವಾ ವೈದ್ಯಕೀಯ ಕಾಲೇಜಿನ ವೈದ್ಯರ ತಂಡದೊಂದಿಗೆ ವಿಚಾರಿಸಿದ್ದಾರೆ.
ಸಕ್ರೀಯ ಕೊರೊನಾ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಸದ್ಯ ದೇಶದಲ್ಲಿ 2.2 ಲಕ್ಷಕ್ಕಿಂತ ಕಡಿಮೆ ಕೊವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳ ಈ ಎರಡು ರಾಜ್ಯಗಳು ಮಾತ್ರ 50000 ಕ್ಕಿಂತ ಹೆಚ್ಚಿನ ಕೊವಿಡ್ ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಚಿತ್ರದುರ್ಗದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮುಂದಿನ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಕಾಂಗ್ರೆಸ್ ಕಾರ್ಯಕರ್ತರನ್ನು ನಿರ್ಲಕ್ಷಿಸಿ, ಕಾಂಗ್ರೆಸ್ ಧೂಳೀಪಟವಾಯಿತು ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿರುವ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರ ಕಚೇರಿಯ ಮುಖ್ಯದ್ವಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ್ದು, ಜಿಲ್ಲಾ ಪಂಚಾಯತಿ ಅಧ್ಯಕ್ಷ ಮರಿಸ್ವಾಮಿ,ಕಂದಾಯ ಸಚಿವ ಆರ್.ಅಶೋಕ್, ಶಾಸಕ ಎಂ.ಕೃಷ್ಣಪ್ಪ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಸೀರಮ್ ಸಂಸ್ಥೆಯಿಂದ ತಮ್ಮ ದೇಶಗಳಿಗೆ ಲಸಿಕೆಗಳನ್ನು ಪೂರೈಸಿ ಎಂದು ಬಹಳಷ್ಟು ದೇಶಗಳು ಭಾರತ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆಯುತ್ತಿವೆ. ನಾವು ಎಲ್ಲರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ನಾವು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾಗೆ ಲಸಿಕೆ ಪೂರೈಸಲು ಪ್ರಯತ್ನಿಸುತ್ತಿದ್ದೇವೆ ಆದರೆ ನಮ್ಮ ಜನಸಂಖ್ಯೆ ಮತ್ತು ರಾಷ್ಟ್ರದ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ತಿಳಿಸಿದ್ದಾರೆ.
ಇವತ್ತು 648000 ಡೋಸೆಸ್ ಬಂದಿದೆ. ಉತ್ತಮ ರೀತಿಯಲ್ಲಿ ಅವುಗಳನ್ನು ಪ್ಯಾಕ್ ಮಾಡಿ ಬೇಕಾದ ತಾಪಮಾನದಲ್ಲಿ ತಂದು ನಮ್ಮ ಸ್ಟೋರೇಜ್ನಲ್ಲಿ ಇಟ್ಟಿದ್ದೇವೆ. ನಾಳೆ ಬೆಳಗಾವಿಗೆ 190000 ಡೋಸ್ಗಳನ್ನು ಕಳುಹಿಸಲಾಗುತ್ತದೆ. ಇನ್ನು ಈ ಲಸಿಕೆಗಳು ಹಂತ ಹಂತವಾಗಿ ಬರಲಿದೆ. ಈಡಿ ವಿಶ್ವದಲ್ಲಿ ಯಾರು ಕೂಡ ಇಷ್ಟು ಕಡಿಮೆ ದರದಲ್ಲಿ ಲಸಿಕೆಯನ್ನು ಕೊಟ್ಟಿಲ್ಲ. ಆದರೆ ನಮ್ಮ ಪ್ರಧಾನ ಮಂತ್ರಿ ವಿಜ್ಞಾನಿಗಳಿಗೆ ಕೊಟ್ಟಂತಹ ಸಹಕಾರದಿಂದ ಕಡಿಮೆ ದರದಲ್ಲಿ ಸಿಕ್ಕಿದೆ. ಈ ಲಸಿಕೆ ಸುರಕ್ಷಿತವಾಗಿದೆ. ನೀವೂ ಎಲ್ಲರೂ ಇದೇ ಜನವರಿ 16 ರಂದು ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ದೆಹಲಿಯ ಸರ್ದಾರ್ ಪಟೇಲ್ ಕೊವಿಡ್ ಕೇಂದ್ರವು ವಿದೇಶಿಯರನ್ನು ದಾಖಲಿಸಿಕೊಳ್ಳುವಲ್ಲಿ ಮುಂದಾಗಿದ್ದು, ವಿದೇಶದಿಂದ ಆಗಮಿಸಿದ ಜನರಿಗೆ ಕೊರೊನಾ ಪರೀಕ್ಷೆಯನ್ನು ಪ್ರಾರಂಭಿಸಿದೆ.
