ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 17-01-2021
ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
LIVE NEWS & UPDATES
-
ನನ್ನ ಬಳಿ ಯಾವುದೇ CD ಇಲ್ಲ-ಸಿ.ಪಿ.ಯೋಗೇಶ್ವರ್
08:17 pm ಸಚಿವ ಸ್ಥಾನ ನೀಡಿದ್ದಕ್ಕೆ ಕೆಲ BJP ಶಾಸಕರಿಂದ ವಿರೋಧ ವ್ಯಕ್ತವಾದ ಬಗ್ಗೆ ಪ್ರಶ್ನಿಸಿದ್ದಕ್ಕೆ ದಯವಿಟ್ಟು ವಿವಾದ ಮಾಡಬೇಡಿಯೆಂದು ನೂತನ ಸಚಿವ ಸಿ.ಪಿ.ಯೋಗೇಶ್ವರ್ ಕೈಮುಗಿದುಬಿಟ್ಟರು. BJP ಸರ್ಕಾರ ರಚನೆಗೆ ನನ್ನ ಪಾತ್ರದ ಬಗ್ಗೆ ತಿಳಿ ಹೇಳಬೇಕಿತ್ತು. BJP ವರಿಷ್ಠರು ಅಸಮಾಧಾನಿತ ಶಾಸಕರಿಗೆ ತಿಳಿ ಹೇಳಬೇಕಿತ್ತು. ಸರ್ಕಾರ ಹೇಗೆ ಬಂತೆಂದು ಅಸಮಾಧಾನಿತ ಶಾಸಕರಿಗೆ ಗೊತ್ತಿಲ್ಲ. ಕೆಲ ಶಾಸಕರು ಅನುಭವದ ಕೊರತೆಯಿಂದ ಮಾತನಾಡುತ್ತಿದ್ದಾರೆ ಎಂದು ಯೋಗೇಶ್ವರ್ ಹೇಳಿದರು. ಸರ್ಕಾರ ರಚನೆಯಲ್ಲಿ ನನ್ನ ಪಾತ್ರದ ಬಗ್ಗೆ ಮನದಟ್ಟು ಮಾಡಿಕೊಡಬೇಕಾಗುತ್ತದೆ ಎಂದು ಸಹ ಹೇಳಿದರು.
-
ರಾಜ್ಯದಲ್ಲಿ ಇಂದು 3263 ಜನರಿಗೆ ಮಾತ್ರ ಕೊರೊನಾ ಲಸಿಕೆ
07:50 pm ರಾಜ್ಯದಲ್ಲಿ ಇಂದು 3263 ಜನರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗಿದೆ. ಲಸಿಕೆಗಾಗಿ 6327 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. 6327 ಮಂದಿ ಪೈಕಿ 3263 ಜನರಿಗೆ ಮಾತ್ರ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ ನೋಂದಣಿ ಮಾಡಿಸಿಕೊಂಡಿದ್ದವರ ಪೈಕಿ ಶೇ.52 ಜನರಿಗೆ ಲಸಿಕೆ ನೀಡಿದಂತಾಗಿದೆ.
-
ದೆಹಲಿಯಲ್ಲಿ ಕೊರೊನಾ ಔಷಧ ಪಡೆದ 51 ಜನರಿಗೆ ಅಲರ್ಜಿ
ದೆಹಲಿಯಲ್ಲಿ ಕೊರೊನಾ ಲಸಿಕೆ ಪಡೆದ 51 ಜನರಿಗೆ ಅಲರ್ಜಿ ಉಂಟಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಭಾನುವಾರ ತಿಳಿಸಿದ್ದಾರೆ. ದೆಹಲಿಯಲ್ಲಿ 4,319 ಆರೋಗ್ಯ ಸಿಬ್ಬಂದಿಗೆ ಕೊರೊನಾ ಔಷಧ ನೀಡಲಾಗಿತ್ತು. ಈ ಪೈಕಿ 51 ಜನರಿಗೆ ಸಣ್ಣ-ಪುಟ್ಟ ಅಲರ್ಜಿ ಸಮಸ್ಯೆ ಉಂಟಾಗಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಶ್ಚಿಮಬಂಗಾಳ ಚುನಾವಣೆಯಲ್ಲಿ ಸ್ಪರ್ಧೆಗೆ ಶಿವಸೇನೆ ನಿರ್ಧಾರ
07:30 pm ಈ ವರ್ಷ ಪಶ್ಚಿಮಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವಸೇನೆ ಪಕ್ಷ ನಿರ್ಧರಿಸಿದೆ. ಶಿವಸೇನೆ ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ವಾಟಾಳ್ ನಾಗರಾಜ್ ವಿರುದ್ಧ ದೂರು ದಾಖಲು
ಚಾಮರಾಜನಗರದ ತಾಳವಾಡಿ ಗ್ರಾಮದಲ್ಲಿ ಅಳವಡಿಸಿದ್ದ ತಮಿಳು ಬೋರ್ಡ್ನನ್ನು ವಾಟಾಳ್ ನಾಗರಾಜ್ ಸುತ್ತಿಗೆಗಳಿಂದ ಒಡೆದು ತೆರವುಗೊಳಿಸಿದ್ದು, ಇವರ ವಿರುದ್ದ ತಾಳವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
57ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
ಭೂಮಿ ಕಳೆದುಕೊಂಡವರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಿಸಬೇಕೆಂದು ಒತ್ತಾಯಿಸಿ ಮೈಸೂರಿನ ನಂಜನಗೂಡಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 57ನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ಆಡಳಿತ ಮಂಡಳಿ ಕಾರ್ಮಿಕ ಸಚಿವರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಜಮೀನು ಕಳೆದುಕೊಂಡವರಿಗೆ ಕಾರ್ಖಾನೆ ಉದ್ಯೋಗ ಒದಗಿಸುವ ವಿಶ್ವಾಸವಿದೆ. ಒಂದು ವೇಳೆ ಕೆಲಸ ಕೊಡದಿದ್ದರೆ ನಾನು ಮತ್ತೆ ಮಧ್ಯೆ ಪ್ರವೇಶ ಮಾಡುತ್ತೇನೆ ನೀವು ನಡೆಸುವ ಹೋರಾಟದಲ್ಲಿ ನಾನೂ ಭಾಗಿಯಾಗುವೆ ಎಂದು ರೈತರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮೋದಿ ತ್ರಿವಳಿ ತಲಾಕ್ ಕಿತ್ತೆಸೆದರು-ಅಮಿತ್ ಶಾ
ಪ್ರಧಾನಿ ಮೋದಿ ತ್ರಿವಳಿ ತಲಾಕ್ ಕಿತ್ತೆಸೆಯುವ ಜೊತೆಗೆ ಏರ್‌ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕ್‌ಗೆ 2 ಬಾರಿ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಇದರಿಂದ ಪಾಕ್ ಪ್ರಚೋದಿತ ಭಯೋತ್ಪಾದನೆ ನಿಂತಿದೆ ಎಂದು ಗೃಹ ಸಚಿವ ಹೇಳಿದರು.
ಬೆಳಗಾವಿ KLE ಮೆಡಿಕಲ್ ಕಾಲೇಜಿಗೆ ಆಗಮಿಸಿದ ಅಮಿತ್ ಶಾ
ಜನಸೇವಕ ಸಮಾರೋಪ ಸಮಾವೇಶ ಮುಗಿಸಿ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಮೆಡಿಕಲ್ ಕಾಲೇಜಿಗೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ ರವರನ್ನು ಡಾ.ಪ್ರಭಾಕರ್ ಕೋರೆ ಸ್ವಾಗತ ಕೋರಿದರು.
ಬಿಜೆಪಿಗೆ ಮತ ನೀಡಲು ಮನವಿ ಮಾಡಿದ ಅಮಿತ್ ಶಾ
ಕಾಂಗ್ರೆಸ್‌ನವರು ಬಿಜೆಪಿಯನ್ನು ವಿರೋಧ ಮಾಡುತ್ತಾರೆ. ಮನಮೋಹನ್ ಸಿಂಗ್ ಕಾಲದಲ್ಲಿ ಏನು ಕೊಟ್ಟಿದ್ದೀರಿ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದ ಗೃಹ ಸಚಿವ ಮುಂದೆ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಬರುತ್ತಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
ಕೊವಿಡ್ ವ್ಯಾಕ್ಸಿನೇಷನ್ ಬಗ್ಗೆ ಟೀಕೆಯಾಗಿದೆ: ಅಮಿತ್ ಶಾ
ವಿಶ್ವದಲ್ಲೇ ಕೊರೊನಾ ವ್ಯಾಕ್ಸಿನೇಷನ್ ಅತಿ ದೊಡ್ಡ ಅಭಿಯಾನವಾಗಿದ್ದರು, ಲಸಿಕೆ ಬಗ್ಗೆ ಟೀಕೆ ನಡೆದಿದೆ. ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ವೇಳೆಯಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ ಎಂದು ಹೇಳಿದರು.
