AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾರ್ಯದಲ್ಲಿ ಆಯುಷ್ಯ ವೃದ್ಧಿ, ಕ್ಯಾನ್ಸರ್ ರೋಗಿಯಲ್ಲಿ ಅಚ್ಚರಿಯ ಬದಲಾವಣೆ

ದೇಶದಲ್ಲಿ ಪ್ರತಿನಿತ್ಯ ಕ್ಯಾನ್ಸರ್‌ನಿಂದ ಸಾವಿರಾರು ಜನ ಮರಣವನ್ನಪ್ಪುತಿದ್ದಾರೆ. ಈ ನಡುವೆ ಮೂಡಬಿದರೆಯಲ್ಲಿ ಅಚ್ಚರಿಯ ಸಂಗತಿಯೊಂದು ನಡೆದಿದೆ. ಕ್ಯಾನ್ಸರ್ ರೋಗಿಯ ಕೃಷಿ ಕಾರ್ಯ ಮಹಾಮಾರಿಯನ್ನೇ ಹಿಮ್ಮೆಟ್ಟಿಸಿದೆ.

ಕೃಷಿ ಕಾರ್ಯದಲ್ಲಿ ಆಯುಷ್ಯ ವೃದ್ಧಿ, ಕ್ಯಾನ್ಸರ್ ರೋಗಿಯಲ್ಲಿ ಅಚ್ಚರಿಯ ಬದಲಾವಣೆ
ಕ್ಯಾನ್ಸರ್ ರೋಗಿಯ ಕೃಷಿ ಕಾರ್ಯ ಮಹಾಮಾರಿಯನ್ನೇ ಹಿಮ್ಮೆಟ್ಟಿಸಿದೆ
TV9 Web
| Edited By: |

Updated on:Nov 07, 2022 | 7:51 AM

Share

ಮಂಗಳೂರು: ದೇಶದಲ್ಲಿ ಪ್ರತಿನಿತ್ಯ ಕ್ಯಾನ್ಸರ್‌ನಿಂದ ಸಾವಿರಾರು ಜನ ಮರಣವನ್ನಪ್ಪುತಿದ್ದಾರೆ. ಕೆಲವರು ಕ್ಯಾನ್ಸರ್‌ರನ್ನು ಗೆದ್ದರೆ ಇನ್ನೂ ಕೆಲವರು ನರಳಿ ನರಳಿ ಕೊನೆದಿನಗಳನ್ನು ಕಳೆಯುತ್ತಾರೆ. ಆದರೆ ಮೂಡಬಿದಿರೆಯಲ್ಲೊಂದು ಇದಕ್ಕೆ ಸಂಬಂಧಿಸಿದ ಅಚ್ಚರಿಯ ಸಂಗತಿಯೊಂದು ನಡೆದಿದೆ. ಕ್ಯಾನ್ಸರ್ ರೋಗಿಯ ಕೃಷಿ ಕಾರ್ಯ ಮಹಾಮಾರಿಯನ್ನೇ ಹಿಮ್ಮೆಟ್ಟಿಸಿದೆ. ಕ್ಯಾನ್ಸರ್ ಜೊತೆ ಸೆಣಸಾಡುತ್ತಿರುವ ಅದೇಷ್ಟೋ ಸಾವಿರ ಮಂದಿಗೆ ಈ ಸ್ಟೋರಿ ಸ್ಫೂರ್ತಿದಾಯಕವಾಗಿದೆ. ಹಚ್ಚ ಹಸುರಿನ ತೋಟದ ನಡುವೆ ಟಿಪಿಕಲ್ ಕೃಷಿಕನ ಗೆಟಪ್ಪಿನಲ್ಲಿ ಓಡಾಡುತ್ತಾ, ದಣಿವರಿಯದೆ ದುಡಿಯುತ್ತಿರುವ ಈ ಕೃಷಿಕನ ಹೆಸರು ಥಾಮಸ್ ಗ್ರೇಜರಿ ರೆಬೆಲ್ಲೋ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿಯಾಗಿರುವ ಇವರು ಹುಟ್ಟಿನಿಂದಲೇ ಕೃಷಿಕರಾಗಿರಲಿಲ್ಲ. ಗಲ್ಫ್‌ನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಅಲ್ಲೇ ಸೆಟಲ್ ಆಗುವ ಯೋಚನೆಯಲ್ಲಿದ್ದರು. ಆದರೆ ಗಂಟಲಿನ ಕ್ಯಾನ್ಸರ್ ಇವರ ಯೋಜನೆಯನ್ನೇ ಬದಲಾಯಿಸಿತು.