ಆಂಡಲೂರು ಮೃಗಾಲಯ, ಮಹಾಬಲಿಪುರಂ, ಗಿಂಡಿ ರಾಷ್ಟೀಯ ಉದ್ಯಾನವನ ಮತ್ತು ಚೆನ್ನೈನ ಎಲ್ಲಾ ಕಡಲತೀರಗಳಲ್ಲಿ ಜನವರಿ 15 ರಿಂದ 17ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧವನ್ನು ಘೋಷಿಸಲಾಗಿದೆ. ಪೊಂಗಲ್ ಹಬ್ಬದ ಆಚರಣೆಯ ಸಲುವಾಗಿ ಈ ಪ್ರದೇಶಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಕೊವಿಡ್ ನಿಯಂತ್ರಣದ ಮುನ್ನೇಚ್ಚರಿಕೆಯ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
ದುರ್ಬಲರು, ಬಡವರು, ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸುವಲ್ಲಿ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಭಾರತೀಯ ಸರ್ಕಾರ ಮನವಿ ಮಾಡಿಕೊಂಡಿದ್ದರಿಂದ ನಾವು 100 ಮಿಲಿಯನ್ ಡೋಸ್ಗಳಿಗೆ 200 ರೂಪಾಯಿಗಳ ವಿಶೇಷ ಬೆಲೆಯನ್ನು ನಿಗದಿ ಮಾಡಿದ್ದೇವೆ. ನಂತರದ ದಿನಗಳಲ್ಲಿ ನಾವು ಈ ಡೋಸ್ ಅನ್ನು ಖಾಸಗಿ ಮಾರುಕಟ್ಟೆಗಳಲ್ಲಿ 1000 ರೂಪಾಯಿಗಳಿಗೆ ಮಾರಾಟ ಮಾಡುತ್ತೇವೆ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಹೇಳಿದ್ದಾರೆ.
ತುಟ್ಟಿಭತ್ಯೆ ಸ್ಥಗಿತ, ನಿವೃತ್ತಿ ಹೊಂದಿದ ಅಧಿಕಾರಿ ಹಾಗೂ ನೌಕರರ ಪುನರ್ ನೇಮಕಾತಿ ತಡೆಯುವುದು, ಹೊರಗುತ್ತಿಗೆ ನೌಕರರ ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ. ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕುಳಿತು ಕರ್ನಾಟಕ ಸರ್ಕಾರ ನೌಕರರ ಸಂಘ ಹಾಗೂ ಪರಿಷತ್ ನೌಕರರ ಸಂಘದಿಂದ ಧರಣಿ.
ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ (91) ಅವರು ಹೃದಯಾಘಾತದಿಂದ ಮಧ್ಯಾಹ್ನ 1.05ಕ್ಕೆ ಕೊನೆ ಉಸಿರೆಳೆದಿದ್ದಾರೆ.
ಮೊದಲ ಹಂತದಲ್ಲಿ ಹೆಲ್ತ್ ವಾರಿಯರ್ಸ್ಗೆ ಲಸಿಕೆ ನೀಡುತ್ತಿದ್ದು, ಈವರೆಗೆ 1.68 ಲಕ್ಷ ವಾರಿಯರ್ಸ್ ಹೆಸರು ನಮೂದು ಮಾಡಿಕೊಳ್ಳಲಾಗಿದೆ. ಆದರೆ ವ್ಯಾಕ್ಸಿನ್ ಪಡೆಯುವುದು ಯಾರಿಗೂ ಕಡ್ಡಾಯವಲ್ಲ. ಜೊತೆಗೆ ವ್ಯಾಕ್ಸಿನ್ ಪಡೆದವರ ಮೇಲೆ ನಿಗಾ ಇಡುವುದು ಕಷ್ಟಕರ ಎಂದು ಬಿಬಿಎಂಪಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನವರಿ 16 ರಂದು ಮಧ್ಯಾಹ್ನ 12:30 ಕ್ಕೆ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದು, ಭದ್ರಾವತಿ ತಾಲೂಕಿನ ಬುಳ್ಳಾಪುರದಲ್ಲಿರುವ 50 ಎಕರೆ ಪ್ರದೇಶದಲ್ಲಿ ರಾಪಿಡ್ ಆಕ್ಷನ್ ಫೊರ್ಸ್ ಕೇಂದ್ರದ ಯೋಜನೆ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಆ ನಂತರ ಭದ್ರಾವತಿಯ ಗೆಸ್ಟ್ ಹೌಸ್ನಲ್ಲಿ ಊಟ ಸವಿದು ಬೆಳಗಾವಿಗೆ ಅಮಿತಾ ಶಾ ಪಯಣಿಸಲಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಭದ್ರಾವತಿಯಲ್ಲಿ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ 24 ಗಂಟೆಯಲ್ಲಿ 12,584 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿದ್ದು, 7 ತಿಂಗಳ ಬಳಿಕ ಮೊದಲ ಬಾರಿಗೆ 15000 ಕ್ಕಿಂತ ಕಡಿಮೆ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಹಿಂದಿನಿಂದಲೂ ಬಿಜೆಪಿ ಸಂಘಟನೆ ಇದೆ. ಹಾಸನ ಜಿಲ್ಲೆಯನ್ನ ಅಭಿವೃದ್ಧಿ ಮಾಡಿದ್ದು ಯಾರು? ಹಾಸನಕ್ಕೆ ಪಾಸ್‌ಪೋರ್ಟ್ ಕೇಂದ್ರ ಕೊಟ್ಟಿದ್ದು ಮೋದಿ, ಬೇಲೂರಿನಿಂದ ಬಿಳಿಕೆರೆಗೆ ಹೆದ್ದಾರಿ ಕೊಟ್ಟಿದ್ದು ಮೋದಿ, ಹಾಸನದ ರೈಲ್ವೆ ಹಳಿ ಮೇಲೆ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ಐತಿಹಾಸಿಕ ಬೇಲೂರಿಗೆ ರೈಲ್ವೆ ಯೋಜನೆ ಕೊಟ್ಟಿದ್ದು ಮೋದಿ. ಇದನ್ನ ನಮ್ಮ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಹಾಸನ ಜಿಲ್ಲೆಯನ್ನ ಅಪ್ಪ–ಮಕ್ಕಳಿಗೆ ಬರೆದುಕೊಟ್ಟಿಲ್ಲ ಎಂದು ಹಾಸನದ ಜನ ಸೇವಕ ಸಮಾವೇಶದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ
ಬೆಂಗಳೂರಿನ ಆನಂದರಾವ್ ಸರ್ಕಲ್‌ನಲ್ಲಿರುವ ಸ್ಟೇಟ್ ವ್ಯಾಕ್ಸಿನ್ ಸ್ಟೋರ್ ಬಳಿ ವಾಹನದಿಂದ ಕೊವಿಶೀಲ್ಡ್ ಬಾಕ್ಸ್ ಇಳಿಸುವ ವೇಳೆ ಘಟನೆ ನಡೆದಿದ್ದು, ಲಸಿಕೆ ತುಂಬಿದ ಬಾಕ್ಸ್ ಕೆಳಗೆ ಬಿದ್ದಿದೆ.
ವೀರಪ್ಪನ್ ಹಂಗರ್ ಫಾರ್ ಕಿಲ್ಲಿಂಗ್ ವೆಬ್ ಸೀರಿಸ್ ಬಿಡುಗಡೆಗೆ ತಡೆ ಕೋರಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಸಲ್ಲಿಸಿದ ಅರ್ಜಿಯನ್ನು ಇಂದು ಬೆಂಗಳೂರು ನಗರದ ಸಿವಿಲ್ ಕೋರ್ಟ್ ವಿಚಾರಣೆ ನಡೆಸಿದ್ದು, ವೆಬ್ ಸೀರಿಸ್ ಬಿಡುಗಡೆಗೆ ಮಧ್ಯಂತರ ತಡೆ ಘೋಷಿಸಿದೆ.
ಮೆರವಣಿಗೆ ನಡೆಸಲು ಬಯಸುವವರು ಕೂಡ ಅರ್ಜಿ ಸಲ್ಲಿಸಬೇಕಾಗುತ್ತದೆ. ಆ ನಂತರ ಪೊಲೀಸರು ಅರ್ಜಿ ಸಲ್ಲಿಸಿದವರ ಮೇಲೆ ಕೆಲವು ಷರತ್ತುಗಳನ್ನು ವಿಧಿಸುತ್ತಾರೆ. ಈ ಷರತ್ತುಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗುತ್ತದೆ ಇಲ್ಲವಾದಲ್ಲಿ ಮೆರವಣಿಗೆಯನ್ನು ರದ್ದುಗೊಳಿಸಲಾಗುತ್ತದೆ.
ಸುಪ್ರೀಂಕೋರ್ಟ್ ಮೂರು ಕೃಷಿ ಕಾಯ್ದೆಗಳನ್ನು ತಡೆಹಿಡಿಯುವಂತೆ ಆದೇಶಿಸಿದ್ದು, ಮುಂದಿನ ಆದೇಶದ ವರೆಗೆ ಕಾಯ್ದೆ ಜಾರಿ ಇಲ್ಲ. ಈ ನಿಟ್ಟಿನಲ್ಲಿ ನಾಲ್ವರು ಸದಸ್ಯರ ಸಮಿತಿಯನ್ನು ರಚಸಲಾಗಿದೆ.
ಜನವರಿ 26ರ ರೈತರ ಟ್ರ್ಯಾಕ್ಟರ್ ಮೆರವಣಿಗೆಯನ್ನು ತಡೆಹಿಡಿಯುವಂತೆ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ರೈತ ಸಂಘಟನೆಗಳಿಗೆ ನೋಟಿಸ್ ನೀಡಿದ್ದು, ಈ ಕುರಿತು ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ.
