ಉಡುಪಿ, ಮಾರ್ಚ್ 20: ಉಡುಪಿಯ ಖಾಸಗಿ ಕಾಲೇಜಿನಲ್ಲಿ ವಿಡಿಯೋ (Video) ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಕೋರ್ಟ್ಗೆ ಸಿಐಡಿ ಡಿವೈಎಸ್ಪಿ ಅಂಜುಮಾಲಾರಿಂದ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದ ಸಿಐಡಿ, ಇದೀಗ ಎಫ್ಎಸ್ಎಲ್ ವರದಿ ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿದೆ. 2023ರ ಜುಲೈ 18ರಂದು ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದ ಘಟನೆ ನಡೆದಿತ್ತು. ಬಳಿಕ ಇದು ದೊಡ್ಡ ವಿವಾದವಾಗಿತ್ತು. ನಂತರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು.
ಸರ್ಕಾರ ಆಗಸ್ಟ್ 7 ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿರುವ ಚಾರ್ಜ್ ಶೀಟ್ ಮಾಹಿತಿ ಲಭ್ಯವಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಆರೋಪಿಗಳು ಕೊಟ್ಟಿರುವ ತಪ್ಪೊಪ್ಪಿಗೆ ಪತ್ರ, ಹಸ್ತಾಕ್ಷರ ಸಾಭೀತಾದ ಹಿನ್ನೆಲೆಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಪ್ರಕರಣದಲ್ಲಿ ಒಟ್ಟು 91 ಸಾಕ್ಷಿಗಳ ವಿಚಾರಣೆ ಮಾಡಲಾಗಿದೆ. ಚಾರ್ಜ್ ಶೀಟ್ನಲ್ಲಿ ವಿದ್ಯಾರ್ಥಿಗಳ ಹೇಳಿಕೆ ಉಲ್ಲೇಖಿಸಲಾಗಿದೆ. ಫ್ರಾಂಕ್ ಮಾಡಲು, ಇಮೋಜಿ ತಯಾರಿಸಲು ವಿಡಿಯೋ ಮಾಡಿರುವುದಾಗಿ ಮತ್ತು ವಿಡಿಯೋ ಡಿಲೀಟ್ ಮಾಡಿ, ರೀಸೈಕಲ್ ಬಿನ್ನಲ್ಲಿ ಡಿಲಿಟ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ.
ಶೌಚಾಲಯದಲ್ಲೇ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ರೆಕಾರ್ಡ್ ಇಂಥದ್ದೊಂದು ಗಂಭೀರ ಆರೋಪ ಉಡುಪಿಯಲ್ಲಿ ಕೇಳಿ ಬಂದಿತ್ತು. ಖಾಸಗಿ ಕಾಲೇಜ್‌ನ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಕೇಸರಿ ಪಡೆ ಹೋರಾಟಕ್ಕೂ ಸಹ ಇಳಿದಿತ್ತು. ಬಳಿಕ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿತ್ತು.
ಇದನ್ನೂ ಓದಿ: ಉಡುಪಿ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಕಚೇರಿಯಿಂದ ರ‍್ಯಾಲಿ ಮಾಡಿದ್ದ ಬಿಜೆಪಿ ಎಸ್‌ಪಿ ಕಚೇರಿವರೆಗೂ ಪಾದಯಾತ್ರೆ ನಡೆಸಿತ್ತು. ವಿಷ್ಯ ಅಂದ್ರೆ ಕಾಲೇಜ್‌ಗೆ ತೆರಳಿ ಪರಿಶೀಲನೆ ನಡೆಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್, ಶೌಚಾಲಯದಲ್ಲಿ ಕಳ್ಳ ಕ್ಯಾಮಾರ ಇರ್ಲಿಲ್ಲ ಅಂತಾ ಹೇಳಿದ್ದರು. ಇದೇ ಹೇಳಿಕೆಗೆ ಬಿಜೆಪಿಯವರಿಂದಲೇ ಆಕ್ರೋಶ ವ್ಯಕ್ತವಾಗಿತ್ತು.
ಉಡುಪಿ ಕಾಲೇಜಿನಲ್ಲಿ ನಡೆದ ಘಟನೆಯನ್ನು ರಾಜಕೀಯ ಮಾಡಬೇಡಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದರು. ಪೊಲೀಸ್ ಮತ್ತು ಕಾಲೇಜಿನ ಪ್ರತ್ಯೇಕ ಇಲಾಖೆ ಇದೆ. ಘಟನೆ ನಡೆದಿರುವ ಕಾಲೇಜಿನ ಪ್ರಿನ್ಸಿಪಾಲ್ ಕ್ರಮ ತೆಗೆದುಕೊಳ್ಳುತ್ತಾರೆ. ಯಾವ ರೀತಿ ಕಾಲೇಜು ನಡೆಸಬೇಕೆಂದು ಯುಜಿಸಿ ಗೈಡ್‌ಲೈನ್ಸ್ ಇದೆ. ಅಶಿಸ್ತು ವಿರುದ್ಧ ಯಾವ ಕ್ರಮ ತಗೋಬೇಕು ಅಂತಾ ಗೈಡ್‌ಲೈನ್ಸ್ ಇದೆ. ಯಾರಾದ್ರು ರ‍್ಯಾಗಿಂಗ್ ಮಾಡಿದ್ರೆ ಆ್ಯಂಟಿ ರ‍್ಯಾಗಿಂಗ್ ಸ್ಕ್ವಾಡ್ ಇದೆ. ಹೀಗಾಗಿ ನಾವು ಅದರಲ್ಲಿ ಭಾಗವಹಿಸುವುದು ಸರಿಯಲ್ಲ ಅಂತಾ ತುಮಕೂರಿನಲ್ಲಿ ಹೇಳಿದ್ದರು.
ಹಿಂದೂ ವಿದ್ಯಾರ್ಥಿನಿಯೊಬ್ಬಳ ಅಸಹಜ ವಿಡಿಯೋ ಚಿತ್ರೀಕರಿಸಿದ್ದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮೂವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೂವರಿಗೆ ಷರತ್ತುಬದ್ಧ ಜಾಮೀನು ಸಹ ನೀಡಿತ್ತು.
ಇದನ್ನೂ ಓದಿ: ಉಡುಪಿ ಕಾಲೇಜು ವಿಡಿಯೋ ಚಿತ್ರೀಕರಣ ಸ್ಥಳ ಪರಿಶೀಲಿಸಿದ ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್, ಬಳಿಕ ಹೇಳಿದ್ದಿಷ್ಟು
ಪ್ರಕರಣವೂ ರಾಜ್ಯಾದ್ಯಂತ ಸಂಚಲನವನ್ನೇ ಸೃಷ್ಟಿಸಿತ್ತು. ಉಡುಪಿ ಮಲ್ಪೆ ಪೊಲೀಸರ ಮೇಲೆಯೇ ಪ್ರಕರಣವನ್ನು ಹಳ್ಳೆ ಹಿಡಿಸಲು ಯತ್ನಿಸಿದ ಆರೋಪ ಕೂಡ ಕೇಳಿ ಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 am, Wed, 20 March 24