ಬಿಸಿಲಿನ ಹೊಡೆತಕ್ಕೆ ಬೆಂಗಳೂರಿನಲ್ಲಿ ಮನೆಯೊಳಗೆ ಬರುತ್ತಿವೆ ವಿಷಕಾರಿ ಹಾವುಗಳು
ಬೆಂಗಳೂರಿನಲ್ಲಿ ಏರುತ್ತಿರುವ ತಾಪಮಾನದಿಂದಾಗಿ ಜನರು ಬಿಸಿಲಿನಿಂದ ಬಳಲುತ್ತಿದ್ದಾರೆ. ಇದೇ ವೇಳೆ, ತಂಪಾದ ಸ್ಥಳಗಳನ್ನು ಹುಡುಕುತ್ತಾ ಹಾವುಗಳು ಮನೆಗಳೊಳಗೆ ನುಗ್ಗುತ್ತಿವೆ. ಉರಗ ತಜ್ಞರ ಪ್ರಕಾರ, ಜನವರಿ-ಫೆಬ್ರುವರಿ ಹಾವುಗಳ ಸಂತಾನೋತ್ಪತ್ತಿ ಕಾಲ. ಹೀಗಾಗಿ ತಂಪಾದ ವಾತಾವರಣ ಅರಿಸಿ ಹಾವುಗಳು ಮನೆಯೊಳಕ್ಕೆ ಬರುತ್ತಿವೆ ಎಂದು ಹೇಳಿದರು. ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದರು.

ಬೆಂಗಳೂರು, ಫೆಬ್ರವರಿ 21: ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ (Summer) ಆರಂಭಕ್ಕೂ ಮುನ್ನವೇ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ. ನಗರದಲ್ಲಿ ಜನರು ಬಿಸಿಲಿನ ಹೊಡೆತಕ್ಕೆ ಕಂಗಲಾಗಿದ್ದರೇ, ಇತ್ತ ವಿಷಕಾರಿ ಹಾವುಗಳು (Snakes) ತಣ್ಣಗಿನ ಜಾಗವನ್ನು ಹುಡುಕಿಕೊಂಡು ಮನೆಯೊಳಗೆ ಬರುತ್ತಿವೆ ಎಂದು ಭಯಗೊಂಡಿದ್ದಾರೆ. ಅಡುಗೆ ಮನೆ, ಹಾಲ್, ಬಾತ್ ರೂಮ್, ವಾಟರ್ ಟ್ಯಾಂಕ್ ಸೇರಿದಂತೆ ಎಲ್ಲಾ ಕಡೆ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮನೆಯೊಳಗೆ ಇರಲು ನಿವಾಸಿಗಳು ಭಯ ಬೀಳುತ್ತಿದ್ದಾರೆ.
ಈ ಬಗ್ಗೆ ಉರಗ ತಜ್ಞ ಮೋಹನ್ ಮಾತನಾಡಿ, ಜನವರಿ, ಫೆಬ್ರವರಿ ಹಾವುಗಳು ಮಿಲನವಾಗುವ ಸಮಯ. ಹೀಗಾಗಿ, ತಂಪಾಗಿರುವ ಜಾಗವನ್ನು ಅರಿಸಿಕೊಂಡು ಹಾವುಗಳು ಮನೆಯೊಳಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರು ನಿಮ್ಮ ಮಕ್ಕಳ ಮೇಲೆ ನಿಗಾ ಇಟ್ಟಿರಿ. ಮನೆಗಳಲ್ಲಿ ಹಾವುಗಳು ಕಾಣಿಸಿಕೊಂಡಾಗ ಯೂಟ್ಯೂಬ್, ಸಾಮಾಜಿಕ ಜಲತಾಣ ನೋಡಿ ಹಾವುಗಳು ಹಿಡಿಯಲು ಹೋಗಬೇಡಿ. ಇದರಿಂದ ಹಾವುಗಳು ಸಾಯಬಹುದು ಇಲ್ಲವೇ, ವಿಷಕಾರಿ ಸರ್ಪಗಳು ಕಚ್ಚಿ ಸಾವು-ನೋವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಯವಿಟ್ಟು ಎಚ್ಚರದಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮನೆಯ ಸಂದಿ ಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಸಧ್ಯ ಹೆಲ್ಮೆಟ್, ಕಾಂಪೌಂಡ್, ಶೂಸ್, ವಾಟಾರ್ ಟ್ಯಾಂಕರ್, ಫುಟ್ ಪಾಥ್, ಕಾರಿನ ಸಂದಿಗೊಂದಿಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಮನೆಯಿಂದ ಹೊರಗೆ ಹೋಗುವ ಜನರು ಒಮ್ಮೆ ಹುಷಾರಾಗಿ ಎಲ್ಲಾವನ್ನ ಚೆಕ್ ಮಾಡಿ ಮನೆಯಿಂದ ಹೊರಹೋಗುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ಹೆಲ್ಮೆಟ್ನೊಳಗೆ ಅಡಗಿ ಕೂತಿದ್ದ ವಿಷಕಾರಿ ಹಾವು
ಒಟ್ಟಾರೆ ಬಿಸಿಲ ಬೇಗೆ ಮನುಷ್ಯರನ್ನು ತತ್ತರಿಸುವಂತೆ ಮಾಡುತ್ತಿದ್ದರೇ, ಇತ್ತ ವಿಷಕಾರಿ ಹಾವುಗಳು ತಣ್ಣಗಿನ ಜಾಗಕ್ಕಾಗಿ ಮನೆಗಳಿಗೆ ನುಗ್ಗುತ್ತಿವೆ. ಹೀಗಾಗಿ ನಿಮ್ಮ ಮಕ್ಕಳನ್ನು ಆಟವಾಡಲು ಕಳುಹಿಸಿ ಹೊರಗೆ ಬಿಡುವ ಮುನ್ನ ನೂರು ಬಾರಿ ಯೋಚಿಸಿ ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟಬುತ್ತಿ.