ಪುಣೆಯ ಸೆರಮ್ ಇನ್ಸ್‌ಟಿಟ್ಯೂಟ್‌ನ ಕೊವಿಶೀಲ್ಡ್ ಲಸಿಕೆ ಹೊತ್ತ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಒಟ್ಟು 54 ಬಾಕ್ಸ್‌ಗಳಲ್ಲಿ 790000 ವಯಲ್ ಕೊವಿಶೀಲ್ಡ್ ಲಸಿಕೆ ರವಾನೆ ಮಾಡಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ಕೊವಿಶೀಲ್ಡ್ ಲಸಿಕೆಯನ್ನು ಡಿಹೆಚ್‌ಒ ಶ್ರೀನಿವಾಸ್ ಗೂಳೂರು ರಿಸೀವ್ ಮಾಡಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕೊವಿಶೀಲ್ಡ್ ಲಸಿಕೆ ಬಾಕ್ಸ್‌ಗಳನ್ನ ಬೆಂಗಳೂರಿನ ನಗರದ ಆನಂದರಾವ್ ಸರ್ಕಲ್‌ನಲ್ಲಿರುವ ಸ್ಟೇಟ್ ವ್ಯಾಕ್ಸಿನ್ ಸ್ಟೋರ್‌ಗೆ ಶಿಫ್ಟ್ ಮಾಡಲಾಗುತ್ತದೆ. KA 04 G 8014 ವಾಹನದಲ್ಲಿ ಲಸಿಕೆ ಬಾಕ್ಸ್‌ಗಳನ್ನು ಪೊಲೀಸ್ ಭದ್ರತೆಯೊಂದಿಗೆ ಸಾಗಿಸಲಾಗುತ್ತದೆ.
ಕೊರೊನಾ ವ್ಯಾಕ್ಸಿನ್ ಆಗಮನ ಬಗ್ಗೆ ಇನ್ನೂ ಅಲಾಟ್‌ಮೆಂಟ್ ಮೆಸೆಜ್ ಬಂದಿಲ್ಲ. ಏರ್‌ಪೋರ್ಟ್ ಅಥಾರಿಟಿ ಜೊತೆ ಸಿದ್ಧತೆ ಚರ್ಚೆಗೆ ಪರಿಶೀಲನೆಗೆಂದು ಆಗಮಿಸಿದ್ದೇನೆ. 2 ಲಕ್ಷಕ್ಕೂ ಅಧಿಕ ಲಸಿಕೆಗಳು ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇದೆ. ಲಸಿಕೆಗಳನ್ನು ವ್ಯಾಕ್ಸಿನ್ ಡಿಪೋದಲ್ಲಿ ವಾಕ್ ಇನ್ ಕೂಲರ್‌ನಲ್ಲಿ ಸಂಗ್ರಹ ಮಾಡಿ ನಂತರ ಅವುಗಳನ್ನು ಡಿಪೋದಿಂದ ಇನ್ಸೂಲೇಟೆಡ್ ವ್ಯಾನ್‌ಗಳಲ್ಲಿ ಲಸಿಕೆ ಸಾಗಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಸೇರಿ 7 ಜಿಲ್ಲೆಗಳಿಗೆ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಡಿಹೆಚ್‌ಒ ಡಾ.ಎಸ್.ವಿ.ಮುನ್ಯಾಳ್ ಹೇಳಿಕೆ ನೀಡಿದ್ದಾರೆ.
ಈ ವರ್ಷ ಹಲವು ರಾಷ್ಟ್ರಗಳು ಸಾಮೂಹಿಕವಾಗಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಿದರೂ ಹರ್ಡ್ ಇಮ್ಯೂನಿಟಿ (ಸಮುದಾಯಿಕ ರೋಗಪ್ರತಿರೋಧ ಶಕ್ತಿ) ಹೆಚ್ಚಾಗುವ ಸಾಧ್ಯತೆ ಕಡಿಮೆ. ಈ ಲಸಿಕೆ ದುರ್ಬಲರನ್ನು ರಕ್ಷಿಸಲು ಆರಂಭಿಸಿದರೂ 2021ರಲ್ಲಿ ವಿಶ್ವದಾದ್ಯಂತ ಸಮುದಾಯದಲ್ಲಿ ರೋಗಪ್ರತಿರೋಧ ಶಕ್ತಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಪ್ರತಿಭಟನಾ ನಿರತ ರೈತರು, ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸದ್ಯ ಟ್ರಾಕ್ಟರ್ ಮೆರವಣಿಗೆ ನಡೆಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವ ಬಗ್ಗೆ ಗುಟ್ಟು ಬಿಟ್ಟು ಕೊಡದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಾರನ್ನು ಕೈಬಿಡಬೇಕು ಎನ್ನುವ ಬಗ್ಗೆ ಇನ್ನು ಯೋಚನೆ ಮಾಡಿಲ್ಲ.ಯಾರು ಸೇರ್ಪಡೆಯಾಗುತ್ತಾರೆ ಎನ್ನುವ ಬಗ್ಗೆ ಸಹ ಅಂತಿಮ ನಿರ್ಧಾರ ಮಾಡಿಲ್ಲ. ದೆಹಲಿ ನಾಯಕರು ಸಂಜೆ ಮಾಹಿತಿ ಕೊಡುತ್ತಾರೆ, ಅಲ್ಲಿಯವರೆಗೆ ಯಾವುದೇ ಅಂತಿಮ ನಿರ್ಧಾರ ನಾನು ಮಾಡುವುದಿಲ್ಲ. ವಿಸ್ತರಣೆಯಾ ಅಥವಾ ಪುನಾರಚನೆಯಾ ಎಂದು ಪ್ರಶ್ನೆ ಮಾಡಿದವರಿಗೆ ಸುಮ್ಮನಿರಿ, ಸಂಜೆಯವರೆಗೆ ಕಾಯ್ರಪ್ಪ ಎಂದು ಹೇಳಿ ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಕಳುಹಿಸಿದ್ದಾರೆ.