ಪ್ರತಿ ಮನೆಗೆ ಬ್ಯಾಂಕ್ ಖಾತೆ: ಅಮಿತ್ ಶಾ
ಮೋದಿ ಸರ್ಕಾರ ಬಂದ ಬಳಿಕ ಪ್ರತಿ ಮನೆಗೆ ಬ್ಯಾಂಕ್ ಖಾತೆ ಮತ್ತು ಹೊಗೆ ಮುಕ್ತ ದೇಶಕ್ಕಾಗಿ ಪ್ರತಿ ಮನೆಗೂ ಸಿಲಿಂಡರ್ ನೀಡಲಾಗಿದೆ ಎಂದರು. ಹಲವು ಮನೆಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯಡಿ ₹5 ಲಕ್ಷದವರೆಗೆ ವಿಮೆ ನೀಡಲಾಗಿದೆ. ಇದೆಲ್ಲಾ ಪ್ರಧಾನಿ ಮೋದಿ ಸರ್ಕಾರದ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರತಿ ಚುನಾವಣೆಯಲ್ಲೂ ಅಭೂತಪೂರ್ವ ಜಯ ಕೊಟ್ಟಿದ್ದೀರಿ: ಅಮಿತ್ ಶಾ
2014 ಮತ್ತು 2019 ರಲ್ಲಿ ಅಭೂತಪೂರ್ವ ಗೆಲುವು ಕೊಟ್ಟಿದ್ದೀರಿ ಎಂದು ಹೇಳಿದ ಗೃಹ ಸಚಿವ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿದ್ದೇವೆ. ನೆಹರು ಕಾಲದಿಂದ ಡಾ.ಸಿಂಗ್‌ವರೆಗೆ ಇದು ಆಗಿರಲಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಇದು ಸಾಧ್ಯವಾಯಿತು ಎಂದರು
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿಲಾಗಿದೆ: ಅಮಿತ್ ಶಾ
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ. ಯಡಿಯೂರಪ್ಪ, ಕಟೀಲು ನೇತೃತ್ವದಲ್ಲಿ ಈ ಗೆಲುವು ತಂದುಕೊಟ್ಟ ಜನರಿಗೆ ಆಭಾರಿಯಾಗಿದ್ದೇವೆ ಎಂದರು.
ಬೆಳವಡಿ ಮಲ್ಲಮ್ಮರನ್ನು ನೆನೆದ ಕೇಂದ್ರ ಸಚಿವ ಅಮಿತ್ ಶಾ
ಬೆಳಗಾವಿ ಜನತೆಗೆ ಸಂಕ್ರಮಣದ ಶುಭಕೋರಿದ ಅಮಿತ್ ಶಾ ಬೆಳಗಾವಿಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆಂದು ಹೇಳಿ ಬೆಳವಡಿ ಮಲ್ಲಮ್ಮರನ್ನು ನೆನೆದರು.
‘ಭಾರತ್ ಮಾತಾ ಕೀ ಜೈ’ ಜೈಕಾರ ಕೂಗಿಸಿದ ಶಾ
ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ ರವರ ಭಾಷಣ ಆರಂಭವಾಗಿದ್ದು, ಜನರಲ್ಲಿ ಭಾರತ್ ಮಾತಾ ಕೀ ಜೈ ಎಂದು ಜೈಕಾರ ಕೂಗಿಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ: ಬಿಎಸ್ವೈ
ಕಾಂಗ್ರೆಸ್ ಪಕ್ಷ ನೆಲಸಮವಾಗುತ್ತಿದೆ ಎಂದು ಮಾತನಾಡಿದ ಬಿಎಸ್ವೈ ಈ ಭಾಗದಲ್ಲಿ ಜೆಡಿಎಸ್ ಪಕ್ಷ ಇಲ್ಲದಂತಾಗಿದೆ. ಗ್ರಾಮಸ್ಥರ ಆಶೀರ್ವಾದದಿಂದ ಆಯ್ಕೆಯಾಗಿದ್ದೀರಿ. ನೀವು ಗ್ರಾಮದ ಅಭಿವೃದ್ಧಿಗಾಗಿ ಶ್ರಮವಹಿಸಬೇಕು ಎಂದು ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ತಿಳಿಸಿದರು. ಜೊತೆಗೆ ನನ್ನ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ ಎಂದರು.
ಹಣ ಬಲ, ಹೆಂಡ ಹಂಚಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತಿತ್ತು: ಬಿ.ಎಸ್.ವೈ
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಗೆ ಜಯವಾಗಿದೆ. ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಮಾವೇಶದಲ್ಲಿ ತಿಳಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಣ ಬಲ ಮತ್ತು ಹೆಂಡ ಹಂಚಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತಿತ್ತು. ಆದರೆ ಈಗ ದೇಶದಲ್ಲಿ ಅಂತಹ ಪರಿಸ್ಥಿತಿ ಇಲ್ಲ ಎಂದರು.
ರಮೇಶ್ ಅರವಿಂದ್ ಪುತ್ರಿ ಆರತಕ್ಷತೆಯಲ್ಲಿ ಸ್ಟಾರ್ಗಳ ಡ್ಯಾನ್ಸ್ ಧಮಕಾ
ಡಿಸೆಂಬರ್ 28 ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಮೇಶ್ ಅರವಿಂದ್ ಪುತ್ರಿಯ ಆರತಕ್ಷತೆ ನಿನ್ನೆ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಕಾರ್ಯಕ್ರಮ ವೇಳೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸುದೀಪ್ ಜಬರ್ದಸ್ತ್ ಸ್ಟೆಪ್ ಹಾಕಿದ್ದರು.
ಅಮಿತ್ ಶಾಗೆ ಕೇಸರಿ ಪೇಟ ತೊಡಿಸಿದ ಬೆಳಗಾವಿ ಕಾರ್ಯಕರ್ತರು
ಅಮಿತ್ ಶಾಗೆ ಶಾಲು ಹಾಗೂ ಬೆಳ್ಳಿ ಗದೆ ನೀಡುವ ಜೊತೆಗೆ ಕೇಸರಿ ಪೇಟ ತೊಡಿಸಿ ಬಿಜೆಪಿ ಕಾರ್ಯಕರ್ತರು ಅಮಿತ್ ಶಾರನ್ನು ಸ್ವಾಗತಿಸಿದರು.
ಜನಸೇವಕ ಸಮಾವೇಶಕ್ಕೆ ಅಮಿತ್ ಶಾ ಆಗಮನ
ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜನಸೇವಕ ಸಮಾರೋಪ ಸಮಾವೇಶಕ್ಕೆ ಅಮಿತ್ ಶಾ ಆಗಮಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ತಿರುಗೇಟು
ಏಪ್ರಿಲ್ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅದ್ಯಾವಾಗ ಜ್ಯೋತಿಷಿರಾದರೋ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರಾಜು ಚಿಕ್ಕನಗೌಡರ ಮನೆಯತ್ತ ತೆರಳಿದ ಅಮಿತ್ ಶಾ
ಇತ್ತೀಚೆಗೆ ನಿಧನರಾಗಿದ್ದ ಬಿಜೆಪಿ ಮುಖಂಡರಾದ ರಾಜು ಚಿಕ್ಕನಗೌಡರ ಬೆಳಗಾವಿಯ ಆಜಮ್ ನಗರದಲ್ಲಿರುವ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದರು.
ಜನಸೇವಕ ಸಮಾವೇಶಕ್ಕೆ ಕ್ಷಣಗಣನೆ
ಬೆಳಗಾವಿಯಲ್ಲಿ ಜನ ಸೇವಕ ಸಮಾರೋಪ ಸಮಾರಂಭ ಹಿನ್ನೆಲೆ ನೂತನವಾಗಿ ಗೆದ್ದಿರುವ ಗ್ರಾಮ ಪಂಚಾಯತಿ ಸದಸ್ಯರು ಆಗಮಿಸಿಸುತ್ತಿದ್ದು, ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ
ಜನಸೇವಕ ಸಮಾವೇಶಕ್ಕೆ ತೆರಳಿದ ಕೇಂದ್ರ ಗೃಹ ಸಚಿವ
ಸುರೇಶ್ ಅಂಗಡಿ ನಿವಾಸದಿಂದ ತೆರಳಿದ ಅಮಿತ್ ಶಾ ಜನಸೇವಕ ಸಮಾವೇಶದತ್ತ ಸಾಗುತ್ತಿದ್ದಾರೆ. ಅಮಿತ್ ಶಾ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪ್ರಯಾಣ ಬೆಳೆಸಿದ್ದಾರೆ
ದಿ.ಸುರೇಶ್ ಅಂಗಡಿ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ
ಬೆಳಗಾವಿಯ ವಿಶ್ವೇಶ್ವರಯ್ಯನಗರದಲ್ಲಿರುವ ದಿ.ಸುರೇಶ್ ಅಂಗಡಿ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ದಿವಗಂತ ಸುರೇಶ್ ಅಂಗಡಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಂಡ್ಯ ಸೋಲನ್ನು ಮರೆಯದ ನಿಖಿಲ್ ಕುಮಾರಸ್ವಾಮಿ
ಮಂಡ್ಯದ ಎಲ್ಲಾ ಶಾಸಕರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದ್ದರು. ಅವರ ಅಭಿಪ್ರಾಯದ ಪ್ರಕಾರ ನಾನು ಚುನಾವಣೆಗೆ ನಿಂತೆ. ಚುನಾವಣೆಯಲ್ಲಿ ಸೋತಿರುವುದು ಚಿಂತೆ ಇಲ್ಲ. ನೀವು ನಾನು ಗೆಲ್ಲುತ್ತೇನೆ ಅಂದುಕೊಂಡಿದ್ರಿ. ಆದರೆ ಆಗ ನನಗೆ ಜಿಲ್ಲೆಯ ಅಷ್ಟೊಂದು ಸಂಪರ್ಕವಿರಲಿಲ್ಲ. ಹಾಗಂತ ನನ್ನ ವಿರೋಧವಾಗಿ ನಿಂತಿದ್ದವರಿಗೆ ಜಿಲ್ಲೆಯಲ್ಲಿ ಅಷ್ಟು ಜನ ಸಂಪರ್ಕ ಇರಲಿಲ್ಲ. ಕುಮಾರಣ್ಣನವರ ಶಕ್ತಿ ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ತಿಳಿಸಿದರು.
