ನೋಟಿಸ್ ಬಳಿಕ ಮೊದಲ ಬಾರಿಗೆ ಸಭೆ ಸೇರಿದ ಬಿಜೆಪಿ ಭಿನ್ನರ ಬಣ: ವಿಜಯೇಂದ್ರ ನೋಟಿಸ್ ಕೊಡಿಸಿದ್ದಾರೆಂದು ಯತ್ನಾಳ್ ಕೆಂಡಾಮಂಡಲ
ಕೆಲ ದಿನಗಳ ಕಾಲ ಮೌನವಾಗಿದ್ದ ಬಿಜೆಪಿ ಭಿನ್ನರ ಬಣದ ನಾಯಕರು ಮತ್ತೆ ಸಕ್ರಿಯ ಆಗಿದ್ದಾರೆ. ಶೋಕಾಸ್ ನೊಟೀಸ್ನಿಂದ ಮುಜುಗರಕ್ಕೀಡಾದ ಯತ್ನಾಳ್ಬಣ ಪ್ರತ್ಯೇಕ ಸಭೆ ಮುಂದುವರಿಸಿದೆ. ಹಾಗಾದ್ರೆ ಬೆಂಗಳೂರಿನಲ್ಲಿ ಗುರುವಾರ ನಡೆದ ರೆಬಲ್ಸ್ ನಾಯಕರ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು? ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 21: ಈಗಾಗಲೇ ವಕ್ಫ್ ಹೋರಾಟದ ನೆಪದಲ್ಲಿ ಹೈಕಮಾಂಡ್ ಭೇಟಿ ಮಾಡಿ, ರಾಜ್ಯಾಧ್ಯಕ್ಷರ ಬದಲಾವಣೆಗೆ ಬಿಜೆಪಿಯ ಬಸನಗೌಡ ಪಾಟೀಲ್ ನೇತೃತ್ವದ ಭಿನ್ನಮತೀಯರ ಗುಂಪು ದುಂಬಾಲು ಬಿದ್ದಿದೆ. ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ಬಳಿಕ ಯತ್ನಾಳ್ ಟೀಂ ಗುರುವಾರ ಮತ್ತೆ ಸಭೆ ಸೇರಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಸೇರಲಾಗಿದೆ. ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ ಹರೀಶ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕೇಂದ್ರೀಯ ಶಿಸ್ತು ಸಮಿತಿ ನೋಟಿಸ್ ಕೊಟ್ಟ ಬಳಿಕ ಯತ್ನಾಳ್ ವಿಜಯೇಂದ್ರ ವಿರುದ್ಧ ನಿಗಿನಿಗಿ ಕೆಂಡ ಕಾರುತ್ತಿದ್ದಾರೆ. ವಿಜಯೇಂದ್ರ ಮೊದಲು ಹಲ್ಕಾ ಕೆಲಸ ಬಿಡಬೇಕು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನನಗೆ ನೋಟಿಸ್ ಬಂದಿದೆ ಅಂತಾ ಹೇಳೋಕೆ ವಿಜಯೇಂದ್ರ ಯಾರು? ನನಗೆ ನೋಟಿಸ್ ಬಂದಿದೆ ಅಂತಾ ಅವನಿಗೆ ಹೇಗೆ ಗೊತ್ತು? ಹಾಗಿದ್ರೆ ಅವನದ್ದೇ ತಾನೇ ನೋಟಿಸ್ ಹಿಂದಿರುವ ಶಕ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ವಕ್ಪ್ ಹೋರಾಟ ಯಶಸ್ವಿಯಾಗಿದೆ ಎಂದು ವರಿಷ್ಠರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಣ್ಣ ಸಭೆ ಸೇರಿದ್ದೇವೆ ಅಷ್ಟೆ. ಹೀಗಾಗಿ ನಾವೆಲ್ಲ ಸೇರಿ ಒಂದು ಕಾಫಿ ಕುಡಿದ್ವಿ ಅಷ್ಟೇ. ಮುಂದಿನ ಹೋರಾಟ ಬಗ್ಗೆ ಚರ್ಚೆ ಮಾಡಿದ್ವಿ. ಅಷ್ಟೇ ಇವತ್ತಿನ ಸಭೆಯಲ್ಲಿ ಆಗಿದ್ದು, ಬೇರೇನೂ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಯತ್ನಾಳ್ ಬಣದ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಯ್ತು?