ಸುಪ್ರೀಂಕೋರ್ಟ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿದೆ. ಸುಪ್ರೀಂಕೋರ್ಟ್‌ನ ನ್ಯಾಯಾಲಯ ರೋಹಿಂಗ್ಟನ್ ನಾರಿಮನ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಸ್ಯಾಂಡಲ್‌ವುಡ್‌ನ ಡ್ರಗ್ಸ್ ಜಾಲದ ನಂಟು ಆರೋಪದಡಿ ಜೈಲು ಸೇರಿದ್ದ ನಟಿ ರಾಗಿಣಿಗೆ ಇಂದು ಕೂಡ ಜಾಮೀನು ಸಿಗಲಿಲ್ಲ.
ವಂಶಪಾರಂಪರ್ಯ ರಾಜಕಾರಣವು ದೇಶಕ್ಕೆ ಒಂದು ದೊಡ್ಡ ಸವಾಲಾಗಿದ್ದು, ಅದು ಇಂದಿಗೂ ಕೂಡ ನಮ್ಮ ನೆಲದಲ್ಲಿ ಬೇರೂರಿದೆ. ತಮ್ಮ ಉಪನಾಮಗಳನ್ನು ಬಳಸಿಕೊಂಡು ಚುನಾವಣೆಗಳನ್ನು ನಡೆಸುತ್ತದ್ದವರ ಸಂಖ್ಯೆ ಈಗ ಕಡಿಮೆಯಾಗಿದೆ. ಆದರೆ ರಾಜಕೀಯದಲ್ಲಿ ವಂಶಪಾರಂಪರ್ಯ ಆಧರಿಸಿದ ಈ ಕಾಯಿಲೆ ಇನ್ನೂ ಸಂಪೂರ್ಣವಾಗಿ ನಾಶವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಬಳಿಯ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಆರ್‌ಎಸ್‌ಎಸ್ ರಾಷ್ಟ್ರೀಯ ನಾಯಕ ಮೋಹನ್ ಭಾಗವತ್ ಭೇಟಿ ನೀಡಿದ್ದು, ಜಿಂದಾಲ್ ಕಂಪನಿ ಮುಖ್ಯಸ್ಥರಾದ ಸೀತಾರಾಮ್ ಜಿಂದಾಲ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದ ಬಳಿ ಪೊಲೀಸರ ಬಿಗಿ ಭದ್ರತೆ ಮಾಡಲಾಗಿದೆ.
ಸ್ವಾಮಿ ವಿವೇಕಾನಂದರ 158ನೇ ಜಯಂತಿ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಯುವ ಸಾಧಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ.
ಇಂದು ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನ. ಸನಾತನ ಧರ್ಮದ ನವೋನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಆಧ್ಯಾತ್ಮಿಕ ಶಕ್ತಿಯನ್ನು ಎತ್ತಿ ತೋರಿಸಿದ ಧೀಮಂತ ವ್ಯಕ್ತಿಯ ಜನ್ಮ ದಿನವಾದ ಇಂದು ಅಂದರೆ ಜನವರಿ 12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಷ್ಟ್ರ ನಿರ್ಮಾಣದತ್ತ ಒಂದು ಮಹತ್ವದ ಹೆಜ್ಜೆಯಾಗಲಿದೆ. ನಾವು ಪರಿಸರ ವ್ಯವಸ್ತೆಯನ್ನು ನಿರ್ಮಾಣ ಮಾಡುತ್ತಿದ್ದು, ಇದು ನಮ್ಮ ದೇಶದ ಯುವಕರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡಲಿದೆ ಎಂದು 2ನೇ ರಾಷ್ಟ್ರೀಯ ಯುವ ಸಂಸತ್ ಹಬ್ಬದ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪೊಂಗಲ್ ಹಬ್ಬದ ಹಿನ್ನೆಲೆಯಲ್ಲಿ ಮದುರೈನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯನ್ನ ವಿಕ್ಷಿಸಲು ನಾಳೆ ತಮಿಳುನಾಡಿಗೆ ಸಂಸದ ರಾಹುಲ್ ಗಾಂಧಿ ಆಗಮಿಸಲಿದ್ದಾರೆ.
ಮೊದಲು ನಮ್ಮನ್ನು ಅನರ್ಹ ಶಾಸಕರು ಎಂದು ಹೇಳುತ್ತಿದ್ದರು, ಈಗ ನಮ್ಮನ್ನು ವಲಸೆ ಶಾಸಕಕರೆಂದು ಹೇಳುತ್ತಿದ್ದೀರಿ. ನಾವು ಕಾಂಗ್ರೆಸ್ಗೆ ಡಿವೋರ್ಸ್ ನೀಡಿ ಬಿಜೆಪಿಗೆ ಬಂದಿದ್ದೇವೆ. ನಾವು ವಲಸೆ ಶಾಸಕರು ಅಲ್ಲ, ಬಿಜೆಪಿ ಶಾಸಕರು. ಒಬ್ಬ ಮಹಿಳೆ ಮನೆಗೆ ಮೊಳೆ ಹೊಡೆದು ಬಂದ ಮೇಲೆ ಅವಳು ಆ ಮನೆ ಸೊಸೆನೆ, ನಾವು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಸಾಧ್ಯವಾ? ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ, ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಎರಡನೇ ರಾಷ್ಟ್ರೀಯ ಯುವ ಸಂಸತ್ ಹಬ್ಬದ ಸಮಾರೋಪದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದಾರೆ.
ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಉತ್ತಮ ಪ್ರದರ್ಶನವನ್ನು ತೋರಿಸಿದ ಜಸ್ಪ್ರೀತ್ ಬುಮ್ರಾ ಹೊಟ್ಟೆ ನೋವಿನ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ. ಇದು ಭಾರತ ತಂಡಕ್ಕೆ ಬಿದ್ದ ಮತ್ತೊಂದು ಹೊಡೆತವಾಗಿದೆ.
ಭಾರತೀಯ ಆಟಗಾರರಿಗೆ ಜನಾಂಗೀಯ ನಿಂದನೆ ವಿಚಾರವಾಗಿ ಕೇಸ್ ದಾಖಲಾಗಿದ್ದು, ಈ ನಿಟ್ಟಿನಲ್ಲಿ ಸದ್ಯ ಸಿರಾಜ್ಗೆ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಕ್ಷಮೆಯಾಚಿಸಿದ್ದಾರೆ.
ಪುಣೆಯಿಂದ ಬೆಂಗಳೂರಿಗೆ ಸೆರಮ್‌ನ ಕೊವಿಶೀಲ್ಡ್ ಲಸಿಕೆ ಹೊತ್ತ ವಿಮಾನ ಟೇಕಾಫ್ ಆಗಿದ್ದು, ಬೆಳಿಗ್ಗೆ 11.40ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಒಟ್ಟು 54 ಬಾಕ್ಸ್‌ಗಳಲ್ಲಿ ಕೊವಿಶೀಲ್ಡ್ ಲಸಿಕೆ ರವಾನೆಯಾಗಿದ್ದು, 648000 ವಯಲ್ ಸಾಗಣೆಯಾಗಲಿದೆ. ಏರ್ಪೋಟ್ನಿಂದ ಲಸಿಕೆಗಳನ್ನು ಟ್ರಕ್ನಲ್ಲಿ ಬೆಂಗಳೂರಿನ ಆನಂದ್ ರಾವ್ ಸರ್ಕಲ್ನ ಕೋಲ್ಡ್ ಸ್ಟೋರೆಜ್ಗೆ ಅಧಿಕಾರಿಗಳು ಸಾಗಿಸಲಿದ್ದಾರೆ.
ಇಂದು ವೀರಗೋಟ ಗ್ರಾಮದ ಬಳಿ ಹಾಲುಮತ ಸಂಸ್ಕೃತಿ ವೈಭವೋತ್ಸವ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವೈಭವೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದೇವದುರ್ಗ ತಾಲೂಕಿನ ವೀರಗೊಟದಲ್ಲಿರುವ ಕಾಗಿನೆಲೆ ಕನಕ ಗುರು ಪೀಠದಿಂದ ಆಯೋಜಿಸಿರುವ ವೈಭತೋತ್ಸವ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.
ರಾಜ್ಯದಲ್ಲಿ ಬಹುತೇಕ ಥಿಯೇಟರ್ಗಳು ಇನ್ನು ಕೂಡ ಆರಂಭವಾಗಿಲ್ಲ, ಹೀಗಾಗಿ ಇಂದು ಕೆಲವು ನಿರ್ಮಾಪಕರು ಥಿಯೇಟರ್ ಮಾಲೀಕರು, ಪ್ರದರ್ಶಕರ ವಲಯದ ಮುಖ್ಯಸ್ಥರಿಂದ ಸಭೆ ನಡೆಯಲಿದೆ. ಪರ್ಸೆಂಟೇಜ್ ಆಧಾರದಲ್ಲಿ, ಬಾಡಿಗೆ ಅಧಾರದಲ್ಲಿ ಚಿತ್ರಮಂದಿರದ ತೆರವು ಬಗ್ಗೆ ಹಲವರು ಬೇಡಿಕೆ ಇಟ್ಟಿದ್ದು, ಸದ್ಯದಲ್ಲಿಯೇ ಸಾಲು ಸಾಲು ಸ್ಟಾರ್ಗಳ ಸಿನಿಮಾಗಳು ರಿಲೀಸ್ಗೆ ರೆಡಿಯಾಗಲಿದೆ. ಒಟ್ಟಾರೆ ನಿರ್ಮಾಪಕರ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ.