ರವಿ ಹಿರೇಮಠ ಕುಟುಂಬಸ್ಥರಿಗೆ ಅಮಿತ್ ಶಾ ಸಾಂತ್ವನ
ಬಿಜೆಪಿ ಸಂಘಟನಾ ಕಾರ್ಯದರ್ಶಿ ರವಿ ಹಿರೇಮಠ 2 ತಿಂಗಳ ಹಿಂದಷ್ಟೇ ನಿಧನರಾಗಿದ್ದು, ಬೆಳಗಾವಿ ಸರ್ಕ್ಯೂಟ್ ಹೌಸ್‌ನಲ್ಲಿ ಕುಟುಂಬಸ್ಥರಿಗೆ ಅಮಿತ್ ಶಾ ಸಾಂತ್ವನ ಹೇಳಿದರು.
ಸುರೇಶ್ ಅಂಗಡಿ ನಿವಾಸದತ್ತ ತೆರಳಿದ ಅಮಿತ್ ಶಾ
ಬೆಳಗಾವಿಯ ಸರ್ಕ್ಯೂಟ್ ಹೌಸ್ನಿಂದ ದಿ.ಸುರೇಶ್ ಅಂಗಡಿ ನಿವಾಸದತ್ತ ಅಮಿತ್ ಶಾ ಮತ್ತು ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಜೋಶಿ ತೆರಳಿದರು.
ಯೂನಿವರ್ಸಿಟಿಯಲ್ಲಿ ಓದಿದವರೇ ಹೆಚ್ಚೆಚ್ಚು ಜಾತಿವಾದಿಗಳು: ಸಿದ್ದರಾಮಯ್ಯ
ಇವ ನಮ್ಮವ ಎಂದು ನೀನು ಯಾವ ಜಾತಿ ಅಂತಾ ಕೇಳುತ್ತಾರೆ. ಯಾರಿಗೆ ಮನುಷ್ಯತ್ವ ಇರುವುದಿಲ್ಲವೋ ಅವರು ಮಾತ್ರ ಅವಮಾನ ಆಗುವಂತೆ ಮಾತನಾಡುತ್ತಾರೆ. ಯೂನಿವರ್ಸಿಟಿಯಲ್ಲಿ ಓದಿದವರೇ ಹೆಚ್ಚೆಚ್ಚು ಜಾತಿವಾದಿಗಳಾಗಿದ್ದಾರೆ ಎಂದು ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದೊಂದು ಜಯಂತಿ ಮಾಡುವವರನ್ನು ಒಂದೊಂದು ವರ್ಗ ಮಾಡಿಬಿಟ್ಟಿದ್ದಾರೆ ಇದು ನಿಲ್ಲಬೇಕು ಎಂದು ಮೈಸೂರಿನಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
‘ತಾಂಡವ್’ ವೆಬ್ ಸಿರೀಸ್ ವಿರುದ್ಧ ದೂರು ದಾಖಲಿಸಿದ ಶಾಸಕ
‘ತಾಂಡವ್’ ವೆಬ್ ಸಿರೀಸ್ ಹಿಂದೂ ದೇವರನ್ನು ಅವಮಾನಿಸಿದೆ ಎಂದು ಆರೋಪಿಸಿ ಮುಂಬೈನ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ದೂರು ದಾಖಲಿಸಿ ನಟ, ನಿರ್ದೇಶಕ ಮತ್ತು ನಿರ್ಮಾಪಕ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ: ಸಿದ್ದರಾಮಯ್ಯ
ನಾನು ನೇರವಾಗಿ ಮಾತನಾಡುವವನು. ನನ್ನ ಹೇಳಿಕೆಗೆ ಆರ್ಎಸ್ಎಸ್ನವರು ರಂಗು ರಂಗಿನ ಬಣ್ಣ ಕಟ್ಟುತ್ತಾರೆ. ಆದ್ದರಿಂದ ನಾನು ಮಾತನಾಡುವ ವಿಚಾರ ವಿವಾದವಾಗುತ್ತದೆ. ಸಾಧ್ಯವಾದಷ್ಟು ಸತ್ಯ ಹೇಳುವುದಕ್ಕೆ ಪ್ರಯತ್ನ ಮಾಡುತ್ತೇನೆ. ಹಳ್ಳಿ ಭಾಷೆಯಲ್ಲಿ ಮಾತಾಡುತ್ತೇನೆ. ಅದಕ್ಕೆ ವಿವಾದವಾಗುತ್ತೇನೆ ಎಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣದಲ್ಲಿ ಹೆಚ್ಚು ವಿವಾದಕ್ಕೆ ಒಳಗಾಗುವುದು ನಾನೇ ಎಂದು ಹೇಳಿದ್ದಾರೆ.
ಶಾಂತಿಯುತ ಹೋರಾಟ ಕ್ರಾಂತಿಯಾಗುತ್ತದೆ: ವಿಜಯಾನಂದ ಕಾಶಪ್ಪನವರ್
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿ, ಸದ್ಯಕ್ಕೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಇದು ಹೀಗೆಯೇ ಮುಂದುವರೆದರೆ ಕ್ರಾಂತಿಯಾಗುತ್ತದೆ ಎಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಒಂದೂವರೆ ಲಕ್ಷಕ್ಕೂ ಅಧಿಕ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ
ಬಿಜೆಪಿ ಜನಸೇವಕ ಸಮಾವೇಶಕ್ಕೆ ಆಗಮಿಸುತ್ತಿರುವ ಒಂದೂವರೆ ಲಕ್ಷಕ್ಕೂ ಅಧಿಕ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು, ಬೆಳಗಾವಿಯ ಕೆಇಬಿ ಮೈದಾನದಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಫಿನಿಕ್ಸ್ ಶಾಲಾ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಕೇಸರಿ ಶಾಲು ಹಾಕಿ ಸ್ವಾಗತ ಕೋರಿದ ನಾಯಕರು
ಬೆಳಗಾವಿಯ ಸರ್ಕ್ಯೂಟ್ ಹೌಸ್‌ಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೇಸರಿ ಶಾಲು ಹಾಕಿ ಬಿಜೆಪಿ ನಾಯಕರು ಸ್ವಾಗತಿಸಿದ್ದು, ಕೊಠಡಿ ಸಂಖ್ಯೆ ಒಂದರಲ್ಲಿ ಅಮಿತ್ ಶಾ, ಕೊಠಡಿ ಸಂಖ್ಯೆ 5 ರಲ್ಲಿ ಬಿ.ಎಸ್.ಯಡಿಯೂರಪ್ಪಗೆ ಮತ್ತು ಕೊಠಡಿ ಸಂಖ್ಯೆ ಎರಡರಲ್ಲಿ ಉಳಿದ ಸಚಿವರು ಮತ್ತು ಶಾಸಕರಿಗೆ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಎಪಿಎಂಸಿ ವ್ಯವಸ್ಥೆಯನ್ನು ಹಾಳು ಮಾಡಿದೆ: ಡಾ.ಜಿ.ಪರಮೇಶ್ವರ್
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಎಪಿಎಂಸಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಹಾಳುಮಾಡಿದೆ. ಇವರು ಅಂಬಾನಿಗೋಸ್ಕರ ಈ ಕಾಯ್ದೆ ಜಾರಿ ಮಾಡಿದ್ದಾರೆ. ಹೀಗಾಗಿ ಕೃಷಿ ತಿದ್ದುಪಡಿ ಕಾಯ್ದೆ ಬಗ್ಗೆ ರೈತರಿಗೆ ಅನುಮಾನವಿದೆ ಎಂದು ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್‌ಗೆ ಅಮಿತ್ ಶಾ ಆಗಮನ
ಬೆಳಗಾವಿಯ ಸರ್ಕ್ಯೂಟ್ ಹೌಸ್‌ಗೆ ಕೇಂದ್ರ ಗೃಹ ಸಚಿವ ಆಗಮಿಸಿದ ಜೊತೆಗೆ ಡಿಸಿಎಂ ಗೋವಿಂದ್ ಕಾರಜೋಳ ಆಗಮಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ವಿರೋಧಿಯಾಗಿದೆ: ಈಶ್ವರ್ ಖಂಡ್ರೆ
ರೈತರು ಗುಲಾಮರನ್ನಾಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಷಂಡ್ಯಂತ್ರ ನಡೆಸಿವೆ. ಭೂ ಸುಧಾರಣೆ ಕಾನೂನುಗಳು ರೈತರಿಗೆ ಮರಣಶಾಸನವಾಗಲಿವೆ. ಅಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ವಿರೋಧಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಜಿ7 ಶೃಂಗಸಭೆಗೆ ವಿಶೇಷ ಅತಿಥಿಯಾಗಿ ಪ್ರಧಾನಿಗೆ ಆಹ್ವಾನ
ಬ್ರಿಟನ್ ಕಾರ್ನ್‌ವೆಲ್‌ನಲ್ಲಿ ಜೂನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಎಂಟಿಬಿ ನಾಗರಾಜ್ಗೆ ಟಗರು ಉಡುಗೊರೆ
ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಎಂಟಿಬಿ ನಾಗರಾಜ್ಗೆ ಹೊಸಕೋಟೆಯ ಅಭಿಮಾನಿ ಬಳಗ ಟಗರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸರ್ಕ್ಯೂಟ್ ಹೌಸ್‌ನಲ್ಲಿ ಅಮಿತ್ ಶಾ ಗೆ ಊಟ ತಯಾರಿ
ಕೆಲ ಹೊತ್ತಿನಲ್ಲಿಯೇ ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಆಗಮಿಸಲಿರುವ ಅಮಿತ್ ಶಾ ಗೆ ಭೋಜನ ಸಿದ್ದವಾಗಿದೆ. ಗುಜರಾತ್ ಶೈಲಿಯ ಭೋಜನವನ್ನು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಿದ್ದಪಡಿಸಿದ್ದು, ಆಹಾರ ಗುಣಮಟ್ಟವನ್ನು ಆರೋಗ್ಯ ಇಲಾಖೆಯ ತಂಡ ಪರಿಶೀಲನೆ ನಡೆಸಿದೆ.
