ಉಡುಪಿ: ಮುತ್ತಪ್ಪ ರೈಯಿಂದ ಹಿಡಿದು ಐಶ್ವರ್ಯಾ ರೈ ತನಕ ಕರಾವಳಿ ಜಿಲ್ಲೆಯ ಜನ ಎಲ್ಲ ಕ್ಷೇತ್ರಗಳಲ್ಲೂ ಹೆಸರು ಮಾಡಿದ್ದಾರೆ. ಇದೀಗ ಜಗತ್ತಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯವರು ಸ್ಥಾನ ಪಡೆದಿರುವುದು ಉಡುಪಿಗೆ ಮತ್ತೊಂದು ಗರಿ ಮೂಡಿದೆ. ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಎಲ್ಲೇವಿಯರ್ ಅಂತಾರಾಷ್ಟ್ರೀಯ ಮುದ್ರಣ ಸಂಸ್ಥೆಯ ಸಹಯೋಗದೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಉಡುಪಿಯ ಡಾ. ಬಿ.ಶಿವಾನಂದ ನಾಯಕ್ ಅವರು ಸ್ಥಾನ ಪಡೆದಿದ್ದಾರೆ. ಪ್ರತಿವರ್ಷ ಈ ವಿಶ್ವವಿದ್ಯಾಲಯ ಸಮಿಕ್ಷೆ ನಡೆಸುತ್ತದೆ. ಈ ಬಾರಿ ವಿಶ್ವದ 1 ಲಕ್ಷ ಪ್ರಸಿದ್ಧ ವಿಜ್ಞಾನಿಗಳಲ್ಲಿ ಶೇ.2 ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಶಿವಾನಂದ ನಾಯಕ ಇದ್ದಾರೆ. ವಿಜ್ಞಾನಿಗಳು ನಿರ್ದಿಷ್ಟ ಕ್ಷೇತ್ರದಲ್ಲಿ ನಿಯತಕಾಲಿಕದಲ್ಲಿ ಪ್ರಕಟಿಸಿದ ಸಂಶೋಧನಾ ಲೇಖನಗಳು, ಸಂಶೋಧನಾ ಉಲ್ಲೇಖಗಳು, ಎಚ್-ಇಂಡೆಕ್ಸ್ ಇನ್ನಿತರ ಸಂಯೋಜಿತ ಮಾನದಂಡಗಳ ಆಧಾರದ ಮೇಲೆ ಜಾಗತಿಕವಾಗಿ ವಿಜ್ಞಾನಿಗಳನ್ನು ಗುರುತಿಸಿ ಪಟ್ಟಿ ಪ್ರಕಟಿಸಲಾಗುತ್ತದೆ.
ಡಾ. ಶಿವಾನಂದ ನಾಯಕ್ ಅವರ 150ಕ್ಕೂ ಹೆಚ್ಚು ಸಕ್ಕರೆ ಕಾಯಿಲೆ ಮತ್ತು ಗಾಯ ಮಾಸುವಿಕೆಗೆ ಸಂಬಂಧಪಟ್ಟ ಸಂಶೋಧನಾತ್ಮಕ ಪ್ರಬಂಧಗಳು ವಿಶ್ವದ ಪ್ರಸಿದ್ಧ ವೈಜ್ಞಾನಿಕ ಜರ್ನಲ್‌ಗಳಲ್ಲಿ ಪ್ರಕಟಗೊಂಡಿವೆ. ಮಾತ್ರವಲ್ಲ, ಹಲವಾರು ಅಂತಾರಾಷ್ಟ್ರೀಯ ಬಯೋಕೆಮಿಸ್ಟ್ರಿ ಸಮ್ಮೇಳನಗಳಲ್ಲೂ ಪ್ರಬಂಧ ಮಂಡಿಸಿ ಸಾಧನೆ ಮಾಡಿದ್ದಾರೆ. ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಂಶೋಧನೆಗಾಗಿ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವ ಇವರು, ಇತ್ತೀಚೆಗೆ ಮಧುಮೇಹ ಕಾಯಿಲಿಗೆ ಸಂಬಂಧಪಟ್ಟ ಉನ್ನತ ಸಂಶೋಧನೆಗಾಗಿ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರ್ ಆಫ್ ಸೈನ್ಸ್ (ಡಿಎಸ್ಸಿ) ಅತ್ಯುನ್ನತ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಲ್ಲಿ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದ ಇವರು ನಂತರ ಟ್ರಿನಿಡಾಡ್ ಟೊಬ್ಯಾಗೋದ ಯುನಿವರ್ಸಿಟಿ ಆಫ್ ವೆಸ್ಟಿಂಡೀಸ್‌ನ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ. ಇದೊಂದು ಜಾಗತಿಕ ಮನ್ನಣೆಯಾಗಿದ್ದು ಜಿಲ್ಲೆಗೆ ಸಂದ ಮತ್ತೊಂದು ಗೌರವವಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 am, Mon, 7 November 22