ಲಸಿಕೆಯನ್ನು ಸ್ಟೋರ್ ಮಾಡಲು ಐದು ಪ್ರಾದೇಶಿಕ ವ್ಯಾಕ್ಸಿನ್ ಸ್ಟೋರ್ಗಳನ್ನು ಸಿದ್ಧಪಡಿಸಲಾಗಿದ್ದು, ಚಿತ್ರದುರ್ಗ,ಕಲಬುರುಗಿ, ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆಯಲ್ಲಿ ಜಿಲ್ಲಾ ಲಸಿಕೆ ಶೇಖರಣಾ ಘಟಕಗಳಾಗಿವೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಎರಡು ಸ್ಟೇಟ್ ವ್ಯಾಕ್ಸಿನ್ ಸ್ಟೋರ್ಗಳಿದ್ದು, 30 ಜಿಲ್ಲೆಗಳಲ್ಲೂ ಲಸಿಕೆ ಶೇಖರಣಾ ಘಟಕಗಳನ್ನು ರಚನೆ ಮಾಡಲಾಗಿದೆ . ಕಾರ್ಪೋರೇಷನ್ ವ್ಯಾಕ್ಸಿನ್ ಸ್ಟೋರ್ ಇದ್ದು, ಬಿಬಿಎಂಪಿ ಮಿತಿಯಲ್ಲಿ ಒಂದು ಕಾರ್ಪೋರೇಷನ್ನಲ್ಲಿ ವ್ಯಾಕ್ಸಿನ್ ಸ್ಟೋರ್ ಇರಲಿದೆ. ಈ ನಿಟ್ಟಿನಲ್ಲಿಯೇ ರಾಜ್ಯದಲ್ಲಿ ಒಟ್ಟು 2767 ಕೋಲ್ಡ್ ಚೈನ್ ಪಾಯಿಂಟ್ಸ್ ಗಳನ್ನು ರಚನೆ ಮಾಡಲಾಗಿದೆ. ಶೇಖರಣಾ ಘಟಕಗಳಿಂದ ವ್ಯಾಕ್ಸಿನ್ ಅನ್ನು ಈ ಚೈನ್ ಲಿಂಕ್ ಮೂಲಕ ಸಾಗಾಟ ಮಾಡಲಾಗುತ್ತದೆ.
ರಾಜ್ಯದ ಜನತೆಗೆ ಇವತ್ತು ಐತಿಹಾಸಿಕ ದಿನವಾಗಿದ್ದು, ಮೊದಲ ಹಂತದಲ್ಲಿ 795500 ಡೋಸಸ್ 11:45ಕ್ಕೆ ಬೆಂಗಳೂರಿಗೆ ಬರಲಿದೆ. ಡಿಸಿಜಿಐ ಕೋವಿಶೀಲ್ಡ್ ಗೆ ಅನುನತಿ ನೀಡಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ 1.1 ಕೋಟಿ ಡೋಸ್ ಖರೀದಿ ಮಾಡಿದೆ. ಪ್ರತೀ ಡೋಸ್ 210 ರೂ. ತಗುಲಿದ್ದು, ಇಷ್ಟು ಕಡಿಮೆ ಮೊತ್ತದ ಕೋವಿಡ್ ಲಸಿಕೆ ವಿಶ್ವದಲ್ಲೇ ಇಲ್ಲ. ಮೊದಲ ಡೋಸ್ ತೆಗೆದುಕೊಂಡ 28 ದಿನದಲ್ಲಿ ಎರಡನೇ ಡೋಸ್ ತೆಗೆದುಕೊಳ್ಳಬೇಕು ಇದರಿಂದ ಜನರ ಇಮ್ಯುನಿಟಿ ಹೆಚ್ಚುತ್ತದೆ ಎಂದು ಸುಧಾಕರ್ ಹೇಳಿಕೆ ನೀಡಿದ್ದಾರೆ.
ಇನ್ಸ್‌ಪೆಕ್ಟರ್ ಪುನೀತ್ ಹಾಗೂ ಸಿಬ್ಬಂದಿ ತಿಮ್ಮೆಗೌಡರ ತಂಡದಿಂದ, ಆದಿತ್ಯ ಆಳ್ವಾನನ್ನು ಚೆನ್ನೈನ ಹೋಮ್ ಸ್ಟೇನಲ್ಲಿ ಅರೆಸ್ಟ್ ಮಾಡಿದ್ದೇವೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ ಮತ್ತೆ ವಶಕ್ಕೆ ಪಡೆಯುತ್ತೆವೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಪುಣೆಯ ಸಿರಂ ಇನ್ ಸ್ಟಿಟ್ಯೂಟ್ನಿಂದ ಆಂಧ್ರಪ್ರದೇಶದ ವಿಜಯವಾಡದ ಬಳಿಯ ಗನ್ನಾವರಂ ವಿಮಾನ ನಿಲ್ದಾಣಕ್ಕೆ 4.7 ಲಕ್ಷ ಕೊವಿಡ್ ವ್ಯಾಕ್ಸಿನ್ ಪೂರೈಕೆ ಬಂದು ಸೇರಿದೆ.