ಅಮಿತ್ ಶಾ ಮತ್ತು ಸಿಎಂ ಬಿಎಸ್‌ವೈಗೆ ಸನ್ಮಾನ
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪಗೆ ಬೆಳ್ಳಿ ತಟ್ಟೆ ನೀಡಿ ಸಚಿವ ಮುರುಗೇಶ್ ನಿರಾಣಿ ಸನ್ಮಾನ ಮಾಡಿದರು.
ಕೆರಕಲಮಟ್ಟಿಯಿಂದ ತೆರಳಿದ ಅಮಿತ್ ಶಾ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ತೆರಳಿದರು.
ರೈತರ ಕೆಲಸದಲ್ಲಿ BSY ಸರ್ಕಾರ ಹಿಂದೆ ಮುಂದೆ ನೋಡಿಲ್ಲ: ಅಮಿತ್ ಶಾ
ಕೇಂದ್ರದ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರ ಕೆಲಸದಲ್ಲಿ ಯಡಿಯೂರಪ್ಪ ಸರ್ಕಾರ ಒಳ್ಳೆಯ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ
ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಆದಾಯ ದ್ವಿಗುಣಗೊಳಿಸುತ್ತೀವಿ ಎಂದಾಗ ಕಾಂಗ್ರೆಸ್ ನಾಯಕರು ನಗುತ್ತಿದ್ದರು. ಈಗಾಗಲೇ ನಾವು ರೈತರ ಆದಾಯ ದ್ವಿಗುಣಗೊಳಿಸುವ ಕೆಲಸ ಮಾಡ್ತಿದ್ದೇವೆ. ಆದರೆ ಕಾಂಗ್ರೆಸ್ ರೈತರನ್ನು ಮುಂದಿಟ್ಟುಕೊಂಡು ಟೀಕೆ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಮೋದಿ ಕನಸನ್ನು ಮುರುಗೇಶ್ ನಿರಾಣಿ ನನಸು ಮಾಡುತ್ತಿದ್ದಾರೆ: ಅಮಿತ್ ಶಾ
ಮೋದಿ ಪ್ರಧಾನಿಯಾಗಲು ಕರ್ನಾಟಕದ ಕೊಡುಗೆ ಅಪಾರವಾಗಿದೆ. ಮೋದಿರವರ ಜೋಳಿಗೆಯನ್ನು ಕರ್ನಾಟಕದ ಜನತೆ ತುಂಬಿದ್ದಾರೆ. ಥೆನಾಲ್ ಉತ್ಪಾದನೆಗೆ ಪ್ರಧಾನಿ ಮೋದಿ ಯೋಜನೆ ನೀಡಿದ್ದಾರೆ. ಇದರ ಜೊತೆಗೆ ನರೇಂದ್ರ ಮೋದಿ ಕನಸನ್ನು ಮುರುಗೇಶ್ ನಿರಾಣಿ ನನಸು ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.
ಮಕರ ಸಂಕ್ರಾಂತಿಯ ಶುಭ ಕೋರಿದ ಅಮಿತ್ ಶಾ
ಬಾಗಲಕೋಟೆಯ ಭೂಮಿ ಸುಜಲಾಂ ಸುಫಲಾಂ ಭೂಮಿಯಾಗಿದೆ ಎಂದು ಹೇಳಿದ ಅಮಿತ್ ಶಾ ಕೃಷ್ಣಾ-ಘಟಪ್ರಭಾ ನದಿಗಳು ಇಲ್ಲಿ 12 ತಿಂಗಳು ತುಂಬಿ ಹರಿಯುತ್ತದೆ ಎಂದು ಜನರಿಗೆ ಮಕರ ಸಂಕ್ರಾಂತಿಯ ಶುಭ ಕೋರಿದರು. ಬಳಿಕ ಮುರುಗೇಶ್ ನಿರಾಣಿಯವರನ್ನ ಉತ್ಸವ ಮೂರ್ತಿ ಎಂದು ಹೇಳಿದರು.
ಬಾಗಲಕೋಟೆ ಕ್ಷೇತ್ರದ ಭೂಮಿಗೆ ನಮನ ಸಲ್ಲಿಸಿದ ಅಮಿತ್ ಶಾ
ಘಟಪ್ರಭಾ ನದಿ ನೀರಿನಿಂದ ಕೃಷಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದು, ಮಕರ ಸಂಕ್ರಾಂತಿ ರೈತರಿಗೆ ದೊಡ್ಡ ಉತ್ಸವವಾಗಿರುತ್ತದೆ ಎಂದು ಮಾತನಾಡಿದ ಅಮಿತ್ ಶಾ ಬಾಗಲಕೋಟೆ ಕ್ಷೇತ್ರದ ಭೂಮಿಗೆ ನಮನ ಸಲ್ಲಿಸಿದರು.
ಅಮಿತ್ ಶಾ ಭಾಷಣ ಆರಂಭ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಕಾರ್ಯಕ್ರಮದಲ್ಲಿ ಕೇಂದ್ರದ ಗೃಹ ಸಚಿವ ಅಮಿತ್ ಶಾ ರವರು ಭಾಷಣ ಆರಂಭಿಸಿದ್ದಾರೆ.
ವಲ್ಲಭ್ಭಾಯಿ ಪಟೇಲ್ ಮಟ್ಟಕ್ಕೆ ಅಮಿತ್ ಶಾ ಬೆಳೆದಿದ್ದಾರೆ: ಬಿ.ಎಸ್.ಯಡಿಯೂರಪ್ಪ
ಸರ್ದಾರ್ ವಲ್ಲಭ್ಭಾಯಿ ಪಟೇಲ್ ನಂತರ ಆ ಮಟ್ಟಕ್ಕೆ ಬೆಳೆದ ಮತ್ತೊಬ್ಬ ವ್ಯಕ್ತಿ ಎಂದರೆ ಅದು ಅಮಿತ್ ಶಾ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಮತ್ತು ಅಮಿತ್ ಶಾ ಮತ್ತೊಮ್ಮೆ ಕೇಂದ್ರ ಗೃಹ ಸಚಿವರಾಗಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ಕೆರಕಲಮಟ್ಟಿ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ರಾಜ್ಯ ಸರ್ಕಾರದ ವಿರುದ್ಧ ಕಲಾವಿದರಿಂದ ಪ್ರತಿಭಟನೆ
ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ನಿಷೇಧ ಹಿನ್ನೆಲೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಾಳೆ ಕಲಾವಿದರಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಆರ್.ಶಂಕರ್ ತಿಳಿಸಿದ್ದಾರೆ.
