ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ.. ವಿವಾದ, ಗೊಂದಲ ಮತ್ತು ಸ್ಪಷ್ಟನೆ
ಇಷ್ಟರವರೆಗೆ ಕೃಷ್ಣಮಠ ಎಂದು ಕನ್ನಡದಲ್ಲಿ ಬರೆಯಲಾಗಿತ್ತು. ಈಗ ಆ ಫಲಕ ತೆಗೆದು ತುಳುವಿನಲ್ಲಿ ಬರೆಯಲಾಗಿದೆ. ಸಮಾಜಕ್ಕೆ ಬುದ್ಧಿಹೇಳುವ ಧಾರ್ಮಿಕ ಸಂಸ್ಥೆ ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ.
ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಳವಡಿಸಿರುವ ಹೊಸ ನಾಮ ಫಲಕದಲ್ಲಿ ಕನ್ನಡ ಮಾಯವಾಗಿದ್ದು ಹೊಸ ವಿವಾದಕ್ಕೆ ಎಡೆ ಮಾಡಿದೆ. ಹೊಸದಾಗಿ ಅಳವಡಿಸಲಾಗಿರುವ ಹೊಸ ಫಲಕದಲ್ಲಿ ತುಳು ಮತ್ತು ಸಂಸ್ಕೃತ ಭಾಷೆ ಬಳಕೆ ಮಾಡಿದ್ದು ಕನ್ನಡವನ್ನು ಕಡೆಗಣಿಸಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಹಳೇ ಫಲಕ ಬದಲಾವಣೆ ಮಾಡುವ ಸಂದರ್ಭದಲ್ಲಿ ಅಚಾತುರ್ಯ ಶ್ರೀಕೃಷ್ಣ ಮಠ, ರಜತಪೀಠ ಪುರಂ ಎಂದಿರುವ ಹೊಸ ಫಲಕದಲ್ಲಿ ಸಂಸ್ಕೃತ ಮತ್ತು ತುಳು ಬಳಸಲಾಗಿದೆ. ಈವರೆಗೆ ಫಲಕದಲ್ಲಿ ಕನ್ನಡ, ಇಂಗ್ಲಿಷ್‌ನಲ್ಲಿ ಬರಹವಿದ್ದು ಪರ್ಯಾಯ ಅದಮಾರು ಮಠದಿಂದ ಹಳೇ ಫಲಕ ಬದಲಾವಣೆ ಮಾಡುವ ಸಂದರ್ಭದಲ್ಲಿ ಅಚಾತುರ್ಯ ನಡೆದಿದೆ. ಈ ತೆರೆನಾದ ನಡೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಕನ್ನಡ ಏಕಿಲ್ಲ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಕನ್ನಡದ ಕಡೆಗಣನೆ ಸರಿಯಲ್ಲ ಈ ಕುರಿತು ಬೇಸರ ವ್ಯಕ್ತಪಡಿಸಿರುವ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೃಷ್ಣಮಠದ ಬೋರ್ಡ್ ಬದಲಾಯಿಸಿರುವುದು ತುಂಬಾ ಬೇಸರದ ಸಂಗತಿ. ಸಮಾಜಕ್ಕೆ ಬುದ್ಧಿಹೇಳುವ ಧಾರ್ಮಿಕ ಸಂಸ್ಥೆ ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇಷ್ಟರವರೆಗೆ ಕೃಷ್ಣಮಠ ಎಂದು ಕನ್ನಡದಲ್ಲಿ ಬರೆಯಲಾಗಿತ್ತು. ಈಗ ಆ ಫಲಕ ತೆಗೆದು ತುಳುವಿನಲ್ಲಿ ಬರೆಯಲಾಗಿದೆ. ತುಳು ನಮ್ಮ ಸೋದರ ಭಾಷೆ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ, ನಾಮಫಲಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಠದ ಈ ನಡೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಹೀಗೆ ಮಾಡುವುದನ್ನು ಕನ್ನಡಿಗರು ಕ್ಷಮಿಸುವುದು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸುತ್ತೇವೆ. ಕನ್ನಡ ಮತ್ತು ತುಳುವಿನ ನಡುವೆ ಕಂದಕ ಏರ್ಪಡಿಸುವ ಕೆಲಸ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಮಠದ ಸ್ಪಷ್ಟನೆ ಫಲಕ ಬದಲಾವಣೆ ವಿಚಾರ ಪ್ರತಿಕ್ರಿಯಿಸಿರುವ ಪರ್ಯಾಯ ಅದಮಾರು ಮಠದ ಆಡಳಿತ ಮಂಡಳಿಯವರು, ಉಡುಪಿ ಕೃಷ್ಣ ಮಠವನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಅದಕ್ಕಾಗಿ ಪ್ಲಾಸ್ಟಿಕ್ ಬೋರ್ಡ್ ತೆಗೆದು ಮರದ ಬೋರ್ಡ್ ತಯಾರಿಸಿ ಅಳವಡಿಸುತ್ತಿದ್ದೇವೆ. ದ್ವಾರದ ಮೇಲ್ಭಾಗದಲ್ಲಿ ಕನ್ನಡ ಫಲಕವನ್ನು ಅಳವಡಿಸುತ್ತೇವೆ ಎಂದಿದ್ದಾರೆ.
ಕನ್ನಡ ಫಲಕ ಇನ್ನಷ್ಟೇ ತಯಾರಾಗಬೇಕಿದೆ. ಆದರೆ ಕಾಮಗಾರಿ ಮುಗಿಯುವ ಮುನ್ನ ಲಕ್ಷದೀಪೋತ್ಸವ ಬಂದಿರುವ ಕಾರಣ ಕೊಂಚ ವಿಳಂಬವಾಗಿದೆ. ಕನ್ನಡ ಫಲಕವನ್ನು ಮೇಲೆ ಅಳವಡಿಸಲು ಪರ್ಯಾಯ ಅದಮಾರು ಮಠಾಧೀಶರು ಸೂಚನೆ ಕೊಟ್ಟಿದ್ದಾರೆ. ಈ ಕುರಿತು ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನಷ್ಟು… ಪ್ರತ್ಯೇಕ ತುಳು ರಾಜ್ಯಕ್ಕೆ ಗಲಭೆ ಮಾಡಿ -ಸಾಹಿತ್ಯ ಅಕಾಡೆಮಿ ಅಧ್ಯಕ್ಷನ ಆಡಿಯೋ ವೈರಲ್.. ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀಮಧ್ವ ಶಂಕರರ ಹೆಸರಿಡಿ: ಪುತ್ತಿಗೆ ಮಠದ ಶ್ರೀಗಳ ಆಗ್ರಹ
Published On - 1:38 pm, Tue, 1 December 20