
ಮೈಸೂರು, ಫೆಬ್ರವರಿ 24: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ಸಂಬಂಧ ಮೈಸೂರಿನ ಫುಟ್ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಪ್ರತಿಭಟನೆಗೆ ಅವಕಾಶ ಕೋರಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿ ಪೊಲೀಸರಿಗೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಮಿತಿಯು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ, ಪ್ರತಿಭಟನೆಗೆ ಅವಕಾಶ ನೀಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಜತೆಗೆ, 1 ಲಕ್ಷ ರೂಪಾಯಿ ಬಾಂಡ್ ನೀಡಲು ಆಯೋಜಕರಿಗೆ ನಿರ್ದೇಶನ ನೀಡಿದೆ.
1 ಲಕ್ಷ ರೂಪಾಯಿ ಬಾಂಡ್ ನೀಡಬೇಕು. ಪ್ರತಿಭಟನೆ ಶಾಂತಿಯುತವಾಗಿರಬೇಕು ಹಾಗೂ ಸಂಪೂರ್ಣ ಚಿತ್ರೀಕರಣ ಮಾಡಬೇಕು. ಶಾಂತಿಭಂಗವಾಗುವಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಅಹಿತಕರ ಘಟನೆಯಾದರೆ ಅರ್ಜಿದಾರರನ್ನೇ ಹೊಣೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಸಂಜೆ 3.30 ರಿಂದ ಪ್ರತಿಭಟನೆ ನಡೆಸಲು ಅವಕಾಶ ನೀಡಲು ಸೂಚನೆ ಮೈಸೂರಿನ ಪೊಲೀಸ್ ಆಯುಕ್ತರಿಗೆ ನ್ಯಾ.ಆರ್. ದೇವದಾಸ್ ಅವರಿದ್ದ ಪೀಠ ಸೂಚನೆ ನೀಡಿದೆ.
ಪ್ರತಿಭಟನೆಗೆ ಅವಕಾಶ ನೀಡಿದರೆ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಬಹುದು. 8 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ, 9 ಮಂದಿ ಪೊಲೀಸರಿಗೆ ಗಾಯವಾಗಿದೆ. ಬೇರೆ ಸಂಘಟನೆಗಳು ಧರಣಿ ನಡೆಸಲು ಅನುಮತಿ ಕೋರಿದ್ದರು, ನೀಡಿಲ್ಲ. ಸೂಕ್ಷ್ಮತೆ ಪರಿಗಣಿಸಿ ಪ್ರತಿಭಟನೆ ನಿರ್ಬಂಧಿಸಿ ನಿಷೇಧಾಜ್ಞೆ ಹೇರಲಾಗಿದೆ ಎಂದು ಸರ್ಕಾರದ ಪರ ಹೆಚ್ಚುವರಿ ಎಜಿ ಭಾನು ಪ್ರಕಾಶ್ ಹೈಕೋರ್ಟ್ಗೆ ತಿಳಿಸಿದರು. ಜತೆಗೆ, ಫುಟ್ಬಾಲ್ ಮೈದಾನ, ಮಹಾರಾಜ ಕಾಲೇಜ್ ಗ್ರೌಂಡ್ನಲ್ಲಿ ಅವಕಾಶ ನೀಡಬಹುದು, ಆದರೆ
300ಕ್ಕಿಂತ ಹೆಚ್ಚಿನ ಜನರಿಗೆ ಅವಕಾಶ ನೀಡದಂತೆ ಮನವಿ ಮಾಡಿದರು.
ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿಯ ರಿಟ್ ಅರ್ಜಿ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಪ್ರತಿಭಟನೆಗೆ ಅನುಮತಿ ನೀಡಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಏನಾದರೂ ಅಹಿತಕರ ಘಟನೆ ನಡೆದರೆ ಯಾರು ಹೊಣೆ? ರಸ್ತೆ ಬಿಟ್ಟು ಬೇರೆ ಮೈದಾನದಲ್ಲಿ ಪ್ರತಿಭಟನೆ ನಡೆಸಿದರೆ ಪರಿಗಣಿಸುವುದಾಗಿ ತಿಳಿಸಿತು.
ಇದನ್ನೂ ಓದಿ: ಹೈಕಮಾಂಡ್ ಏಟಿಗೆ ರೆಬೆಲ್ ಯತ್ನಾಳ್ ಸೈಲೆಂಟ್: ಮೈಸೂರು ಚಲೋ ಮೂಲಕ ಬಿವೈ ವಿಜಯೇಂದ್ರ ಶಕ್ತಿ ಪ್ರದರ್ಶನ
ನಂತರ ಸೂಕ್ತ ಸ್ಥಳ ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಕೆಲಕಾಲ ಮುಂದೂಡಿತು. ನಂತರ ಸರ್ಕಾರದ ಪರ ವಕೀಲರ ವಾದ ಆಲಿಸಿ, ಪ್ರತಿಭಟನೆಗೆ ಷರತ್ತುಬದ್ಧ ಅನುಮತಿ ನೀಡಿತು.