ಬೆಂಗಳೂರು: ರಾತ್ರಿ 10 ಗಂಟೆಯವರೆಗೂ ಗರ್ಭಿಣಿಯನ್ನು ಠಾಣೆಯೊಳಗೆ ಕೂರಿಸಿಕೊಂಡ ಪೊಲೀಸರು
ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ನಾಲ್ಕು ತಿಂಗಳ ಗರ್ಭಿಣಿಯನ್ನು ರಾತ್ರಿ 10 ಗಂಟೆಯವರೆ ಠಾಣೆಯಲ್ಲಿ ಕೂರಿಸಿಕೊಂಡಿದ್ದರು. ನಿಯಮಗಳ ಪ್ರಕಾರ 6 ಗಂಟೆಗಳ ಒಳಗೆ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಕಿತ್ತು ಆದರೆ ಅದನ್ನು ಮಾಡದೆ ಇರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ. ರಾತ್ರಿ 10 ಗಂಟೆಯ ನಂತರ ಗರ್ಭಿಣಿಯನ್ನು ಸಖಿ ಕೇಂದ್ರಕ್ಕೆ ಕಳುಹಿಸಲಾಗಿದೆ.
ಬೆಂಗಳೂರು, ಫೆಬ್ರವರಿ 21: ನಾಲ್ಕು ತಿಂಗಳ ಗರ್ಭಿಣಿಯನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು (Seshadripuram Police Station) ರಾತ್ರಿ 10 ಗಂಟೆವರೆಗೆ ಠಾಣೆಯಲ್ಲೇ ಕೂರಿಸಿಕೊಂಡಿದ್ದಾರೆ. ಓರ್ವ ಗರ್ಭಿಣಿ ಇಂಜೆಕ್ಷನ್ ತೆಗೆದುಕೊಳ್ಳಲು ಗುರುವಾರ ಪತಿ ಜೊತೆಗೆ ಕೆ.ಸಿ.ಜನರಲ್ ಆಸ್ಪತ್ರೆಗೆ ಆಗಮಿಸಿದ್ದರು. ಆಸ್ಪತ್ರೆಯಲ್ಲಿ ಆಧಾರ್ ಪರಿಶೀಲನೆ ವೇಳೆ ಗರ್ಭಿಣಿಗೆ ಬಾಲ್ಯ ವಿಹಾವಾಗಿರುವುದು ವೈದ್ಯರಿಗೆ ತಿಳಿದಿದೆ.
ವೈದ್ಯರು ಶೇಷಾದ್ರಿಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರ ಮಾಹಿತಿ ಮೇರೆ ಆಸ್ಪತ್ರೆಗೆ ತೆರಳಿದ ಪೊಲೀಸರು ಮಧ್ಯಾಹ್ನ 2 ಗಂಟೆಗೆ ಗರ್ಭಿಣಿ ಮತ್ತು ಆಕೆಯ ಪತಿಯನ್ನು ಠಾಣೆಗೆ ಕರೆತಂದು ಕೂರಿಸಿಕೊಂಡಿದ್ದಾರೆ. ರಾತ್ರಿ 10 ಗಂಟೆಯಾದರೂ ಗರ್ಭಿಣಿಯನ್ನು ಠಾಣೆಯೊಳಗೆ ಕೂರಿಸಿಕೊಂಡಿದ್ದಾರೆ. ನಿಯಮದ ಪ್ರಕಾರ 6 ಗಂಟೆಯೊಳಗೆ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಕು. ಆದರೆ, ರಾತ್ರಿ 10 ಗಂಟೆವರೆಗೆ ಸಿಬ್ಬಂದಿ ಠಾಣೆಯಲ್ಲಿಯೇ ಇರಿಸಿಕೊಂಡಿದ್ದಾರೆ. ವಿಚಾರ ತಿಳಿದು ಮಾಧ್ಯಮದವರು ಠಾಣೆಗೆ ಹೋಗುತ್ತಿದ್ದಂತೆ ಠಾಣಾ ಸಿಬ್ಬಂದಿ ಗರ್ಭಿಣಿಯನ್ನು ಸಖಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪೊಲೀಸರು ಮಾನವೀಯತೆಯನ್ನೇ ಮರೆತರಾ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.