ಚಿಕ್ಕಮಗಳೂರಿನಲ್ಲೂ ಆಕ್ಸಿಜನ್ ಬಸ್ ಸೇವೆ ಪ್ರಾರಂಭ: ಡಿಸಿಎಂ ಲಕ್ಷ್ಮಣ ಸವದಿ
ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೊವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ಸ್ಥಳಾಭಾವದಿಂದ ರೋಗಿಗಳಿಗೆ ಅಲ್ಲಿ ಕುಳಿತು ಕಾಯುವುದಕ್ಕೂ ಕಷ್ಟವಾಗುತ್ತಿದೆ.
ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಬಿಎಂಟಿಸಿ ವತಿಯಿಂದ ಪ್ರಾರಂಭಿಸಲಾದ ಆಕ್ಸಿಜನ್ ಬಸ್ ಸೇವೆಯು ಅತ್ಯಂತ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಸೇವಾ ಸೌಲಭ್ಯವನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಗುತ್ತಿದೆ. ಇದರ ಅಂಗವಾಗಿ ಚಿಕ್ಕಮಗಳೂರಿನಲ್ಲಿಯೂ ಕೆಎಸ್ಆರ್ಟಿಸಿಯು ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಾಳೆಯಿಂದ (ಮೇ 17) ಬಸ್ಸಿನಲ್ಲಿಯೇ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೊವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ಸ್ಥಳಾಭಾವದಿಂದ ರೋಗಿಗಳಿಗೆ ಅಲ್ಲಿ ಕುಳಿತು ಕಾಯುವುದಕ್ಕೂ ಕಷ್ಟವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಉಚಿತವಾಗಿ ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸವದಿಯವರು ವಿವರಿಸಿದ್ದಾರೆ.
ಆಕ್ಸಿಜನ್ ಪೂರೈಸಲು ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಕೆಎಸ್ಆರ್ಟಿಸಿ ಬಸ್ಸನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಲಾಗುವುದು. ಹೊರಗಿನಿಂದ ಕೊವಿಡ್ ಸೋಂಕಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಬಸ್ಸಿನಲ್ಲಿಯೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಕೆಎಸ್ಆರ್ಟಿಸಿಯ ಈ ನೂತನ ಸೇವೆಯನ್ನು ಖಾಸಗಿ ಸಂಸ್ಥೆಗಳಾದ ನಾಯೋನಿಕ ಐ ಕೇರ್ ಟ್ರಸ್ಟ್, ಸಿಟ್ರಿಕ್ ಇಂಡಿಯಾ ಮತ್ತು ಜಿಲ್ಲಾ ಆಡಳಿತಗಳ ಸಹಯೋಗದಿಂದ ಪ್ರಾರಂಭಿಸಲಾಗುತ್ತಿದೆ. ಏಕಕಾಲಕ್ಕೆ ಒಟ್ಟು 8 ಮಂದಿ ರೋಗಿಗಳಿಗೆ ಈ ಬಸ್ಸಿನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸವದಿಯವರು ಸ್ಪಷ್ಟಪಡಿಸಿದ್ದಾರೆ.
ಚಾಲಕರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ ಈ ‘ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ಸನ್ನು ಸಜ್ಜುಗೊಳಿಸಲಾಗಿದೆಯಲ್ಲದೇ, ಸ್ಯಾನಿಟೈಸರ್, ಮಾಸ್ಕ್ಗಳನ್ನು ಇದರಲ್ಲಿ ಒದಗಿಸಲಾಗುವುದು. ಪ್ರತಿ ರೋಗಿಗಳೂ ಸಾಮಾನ್ಯವಾಗಿ 2ರಿಂದ 4 ಗಂಟೆಯ ಅವಧಿಯಲ್ಲಿ ಈ ಸೌಲಭ್ಯದಿಂದ ತಮಗೆ ಬೇಕಾದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆದುಕೊಳ್ಳಬಹುದಾಗಿದೆ.
ಈ ರೀತಿಯ ವಿಶೇಷ ಆಕ್ಸಿಜನ್ ಬಸ್ ಸೇವೆಯನ್ನು ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಜಿಲ್ಲೆಗಳಿಗೆ ವಿಸ್ತರಿಸಲು ಸಾರಿಗೆ ನಿಗಮಗಳು ಸಿದ್ಧವಿದೆ ಎಂದು ಸವದಿಯವರು ತಿಳಿಸಿದ್ದಾರೆ. ಕೊವಿಡ್ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತ ಆಕ್ಸಿಜನ್ಗಾಗಿ ಜನರು ಪರಿತಪಿಸುವುದನ್ನು ತಪ್ಪಿಸಲು ಈ ಆಕ್ಸಿಜನ್ ಬಸ್ ಸೇವೆಯು ಸಂಜೀವಿನಿಯಂತೆ ವರದಾನವಾಗಲಿದೆ ಎಂದು ಸವದಿಯವರು ಆಶಾವಾದ ವ್ಯಕ್ತಪಡಿಸಿದರು.
ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಜಿಲ್ಲೆಗಳಿಗೂ ಆಕ್ಸಿಜನ್ ಬಸ್ ಒದಗಿಸಲು ಸಿದ್ಧ ಎಂದ ಡಿಸಿಎಂ ಸವದಿ ಜಿಲ್ಲಾ ಮಟ್ಟಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳು, ಆಸ್ಪತ್ರೆಗಳು ಪ್ರಾಯೋಜಕತ್ವ (ಸ್ಪಾನ್ಸರ್) ನೀಡಿದರೆ ಎಲ್ಲ ಜಿಲ್ಲೆಗಳಲ್ಲಿಯೂ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಂದ ಆಕ್ಸಿಜನ್ ಬಸ್ ಸೌಲಭ್ಯ ಒದಗಿಸಲು ಸಿದ್ಧ ಎಂದು ಲಕ್ಷ್ಮಣ ಸವದಿ ಹೇಳಿದರು.
ಒಂದು ವೇಳೆ ಸ್ವಯಂಸೇವಾ ಸಂಸ್ಥೆಗಳು ಆರೋಗ್ಯ ಸಿಬ್ಬಂದಿಗಳೊಂದಿಗೆ ಆಕ್ಸಿಜನ್ ಪೂರೈಸುವ ಉಪಕರಣಗಳನ್ನು ಒದಗಿಸಿಕೊಟ್ಟರೆ ಉಚಿತವಾಗಿ ಬಸ್ಸುಗಳನ್ನು ಮತ್ತು ಚಾಲಕರನ್ನು ನಮ್ಮ ಸಾರಿಗೆ ನಿಗಮಗಳಿಂದ ನೀಡಲು ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಆಕ್ಸಿಜನ್ ಬಸ್ಸುಗಳನ್ನು ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ನಮ್ಮ ನಾಲ್ಕೂ ಸಾರಿಗೆ ನಿಗಮಗಳಿಗೆ ತಾವು ಸೂಚಿಸಿರುವುದಾಗಿ ಸವದಿಯವರು ವಿವರಿಸಿದ್ದಾರೆ.
ಹೈದರಾಬಾದಿನ ಸೇವಾ ಸಂಸ್ಥೆಯೊಂದು ನಮ್ಮ ಸಾರಿಗೆ ನಿಗಮಗಳ ಸಹಯೋಗದಲ್ಲಿ ವ್ಯಾಪಕವಾಗಿ ಆಕ್ಸಿಜನ್ ಬಸ್ಸುಗಳ ಸೇವೆಯನ್ನು ಪ್ರಾರಂಭಿಸಲು ಮುಂದೆ ಬಂದಿದೆ. ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ಈ ಜಂಟಿ ಪ್ರಯತ್ನ ಕೈಗೂಡಿದರೆ ರಾಜ್ಯಾದ್ಯಂತ ಮತ್ತಷ್ಟು ಹೆಚ್ಚಿನ ಮಂದಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಸವದಿಯವರು ತಿಳಿಸಿದ್ದಾರೆ.
ಇದನ್ನೂ ಓದಿ
ಬ್ಲ್ಯಾಕ್ ಫಂಗಸ್ಗೆ ಬೆಂಗಳೂರಿನಲ್ಲಿ ಇಬ್ಬರು ಬಲಿ.. ಒಬ್ಬ ವ್ಯಕ್ತಿಗೆ 2-4 ಲಕ್ಷ ವೆಚ್ಚವಾಗಲಿದೆ ಎಂದ ಸುಧಾಕರ್
ಮೈಸೂರು: ಹೋಂ ಐಸೋಲೇಷನ್ನಲ್ಲಿರೊ ಸೋಂಕಿತರಿಗೆ ವೈದ್ಯಕೀಯ ನೆರವು; ವಿದ್ಯಾರ್ಥಿಗಳಿಂದ ಶ್ಲಾಘನೀಯ ಕಾರ್ಯ
(Laxman Savadi says oxygen bus service is starting in Chikmagalur as well)