ಹುಬ್ಬಳ್ಳಿ: ಆಟೋ, ಟ್ರ್ಯಾಕ್ಟರ್ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬಳಿಯಿರುವ ವರೂರು ಗ್ರಾಮದಲ್ಲಿ ನಡೆದಿದೆ. ವರೂರು ಬಳಿಯಿರುವ ಬೆಂಗಳೂರು-ಪುಣೆ ರಾ.ಹೆ.4ರಲ್ಲಿ ಅಪಘಾತ ಸಂಭವಿಸಿದೆ.
ಹಳೇ ಹುಬ್ಬಳ್ಳಿಯ ಸಾದಿಕ್, ಸಲೀಂ ಹಾಗೂ ಬೆಳಗಲಿ ಮೂಲದ ಶೇಖರಪ್ಪ ಹುಲಗೇರಿ ಸೇರಿದಂತೆ ಇನ್ನೂ ನಾಲ್ವರು ಆಟೋದಲ್ಲಿ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಎಲ್ಲರೂ ಕೂಲಿಗಾಗಿ ಆಟೋದಲ್ಲಿ ಹೊರಟಿದ್ದರು ಎಂದು ಹೇಳಲಾಗಿದೆ.
ಘಟನೆಯಲ್ಲಿ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇನ್ನು ಆಟೋದಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.