ಬಸವವಣ್ಣನವರು ಐಕ್ಯರಾದ ಪೂಣ್ಯ ಭೂಮಿಯಿದು: ಸಚಿವ ಮುರುಗೇಶ್ ನಿರಾಣಿ
ಬಾಗಲಕೋಟೆ ಜಿಲ್ಲಾ ಇತಿಹಾಸದಲ್ಲೆ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಇದು ಬಸವವಣ್ಣನವರು ಐಕ್ಯರಾದ ಪೂಣ್ಯ ಭೂಮಿ ಎಂದು ಶುಗರ್ ಫ್ಯಾಕ್ಟರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ತಿಳಿಸಿದರು
ಸರ್ಕ್ಯೂಟ್ ಹೌಸ್ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್
ಮಧ್ಯಾಹ್ನ 1.15ಕ್ಕೆ ಬೆಳಗಾವಿಯ ಸರ್ಕ್ಯೂಟ್ ಹೌಸ್ ಗೆ ಆಗಮಿಸಲಿರುವ ಅಮಿತ್ ಶಾ 3.15 ರ ವರೆಗೂ ಸರ್ಕ್ಯೂಟ್ ಹೌಸ್ ನಲ್ಲೇ ಇರಲಿದ್ದಾರೆ. ಹೀಗಾಗಿ ಸರ್ಕ್ಯೂಟ್ ಹೌಸ್ ಸುತ್ತಮುತ್ತ ಓರ್ವ ಎಸ್‌ಪಿ ನೇತೃತ್ವದಲ್ಲಿ ಇನ್ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು, ಮಾಧ್ಯಮಗಳಿಗೂ ನಿಷೇಧ ಹೇರಲಾಗಿದೆ. ಎರಡು ಗಂಟೆಗಳ ಕಾಲಾವಕಾಶದಿಂದ ರೆಬಲ್ ಶಾಸಕರು ಮತ್ತು ಸಚಿವರು ಅಮಿತ್ ಶಾರನ್ನು ಭೇಟಿಯಾಗಲಿದ್ದಾರೆ.
ಹೋರಾಟ ನಿರತರನ್ನು ತಡೆಹಿಡಿದ ಪೊಲೀಸರು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯಲ್ಲಿ ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ನೀಡದ ಹಿನ್ನೆಲೆ ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಕಾರ್ಯಕ್ರಮದ ಕಡೆ ತೆರಳದಂತೆ ಕೆರಕಲಮಟ್ಟಿ ಕ್ರಾಸ್ ಬಳಿ ಪೊಲೀಸರು ತಡೆಹಿಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳ ಮುನ್ನಡೆ ಪಡೆದ ಆಸ್ಟ್ರೇಲಿಯಾ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 336 ರನ್ ಗಳಿಸಲಷ್ಟೇ ಶಕ್ತವಾಗಿದೆ. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 33 ರನ್ಗಳ ಮುನ್ನಡೆ ಪಡೆದಿದೆ.
ಕಾಯ್ದೆ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ: ಸಿ.ಟಿ.ರವಿ
ರೈತರ ಅನುಕೂಲಕ್ಕಾಗಿ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ ಇದರ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ
ತುಮಕೂರಿನ ಕ್ಯಾತ್ಸಂದ್ರದಲ್ಲಿರುವ ಸಿದ್ಧಗಂಗಾ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಡಾ.ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು.
330 ರನ್ಗಳಿಗೆ 9 ವಿಕೆಟ್ ಕಳೆದುಕೊಂಡ ಭಾರತ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, 62 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ವಾಷಿಂಗ್ಟನ್ ಟನ್ ಸುಂದರ್ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದ್ದಾರೆ. ಭಾರತ 330 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿದೆ.
ಯಾವುದೇ ದೇಶಕ್ಕೂ ಭಾರತ ಕಡಿಮೆಯಿಲ್ಲ: ಸಿ.ಟಿ ರವಿ
ಕೊರೊನಾ ಲಸಿಕೆಯನ್ನು ಭಾರತವೇ ಕಂಡು ಹಿಡಿದು ಪ್ರಪಂಚದ ಯಾವುದೇ ದೇಶಕ್ಕೂ ಕಮ್ಮಿಯಿಲ್ಲವೆಂದು ತೋರಿಸಿದೆ ಎಂದು ಬಾಗಲಕೋಟೆ ಶುಗರ್ ಫ್ಯಾಕ್ಟರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸೈಡ್ ಎಫೆಕ್ಟ್ ಆಗಿಲ್ಲ: ಮಂಜುನಾಥ್ ಪ್ರಸಾದ್
ನಾಲ್ಕು ಕಡೆ ಲಸಿಕೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ದೊಡ್ಡದಾದ ಕಾರ್ಯಕ್ರಮ ಎಂದರೆ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಇವತ್ತು ಸುಮಾರು 4 ಸಾವಿರ ಮಂದಿಗೆ ವ್ಯಾಕ್ಸಿನ್ ನೀಡುತ್ತಿದ್ದಾರೆ. ಈಗಾಗಲೇ ಒಂದು ಸಾವಿರ ಮಂದಿ ಲಸಿಕೆ ತೆಗೆದುಕೊಂಡಿದ್ದು, ಇದರಲ್ಲಿ ಯಾವುದೇ ಸೈಡ್ ಎಫೆಕ್ಟ್ ಕಾಣಿಸಿಕೊಂಡಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ವಶಕ್ಕೆ ಪಡೆದ ಪೊಲೀಸರು
ನೂತನ ಕೃಷಿ ಮಸೂದೆ ಖಂಡಿಸಿ ಬೆಳಗಾವಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಜಯಶ್ರೀ ಗೂರನ್ನವರ, ಚೂನಪ್ಪ ಪೂಜೇರಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಕ್ಕರೆ ಕಾರ್ಖಾನೆ ಉದ್ಘಾಟನೆ ಮಾಡಿದ ಅಮಿತ್ ಶಾ
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಬಳಿಯಿರುವ ಮುರುಗೇಶ್ ನಿರಾಣಿ ಒಡೆತನದ ಕೇದಾರನಾಥ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಿದ ಅಮಿತ್ ಶಾ, ಇದೇ ವೇಳೆ ಎಥೆನಾಲ್ ಘಟಕಕ್ಕೂ ಶಂಕುಸ್ಥಾಪನೆ ನೆರವೇರಿಸಿದರು.
ಗೋವುಗಳಿಗೆ ಪೂಜೆ ಸಲ್ಲಿಸಿದ ಕೇಂದ್ರ ಗೃಹ ಸಚಿವ ಶಾ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ವೇದಿಕೆಯ ಮುಂದೆ 11 ಗೋವುಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪೂಜೆ ಸಲ್ಲಿಸಿದರು.
67 ರನ್ ಗಳಿಸಿದ ಶಾರ್ದೂಲ್ ಠಾಕೂರ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಡ್ರಿಂಕ್ಸ್ ವಿರಾಮಕ್ಕೂ ಮುನ್ನ 67 ರನ್ ಗಳಿಸಿದ್ದ ಶಾರ್ದೂಲ್ ಠಾಕೂರ್, ಪ್ಯಾಟ್ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದ್ದಾರೆ
ಆಸ್ಪತ್ರೆಗೆ ಬೇಟಿ ನೀಡಿದ ಬಿಬಿಎಂಪಿ ಆಯುಕ್ತ
ಮಣಿಪಾಲ್ ಆಸ್ಪತ್ರೆಗೆ ಬೇಟಿ ನೀಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವ್ಯಾಕ್ಸಿನೇಷನ್ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದರು.
ಅಮಿತ್ ಶಾ ವೇದಿಕೆಗೆ ಆಗಮಿಸಲು ಕೆಲವೇ ಕ್ಷಣ ಭಾಕಿ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಶುಗರ್ ಫ್ಯಾಕ್ಟರಿ ಲೋರ್ಕಾಪಣೆ ಕಾರ್ಯಕ್ರಮ ನಡೆಸಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಅಮಿತ್ ಶಾ ವೇದಿಕೆಗೆ ಆಗಮಿಸುತ್ತಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಹಲವು ಗಣ್ಯರು ಈಗಾಗಲೇ ವೇದಿಕೆಗೆ ಆಗಮಿಸಿದ್ದಾರೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ: ಮೋದಿ
ಕೆವಾಡಿಯಾಗೆ ತೆರಳುವ 8 ರೈಲುಗಳಿಗೆ ಚಾಲನೆ ನೀಡಿದ ಮೋದಿ, ದೇಶದ ವಿವಿಧ ಮೂಲೆಗಳಿಂದ ಒಂದೇ ಸ್ಥಳಕ್ಕೆ ರೈಲು ಸೇವೆ ನೀಡಿದ್ದು, ರೈಲ್ವೆ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ. ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರೈಲ್ವೆ ಯೋಜನೆ ಕೇವಲ ಪ್ರವಾಸಿಗರಿಗೆ ಅನುಕೂಲವಾಗಲ್ಲ. ಕೆವಾಡಿಯಾದ ಬುಡಕಟ್ಟು ಜನಾಂಗಕ್ಕೂ ಅನುಕೂಲವಾಗಿ ಅವರ ಜೀವನವನ್ನು ಸಹ ಬದಲಿಸಲಿದೆ ಎಂದು ತಿಳಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸ್ಥಳೀಯ ನಾಯಕರು ಅದ್ದೂರಿಯಾಗಿ ಸ್ವಾಗತ ಕೋರಿದರು. ಹೂ ಗುಚ್ಚ ನೀಡಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ವಾಗತ ಮಾಡಿಕೊಂಡರು.