ವಿಮಾನ ನಿಲ್ದಾಣದಿಂದ ವಿಶೇಷ ಭದ್ರತೆಯಲ್ಲಿ ಗನ್ನಾವರಂ ಸರಕಾರಿ ಆಸ್ಪತ್ರೆಯಲ್ಲಿನ ವ್ಯಾಕ್ಸಿನ್ ಸ್ಟೋರೇಜ್ ಕೇಂದ್ರಕ್ಕೆ ವ್ಯಾಕ್ಸಿನ್ ಅನ್ನು ಆರೋಗ್ಯ ಇಲಾಖೆ ಸಾಗಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಿದ್ದು, ಜನರು ವಿವೇಕಾನಂದರ ಆಲೋಚನೆಗಳು ಮತ್ತು ಆದರ್ಶಗಳನ್ನು ಹರಡುವಂತೆ ತಿಳಿಸಿದರು. ಈ ಕುರಿತು ಮೋದಿ ಟ್ವೀಟ್ನಲ್ಲಿ ತಮ್ಮ ಆ್ಯಪ್ ನಮೋ ಜೊತೆಗಿನ ಲಿಂಕ್ ಹಂಚಿಕೊಂಡಿದ್ದು, ಇದು ವಿವೇಕಾನಂದರ ಆಲೋಚನೆಗಳನ್ನು ತಿಳಿಯಲು ಜನರಿಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.
स्वामी विवेकानंद को उनकी जयंती पर कोटि-कोटि नमन।
This Vivekananda Jayanti, there’s a creative effort on the NaMo App that lets you share his thoughts and a personalised message.
Let us spread Swami Vivekananda’s dynamic thoughts and ideals far and wide! https://t.co/lMjQwqH0M2 pic.twitter.com/Nh4ZVtn3k7— Narendra Modi (@narendramodi) January 12, 2021
ಥೈಲ್ಯಾಂಡ್ ಓಪನ್ ಟೂರ್ನಿ ಆರಂಭಕ್ಕೂ ಮುನ್ನ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ಗೆ ಕೊರೊನಾ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸೈನಾ ನೆಹ್ವಾಲ್ ಟೂರ್ನಿಯಲ್ಲಿ ಭಾಗಿಯಾಗುವುದು ಅನುಮಾನವಾಗಿದೆ.
ಭಾನುವಾರ ರಾತ್ರಿಯೇ ಚೆನ್ನೈ ಕಡೆ ದೌಡಾಯಿಸಿದ ಸಿಸಿಬಿ ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ತಂಡ,ನಿನ್ನೆ ಇಡೀ ದಿನ ಆರೋಪಿ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ರೆಸಾರ್ಟ್ ನಲ್ಲಿ ಆದಿತ್ಯ ಆಳ್ವಾ ಇರುವುದನ್ನು ಖಚಿತಪಡಿಸಿಕೊಂಡ ಸಿಸಿಬಿ ಪೊಲೀಸರು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಆದಿತ್ಯ ಅಳ್ವಾನನ್ನು ವಶಕ್ಕೆ ಪಡೆದಿದ್ದಾರೆ. ಓಲ್ಡ್ ಮಹಾಬಲೀಪುರಂ ರಸ್ತೆಯ ರೆಸಾರ್ಟ್ನಲ್ಲಿ ಬಂಧಿಸಿ ಬೆಂಗಳೂರಿಗೆ ಸಿಸಿಬಿ ಪೋಲಿಸರು ಕರೆತಂದಿದ್ದಾರೆ.
ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಖಂಡಿಸಿ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಲ್ಕ ವಿಚಾರವಾಗಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಅವರ ಮನೆ ಮುಂದೆ 7 ಗಂಟೆಯಿಂದ 10 ಗಂಟೆಯ ವರೆಗೆ ಕಸ ಗುಡಿಸುವ ಮೂಲಕ ವಿನೂತನ ಮಾದರಿಯಲ್ಲಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಲಸಿಕೆ ಸಾಗಾಟದ ಹೊಣೆಯನ್ನು ಎಸ್.ಬಿ. ಲಾಜಿಸ್ಟಿಕ್ ಕಂಪನಿ ಹೊತ್ತಿದ್ದು, ಪುಣೆಯಿಂದ ಕೊವಿಶೀಲ್ಡ್ ಲಸಿಕೆ 8 ವಿಮಾನಗಳಲ್ಲಿ ದೇಶದ 13 ಸ್ಥಳಗಳಿಗೆ ಸಾಗಾಟಗೊಂಡಿದೆ. ಮೊದಲ ವಿಮಾನ ದೆಹಲಿಯತ್ತ ಪ್ರಯಾಣ ಬೆಳೆಸಿದೆ ಎಂದು ಎಸ್.ಬಿ ಲಾಜಿಸ್ಟಿಕ್ ಕಂಪನಿಯ ಎಂಡಿ ಸಂದೀಪ್ ಬೋಸ್ಲೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಸೆರಮ್ ಇನ್ಸ್‌ಟಿಟ್ಯೂಟ್‌ನಿಂದ ತಯಾರಾದ ಕೊವಿಶೀಲ್ಡ್ ಲಸಿಕೆ ತುಂಬಿದ ಮೂರು ಟ್ರಕ್ಗಳು ಎಸ್ಐಐನಿಂದ ಪುಣೆ ಏರ್‌ಪೋರ್ಟ್‌ನತ್ತ ತೆರಳಿದ್ದು, ಆ ಮೂಲಕ ದೇಶದ ವಿವಿಧ ಭಾಗಗಳಿಗೆ ಲಸಿಕೆ ರವಾನೆಯಾಗಲಿದೆ.
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
Published On - 8:58 am, Wed, 13 January 21