ಹೈಕಮಾಂಡ್ ಏಟಿಗೆ ರೆಬೆಲ್ ಯತ್ನಾಳ್ ಸೈಲೆಂಟ್: ಮೈಸೂರು ಚಲೋ ಮೂಲಕ ಬಿವೈ ವಿಜಯೇಂದ್ರ ಶಕ್ತಿ ಪ್ರದರ್ಶನ
ಕರ್ನಾಟಕ ಬಿಜೆಪಿ ಬಣ ಬಡಿದಾಟ ಸಂಪೂರ್ಣ ನಿಲ್ಲುವ ಲಕ್ಷಣವಂತೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಆದರೂ, ಹೈಕಮಾಂಡ್ ನೋಟಿಸ್ ಬಳಿಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ತುಸು ತಣ್ಣಗಾದಂತೆಯೇ ಇದೆ. ಇದರ ಮಧ್ಯೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರಿನಲ್ಲಿ ಹೋರಾಟದ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಬೆಂಗಳೂರು, ಫೆಬ್ರವರಿ 24: ಮೈಸೂರಿನ ಉದಯಗಿರಿ ಗಲಾಟೆ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಠಾಣೆಯ ಮುಂದೆ ನಡೆದ ಗಲಾಟೆ ಭಯಾನಕವಾಗಿತ್ತು. ಇದನ್ನೇ ಅಸ್ತ್ರ ಮಾಡ್ಕೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸರ್ಕಾರದ ವಿರುದ್ಧ ಸಮರ ಸಾರುತ್ತಲೇ ಅತ್ತ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ಗೂ ಕೌಂಟರ್ ಕೊಡಲು ಮುಂದಾಗಿದ್ದಾರೆ. ಮೈಸೂರಿನಲ್ಲಿ ಇಂದು ಜನಾಂದೋಲನ ರ್ಯಾಲಿಯಲ್ಲಿ ವಿಜಯೇಂದ್ರ ಭಾಗಿಯಾಗಲಿದ್ದಾರೆ.
ವಿಜಯೇಂದ್ರ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ವಿಜಯೇಂದ್ರ, ಮುಡಾ ಪ್ರಕರಣದಲ್ಲಿ ನಾನೇ ಪಾದಯಾತ್ರೆ ಮಾಡಿದ್ದು ಎಂದಿದ್ದರು.
ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ನೇರವಾಗಿಯೇ ಹೇಳುತ್ತಿದ್ದೇನೆ, ಇದಕ್ಕೆ ಸರ್ಕಾರವೇ ಹೊಣೆ ಎನ್ನುವ ಮೂಲಕ ಯತ್ನಾಳ್ ಆರೋಪಕ್ಕೆ ಕೌಂಟರ್ ಕೊಡುವ ಕೆಲಸವನ್ನೂ ವಿಜಯೇಂದ್ರ ಮಾಡಿದ್ದರು.
ರಾಜ್ಯಾಧ್ಯಕ್ಷ ಹುದ್ದೆ: ನಿಲ್ಲದ ಚರ್ಚೆ
ಇತ್ತ ಶಾಸಕ ಯತ್ನಾಳ್ ಬಣದಲ್ಲಿಯೂ ಬೆಳವಣಿಗೆಗಳಿಗೆ ಫುಲ್ಸ್ಟಾಪ್ ಬಿದ್ದಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ರುವ ಯತ್ನಾಳ್, ಸ್ಪರ್ಧೆಗೆ ನಾನೂ ಸಿದ್ಧ ಎಂದಿದ್ದರು. ಲಿಂಗಾಯತ ಕೋಟಾ ಬಂದರೆ ನಾನು ಸಿದ್ಧ, ವಾಲ್ಮೀಕಿ ಕೋಟಾ ಆದರೆ ರಾಮುಲು ಸ್ಪರ್ಧೆ ಮಾಡಲಿ ಎಂದು ಯತ್ನಾಳ್ ಹೇಳಿದ್ದರು. ಇದೀಗ ರೆಬೆಲ್ಸ್ ತಂಡದ ಮತ್ತೋರ್ವ ನಾಯಕ ಕುಮಾರ್ ಬಂಗಾರಪ್ಪ, ನನ್ನ ಪರಿಗಣಿಸಿದರೆ, ನಾನೂ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಮನೆಯಲ್ಲಿನ ಬಣ ಬಡಿದಾಟ, ನಾನಾ ಸ್ವರೂಪ ಪಡೆಯುತ್ತಿದೆ. ಪಕ್ಷದಲ್ಲಿ ಒಬ್ಬೊಬ್ಬರೇ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ನೋಟಿಸ್ ಬಳಿಕ ಮೊದಲ ಬಾರಿಗೆ ಸಭೆ ಸೇರಿದ ಬಿಜೆಪಿ ಭಿನ್ನರ ಬಣ: ವಿಜಯೇಂದ್ರ ನೋಟಿಸ್ ಕೊಡಿಸಿದ್ದಾರೆಂದು ಯತ್ನಾಳ್ ಕೆಂಡಾಮಂಡಲ
ಈ ಮಧ್ಯೆ, ಬಿಜೆಪಿ ಜಾಗೃತಿ ಜಾಥಕ್ಕೆ ಅನುಮತಿ ನಿರಾಕರಿಸಲಾಗಿದೆ. ಸದ್ಯ, ಸಭೆಗೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹೀಗಾಗಿ ಬಿಜೆಪಿ ಹೈಕೋರ್ಟ್ ಮೊರೆ ಹೋಗಿದೆ. ಅನುಮತಿ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಗಲಾಟೆಗೆ ಬಿಜೆಪಿ, ಆರ್ಕಾಎಸ್ಎಸ್ ಕಾರಣವೆಂದು ಆರೋಪಿಸಿ ಕೆಲ ಸಂಘಟನೆಗಳು ಜನಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದವು. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪದಡಿ ಅದಕ್ಕೂ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.