8 ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಏಕತಾ ಪ್ರತಿಮೆ ಇರುವ ಗುಜರಾತ್‌ನ ಕೆವಡಿಯಾಗೆ ದೇಶದ ವಿವಿಧ ಭಾಗಗಳಿಂದ ಸಂಚರಿಸುವ 8 ರೈಲುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು.
ಅರುಣ್ ಸಿಂಗ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಚರ್ಚೆ
ಬೆಳಗಾವಿಯ ಯುಕೆ 27 ಹೋಟೆಲ್‌ಗೆ ಆಗಮಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತುಕತೆ ನಡೆಸುತ್ತಿದ್ದಾರೆ.
ಭಯಪಡದೇ ವ್ಯಾಕ್ಸಿನ್ ತೆಗೆದುಕೊಳ್ಳಬೇಕು: ಡಾ.ಸುದರ್ಶನ್ ಬಲ್ಲಾಳ್
ಲಸಿಕೆ ಎಷ್ಟರ ಸಮಯ ಎಫೆಕ್ಟ್ ಇರುತ್ತದೆ ಎಂದು ಇನ್ನು ಗೊತ್ತಿಲ್ಲ. ಸುಮಾರು 6 ರಿಂದ 12 ತಿಂಗಳವರೆಗೂ ಕೆಲಸ ಮಾಡಬಹುದು. ವ್ಯಾಕ್ಸಿನ್ ತೆಗೆದುಕೊಂಡು ಒಂದು ದಿನವಾಯಿತು. ಆದರೆ ನನಗೆ ಏನೇನು ಸೈಡ್ ಎಫೆಕ್ಟ್ ಆಗಿಲ್ಲ. ಹೀಗಾಗಿ ವ್ಯಾಕ್ಸಿನ್ ಬಹಳ ಸೇಫ್ ಎಂದು ಅನಿಸುತ್ತಿದೆ. ಯಾರು ಕೂಡ ಭಯಪಡದೇ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಜೊತೆಗೆ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರವನ್ನು ಮುಂದುವರಿಸಬೇಕು ಎಂದು ಮಣಿಪಾಲ್ ಆಸ್ಪತ್ರೆಯ ಚೇರಮನ್ ಡಾ.ಸುದರ್ಶನ್ ಬಲ್ಲಾಳ್ ತಿಳಿಸಿದರು.
ಕನ್ನಡಕ್ಕೆ ಬಗೆದ ದ್ರೋಹವಿದು: ಕುಮಾರಸ್ವಾಮಿ ಟ್ವೀಟ್
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ RAF ಘಟಕವನ್ನು ಅಮಿತ್ ಶಾರವರು ಶಂಕುಸ್ಥಾಪನೆ ಮಾಡಿದ್ದು, ಈ ಸಮಯದಲ್ಲಿ ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ. ಹಿಂದಿ, ಆಂಗ್ಲ ಭಾಷೆಯ ಫಲಕ ಮಾತ್ರ ಅಳವಡಿಸಿ ಕನ್ನಡ ನಿರ್ಲಕ್ಷ್ಯ ಮಾಡಿರುವುದು ಕಾಣುತ್ತದೆ. ಈ ನೆಲದಲ್ಲಿ ಕನ್ನಡ ಫಲಕ ಇಲ್ಲದಿರುವುದು ಅಕ್ಷಮ್ಯ. ಕೇಂದ್ರ ಸಚಿವ ಅಮಿತ್ ಶಾ ತ್ರಿಭಾಷಾ ಸೂತ್ರ ಉಲ್ಲಂಘಿಸಿದ್ದಾರೆ. ಅಮಿತ್ ಶಾ, ಸಿಎಂ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿಗಳ ನಡೆ ಕನ್ನಡಕ್ಕೆ ಬಗೆದ ದ್ರೋಹವಾಗಿದೆ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನದಾಟ ನಡೆಯುತ್ತಿದ್ದು, ಪ್ರಮುಖ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರ ಜೊತೆಯಾಟ ನೆರವಾಗಿದೆ. ಶಾರ್ದುಲ್ ಠಾಕೂರ್ 94 ಎಸೆತಗಳನ್ನ ಎದುರಿಸಿ ಭರ್ಜರಿ 2 ಸಿಕ್ಸರ್ಗಳೊಂದಿಗೆ 54 ರನ್ ಸಿಡಿಸಿದರೆ, 110 ಬಾಲ್ಗಳನ್ನ ಎದುರಿಸಿರುವ ವಾಷಿಂಗ್ಟನ್ ಸುಂದರ್ 50 ರನ್ ಬಾರಿಸಿದ್ದಾರೆ.
ಅಮಿತ್ ಶಾ ಜೊತೆ ಸೌಹಾರ್ದಯುತ ಭೇಟಿ: ಡಾ.ಕೆ.ಸುಧಾಕರ್
ನಿನ್ನೆ ನನ್ನ ಹೆಸರನ್ನೂ ನೀಡಲಾಗಿತ್ತು. ಆದರೆ ನಿನ್ನೆ ಲಸಿಕೆ ಕಾರ್ಯಕ್ರಮ ಇದ್ದರಿಂದ ಹೋಗಲು ಆಗಲಿಲ್ಲ. ಹಾಗಾಗಿ ಇಂದು ಗೃಹ ಸಚಿವ ಅಮಿತ್ ಶಾ ರನ್ನು ಭೇಟಿಯಾದೆ. ಲಸಿಕಾ ಕಾರ್ಯಕ್ರಮದ ಬಗ್ಗೆ ವಿಚಾರಿಸಿದರು. ಇದು ಒಂದು ಔಪಚಾರಿಕ ಭೇಟಿ ಅಷ್ಟೇ ಎಂದು ಸುಧಾಕರ್ ಹೇಳಿಕೆ ನೀಡಿದ್ದಾರೆ.
ಅಚ್ಚುಕಟ್ಟಾಗಿ ಲಸಿಕೆ ಕಾರ್ಯ ನಡೆಯುತ್ತಿದೆ: ಡಾ.ಸುಧಾಕರ್
ಎರಡನೇ ದಿನವಾದ ಭಾನುವಾರ ಕೂಡಾ ಲಸಿಕೆ ಕಾರ್ಯ ನಡೆಯುತ್ತಿದೆ. ಎಲ್ಲಾ ವೈದ್ಯರು, ನರ್ಸಿಂಗ್ ಸಿಬ್ಬಂದಿ ಸೇರಿ ಲಸಿಕೆ ಕೊಡುತ್ತಿದ್ದಾರೆ. ಎಲ್ಲ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿದೆ. ಬೂತ್‌ಗಳು ಎಲ್ಲವೂ ಚೆನ್ನಾಗಿದ್ದು, ಶೇ.70 ರಿಂದ 80 ಲಸಿಕೆ ಕೊಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆಂದು ಸಚಿವ ಡಾ.ಸುಧಾಕರ್ ಹೇಳಿದರು.
ಅಮಿತ್ ಶಾ ಸ್ವಾಗತಕ್ಕೆ ಸಜ್ಜಾದ ನಿರಾಣಿ ಕುಟುಂಬ
ನಿರಾಣಿ ಓಡೆತನದ ಸಕ್ಕರೆ ಫ್ಯಾಕ್ಟರಿ ಉದ್ಘಾಟನೆಗೆ ಅಗಮಿಸಲಿರುವ ಅಮಿತ್ ಶಾ ಗೆ ಸ್ವಾಗತ ಕೋರಲು ನಿರಾಣಿ ಕುಟುಂಬ ಸಜ್ಜಾಗಿದ್ದು, 11 ಗಂಟೆ ಹೊತ್ತಿಗೆ ವೇದಿಕೆಗೆ ಆಗಮಿಸುತ್ತಾರೆ. ಶಾ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಕೂಡಾ ಆಗಮಿಸುವ ಸಾಧ್ಯತೆಯಿದೆ.
