ದಾವಣಗೆರೆ: ಪ್ರೀತಿ, ಮದುವೆ ಎಂಬ ಹೆಸರಲ್ಲೂ ದೊಡ್ಡ ದೊಡ್ಡ ವಂಚನೆಗಳು ನಡೆಯುತ್ತಿವೆ. ದಾವಣಗೆರೆ ಕೆಟಿಜೆ ನಗರ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ವ್ಯಕ್ತಿಯನ್ನು ಮದುವೆಯಾಗುವಂತೆ ಪೀಡಿಸಿ ಆತನ ಮೇಲೆ ಹಲ್ಲೆ ನಡೆಸಿ ಹಣ ಪಡೆದಿರುವ ಘಟನೆ ನಡೆದಿದೆ.
ನಿಶಾ ಎಂಬ 23 ವರ್ಷದ ಯುವತಿ 46 ವರ್ಷದ ವಿಮೆ ಕಂಪನಿ ಮ್ಯಾನೇಜರ್ ಕಿರಣ್ ಕುಮಾರ್ ಎಂಬುವವರಿಗೆ ಮದುವೆಯಾಗುವಂತೆ ಧಮ್ಕಿ ಹಾಕಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ನಿಶಾ ಕೇವಲ ಧಮ್ಕಿ ಮಾತ್ರವಷ್ಟೇ ಅಲ್ಲದೆ ಕಿರಣ್ ಮೇಲೆ ಹಲ್ಲೆ ನಡೆಸಿ ಹಣಕ್ಕೆ ಬೆದರಿಕೆ ಹಾಕಿದ್ದಾಳಂತೆ. ನಿಶಾಗೆ ಕನ್ನಡ ಸಂಘಟನೆ ಸಾಥ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.
ಮೊದಲಿಗೆ ನಿಶಾ ಕಿರಣ್ನನ್ನು ಮದುವೆಯಾಗುವಂತೆ ಪೀಡಿಸಿದ್ದಳು. ನೀವು ನನಗೆ ಕೆಲಸ ಕೊಡಿಸಿದ್ದೀರಿ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ ಅದಕ್ಕೆ ಮದುವೆಯಾಗಲು ಇಷ್ಟಪಟ್ಟಿದ್ದೇನೆಂದು ಬೆನ್ನು ಬಿದ್ದಿದ್ದಾಳೆ. ಆದ್ರೆ ಕಿರಣ್ ಮದುವೆಯಾಗಲು ನಿರಾಕರಿಸಿದ್ದ. ಹೀಗಾಗಿ ನಿನ್ನ ಹೆಸರು ಬರೆದು ವಿಷ ಕುಡಿಯುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ. ಬಳಿಕ ಇದು ಹೀಗೆ ಬಿಟ್ಟರೆ ಮುಂದೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಕಿರಣ್, ಯುವತಿಯ ತಂದೆ ತಾಯಿಗೆ ವಿಷಯ ತಿಳಿಸಿ ಬುದ್ದಿವಾದ ಹೇಳಲು ಯತ್ನಿಸಿದ್ದ. ಆಗ ಕರುನಾಡು ಸಮರ ಸೇನೆ ರಾಜ್ಯಾದ್ಯಕ್ಷ ಸೇರಿದಂತೆ ಮಾಲಾ ಎಂಬ ಮಹಿಳೆ ಮಧ್ಯಸ್ಥಿಕೆ ವಹಿಸಿ ಕಿರಣ್ ಯುವತಿಯನ್ನು ಕೆಟ್ಟದಾಗಿ ಬಳಸಿಕೊಂಡಿದ್ದಾನೆಂದು ಆರೋಪಿಸಿದ್ದಾರೆ. ಹಾಗೂ ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ.
ಕೊನೆಗೆ ಕಿರಣ್ ಕುಮಾರ್ರಿಂದ 10 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಖಾಲಿ ಚೆಕ್ಗೆ ಸಹಿ ಹಾಕಿಸಿಕೊಂಡು ಕೇಸ್ ಮುಗಿಸಲು ಯತ್ನಿಸಿದ್ದಾರೆ. ಸದ್ಯ ಕಿರಣ್ ಈಗ ಕರುನಾಡು ಸಮರ ಸೇನೆ ರಾಜ್ಯಾಧ್ಯಕ್ಷ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. 10 ಲಕ್ಷಕ್ಕೆ ಬೇಡಿಕೆ ಇಟ್ಟು ಪ್ರಾಣ ಮಾನ ಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ದಾವಣಗೆರೆ ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರು ದಾಖಲಾದ ಬಳಿಕ ಕರುನಾಡು ಸಮರ ಸೇನೆ ರಾಜ್ಯಾಧ್ಯಕ್ಷ ಹಾಗೂ ಮಾಲಾಳನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕ್ರಿಮಿನಲ್ಗೆ ಕೇಕ್ ತಿನ್ನಿಸಿದ ಮುಂಬೈ ಪೊಲೀಸ್ ಇನ್ಸ್ಪೆಕ್ಟರ್; ವಿಡಿಯೋದಲ್ಲಿ ದೃಶ್ಯ ಸೆರೆ, ತನಿಖೆಗೆ ಆದೇಶ
Published On - 11:30 am, Fri, 16 July 21