ಪ್ರಮೋದಾದೇವಿ ಸಮ್ಮುಖದಲ್ಲಿ ಯದುವೀರ್ ಎರಡನೇ ಮಗುವಿಗೆ ನಾಮಕರಣ: ಪುಟ್ಟ ರಾಜಕುಮಾರನ ಹೆಸರೇನು ಗೊತ್ತಾ?
ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದೇವಿ ಅವರ ಎರಡನೇ ಪುತ್ರನಿಗೆ ನಾಮಕರಣ ಮಾಡಲಾಗಿದೆ. ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭದಲ್ಲಿ ರಾಜವಂಶದ ಸದಸ್ಯರು ಮತ್ತು ಅನೇಕರು ಭಾಗವಹಿಸಿದ್ದರು. ಎರಡನೇ ಗಂಡು ಮಗುವಿನ ಹೆಸರೇನು ಗೊತ್ತಾ ಇಲ್ಲಿದೆ ಮಾಹಿತಿ.

ಮೈಸೂರು, ಫೆಬ್ರವರಿ 24: ನವರಾತ್ರಿಯ ಈ ಸಮಯದಲ್ಲಿ ರಾಜರ ಕುಟುಂಬದಲ್ಲಿ ಇಂದು ಸಂಭ್ರಮದ ವಾತಾವಣವಿತ್ತು. ಇದಕ್ಕೆ ಕಾರಣ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದೇವಿ ಅವರ ಎರಡನೇ ಗಂಡು ಮಗುವಿನ ನಾಮಕರಣ (naming ceremony). ಸಂಸದ ಯದುವೀರ್ ಎರಡನೇ ಮಗುವಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಮೊದಲ ಮಗುವಿಗೆ ಆಧ್ಯವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾರೆ.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಾಮಕರಣ ಶಾಸ್ತ್ರ ಕಾರ್ಯಕ್ರಮ ನೆರವೇರಿಸಲಾಗಿದೆ. ಅರಮನೆಯ ಪುರೋಹಿತರು ವಿವಿಧ ಶಾಸ್ತ್ರ ಹಾಗೂ ಧಾರ್ಮಿಕ ಕಾರ್ಯಗಳ ಬಳಿಕ, ಗುರು ಹಿರಿಯರು ಸೂಚಿಸಿದಂತೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಅವರು ತಮ್ಮ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: ಸ್ವೀಡನ್ನಲ್ಲಿ ಓದುವಾಗ ಪ್ರೇಮಾಂಕುರ: ನೆದರ್ಲ್ಯಾಂಡ್ ಸೊಸೆಯಾದ ಮೈಸೂರಿನ ಯುವತಿ
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು ತಮ್ಮ ಎರಡನೇ ಗಂಡು ಮಗುವಿಗೆ 11 ಅಕ್ಟೋಬರ್ 2024ರಲ್ಲಿ ಜನ್ಮ ನೀಡಿದ್ದರು. ಆ ಮೂಲಕ ವಿಜಯದಶಮಿ ಸಡಗರದ ಜೊತೆಗೆ ಪುಟ್ಟ ರಾಜಕುಮಾರನ ಪ್ರವೇಶವಾಗಿತ್ತು.
ಇನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿವಾಹ ರಾಜಸ್ಥಾನದ ದುಂಗರ್‌ಪುರ್ ಯುವರಾಣಿ ತ್ರಿಷಿಕಾ ಅವರೊಂದಿಗೆ 2016 ಜೂನ್ 27ರಂದು ನಡೆದಿತ್ತು. ಯುವರಾಣಿ ತ್ರಿಷಿಕಾ ಕುಮಾರಿ ಸಿಂಗ್ ಅವರು ಬೆಂಗಳೂರಿನಲ್ಲಿಯೇ ಅಧ್ಯಯನ ಮಾಡುತ್ತಿದ್ದಾಗ ಯದುವೀರ್ ಅವರೊಂದಿಗೆ ಗೆಳೆತನ ಹೊಂದಿದ್ದರು.
ಇದನ್ನೂ ಓದಿ: ಬೆಂಗಳೂರು ಅರಮನೆ ವಿವಾದ; ಅನ್ಯಾಯವಾದರೆ ಕಾನೂನು ಸಮರಕ್ಕೆ ಸಿದ್ಧ ಎಂದ ಪ್ರಮೋದಾದೇವಿ ಒಡೆಯರ್
ನಾಲ್ಕು ದಶಕಗಳ ನಂತರ ಅರಮನೆಯಲ್ಲಿ ನಡೆದ ಯದುವಂಶದ ರಾಜನ ಮದುವೆ ಎಲ್ಲರ ಗಮನಸೆಳೆದಿತ್ತು. ರಾಜರ ಕಾಲದ ಗತವೈಭವವನ್ನು ಕಣ್ತುಂಬಿಕೊಂಡ ಜನರು 6 ದಿನಗಳ ಮದುವೆ ಸಮಾರಂಭವನ್ನು ಸಖತ್ ಎಂಜಾಯ್ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:21 pm, Mon, 24 February 25