ಅಮಿತ್ ಶಾಗೆ ದೂರು ನೀಡುತ್ತೇವೆ: ದೀಪಾ ಕುಡಚಿ
ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಡಿಸಿದ್ದು, ಮಾಜಿ ಸಚಿವ ಶಶಿಕಾಂತ್ ನಾಯಕ್, ದೀಪಾ ಕುಡಚಿ ಸೇರಿ ಅನೇಕರು ಏರ್‌ಪೋರ್ಟ್‌ನಿಂದ ಹೊರಗೆ ನಿಂತಿದ್ದಾರೆ. ಇತ್ತೀಚೆಗೆ ಪಕ್ಷಕ್ಕೆ ಬಂದ ಡಾ.ಸೋನಾಲಿ ಸೋರ್ನಾಬತ್ ರನ್ನು ಏರ್‌ಪೋರ್ಟ್ ಒಳಗೆ ಬಿಟ್ಟಿದ್ದಾರೆ. ಹಿರಿಯ ನಾಯಕರು ಹೊರಗೆ ನಿಂತಿದ್ದಾರೆ, ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದೇವೆ. ಅವಕಾಶ ಸಿಕ್ಕರೆ ಅಮಿತ್ ಶಾ ಸೇರಿ ಇತರೆ ವರಿಷ್ಠರಿಗೆ ದೂರು ನೀಡಯತ್ತೇವೆ ಎಂದು ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ದೀಪಾ ಕುಡಚಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಆರಂಭ
ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ಆರಂಭವಾಗಿದ್ದು, ಲಸಿಕಾ ಕೇಂದ್ರವನ್ನು ‘ಕೈ’ ಶಾಸಕ ಭೈರತಿ ಸುರೇಶ್ ಉದ್ಘಾಟಿಸಿದರು. ಬ್ಯಾಪ್ಟಿಸ್ಟ್‌ನಲ್ಲಿ 14 ವ್ಯಾಕ್ಸಿನೇಷನ್ ಘಟಕ ತೆರೆಯಲಾಗಿದೆ. ಸುಮಾರು 1,376 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿದ್ದಾರೆ.
ವ್ಯಾಕ್ಸಿನೇಷನ್ ಸಿದ್ಧತೆ ಪರಿಶೀಲಿಸಿದ ಡಾ.ಸುಧಾಕರ್
ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಲಸಿಕೆ ಅಭಿಯಾನ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಗೆ ಆರೋಗ್ಯ ಸಚಿವ ಸುಧಾಕರ್ ಭೇಟಿ ನೀಡಿ ವ್ಯಾಕ್ಸಿನೇಷನ್ ಸಿದ್ಧತೆಯನ್ನು ಪರಿಶೀಲಿಸಿದರು.
ತಹಶೀಲ್ದಾರ್ ಕಾರು ಮತ್ತು ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ರಾಜವಂತಿ ಗ್ರಾಮದಲ್ಲಿ ಪಾವಗಡ ತಹಶೀಲ್ದಾರ್ ನಾಗರಾಜುರವರು ಟ್ರಾವೆಲ್ ಮಾಡುತ್ತಿದ್ದ ಕಾರಿಗೆ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಹರೀಶ್ ಎಂಬಾತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಹಶೀಲ್ದಾರ್ ಕುಡಿದು ವಾಹನ ಚಲಾಯಿಸಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಟಿಎಂನಿಂದ ಲಕ್ಷ ಲಕ್ಷ ಹಣ ಎಗರಿಸಿದ್ದ ವಿದೇಶಿ ಮಹಿಳೆ ಸೆರೆ
ಎಟಿಎಂ ನಲ್ಲಿ ಹಣ ಡ್ರಾ ಮಾಡುವ ಸೋಗಿನಲ್ಲಿ ಲಕ್ಷ ಲಕ್ಷ ಹಣ ಎಗರಿಸಿದ್ದ ವಿದೇಶಿ ಮಹಿಳೆಯನ್ನು ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ವಿದೇಶಿ ಮಹಿಳೆಯ ಜೊತೆಗೆ ಹಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾರು ಪಲ್ಟಿ: ಚಾಲಕನಿಗೆ ಗಾಯ
ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ಡಿವೈಡರ್ಗೆ ಡಿಕ್ಕಿಯಾಗಿ ಕಾರು ಪಲ್ಟಿಯಾದ ಪರಿಣಾಮ ಚಾಲಕನಿಗೆ ಗಾಯವಾಗಿದ್ದು, ಗಾಯಾಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.
ಅಮಿತ್ ಶಾ ಸ್ವಾಗತಕ್ಕೆ ಮಹಿಳಾ ನಾಯಕಿಯರ ಮುಸುಕಿನ ಗುದ್ದಾಟ
ಸಾಂಬ್ರಾ ಏರ್‌ಪೋರ್ಟ್ ಒಳಗೆ ಅಮಿತ್ ಶಾ ಸ್ವಾಗತಕ್ಕೆ ತೆರಳಲು ಇಬ್ಬರು ಮಹಿಳಾ ಬಿಜೆಪಿ ನಾಯಕಿಯರಾದ ಡಾ.ಸೋನಾಲಿ ಸೋರ್ನಾಬತ್ ಮತ್ತು ದೀಪಾ ಕುಡಚಿ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇದಕ್ಕೆ ಮತ್ತೋರ್ವ ಮಹಿಳಾ ನಾಯಕಿ ದೀಪಾ ಕುಡಚಿ ಪಾಸ್ ಇಲ್ಲದೇ ಒಳಗೆ ಹೇಗೆ ಅವಕಾಶ ನೀಡಿದ್ದೀರಿ. ಸ್ವಾಗತ ಸಮಿತಿ ಲಿಸ್ಟ್‌ನಲ್ಲಿ ಅವರ ಹೆಸರಿಲ್ಲ ಎಂದು ತಗಾದೆ ತೆಗೆದುಕೊಂಡಿದ್ದಾರೆ.
ಚಲಿಸುತ್ತಿದ್ದ ಬಸ್ಗೆ ಬೆಂಕಿ: 6 ಜನ ದುರ್ಮರಣ
ರಾಜಸ್ಥಾನದ ಜಲೋರ್ ಜಿಲ್ಲೆ ಮಹೇಶ್ಪುರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಚಲಿಸುತ್ತಿದ್ದ ಬಸ್ ಇಂಜಿನ್‌ನಲ್ಲಿ ಬೆಂಕಿ ಹತ್ತಿ 6 ಜನ ಸಾವನ್ನಪ್ಪಿದ್ದಾರೆ. ಜನವರಿ 16ರ ರಾತ್ರಿ 10.30 ರ ಸುಮಾರಿಗೆ ಘಟನೆ ನಡೆದಿದ್ದು, 17 ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ಕಾರಿನಲ್ಲಿ ಬಿಜೆಪಿ ನಾಯಕರು
ಹೆಚ್ಎಎಲ್ ಗೆ ಒಂದೇ ಕಾರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ , ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೆರಳಿದರು.
ಬೆಳಗಾವಿಗೆ ಹೊರಟ ಅಮಿತ್ ಶಾ
ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಟ ಹಿನ್ನೆಲೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಅಭಯ್ ಪಾಟೀಲ್ ಸೇರಿದಂತೆ ಜಿಲ್ಲೆಯ ಹಲವು ಬಿಜೆಪಿ ನಾಯಕರು ಆಗಮಿಸಿದ್ದಾರೆ.
ಅರೆಬೆತ್ತಲಾಗಿ ರೈತರ ಪ್ರತಿಭಟನೆ
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರು ಅರೆಬೆತ್ತಲಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾಲಿ ಕುರ್ಚಿಗೆ ಚೀಟಿ ಅಂಟಿಸಿ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ಬಗ್ಗೆ ನಮಗೆ ತಿಳಿಸಿ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಮಿತ್ ಶಾ ಜೊತೆ ಸಿಎಂ ಚರ್ಚೆ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಿಎಂ ಯಡಿಯೂರಪ್ಪ ಮಾತುಕತೆ ಆರಂಭಿಸಿದ್ದಾರೆ.
10:15ಕ್ಕೆ ಹೊರಡಲು ಅಮಿತ್ ಶಾ ನಿರ್ಧಾರ
9:35 ಕ್ಕೆ ವಿಮಾನದಲ್ಲಿ ಬೆಳಗಾವಿಗೆ ತೆರಬೇಕಾಗಿದ್ದ ಅಮಿತ್ ಶಾ 10 ಗಂಟೆಯಾದರೂ ಖಾಸಗಿ ಹೊಟೇಲ್‌ನಲ್ಲಿ ಇದ್ದಾರೆ. 10:15 ಕ್ಕೆ ತೆರಳಲು ನಿರ್ಧರಿಸಿದ ಅಮಿತ್ ಶಾ ಜೊತೆಗೆ ಬಾಗಲಕೋಟೆ ಹಾಗೂ ಬೆಳಗಾವಿಗೆ ತೆರಳಲು ರಾಜ್ಯದ ಮುಖ್ಯಮಂತ್ರಿ ಸಜ್ಜಾಗಿದ್ದಾರೆ.
ಎಸ್‌ಟಿ ಮೀಸಲಾತಿ ಆಗ್ರಹ: 3ನೇ ದಿನದ ಪಾದಯಾತ್ರೆ
ಕುರುಬರಿಗೆ ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಆರಂಭವಾಗಿದ್ದ ಪಾದಯಾತ್ರೆ ಮೂರನೇ ದಿನಕ್ಕೆ ತಲುಪಿದೆ. ಫೆಬ್ರವರಿ 7 ರಂದು ಪಾದಯಾತ್ರೆ ಮೂಲಕ ಬೆಂಗಳೂರು ತಲುಪಲಿದ್ದಾರೆ.