ಗಂಟಲಿನ ಕ್ಯಾನ್ಸರ್ ದೇಹದೊಳಗೆ ಆಕ್ರಮಿಸುತ್ತಾ ಹೋಯಿತು. ಸತ್ತರೆ ಜನ್ಮಭೂಮಿಯಲ್ಲೇ ಸಾಯೋಣ ಅಂತಾ ಹಳ್ಳಿಗೆ ಬಂದ ಥಾಮಸ್ ಗ್ರೇಜರಿ ರೆಬೆಲ್ಲೋ, ಊರಿಗೆ ಬಂದ ನಂತರ ಕಂಡಿದ್ದು ಅಚ್ಚರಿಯ ಬದಲಾವಣೆ. ಕತ್ತರಿಸಲ್ಪಟ್ಟ ಗಂಟಲು, ದೇಹದೊಳಗೆ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯ ನಡುವೆಯೇ ಕಾಡುತ್ತಿದ್ದ ಒಂಟಿತನವನ್ನು ದೂರಮಾಡಲು ಕೃಷಿ ಕೆಲಸಕ್ಕೆ ಕೈ ಹಾಕಿದರು. ದಿನ ಕಳೆದಂತೆ ಥಾಮಸ್ ಅವರ ಆರೋಗ್ಯದಲ್ಲಿ ಕಂಡಿದ್ದೇ ಅಚ್ಚರಿಯ ಬದಲಾವಣೆ. ಸಾವಿನ ದಿನ ಎಣಿಸುತ್ತಿದ್ದ ಥಾಮಸ್ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡರು. ಹೀಗೆ ಹತ್ತು ವರ್ಷಗಳೇ ಕಳೆದಿವೆ. ಥಾಮಸ್ ಅಚ್ಚರಿಯಾಗಿ ಬದುಕುತ್ತಿದ್ದಾರೆ. ತಮ್ಮ ಒಂದೂವರೆ ಎಕರೆ ಪ್ರದೇಶವನ್ನು ಹಸಿರ ಸಿರಿಯನ್ನಾಗಿಸಿದ್ದಾರೆ.

ಥಾಮಸ್ ಪತ್ನಿ ಮತ್ತು ಮಗ ವಿದೇಶದಲ್ಲಿದ್ದು, ಥಾಮಸ್ ಮಾತ್ರ ಊರಲ್ಲೇ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಅಡಿಕೆ, ತೆಂಗು, ತರಕಾರಿ ಕೃಷಿ ಮಾಡುತ್ತಾ ತನ್ನೊಳಗಿರುವ ಮಹಾಮಾರಿಯನ್ನೇ ಮರೆತು ಸ್ಫೂರ್ತಿಯಾಗಿದ್ದಾರೆ. ಕ್ಯಾನ್ಸರ್‌ ರೋಗಿಗಳು ಧೃತಿಗೆಡದೆ ತಮಗಿಷ್ಟದ ಕೆಲಸ ಮಾಡಿ ಎಂಬ ಸಲಹೆಯನ್ನು ಥಾಮಸ್ ಗ್ರೇಜರಿ ರೆಬೆಲ್ಲೊ ನೀಡುತ್ತಾರೆ.

ವರದಿ: ಅಶೋಕ್, ಟಿವಿ9 ಮಂಗಳೂರು

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 am, Mon, 7 November 22