ಬೆಂಗಳೂರು: ಕೊರೊನಾ ಸೋಂಕಿನಿಂದ ಗೆದ್ದು ಬಂದ್ವೀ ಎಂಬ ಸಂತೋಷದಲ್ಲಿದ್ದವರಲ್ಲಿ ಇತ್ತೀಚೆಗೆ ಬ್ಲ್ಯಾಕ್ ಫಂಗಸ್‌ಗೆ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದವರ ಜೀವನದಲ್ಲಿ ಮತ್ತೆ ಸಂಕಷ್ಟಗಳು ಎದುರಾಗಿವೆ. ಕೊರೊನಾ ಅಬ್ಬರದ ನಡುವೆ ಬ್ಲ್ಯಾಕ್ ಫಂಗಸ್ ಉಲ್ಬಣಗೊಂಡಿದೆ. 100 ಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ರಾಜ್ಯದ ನಾನಾ ಕಡೆಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ.ಇನ್ನು ಬೆಂಗಳೂರಿನಲ್ಲಿ ಇಂದು ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಪೇಟೆಯ 64 ವರ್ಷದ ವೃದ್ಧ ಹಾಗೂ ಕೊಟಾಲಂ ನಿವಾಸಿ 57 ವರ್ಷದ ಮಹಿಳೆ ಬಲಿಯಾಗಿದ್ದಾರೆ. ಸದ್ಯ ಈಗ ಬೆಂಗಳೂರಿನಲ್ಲೂ ಹೆಚ್ಚಾದ ಬ್ಲ್ಯಾಕ್ ಫಂಗಸ್ನಿಂದ ಆತಂಕ ಹೆಚ್ಚಾಗಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬ್ಲ್ಯಾಕ್ ಫಂಗಸ್‌ನಿಂದ 30 ವರ್ಷದ ಯುವಕ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖೇಮಲಾಪುರದ ಆನಂದ ಕುಲಾಲಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.
ಕೊರೊನಾದಿಂದ ಗುಣಮುಖರಾಗಿದ್ದ ಆನಂದ ಕುಲಾಲಿ, ಗುಣಮುಖರಾದ ಬಳಿಕ ಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು. ಹೀಗಾಗಿ ಮಹಾರಾಷ್ಟ್ರದ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಈಗ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಸರ್ಜರಿಗೆ ತಮ್ಮ ಬಳಿ ಹಣವಿಲ್ಲ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಆನಂದ್ ಮನವಿ ಮಾಡಿದ್ದಾರೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಕೊರತೆ
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಕೊರತೆ ಉಂಟಾಗಿದ್ದು ಈ ಬಗ್ಗೆ ಡ್ರಗ್ ಕಂಟ್ರೋಲ್ ಬೋರ್ಡ್ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ವಾರಕ್ಕೆ ಕನಿಷ್ಠ 400 ವಯಲ್ಸ್ ಅಗತ್ಯವಿದೆ. ಆದ್ರೆ ಸದ್ಯ ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ನೀಡವ ಇಂಜೆಕ್ಷನ್ ಕೊರತೆ ಇದೆ. Liposomal Amphotericin B ಔಷಧ ಕೊರತೆ ಇದೆ. ಹೈದರಾಬಾದ್‌ನಿಂದ ಔಷಧ ಪೂರೈಕೆಯಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.
ಮಧುಮೇಹಿಗಳು, ಸ್ಟಿರಾಯ್ಡ್ ಬಳಸುವವರು ಎಚ್ಚರವಾಗಿರಿ
ಬೆಂಗಳೂರಿನಲ್ಲೂ ಬ್ಲ್ಯಾಕ್ ಫಂಗಸ್ಗೆ ಬಲಿಯಾಗುತ್ತಿರುವ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್.. ಬ್ಲ್ಯಾಕ್ ಫಂಗಸ್ ವಿಚಾರದಲ್ಲಿ ಎಚ್ಚರ ವಹಿಸುವುದು ಅಗತ್ಯ. ಮಧುಮೇಹಿಗಳು, ಸ್ಟಿರಾಯ್ಡ್ ಬಳಸುವವರು ಎಚ್ಚರವಾಗಿರಿ. ಕೊವಿಡ್ ಚಿಕಿತ್ಸೆಗೆ ಹೆಚ್ಚಾಗಿ ಸ್ಟಿರಾಯ್ಡ್ ಬಳಸುವುದರಿಂದ, ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸಿಕೊಳ್ಳಬಹುದು. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೂ ಬ್ಲ್ಯಾಕ್ ಫಂಗಸ್ ಕಾಣಿಸುತ್ತದೆ. ಹೀಗಾಗಿ ನಾಳೆ ನೇತ್ರ ತಜ್ಞರು, ಮಧುಮೇಹ ತಜ್ಞರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡುತ್ತೇವೆ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುತ್ತೆ. ಬ್ಲ್ಯಾಕ್ ಫಂಗಸ್ ಔಷಧ ಅತ್ಯಂತ ದುಬಾರಿಯಾಗಿದೆ. ಒಬ್ಬ ವ್ಯಕ್ತಿಗೆ 2ರಿಂದ 4 ಲಕ್ಷ ರೂಪಾಯಿವರೆಗೆ ವೆಚ್ಚವಾಗಲಿದೆ. ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ ನೀಡುವ ಕುರಿತು ಸಿಎಂ ಬಿಎಸ್‌ವೈ ಜೊತೆಗೆ ಚರ್ಚೆ ನಡೆಸುತ್ತೇನೆ ಎಂದು ಕೆ.ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡರೆ ಮೊದಲು ಚಿಕಿತ್ಸೆ ಪಡೆಯಿರಿ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್