- ರಾಜ್ಯಾದ್ಯಕ್ಷ ಬದಲಾವಣೆ ವಿಚಾರ.
- ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ ವಿಚಾರ.
- ಶಿವರಾಜ್ ಸಿಂಗ್ ಚೌಹಣ್ ರಾಜ್ಯಕ್ಕೆ ಆಗಮಿಸಿ ಚುನಾವಣೆ ಪ್ರಕ್ರಿಯೆ ನಡೆಸಿದಲ್ಲಿ ನಾಮಪತ್ರ ಸಲ್ಲಿಸಲು ನಿರ್ಧಾರ.
- ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ.
- ಮುಂದಿನ ನಡೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.
- ಅಕ್ರಮ ಬಾಂಗ್ಲಾ ನುಸಳುಕೋರರ ವಿರುದ್ದ ಹೋರಾಟಕ್ಕೆ ನಿರ್ಧಾರ.
- ಗ್ಯಾರೆಂಟಿ ಯೋಜನೆಗಳ ಗೊಂದಲ, ವಿಳಂಬದ ವಿರುದ್ಧ ಹೋರಾಟಕ್ಕೂ ಚಿಂತನೆ.
ಶೋಕಾಸ್ ನೋಟಿಸ್ನಿಂದ ಹಿನ್ನಡೆ ಆಗಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟಿಕರಣ ನೀಡಲು ಪ್ರತಾಪ್ ಸಿಂಹ ಮುಂದಾಗಿದ್ದರು. ಈ ವೇಳೆ ಮುಜುಗರಕ್ಕೆ ಒಳಗಾಗಿ ಸಿಟ್ಟಾದ ಯತ್ನಾಳ್, ಸ್ಥಳದಿಂದ ಹೊರಡಲು ಮುಂದಾಗಿದ್ದಾರೆ. ನೊಟೀಸ್ ವಿಚಾರ ಕೇಳಿ ತಾಳ್ಮೆ ಕಳೆದುಕೊಂಡು ಯತ್ನಾಳ್ ಉದ್ವೇಗಕ್ಕೊಳಗಾಗಿದರು. ಬಳಿಕ, ‘ವಿಜಯೇಂದ್ರನನ್ನು ಕೇಳಿ ನೊಟೀಸ್ ಬಗ್ಗೆ, ಹೇಳ್ತಾರೆ. ನನ್ಯಾಕೆ ಕೇಳ್ತೀರಿ’ ಎಂದು ಸಿಟ್ಟಿನಲ್ಲೇ ಮಾತನಾಡಿದರು. ಪ್ರತಾಪ್ ಸಿಂಹ ಕರೆದರೂ ಸಿಟ್ಟಲ್ಲೇ ಯತ್ನಾಳ್ ಮನೆಯೊಳಗೆ ತೆರಳಿದರು.
ಇದನ್ನೂ ಓದಿ: ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್
ಇದೀಗ ರೆಬಲ್ ಟೀಂ ನಡೆ ಮತ್ತಷ್ಟು ನಿಗೂಢವಾಗಿದೆ. ಸೌಜನ್ಯದ ಸಭೆ ಹೆಸರಲ್ಲಿ ಹತ್ತು ಹಲವು ಸಂಗತಿಗಳು ಚರ್ಚೆ ಆಗಿವೆ. ಮತ್ತೆ ವಿಜಯೇಂದ್ರ ವಿರುದ್ಧ ಸಮರ ಸಾರುತ್ತಾರೋ? ನೋಟಿಸ್ಗೆ ಉತ್ತರ ನೀಡಿದ ನಂತರ ಇದೀಗ ತಟಸ್ಥ ನಿಲುವು ತಾಳುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.