ಅಮಿತ್ ಶಾ ಭೇಟಿಯಾದ ಸಿಎಂ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿದ್ದ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾರನ್ನು ರಾಜ್ಯದ ಮುಖ್ಯಮಂತ್ರಿ B.S.ಯಡಿಯೂರಪ್ಪ ಭೇಟಿ ಮಾಡಿದರು.
ನಂಬರ್ ಪ್ಲೇಟ್ ಬದಲಿಸಿ ಕಾರು ಮಾರಾಟ: ಇಬ್ಬರು ಸೆರೆ
ಕಾರು ಬಾಡಿಗೆಗೆ ಪಡೆದು ನಂಬರ್ ಪ್ಲೇಟ್ ಬದಲಿಸಿ ಸುಮಾರು 27 ಕಾರುಗಳನ್ನು ಮಾರಾಟ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗಿರೀಶ್ ಗೌಡ ಹಾಗೂ ಮೋಹನ್ ಬಂಧಿತ ಆರೋಪಿಗಳಿಂದ 75 ಗ್ರಾಂ ಚಿನ್ನಾಭರಣ, 2 ಮೊಬೈಲ್, 6 ಲಕ್ಷ ನಗದನ್ನು ಸಿಸಿಬಿ ಪೊಲೀಸರು ಜಪ್ತಿಮಾಡಿದ್ದಾರೆ.
76 ವರ್ಷಕ್ಕೆ ಕಾಲಿಟ್ಟ ಭಾರತದ ಉರ್ದು ಕವಿ
ಭಾರತದ ಉರ್ದು ಕವಿಯಾಗಿರುವ ಜಾವೇದ್ ಅಕ್ತರ್ಗೆ ಇಂದು ಹುಟ್ಟಿದ ದಿನ. 76ನೇ ವರ್ಷಕ್ಕೆ ಕಾಲಿಡುತ್ತಿರುವ ಅತ್ಯುತ್ತಮ ಗೀತ ರಚನೆಕಾರ ಜಾವೇದ್ ಅಕ್ತರ್ ಬಾಲಿವುಡ್ನಲ್ಲಿ ಯಾವಾಗಲೂ ತಮ್ಮ ಪ್ರಧಾನ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಉಪಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರ ಹೋರಾಟ
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರಿನಲ್ಲಿ 5A ಉಪಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿ ರೈತರ ಹೋರಾಟ 57ನೇ ದಿನಕ್ಕೆ ಕಾಲಿಟ್ಟಿದೆ. ನಾರಾಯಣಪುರ ಬಲದಂಡೆ ಕಾಲುವೆಗೆ 5A ಉಪಕಾಲುವೆ ನಿರ್ಮಿಸಲು ರೈತರು ಪಟ್ಟು ಹಿಡಿದಿದ್ದಾರೆ.
ಮದ್ಯದ ಅಮಲಿನಲ್ಲಿ ತಂದೆಯನ್ನೇ ಹತ್ಯೆಗೈದ ಪಾಪಿ ಮಗ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಮರಳಿಯಲ್ಲಿ ಮದ್ಯದ ನಶೆಯಲ್ಲಿ ತಂದೆ ಮರೀಗೌಡ ಮೇಲೆ ಮಗ ಸಿಂಗ್ರೀಗೌಡ ಎಂಬಾತ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕಾ ಕಾರ್ಯಕ್ರಮವಿಲ್ಲ
ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಇಂದು ಕೊರೊನಾ ಲಸಿಕೆ ಅಭಿಯಾನವಿದ್ದು, 4 ಆಸ್ಪತ್ರೆಗಳ 6 ಸಾವಿರ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದು ಲಸಿಕಾ ಕಾರ್ಯಕ್ರಮ ಇರುವುದಿಲ್ಲ.
ಅಮಿತ್ ಶಾ ಸಂಚರಿಸುವ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್
ಬೆಳಗಾವಿಗೆ ಇಂದು ಅಮಿತ್ ಶಾ ಭೇಟಿ ಹಿನ್ನೆಲೆ ಅಮಿತ್ ಶಾ ಸಂಚರಿಸುವ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆಗೊಳಿಸಿದ್ದು, ಭದ್ರತೆಗಾಗಿ 15 ಎಸ್‌ಪಿ, 53 ಡಿವೈಎಸ್‌ಪಿ, 118 ಸಿಪಿಐ, 235 ಪಿಎಸ್‌ಐ, 350 ಎಎಸ್‌ಐ, 2,380 ಪಿಐ, 10 ಕೆಎಸ್ಆರ್ಪಿ, 6 ಕೆಎಸ್‌ಐಎಸ್‌ಎಫ್ ತುಕಡಿ ನಿಯೋಜನೆ ಮಾಡಲಾಗಿದೆ.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ರೈತರ ಪ್ರತಿಭಟನೆ
ಬೆಳಗಾವಿಗೆ ಇಂದು ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಜಿಲ್ಲೆಯ ಚೆನ್ನಮ್ಮ ವೃತ್ತದಲ್ಲಿ ಬೆಳ್ಳಂಬೆಳಗ್ಗೆ ರೈತರ ಪ್ರತಿಭಟನೆ ಮಾಡುತ್ತಿದ್ದಾರೆ. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಮಹಾತ್ಮ ಗಾಂಧೀಜಿ ಫೋಟೋ ಹಿಡಿದು ರೈತರು ಧರಣಿ ಕುಳಿತಿದ್ದಾರೆ.
11 ಗೋವುಗಳಿಗೆ ಪೂಜೆ ಸಲ್ಲಿಸಲಿರುವ ಕೇಂದ್ರ ಗೃಹ ಸಚಿವ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆಲಕಲಮಟ್ಟಿ ಗ್ರಾಮದಲ್ಲಿ 11 ಗೋವುಗಳಿಗೆ ಪೂಜೆ ಸಲ್ಲಿಸುತ್ತಾರೆ.
8 ರೈಲುಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ದೇಶದ ವಿವಿಧ ಭಾಗಗಳಿಂದ ಏಕತಾ ಪ್ರತಿಮೆ ಇರುವ ಗುಜರಾತ್‌ನ ಕೆವಡಿಯಾಗೆ ಸಂಚರಿಸುವ ಎಂಟು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಚಾಲನೆ ನೀಡಲಿದ್ದಾರೆ.
9.30ಕ್ಕೆ ಬೆಳಗಾವಿ ಏರ್‌ಪೋರ್ಟ್‌ಗೆ ಪ್ರಯಾಣ ಮಾಡಲಿರುವ ಗೃಹ ಸಚಿವ
ಬೆಳಗಾವಿ ಏರ್‌ಪೋರ್ಟ್‌ನಿಂದ ಬಾಗಲಕೋಟೆ ಹೆಲಿಪ್ಯಾಡ್‌ಗೆ ಬೆಳಗ್ಗೆ 10.30ಕ್ಕೆ ತೆರಳುವ ಅಮಿತ್ ಶಾ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಿ ಎಥೆನಾಲ್ ಘಟಕಕ್ಕೆ ಶಂಕುಸ್ಥಾಪನೆ ಮಾಡುತ್ತಾರೆ.
ಮಧ್ಯಾಹ್ನ 1.05 ಕ್ಕೆ ಬೆಳಗಾವಿಗೆ ಆಗಮಿಸಲಿರುವ ಅಮಿತ್ ಶಾ
ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ 1.05ಕ್ಕೆ ಬೆಳಗಾವಿಗೆ ಆಗಮಿಸಲಿದ್ದಾರೆ. ಬಾಗಲಕೋಟೆಯಿಂದ ಬೆಳಗಾವಿ ಏರ್‌ಪೋರ್ಟ್‌ಗೆ ಆಗಮಿಸಿ ನಂತರ ಸರ್ಕ್ಯೂಟ್ ಹೌಸ್‌ಗೆ ತೆರಳುತ್ತಾರೆ.
ಅಮಿತ್ ಶಾ ಆಗಮನಕ್ಕೆ ಸಕಲ ಸಿದ್ದತೆ
ಕೇಂದ್ರದ ಗೃಹ ಸಚಿವ ಅಮಿತ್ ಶಾ ಬಾಗಲಕೋಟೆ ಜಿಲ್ಲೆಗೆ ಆಗಮಿಸಲಿದ್ದು, ಸಕಲ ಸಿದ್ದತೆಗಳು ನಡೆದಿದೆ. ವೇದಿಕೆ ಮೇಲೆ 12 ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗಾಗಿ 40-50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಶ್ವಾನ ದಳ, ಬಾಂಬ್ ಸ್ಕ್ವಾಡ್ನಿಂದ ಭದ್ರತಾ ಪರಿಶೀಲನೆ ನಡೆಯುತ್ತಿದ್ದು, ಸಾವಿರಕ್ಕೂ ಅಧಿಕ ಪೊಲೀಸರನ್ನು ಆಯೋಜಿಸಲಾಗಿದೆ.
Published On - Jan 17,2021 8:17 PM